ಶಿವಣ್ಣನ 124ನೇ ಸಿನಿಮಾ 'ನೀ ಸಿಗೋವರೆಗೂ': ಕಿಚ್ಚನ ಕ್ಲ್ಯಾಪ್
ಶಿವರಾಜ್ ಕುಮಾರ್ ನಟನೆಯ ಹೊಸ ಸಿನಿಮಾದ 'ನೀ ಸಿಗೊವರೆಗು' ಮುಹೂರ್ತ ನಿನ್ನೆಯಷ್ಟೆ ನಡೆದಿದ್ದು ಕಿಚ್ಚ ಸುದೀಪ್ ಅವರು ಸಿನಿಮಾಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ.
Recommended Video
ತೆಲುಗಿನ ರವಿ ಧುಲಿಪುಡಿ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಶಿವಣ್ಣ ಲವರ್ ಬಾಯ್ ರೀತಿ ಕಾಣಿಸಿಕೊಳ್ಳಲಿದ್ದಾರೆ. ಇದು ಶಿವಣ್ಣನ 124ನೇ ಸಿನಿಮಾ ಎಂಬುದು ವಿಶೇಷ. ಸಿನಿಮಾದಲ್ಲಿ ನಾಯಕಿಯಾಗಿ ಮೆಹ್ರೀನ್ ಫಿರ್ಜಾದಾ ನಟಿಸುತ್ತಿದ್ದಾರೆ.
ನಿನ್ನೆಯಷ್ಟೆ ಸಿನಿಮಾದ ಮುಹೂರ್ತ ನಡೆದಿದ್ದು ಕಾರ್ಯಕ್ರಮದಲ್ಲಿ ನಟ ಸುದೀಪ್ ಮತ್ತು ಪುನೀತ್ ರಾಜ್‌ಕುಮಾರ್ ಹಾಜರಿದ್ದರು. ಮುಹೂರ್ತದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಸುದೀಪ್, ''ಶಿವಣ್ಣನವರು ನನ್ನ ಆರಂಭದ ಸಿನಿಮಾಗಳಿಗೆ ಕ್ಲ್ಯಾಪ್ ಮಾಡಿದ್ದರು. ನನ್ನ ಇಷ್ಟು ವರ್ಷಗಳ ಸಿನಿಮಾ ಜರ್ನಿಯಲ್ಲಿ ಶಿವಣ್ಣನ ಪಾತ್ರವೂ ಇದೆ'' ಎಂದರು.
ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾದ ನಾರಾಲ ಶ್ರೀನಿವಾಸ ರೆಡ್ಡಿ ಮಾತನಾಡಿ, ''ನಾನು ಮೊದಲು ನೋಡಿದ ಕನ್ನಡ ಸಿನಿಮಾ 'ಆನಂದ್' ಆಗಿನಿಂದಲೂ ನಾನು ಶಿವಣ್ಣನ ಅಭಿಮಾನಿ. ಈಗ ಶಿವಣ್ಣನ ಸಿನಿಮಾವನ್ನು ನಿರ್ಮಾಣ ಮಾಡುವ ಅದೃಷ್ಟ ನನಗೆ ಒದಗಿಬಂದಿದೆ. ನಾನು ಪ್ರತಿಬಾರಿ ಶಿವಣ್ಣನನ್ನು ಭೇಟಿಯಾಗಲು ಬರುವಾಗ ದೊಡ್ಡ ಸೂಪರ್ ಸ್ಟಾರ್ ಅನ್ನು ಭೇಟಿ ಮಾಡಲು ಹೋಗುತ್ತಿದ್ದೇನೆ ಎಂದು ಕೊಳ್ಳುತ್ತಿದ್ದೆ. ಆದರೆ ಶಿವಣ್ಣ ಎಂದೂ ತಾವು ಸೂಪರ್ ಸ್ಟಾರ್‌ನಂತೆ ನಡೆದುಕೊಳ್ಳಲೇ ಇಲ್ಲ. ಶಿವಣ್ಣನವರದ್ದು ಅಪರೂಪದ ಸರಳತೆ ಮತ್ತು ವಿನಯ'' ಎಂದರು.

ಆಸೆ ಈಡೇರಿಸಿಕೊಂಡ ನಟಿ ಮೆಹ್ರಿನ್
ಸಿನಿಮಾದ ನಾಯಕಿ ಮೆಹ್ರಿನ್ ಮಾತನಾಡಿ, ''ನಾನು ಸದಾ ಅಂದುಕೊಳ್ಳುತ್ತಿದ್ದೆ ಕನ್ನಡ ಸಿನಿಮಾದಲ್ಲಿ ನಟಿಸಬೇಕೆಂದು ನನ್ನ ಆಸೆ ಇಂದು ನನಸಾಗಿದೆ. ಈ ದಿನ ನನಗೆ ಬಹಳ ಅಮೂಲ್ಯವಾದುದು. ಶಿವರಾಜ್ ಕುಮಾರ್ ಅವರ ಜೊತೆಯಲ್ಲಿ ಹಾಗೂ ಇಡೀಯ ತಂಡದ ಜೊತೆಯಲ್ಲಿ ಕೆಲಸ ಮಾಡಲು ನಾನು ಬಹಳ ಉತ್ಸುಕಳಾಗಿದ್ದೇನೆ'' ಎಂದುರು. ಮೆಹ್ರಿನ್ ಈ ಮೊದಲು ಹಲವು ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ವೆಂಕಟೇಶ್, ವಿಜಯ್ ದೇವರಕೊಂಡ, ನಾನಿ ಅಂಥಹಾ ಸ್ಟಾರ್‌ಗಳೊಟ್ಟಿಗೆ ನಟಿಸಿರುವ ಮೆಹ್ರಿನ್ ತಮಿಳಿನಲ್ಲಿ ಧನುಷ್ ಜೊತೆ ನಟಿಸಿದ್ದಾರೆ. ಹಿಂದಿಯಲ್ಲಿ ಅನುಷ್ಕಾ ಶರ್ಮಾ ನಿರ್ಮಾಣದ 'ಫಿಲೌರಿ' ಸಿನಿಮಾದಲ್ಲಿ ನಟಿಸಿದ್ದಾರೆ. ಎರಡು ಪಂಜಾಬಿ ಸಿನಿಮಾದಲ್ಲಿಯೂ ಪಾತ್ರ ನಿರ್ವಹಿಸಿದ್ದಾರೆ. 'ನೀ ಸಿಗೋವರೆಗೆ' ಮೆಹ್ರಿನ್‌ಳ ಮೊದಲ ಕನ್ನಡ ಸಿನಿಮಾ.

ಲವ್‌ಸ್ಟೋರಿ ಇತ್ತಿಚೆಗೆ ಮಾಡಿರಲಿಲ್ಲ, ಈಗ ಮಾಡುತ್ತಿದ್ದೇನೆ: ಶಿವಣ್ಣ
ಅಂತಿಮವಾಗಿ ಮಾತನಾಡಿದ ನಟ ಶಿವರಾಜ್ ಕುಮಾರ್, ''ಇತ್ತೀಚಿನ ದಿನಗಳಲ್ಲಿ ಹಲವು ಥರಹದ ಸಿನಿಮಾಗಳನ್ನು ಮಾಡಿದ್ದೇವೆ. ಆದರೆ ಲವ್‌ಸ್ಟೋರಿ ಮಾಡಿರಲಿಲ್ಲ. ನಿರ್ದೇಶಕರು ನನ್ನಿಂದ ಹೀಗೊಂದು ಸಿನಿಮಾ ಮಾಡಿಸುತ್ತಿದ್ದಾರೆ. ಸಿನಿಮಾದಲ್ಲಿ ನಾನು ಹೇಗೆ ಕಾಣಬೇಕು ಎಂಬುದರ ಬಗ್ಗೆ ಸಾಕಷ್ಟು ಪ್ರಯೋಗಗಳು ಮಾಡಿ ಕೆಲವು ಲುಕ್‌ಗಳನ್ನು ಫೈನಲ್ ಮಾಡಿದ್ದಾರೆ. ಬಹಳ ಸರಳವಾದ ಕತೆಯನ್ನು ಚೆನ್ನಾಗಿ ತೆರೆಗೆ ತುರುತ್ತಿದ್ದಾರೆ ನಿರ್ದೇಶಕರು. ಕೋವಿಡ್ ಸಮಯದಲ್ಲಿ ಸಿನಿಮಾ ನಿರ್ಮಾಣ ಮಾಡಲು ಬಂದ ನಿರ್ಮಾಪಕರಿಗೆ ಶಿವಣ್ಣ ಧನ್ಯವಾದ ಹೇಳಿದರು. ''ಸಿನಿಮಾದ ಕತೆ ಬಹಳ ಸರಳವಾದುದ್ದು ಆದರೆ ಸಿನಿಮಾ ನೋಡುವ ಎಲ್ಲರಿಗೂ ಕನೆಕ್ಟ್ ಆಗುವಂತ ಸಬ್ಜೆಕ್ಟ್ ಸಿನಿಮಾದಲ್ಲಿದೆ'' ಎಂದರು ಶಿವಣ್ಣ

'ನೀ ಸಿಗೋವರೆಗೆ' ಚಿತ್ರತಂಡದಲ್ಲಿ ಯಾರ್ಯಾರು?
'ನೀ ಸಿಗೋವರೆಗು' ಹೆಸರೇ ಹೇಳುತ್ತಿರುವಂತೆ ಇದೊಂದು ಪ್ರೇಮಕತೆಯಾಗಿದ್ದು ಶಿವಣ್ಣ ಈ ಸಿನಿಮಾದಲ್ಲಿ ಯಂಗ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಿವಣ್ಣನ ಲುಕ್ ಕೆಲವು ಚಿತ್ರಗಳನ್ನು ಈಗಾಗಲೇ ಚಿತ್ರತಂಡ ಬಿಡುಗಡೆ ಮಾಡಿದೆ. ಇನ್ನು ನಟಿ ಮೆಹ್ರೀನ್ ಫಿರ್ಜಾದಾ ಈಗಾಗಲೇ ಕೆಲವು ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದ್ದು, ಇದು ಅವರ ಮೊದಲ ಕನ್ನಡ ಸಿನಿಮಾ. ಸಿನಿಮಾದಲ್ಲಿ ನಾಸರ್, ಸಂಪತ್, ಸಾಧು ಕೋಕಿಲ, ಗಾಯಕಿ ಮಂಗ್ಲಿ ಸಹ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶಿವಣ್ಣನ 'ಟಗರು' ಸಿನಿಮಾಕ್ಕೆ ಕೆಲಸ ಮಾಡಿದ್ದ ಸಂಗೀತ ನಿರ್ದೇಶಕ ಚರಣ್ ರಾಜ್ ಮತ್ತು ಕ್ಯಾಮೆರಾಮನ್ ಮಹೇಂದ್ರ ಸಿಂಹ ಈ ಸಿನಿಮಾಕ್ಕೂ ಕೆಲಸ ಮಾಡುತ್ತಿದ್ದಾರೆ. ಸಿನಿಮಾಕ್ಕೆ ನಾರಾಲ ಶ್ರೀನಿವಾಸ ರೆಡ್ಡಿ, ಸ್ವಾತಿ ವನಪಲ್ಲಿ, ಶ್ರೀಕಾಂತ್ ಧುಲಿಪುಡಿ, ಕುಡುಪುಡಿ ವಿಜಯಕುಮಾರ್ ಅವರುಗಳು ಒಟ್ಟಿಗೆ ಬಂಡವಾಳ ತೊಡಗಿಸಿದ್ದಾರೆ.

ಹಲವು ಸಿನಿಮಾಗಳನ್ನು ಕೈಯಲ್ಲಿಟ್ಟುಕೊಂಡಿದ್ದಾರೆ ಶಿವಣ್ಣ
ಶಿವರಾಜ್ ಕುಮಾರ್ ಈಗಷ್ಟೆ ಭೈರವ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಆ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸಿನಿಮಾದಲ್ಲಿ ಡಾಲಿ ಧನಂಜಯ್ ಹಾಗೂ ಪೃಥ್ವಿ ಅಂಬರ್ ಸಹ ಇದ್ದಾರೆ. ಶಿವಣ್ಣ ನಟಿಸಿರುವ 'ಭಜರಂಗಿ 2' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಆ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ. ಇದೀಗ 'ನೀ ಸಿಗೋವರೆಗೆ' ಸಿನಿಮಾದ ಬಳಿಕ ಯೋಗರಾಜ್ ಭಟ್ ನಿರ್ದೇಶನದ ಸಿನಿಮಾ, ಅದಾದ ಬಳಿಕ ರಿಷಬ್ ಶೆಟ್ಟಿ ನಿರ್ದೇಶನದ ಸಿನಿಮಾ, ಹರ್ಷಾ ನಿರ್ದೇಶಿಸಲಿರುವ ಸಿನಿಮಾ ಹೀಗೆ ಹಲವಾರು ಸಿನಿಮಾಗಳಲ್ಲಿ ಶಿವಣ್ಣ ನಟಿಸಲಿದ್ದಾರೆ.


Click it and Unblock the Notifications











