'ಡಾಲಿ'ಯ ಸಿನಿಮಾ ನೋಡಿ ಭೇಷ್ ಎಂದ 'ಟಗರು' ಶಿವ
ಡಾಲಿ ಧನಂಜಯ್ ನಟಿಸಿರುವ 'ಬಡವ ರಾಸ್ಕಲ್' ಸಿನಿಮಾ ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದು, ಬಿಡುಗಡೆಗೆ ಮುನ್ನ ನಡೆದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಬಂದು ಸಿನಿಮಾಕ್ಕೆ ಹಾರೈಸಿದ್ದ ಶಿವರಾಜ್ ಕುಮಾರ್, ಇಂದು ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರಿನ ಮೈಸೂರಿನ ಡಿಆರ್ ಸಿ ಮಾಲ್‌ನಲ್ಲಿ ಅಭಿಮಾನಿಗಳ ಒಟ್ಟಿಗೆ ಕೂತು ಸಿನಿಮಾ ವೀಕ್ಷಿಸಿದ ಶಿವರಾಜ್ ಕುಮಾರ್, ''ಡಾಲಿ ಧನಂಜಯ್ ಅವರ ಮೊದಲ ಪ್ರೊಡಕ್ಷನ್ ಸಿನಿಮಾ 'ಬಡವ ರಾಸ್ಕಲ್' ಚೆನ್ನಾಗಿದೆ. ನಿರ್ದೇಶಕ ಶಂಕರ್ ಗುರು ಸಿನಿಮಾವನ್ನು ವಿಭಿನ್ನ ರೀತಿಯಲ್ಲಿ ಹೇಳುವ ಯತ್ನ ಮಾಡಿದ್ದಾರೆ'' ಎಂದರು.
''ಸರಳವಾದ ಕತೆಯನ್ನು ಬಹಳ ಮನರಂಜನಾತ್ಮಕವಾಗಿ, ಹಾಸ್ಯದ ಜೊತೆ, ಕೌಟುಂಬಿಕ ಸನ್ನಿವೇಶಗಳನ್ನು ಬೆರೆಸಿ ಹೇಳಿದ್ದಾರೆ. ಹೀರೋ ಪಾತ್ರವನ್ನು ಬಹಳ ಚೆನ್ನಾಗಿ ಪ್ರೆಸೆಂಟ್ ಮಾಡಿದ್ದಾರೆ. ಬೇರೆ ವಿವಿಧ ಪಾತ್ರಗಳೊಂದಿಗೆ ಹೊಂದಿಕೊಂಡು ಹೋಗುವ ರೀತಿಯಲ್ಲಿ ಹೀರೋ ಪಾತ್ರವನ್ನು ಪ್ರೆಸೆಂಟ್ ಮಾಡಿದ್ದಾರೆ. ಬಹಳ ಆಡಂಭರ ಮಾಡದೆ, ಸಮತೋಲಿತವಾಗಿ ತೆರೆ ಮೇಲೆ ತೋರಿಸಿದ್ದಾರೆ. ಎಲ್ಲ ಕಲಾವಿದರಿಗೂ ಅವಕಾಶ ಕೊಟ್ಟಿದ್ದಾರೆ. ಎಲ್ಲ ಕಲಾವಿದರ ಪಾತ್ರವನ್ನು, ನಟನೆಯನ್ನು ಗುರುತಿಸಬಹುದು ಅಷ್ಟು ಸ್ಪೇಸ್ ಕೊಟ್ಟಿದ್ದಾರೆ ನಿರ್ದೇಶಕರು'' ಎಂದರು ಶಿವಣ್ಣ.

''ಧನಂಜಯ್ ಬಹಳ ಚೆನ್ನಾಗಿ ನಟಿಸಿದ್ದಾನೆ. ಒಟ್ಟಾರೆ ಪ್ರದರ್ಶನ ಚೆನ್ನಾಗಿದೆ. ಆಕ್ಷನ್ ಮಾತ್ರವೇ ಅಲ್ಲ. ಸೆಂಟಿಮೆಂಟ್ ದೃಶ್ಯಗಳಲ್ಲಿ ಸಹ ಧನಂಜಯ್ ನಟನೆ ಚೆನ್ನಾಗಿದೆ. ಅದರಲ್ಲಿಯೂ ತಂದೆಯನ್ನು ತಬ್ಬಿಕೊಳ್ಳುವ ದೃಶ್ಯ ನನಗೆ ಹಿಡಿಸಿತು. ಯುವಕರಾಗಿದ್ದಾಗ ಸಾಮಾನ್ಯವಾಗ ತಪ್ಪುದಾರಿ ಹಿಡಿದುಬಿಡುತ್ತಾರೆ ಆದರೆ ಅದನ್ನು ಅರಿತುಕೊಂಡು ಸರಿದಾರಿಗೆ ಮರಳುವ ಬಗ್ಗೆ ಸಿನಿಮಾದಲ್ಲಿ ಹೇಳಲಾಗಿದೆ. ಅದನ್ನು ಮನರಂಜನಾತ್ಮಕವಾಗಿ ಹೇಳಲಾಗಿದೆ'' ಎಂದರು ಶಿವಣ್ಣ.
''ಹೀರೋಯಿಕ್ ವಿಷಯವನ್ನು ಇಟ್ಟುಕೊಂಡು ಎಲ್ಲ ಪಾತ್ರಕ್ಕೂ ಸಮಾನ ನ್ಯಾಯ ಒದಗಿಸುವುದು ಬಹಳ ಕಷ್ಟ ಆದರೆ ಅದನ್ನು ನಿರ್ದೇಶಕ ಮಾಡಿದ್ದಾರೆ. ಸಿನಿಮಾದಲ್ಲಿ ತಾರಾ ಹಾಗೂ ರಂಗಾಯಣ ರಘು ಅವರ ನಟನೆ ಸಹ ಅದ್ಭುತವಾಗಿದೆ. ಸಿನಿಮಾದ ಎಲ್ಲ ಪಾತ್ರಕ್ಕೂ ತಮ್ಮದೇ ಆದ ಕ್ಯಾರೆಕ್ಟರ್ ನೀಡಿದ್ದಾರೆ. ಎಲ್ಲ ಪಾತ್ರಕ್ಕೂ ಅರ್ಥ ನೀಡಿದ್ದಾರೆ. ಒಟ್ಟಾರೆಯಾಗಿ ಸಿನಿಮಾ ಚೆನ್ನಾಗಿದೆ ಪ್ರೇಕ್ಷಕನಿಗೆ ಎಲ್ಲೂ ಬೋರ್ ಹೊಡೆಸಲ್ಲ'' ಎಂದರು ಶಿವರಾಜ್ ಕುಮಾರ್.
ಡಾಲಿ ಧನಂಜಯ್ ಮುಂದೆ ಯಾವ ರೀತಿಯ ಸಿನಿಮಾಗಳನ್ನು ಮಾಡಬೇಕು? ಎಂಬ ಪ್ರಶ್ನೆಯನ್ನು ಮಾಧ್ಯಮದವರು ಶಿವಣ್ಣನವರಿಗೆ ಕೇಳಿದರು, ಇದಕ್ಕೆ ಪ್ರತಿಕ್ರಿಯಿಸಿದ ಶಿವಣ್ಣ, ''ಅವರಿಗೆ ಆ ಬಗ್ಗೆ ಚೆನ್ನಾಗಿ ಗೊತ್ತಿದೆ. ಈಗಿನ ನಟರಿಗೆ ನಮಗಿಂತ ಚೆನ್ನಾಗಿ ಜ್ಞಾನವಿದೆ. ಎಲ್ಲದಕ್ಕೂ ಮುಖ್ಯವಾಗಿ ನಾನು ಆ ವಿಷಯದಲ್ಲಿ ಶಿಕ್ಷಕನಲ್ಲ. ಅವರವರಿಗೆ ಅವರವರ ದೇಹಭಾಷೆಯ ಬಗ್ಗೆ ಅರಿವಿರುತ್ತದೆ ಅದಕ್ಕೆ ತಕ್ಕಂತೆ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ ಹೋಗಬೇಕು. ಎಲ್ಲದಕ್ಕಿಂತಲೂ ಮುಖ್ಯವಾಗಿ ನಿರ್ದೇಶಕರ ನಟರಾಗುವುದನ್ನು ಕಲಿತುಕೊಳ್ಳಬೇಕು. ಪಾತ್ರಗಳು ನಿರ್ದೇಶಕರ ಕನಸು. ನಾವು ಅವರ ಕನಸಿಗೆ ಇಳಿದು ಅದನ್ನು ಜೀವಂತಗೊಳಿಸಬೇಕು'' ಎಂದು ಮೌಲಿಕವಾದ ಮಾತುಗಳನ್ನಾಡಿದರು ಶಿವಣ್ಣ.


Click it and Unblock the Notifications











