ಮತ್ತೆ ಬರ್ತಿದೆ 'ಓಂ': ಶಿವಣ್ಣನೇ ಹೀರೋ, ನಿರ್ದೇಶಕ ಯಾರು?
ಶಿವರಾಜ್ ಕುಮಾರ್ ವೃತ್ತಿ ಜೀವನದಲ್ಲಿ ಮಾತ್ರವಲ್ಲ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ 'ಓಂ' ಸಿನಿಮಾಕ್ಕೆ ತನ್ನದೇ ಆದ ಸ್ಥಾನವಿದೆ. 1995 ರಲ್ಲಿ ಬಿಡುಗಡೆ ಆದ ಈ ಸಿನಿಮಾ ಹಲವು ಮೊದಲುಗಳಿಗೆ ಕಾರಣವಾಗಿತ್ತು. ಉಪೇಂದ್ರರಿಗೆ ನಿರ್ದೇಶಕನಾಗಿ ಖ್ಯಾತಿ ತಂದುಕೊಟ್ಟ ಸಿನಿಮಾ ಇದು.
ಶಿವಣ್ಣನವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿ ವರ್ಗವಿದೆ. ಅಂತೆಯೇ 'ಓಂ' ಸಿನಿಮಾಕ್ಕೂ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ. ಅತಿ ಹೆಚ್ಚು ಬಾರಿ ರೀ ರಿಲೀಸ್ ಆಗಿರುವ ಈ ಸಿನಿಮಾ, ರೀ ರಿಲೀಸ್ ಆದಾಗಲೆಲ್ಲ ದೊಡ್ಡ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆದಿದೆ.
ಅಭಿಮಾನಿಗಳು ಬಹಳ ವರ್ಷಗಳಿಂದಲೂ 'ಓಂ 2' ಸಿನಿಮಾಕ್ಕೆ ಬೇಡಿಕೆ ಇಡುತ್ತಲೇ ಇದ್ದಾರೆ. ಆದರೆ ಸಿನಿಮಾದ ನಿರ್ದೇಶಕ ಉಪೇಂದ್ರ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಶಿವರಾಜ್ ಕುಮಾರ್ ಸಹ ಇಷ್ಟು ವರ್ಷ ಸುಮ್ಮನಿದ್ದರು. ಆದರೆ ಈಗ 'ಓಂ 2' ಬಗ್ಗೆ ಸ್ವತಃ ಶಿವರಾಜ್ ಕುಮಾರ್ ಮಾತನಾಡಿದ್ದಾರೆ.

ಸ್ಪರ್ಧಿಗಳನ್ನು ಅಭಿನಂದಿಸಿದ ಶಿವಣ್ಣ
ಶಿವಣ್ಣ ಪ್ರಮುಖ ಜಡ್ಜ್ ಆಗಿರುವ ಡಿಕೆಡಿ ಕಾರ್ಯಕ್ರಮದಲ್ಲಿ ಈ ವಿಷಯವಾಗಿ ಮಾತನಾಡಿದ್ದಾರೆ. ಕಳೆದ ಕೆಲವು ಎಪಿಸೋಡ್‌ಗಳನ್ನು ಅನಿವಾರ್ಯ ಕಾರಣಗಳಿಂದ ಶಿವರಾಜ್ ಕುಮಾರ್ ಮಿಸ್ ಮಾಡಿಕೊಂಡಿದ್ದರು ಶಿವಣ್ಣ. ಹಾಗಾಗಿ ಈ ವಾರ ಬಂದ ಕೂಡಲೇ ಈ ಹಿಂದಿನ ಎಪಿಸೋಡ್‌ಗಳಲ್ಲಿ ಚೆನ್ನಾಗಿ ಪ್ರದರ್ಶನ ನೀಡಿದ್ದ ಕಲಾವಿದರನ್ನು, ಸ್ಪರ್ಧಿಗಳನ್ನು ತಬ್ಬಿಕೊಂಡು ಅಭಿನಂದಿಸಿದರು ಶಿವರಾಜ್ ಕುಮಾರ್.

ಅರ್ಜುನ್ ಜನ್ಯ-ಶಿವಣ್ಣರ ಸಿನಿಮಾ
ಬಳಿಕ ನಿರೂಪಕಿ ಅನುಶ್ರೀ, ಶಿವರಾಜ್ ಕುಮಾರ್ ಅವರು ಡಿಕೆಡಿಯ ಜಡ್ಜ್ ಅರ್ಜುನ್ ಜನ್ಯ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಗಮನ ಸೆಳೆದರು. ಅರ್ಜುನ್ ಜನ್ಯ-ಶಿವರಾಜ್ ಕುಮಾರ್ ಕಾಂಬಿನೇಶನ್‌ನ ಸಿನಿಮಾದ ಪೋಸ್ಟರ್ ಅನ್ನು ಸಹ ಡಿಕೆಡಿ ಕಾರ್ಯದಲ್ಲಿ ಪ್ರದರ್ಶಿಸಲಾಯಿತು. ಸಿನಿಮಾಕ್ಕೆ 45 ಎಂದು ಹೆಸರಿಟ್ಟಿದ್ದು, ಸಿನಿಮಾದ ಕತೆ ಬಹಳ ಭಿನ್ನವಾಗಿದೆ ಎಂದು ಅರ್ಜುನ್ ಜನ್ಯ ಹೇಳಿದರು. ಶಿವಣ್ಣ ಅಂತೂ ಈ ಸಿನಿಮಾ ಭಾರತದಲ್ಲಿಯೇ ಬಹಳ ಭಿನ್ನವಾದ ಸಿನಿಮಾ ಆಗಲಿದೆ'' ಎಂದು ಹೊಗಳಿದರು.

ಚಿನ್ನಿ ಮಾಸ್ಟರ್ ನಿರ್ದೇಶನದ ಸಿನಿಮಾದಲ್ಲಿ ನಟನೆ
ಆ ಬಳಿಕ ಮತ್ತೊಂದು ವಿಷಯವನ್ನು ಅದೇ ವೇದಿಕೆಯ ಮೇಲೆ ಬಹಿರಂಗಪಡಿಸಿದ ಶಿವರಾಜ್ ಕುಮಾರ್, ಡಿಕೆಡಿ ಕಾರ್ಯಕ್ರಮದ ಮತ್ತೊಬ್ಬ ಜಡ್ಜ್ ಚಿನ್ನಿ ಮಾಸ್ಟರ್ ನಿರ್ದೇಶಿಸಲಿರುವ ಸಿನಿಮಾದಲ್ಲಿ ನಾನು ನಟಿಸಲಿದ್ದೇನೆ. ಸಿನಿಮಾದ ಹೆಸರು ಇನ್ನೂ ಅಂತಿಮಗೊಂಡಿಲ್ಲ, ಆದರೆ ಸಿನಿಮಾಕ್ಕೆ 'ಓಂ ರಿಟರ್ನ್' ಎಂದು ಹೆಸರಿಡುವ ಆಲೋಚನೆ ಇದೆ ಎಂದು ಶಿವರಾಜ್ ಕುಮಾರ್ ಹೇಳಿದರು. ಚಿನ್ನಿ ಮಾಸ್ಟರ್ ಸಹ ಹೌದು ಎಂದರು.

ನ್ಯಾಯ ಒದಗಿಸಬಲ್ಲರಾ ಚಿನ್ನಿ ಪ್ರಕಾಶ್
'ಓಂ' ಸಿನಿಮಾಕ್ಕೆ ತನ್ನದೇ ಆದ ಅಭಿಮಾನಿ ವರ್ಗವಿದೆ, ತನ್ನದೇ ಆದ ಪ್ರತ್ಯೇಕ ಬ್ರಾಂಡ್ ಇದೆ. ಆದರೆ ಆ ಸಿನಿಮಾವನ್ನು ಚಿನ್ನಿ ಪ್ರಕಾಶ್ ನಿರ್ದೇಶಿಸುವುದು ಸರಿಯಾ? ಚಿನ್ನಿ ಪ್ರಕಾಶ್ 'ಓಂ' ಹೆಸರಿನ ನ್ಯಾಯ ನೀಡಬಲ್ಲ ಸಿನಿಮಾ ಮಾಡಬಲ್ಲರಾ? ಎಂಬ ಬಗ್ಗೆಯೂ ಅನುಮಾನಗಳಿವೆ. ಈ ಎಲ್ಲ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕಿದೆ. ಸಿನಿಮಾದ ಹೆಸರನ್ನು 'ಓಂ ರಿಟರ್ನ್' ಎಂದು ಇಡಬೇಕು ಎಂದುಕೊಂಡಿದ್ದಾರೆಯೇ ಹೊರತು, ಹೆಸರು ಇನ್ನೂ ನಿಗದಿಯಾಗಿಲ್ಲ. ಹೆಸರು ಬದಲಾದರೂ ಆಶ್ಚರ್ಯವಿಲ್ಲ.


Click it and Unblock the Notifications











