'ಭಜರಂಗಿ-2' ಹಿಂದಿ ಡಬ್ಬಿಂಗ್ ರೈಟ್ಸ್ ಭರ್ಜರಿ ಮೊತ್ತಕ್ಕೆ ಮಾರಾಟ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಬಹು ನಿರೀಕ್ಷೆಯ 'ಭಜರಂಗಿ-2' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಕೊರೊನಾ 2ನೇ ಅಲೆಯ ಲಾಕ್ ಡೌನ್ ಬಳಿಕ ಬಿಡುಗಡೆ ದಿನಾಂಕ ಘೋಷಣೆ ಮಾಡುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದ ಶಿವಣ್ಣ ಮತ್ತು ತಂಡದಿಂದ ಮತ್ತೊಂದು ಭರ್ಜರಿ ಸುದ್ದಿ ಹೊರ ಬಿದ್ದಿದೆ.
Recommended Video
'ಭಜರಂಗಿ-2' ಸಿನಿಮಾದ ಹಿಂದಿ ಡಬ್ಬಿಂಗ್ ರೈಟ್ಸ್ ಭರ್ಜರಿ ಮೊತ್ತಕ್ಕೆ ಮಾರಾಟವಾಗಿದೆ ಎನ್ನುವ ಸುದ್ದಿ ಕೇಳಿಬಂದಿದೆ. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಸಿನಿಮಾಗಳಿಗೆ ಉತ್ತರದಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಅದರಲ್ಲಿ ಕನ್ನಡದ ಸಿನಿಮಾಗಳು ಸಹ ಸೇರಿವೆ. ಚಿತ್ರಗಳು ಡಬ್ ಆಗಿ ನೇರವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದಿದ್ದರೂ ಟಿವಿ ಮತ್ತು ಯೂಟ್ಯೂಬ್ ಗಳಲ್ಲೇ ಬಿಡುಗಡೆಯಾಗಿ ಉತ್ತಮ ವೀಕ್ಷಣೆ ಪಡೆಯುತ್ತಿವೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳಿಗೂ ಉತ್ತರ ಭಾರತದಲ್ಲಿ ಭಾರಿ ಬೇಡಿಕೆ ಇದೆ. ದರ್ಶನ್ ಸಿನಿಮಾಗಳು ಡಬ್ ಆಗಿ ಯೂಟ್ಯೂಬ್ ಗಳಲ್ಲಿ ಉತ್ತಮ ವೀಕ್ಷಣೆ ಪಡೆಯುತ್ತಿವೆ. ಇದೀಗ ಎ.ಹರ್ಷ ನಿರ್ದೇಶನದಲ್ಲಿ ಮೂಡಬರುತ್ತಿರುವ ಬಹುನಿರೀಕ್ಷೆಯ ಭಜರಂಗಿ-2 ಸಿನಿಮಾದ ಡಬ್ಬಿಂಗ್ ರೈಟ್ಸ್ ಬರೋಬ್ಬರಿ 5.5 ಕೋಟಿ ರೂ.ಗೆ ಮಾರಾಟವಾಗಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶಿವರಾಜ್ ಕುಮಾರ್ ನಟನೆಯ ಸಿನಿಮಾ ಹಿಂದಿ ಡಬ್ಬಿಂಗ್ ಇಷ್ಟು ದೊಡ್ಡ ಮಟ್ಟದಲ್ಲಿ ಮಾರಾಟವಾಗಿರುವು ಇದೇ ಮೊದಲು. ಜಯಣ್ಣ-ಬೋಗೇಂದ್ರ ನಿರ್ಮಾಣದಲ್ಲಿ ಭಜರಂಗಿ-2 ಸಿನಿಮಾ ಮೂಡಿಬಂದಿದೆ. ಅಂದಹಾಗೆ ಭಜರಂಗಿ-2 2013ರಲ್ಲಿ ಬಂದ ಭಜರಂಗಿ ಸಿನಿಮಾದ ಪಾರ್ಟ್-2 ಆಗಿದೆ. ಪಾರ್ಟ್ ಒಂದರಲ್ಲಿ ಶಿವರಾಜ್ ಕುಮಾರ್ ಜೊತೆ ನಟಿ ಐಂದ್ರಿತಾ ರೇ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ಶಿವಣ್ಣ ಜೊತೆ ಭಾವನಾ ಮೆನನ್ ಕಾಣಿಸಿಕೊಳ್ಳುತ್ತಿದ್ದಾರೆ.
ಇತ್ತೀಚಿಗಷ್ಟೆ ಭಜರಂಗಿ-2 ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಬಹಿರಂಗ ಗೊಳಿಸಿದೆ. ಹ್ಯಾಟ್ರಿಕ್ ಹೀರೋ ಸಿನಿಮಾ ನಟನೆಯ 'ಭಜರಂಗಿ-2' ಸಿನಿಮಾ 'ಸೆಪ್ಟಂಬರ್ 10'ರಂದು ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ಘೋಷಣೆಯಾಗಿದೆ.
ಅಂದಹಾಗೆ ಸೆಪ್ಟಂಬರ್ 10 ಗಣೇಶ ಹಬ್ಬ. ಗಣೇಶ ಚತುರ್ಥಿ ದಿನವೇ ಭಜರಂಗಿ-2 ಸಿನಿಮಾ ಬಿಡುಗಡೆಯಾಗುತ್ತಿರುವುದು ಹಬ್ಬದ ಸಂಭ್ರಮವನ್ನು ಡಬಲ್ ಮಾಡಿದೆ. 'ಭಜರಂಗಿ-2' ಸಿನಿಮಾ ಚಿತ್ರೀಕರಣ ಮುಗಿಸಿ ಒಂದು ವರ್ಷದ ಮೇಲಾಗಿದೆ. ಕೊರೊನಾ ಕಾರಣದಿಂದ ಸಿನಿಮಾ ಬಿಡುಗಡೆ ತಡವಾಗುತ್ತಲೆ ಇತ್ತು. ಇದೀಗ ಅಧಿಕೃತವಾಗಿ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡಿ ಅಭಿಮಾನಿಗಳ ಸಂತಸ ಹೆಚ್ಚಿಸಿದೆ.
ಹರ್ಷ ಮತ್ತು ಶಿವಣ್ಣ ಕಾಂಬಿನೇಷನ್ ನಲ್ಲಿ ಭಜರಂಗಿ ಮತ್ತು ವಜ್ರಕಾಯ ಸಿನಿಮಾ ಬಳಿಕ ಮೂಡಿಬರುತ್ತಿರುವ ಚಿತ್ರವಿದು. ಚಿತ್ರದಲ್ಲಿ ಶಿವಣ್ಣಗೆ ನಾಯಕಿಯಾಗಿ ಭಾವನ ಮೆನನ್ ಕಾಣಿಸಿಕೊಂಡಿದ್ದಾರೆ. ನಟಿ ಭಾವನಾ ಟಗರು ಸಿನಿಮಾದ ಬಳಿಕ ಶಿವಣ್ಣ ಜೊತೆ ಎರಡನೇ ಬಾರಿ ನಟಿಸುತ್ತಿದ್ದಾರೆ. ಈಗಾಗಲೇ ಪೋಸ್ಟರ್ ಮತ್ತು ಟೀಸರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವ 'ಭಜರಂಗಿ-2' ಹೇಗಿರಲಿದೆ ಎನ್ನುವ ಕುತೂಹಲಕ್ಕೆ ಸೆಪ್ಟಂಬರ್ 10ರಂದು ತೆರೆಬೀಳಲಿದೆ.
ಇನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಭೈರಾಗಿ, ವೇದ ಸೇರಿದಂತೆ ಅನೇಕ ಸಿನಿಮಾಗಳು ಶಿವಣ್ಣ ಬಳಿ ಇದೆ. ಇನ್ನು ಶಿವರಾಜ್ ಕುಮಾರ್ ಕೊನೆಯದಾಗಿ ದ್ರೋಣ ಸಿನಿಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೇಳಿಕೊಳ್ಳುವಷ್ಟು ಖ್ಯಾತಿಗಳಿಸಿಲ್ಲ. ಶಿವಣ್ಣನನ್ನು ತೆರೆಮೇಲೆ ನೋಡದೆ ಎರಡು ವರ್ಷಗಳಾಗಿದೆ. ಹಾಗಾಗಿ ಮುಂದಿನ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.


Click it and Unblock the Notifications











