ವಿಡಿಯೋ: ಶಕ್ತಿಧಾಮದ ಮಕ್ಕಳಿಗಾಗಿ ವ್ಯಾನ್ ಡ್ರೈವರ್ ಆದ ಶಿವಣ್ಣ
ಬೇರೆಯವರಿಗೆ ಖುಷಿ, ನಗು ಕೊಡುವುದರಲ್ಲೇ ಸಂತೋಷ ಹುಡುಕಿಕೊಳ್ಳುವ ಅಪರೂಪದ ಜೀವಿ ಶಿವಣ್ಣ. ''ನನಗೆ ಜನರಿಗಾಗಿ ಕುಣಿಯುವುದು, ಹಾಡುವುದು ಇಷ್ಟ. ನನ್ನನ್ನು ನೋಡಿ ಜನ ಖುಷಿ ಪಟ್ಟರೆ ನನಗೆ ಸಂತೋಷ'' ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿದ್ದರು ಶಿವಣ್ಣ. ಇಂದಿಗೂ ಅದನ್ನೇ ಪಾಲಿಸುತ್ತಾ ಬಂದಿದ್ದಾರೆ.
ಶಿವಣ್ಣ ಎಲ್ಲಿದ್ದರೂ ತಮ್ಮ ಸುತ್ತ ಇರುವವರನ್ನು ಒಂದಲ್ಲ ಒಂದು ರೀತಿ ಮನರಂಜಿಸುತ್ತಿರುತ್ತಾರೆ. ಸುತ್ತಲೂ ಇರುವವರು ಖುಷಿಯಾಗಿರುವಂತೆ ನೋಡಿಕೊಳ್ಳುತ್ತಾರೆ. ಅದರಲ್ಲಿ ತಾವೂ ಸಂತೋಷ ಕಾಣುತ್ತಾರೆ.
ಅಣ್ಣಾವ್ರ ಕುಟುಂಬ ಶಕ್ತಿಧಾಮವನ್ನು ನಡೆಸಿಕೊಂಡು ಬರುತ್ತಿರುವುದು ಹಳೆಯ ವಿಷಯ. ಪುನೀತ್ ಅಗಲಿಕೆಯ ಬಳಿಕ ಶಕ್ತಿಧಾಮದ ವಿಚಾರ ಹೆಚ್ಚು ಪ್ರಚಾರಕ್ಕೆ ಬಂತು. ಆದರೆ ಅದಕ್ಕೆ ಮುನ್ನಾ ಪ್ರಚಾರವೇ ಬಯಸದೆ ದೊಡ್ಮನೆ ಕುಟುಂಬ ಸೇವೆ ಮಾಡುತ್ತಲೇ ಇತ್ತು. ಪುನೀತ್ ಅಗಲಿಕೆಯ ಬಳಿಕ ಶಕ್ತಿಧಾಮದೊಟ್ಟಿಗೆ ಶಿವಣ್ಣ ಹೆಚ್ಚಿನ ಆಸಕ್ತಿವಹಿಸಿದ್ದಾರೆ. ಇಂದು ಶಕ್ತಿಧಾಮದ ಮಕ್ಕಳೊಂದಿಗೆ ಶಿವರಾಜ್ ಕುಮಾರ್ ಗಣರಾಜ್ಯೋತ್ಸವ ಆಚರಿಸಿದ್ದಾರೆ. ಆದರೆ ಆಚರಣೆಗೆ ಮುನ್ನ ಮಕ್ಕಳೊಂದಿಗೆ ಶಿವಣ್ಣ ಬೆರೆತ ರೀತಿ ಮನಸ್ಸು ತುಂಬಿ ಬರುವಂತಿದೆ.

ಗಣರಾಜ್ಯೋತ್ಸವ ಆಚರಣೆಗೆ ಮುನ್ನ ಶಿವರಾಜ್ ಕುಮಾರ್ ಅವರು ಶಕ್ತಿಧಾಮದ ಮಕ್ಕಳನ್ನು ಜಾಲಿ ರೈಡ್‌ಗೆ ಕರೆದುಕೊಂಡು ಹೋಗಿದ್ದಾರೆ. ಶಿವಣ್ಣ ಅವರೇ ಶಕ್ತಿಧಾಮದ ವ್ಯಾನ್ ಅನ್ನು ಡ್ರೈವ್ ಮಾಡಿಕೊಂಡು ಮಕ್ಕಳನ್ನೆಲ್ಲ ಕರೆದುಕೊಂಡು ಊರು ಸುತ್ತಿಸಿದ್ದಾರೆ. ಶಿವಣ್ಣನ ಜೊತೆ ಜಾಲಿ ರೈಡ್ ಹೋದ ಮಕ್ಕಳ ಸಂತೋಷವನ್ನು ನೋಡಿಯೇ ಖುಷಿಪಡಬೇಕು. (ವಿಡಿಯೋ ನೋಡಿ)
ಶಕ್ತಿಧಾಮ ಮಕ್ಕಳನ್ನು ಅತೀವವಾಗಿ ಹಚ್ಚಿಕೊಂಡಿರುವ ಶಿವಣ್ಣ ಆಗಾಗ್ಗೆ ಪತ್ನಿ ಹಾಗೂ ಸ್ನೇಹಿತರೊಂದಿಗೆ ಶಕ್ತಿಧಾಮಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ. ಕಳೆದ ಬಾರಿ ಶಕ್ತಿಧಾಮಕ್ಕೆ ಭೇಟಿ ನೀಡಿದ್ದಾಗ ಅಲ್ಲಿನ ಮಕ್ಕಳೊಂದಿಗೆ ಖೋ-ಖೋ ಆಡಿದ್ದರು. ಆ ವಿಡಿಯೋ ಬಹಳ ವೈರಲ್ ಆಗಿತ್ತು. ಶಿವಣ್ಣನ ಸರಳತೆಗೆ, ಮಕ್ಕಳ ಮೇಲೆ ಅವರಿಗಿರುವ ಪ್ರೀತಿಗೆ ನಾಡು ತಲೆ ದೂಗಿತ್ತು. ಈಗ ಮತ್ತೊಮ್ಮೆ ತಮ್ಮ ಮಕ್ಕಳ ಪ್ರೀತಿಯನ್ನು ಶಿವಣ್ಣ ಮೆರೆದಿದ್ದಾರೆ.
ಮಕ್ಕಳೊಂದಿಗೆ ಜಾಲಿ ರೈಡ್ ಬಳಿಕ ಇಂದು ಶಕ್ತಿಧಾಮದಲ್ಲಿ ಗಣರಾಜ್ಯೋತ್ಸವವನ್ನು ಶಿವರಾಜ್ ಕುಮಾರ್ ಆಚರಣೆ ಮಾಡಿದ್ದಾರೆ. ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್, ಶಿವಣ್ಣನ ಆತ್ಮಿಯ ಗೆಳೆಯ ನಟ ಚಿ ಗುರುದತ್ ಹಾಗೂ ಶಕ್ತಿಧಾಮದ ಸಿಬ್ಬಂದಿ ಎಲ್ಲರೂ ಸೇರಿ ಗಣರಾಜ್ಯೋತ್ಸವ ಆಚರಣೆ ಮಾಡಿದರು. ಶಿವಣ್ಣ ಧ್ವಜಾರೋಹಣ ಮಾಡಿ, ತಾವೇ ಕೈಯಾರೆ ಮಕ್ಕಳಿಗೆ ಸಿಹಿ ಹಂಚಿಕೆ ಮಾಡಿದರು.
ಅನಾಥ ಹೆಣ್ಣು ಮಕ್ಕಳು, ಕುಟುಂಬದಿಂದ ದೂರ ಉಳಿದವರು, ಶಿಕ್ಷಣದಿಂದ ವಂಚಿತರಾದವರಿಗೆ ಶಕ್ತಿಧಾಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಮೊದಲು ಶಕ್ತಿಧಾಮದ ಜವಾಬ್ದಾರಿಯನ್ನು ಪಾರ್ವತಮ್ಮ ರಾಜ್‌ಕುಮಾರ್ ನೋಡಿಕೊಳ್ಳುತ್ತಿದ್ದರು. ಅವರ ಬಳಿಕ ಗೀತಾ ಶಿವರಾಜ್‌ಕುಮಾರ್ ಈ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಹಲವು ವರ್ಷಗಳಿಂದ ಅನಾಥ ಹೆಣ್ಣುಮಕ್ಕಳಿಗೆ ಅಣ್ಣಾವ್ರ ಕುಟುಂಬ ಆಶ್ರಯದಾತರಾಗಿದ್ದಾರೆ. ಪುನೀತ್ ನಿಧನದ ಬಳಿಕವಷ್ಟೆ ಶಕ್ತಿಧಾಮದ ವಿಚಾರ ಹೆಚ್ಚು ಜನರಿಗೆ ಗೊತ್ತಾಯಿತು ಅದಕ್ಕೂ ಮೊದಲು ಈ ವಿಷಯ ಎಷ್ಟೋ ಜನರಿಗೆ ಗೊತ್ತೇ ಇರಲಿಲ್ಲ. ಮೌನವಾಗಿ ಸಮಾಜ ಸೇವೆ ಮಾಡುತ್ತಾ ಸಾಗುತ್ತಿತ್ತು ದೊಡ್ಮನೆ ಕುಟುಂಬ.


Click it and Unblock the Notifications











