»   » ನಾಯಕ ಪಟ್ಟ ಎಷ್ಟು ಸಲೀಸು ಅನ್ನಿಸುತ್ತಿದೆಯಾ?

ನಾಯಕ ಪಟ್ಟ ಎಷ್ಟು ಸಲೀಸು ಅನ್ನಿಸುತ್ತಿದೆಯಾ?

Posted By: Super
Subscribe to Filmibeat Kannada

'ಸಿನಿಮಾದ ನಾಯಕ ಎಂದರೆ ಹೇಗಿರಬೇಕು?"
ಒಮ್ಮೆ ಕನ್ನಡಕ್ಕೊಬ್ಬರೇ ಡಾ.ರಾಜ್‌ಕುಮಾರ್‌, ತಮಿಳಿನ ಶಿವಾಜಿಗಣೇಶನ್‌, ತೆಲುಗಿನ ಎನ್‌.ಟಿ. ರಾಮರಾವ್‌, ಬಾಲಿವುಡ್‌ನ ದಿಲೀಪ್‌ ಕುಮಾರ್‌ ಮತ್ತು ರಾಜೇಂದ್ರಕುಮಾರ್‌, ಬೆಂಗಾಳಿಯ ಉತ್ತಮ್‌ಕುಮಾರ್‌, ಹಾಲಿವುಡ್‌ನ ಸರ್‌ ಅಲೆಕ್‌ ಗಿನ್ನೆಸ್‌, ಗ್ರೆಗರಿ ಫೆಕ್‌, ಆ್ಯಂಟೊನಿ ಕ್ವಿನ್‌ ಅವರನ್ನು ನೆನಪಿಸಿಕೊಳ್ಳಿ. ನಾಯಕ ಎಂದರೆ ಹೇಗಿರಬೇಕು ಅನ್ನುವ ಪ್ರಶ್ನೆಗೆ ನೂರೆಂಟು ವ್ಯಾಖ್ಯಾನಗಳನ್ನು ಮೀರಿದ ಉತ್ತರವಾಗಿ ಈ ನಾಯಕರು ನಿಲ್ಲುತ್ತಾರೆ, ಅಲ್ಲವೇ!?

ರಾಜಕೀಯ, ಗೋಲಿಬಾರ್‌ ಸಿನಿಮಾಗಳನ್ನು ನೀವು ನೋಡಿರಬಹುದು, ಕನಿಷ್ಠ ಕೇಳಿಯಾದರೂ ಬಲ್ಲಿರಿ. ಆ ಸಿನಿಮಾಗಳ ಹಿಂದಿನ ಸೂತ್ರಧಾರ, ಶಿವಮಣಿ ಎನ್ನುವ ಗಡ್ಡಧಾರಿ ಕುಳ್ಳ 'ಲವ್‌ ಯೂ" ಸಿನಿಮಾದ ಮೂಲಕ ನಾಯಕನಾಗಲಿಕ್ಕೆ ಹೊರಟಿರುವ ಘಟನೆಯೇ ಈ ಮಹಾನ್‌ ನಾಯಕರನ್ನೆಲ್ಲ ನೆನಪಿಸಿಕೊಳ್ಳಲಿಕ್ಕೆ ಕಾರಣವಾಯಿತು.

ನಿಮ್ಮಲ್ಲೊಂದು ಕೋರಿಕೆ- ಮೇಲಿನ ಮಹಾನ್‌ ನಾಯಕರೊಂದಿಗೆ ಶಿವಮಣಿಯನ್ನು ದಯವಿಟ್ಟು ನಿಲ್ಲಿಸಿ ಹೋಲಿಸುವ ಪ್ರಯತ್ನ ಬೇಡ. (ಮೊನ್ನೆ ನಡೆದ  ರಾಮಕೃಷ್ಣ ಹೆಗಡೆಯವರ 75 ನೇ ಹುಟ್ಟು ಹಬ್ಬಕಾರ್ಯಕ್ರಮದಲ್ಲಿ ಸುಭಾಷ್‌, ಗಾಂಧಿ ಮುಂತಾದ ನಾಯಕರ ಚಿತ್ರದೊಂದಿಗೆ ಹೆಗಡೆಯವರನ್ನು ಚಿತ್ರಿಸಿದ್ದ ಘಟನೆ ನಿಮಗೆ ನೆನಪಿದೆ ತಾನೇ!).

ಇಷ್ಟಕ್ಕೂ ನಾಯಕರೆಲ್ಲ ಸುಂದರವಾಗಿ ಇರಲೇಬೇಕೆಂದು, ನಟನೆಯನ್ನು ಅರೆದು ಕುಡಿದಿರಬೇಕೆಂದು ಕಡ್ಡಾಯವೇನೂ ಇಲ್ಲ . ಕೆ.ಶಿವರಾಂ, ಗುಲ್ಜಾರ್‌ ಖಾನ್‌, ಯೋಗೇಶ್ವರ್‌ ನಾಯಕರಾಗಿರುವಾಗ ತಕ್ಕಮಟ್ಟಿಗೆ ಮೊದ್ದು ಮುದ್ದಾಗಿರುವ ಶಿವಮಣಿಯೇ ವಾಸಿ ಅನ್ನುತ್ತಿದ್ದಾರೆ ಮಣಿಪತ್ನಿ ಹಾಗೂ ಒಂದಾನೊಂದು ಕಾಲದ ನಟಿ ತುಳಸಿ. ಶಿವಮಣಿ ಅವರನ್ನು ತೆರೆಯ ಮೇಲೆ ಕಾಣಲಿಕ್ಕೆ ಮೊದಲಿಗೆ ತುಳಸಿ ಅವರೂ ಒಪ್ಪಲಿಲ್ಲ . 'ಜನ ಏನಂದಾರು" ಅನ್ನುವ ಭೀತಿ ಅವರಿಗೆ. ಶಿವಮಣಿ ಕಥೆಯನ್ನು ಮನದಟ್ಟು ಮಾಡಿಸಿದ ಮೇಲೆಯೇ ತುಳಸಿ ಹ್ಞೂಂ ಅಂದದ್ದು . ಅಲ್ಲಿಗೆ ಕಥೆಯೇ ನಾಯಕ ಅನ್ನುವುದು ತುಳಸಿ ಅವರಿಗೆ ಅರಿವಾಗಿರಬೇಕು.

ಇಂಥದೊಂದು ಪರಂಪರೆಯೇ ಇದೆ..
ಶಿವಮಣಿ ಅವರನ್ನು ಹೋಲಿಸುವುದಾದರೆ ಉಪೇಂದ್ರ, ಎಸ್‌.ನಾರಾಯಣ್‌, ಸಾಧು ಕೋಕಿಲ, ಥ್ರಿಲ್ಲರ್‌ ಮಂಜು ಹಾಗೂ ಮಹೇಂದರ್‌ ಅವರೊಂದಿಗೆ ಹೋಲಿಸಬಹುದು. ಮೂಲತಃ ನಾಯಕರಾಗಿದ್ದ ಇವರುಗಳೆಲ್ಲ ತಮ್ಮೊಳಗಿರಬಹುದಾದ ಕಲಾವಿದನನ್ನು ಸಮಾಧಾನಿಸಲಿಕ್ಕೆ ಹೊರಟು ನಾಯಕರಾದವರು. ಆನಂತರ ಉಪ್ಪಿ ಹೊರತು ಉಳಿದವರು ತಂತಮ್ಮ ಮೂಲ ನೆಲೆಗಳಲ್ಲೇ ನೆಮ್ಮದಿ ಕಂಡವರು. ಶಿವಮಣಿ ಈ ಸಾಲಿಗೆ ಹೊಸ ಸೇರ್ಪಡೆ. ಅವರು ಗೆಲ್ಲುತ್ತಾರಾ ಅನ್ನುವುದು ಈ ಹೊತ್ತಿನ ಕುತೂಹಲ.

'ಲವ್‌ ಯೂ" ಗೆಲ್ಲುವ ಬಗ್ಗೆ ಶಿವಮಣಿಯವರಿಗೆ ಯಾವುದೇ ಸಂದೇಹವಿಲ್ಲ . 'ಮೊದಲರ್ಧ ಭಾಗ ಸಂಗೀತದಿಂದ ಕೂಡಿರುತ್ತದೆ. ಉಳಿದರ್ಧ ಭಾಗ ವಿಭಿನ್ನವಾಗಿರುತ್ತದೆ" ಎನ್ನುತ್ತಾರೆ ಶಿವಮಣಿ. ಸಿನಿಮಾದ ದ್ವಿತೀಯಾರ್ಧದ ವಿಭಿನ್ನತೆ ಏನು ಅಂದಾಗ ಮಾತ್ರ ಮುಗುಮ್ಮಾಗುತ್ತಾರೆ.

ಬೆಂಗಳೂರು- ಮಂಗಳೂರು ಹೆದ್ದಾರಿಯಲ್ಲೇ ಅರ್ಧ ಚಿತ್ರೀಕರಣ ನಡೆಯುತ್ತದೆ, ಚೇಸಿಂಗ್‌ ದೃಶ್ಯಗಳಂತೂ ಅದ್ಭುತವಾಗಿರುತ್ತವೆ ಎನ್ನುವ ಮಣಿಯವರ ಮಾತನ್ನು ನಂಬಬಹುದಾದರೆ, 'ಲವ್‌ ಯೂ" ಮಾರಾಮಾರಿ ಚಿತ್ರವಾಗುವ ಬಗ್ಗೆ ಅನುಮಾನವಿಲ್ಲ . ಇಂಥ ಚಿತ್ರಗಳ ನಿರ್ದೇಶನದಲ್ಲಿ ಮಾಸ್ಟರ್‌ಡಿಗ್ರಿ ಪಡೆದಿರುವ ಅನುಭವವೂ ಶಿವಮಣಿ ಬೆನ್ನಿಗಿದೆ. ಆದರೆ, 'ಲವ್‌ ಯೂ" ಸಿನಿಮಾವನ್ನು ಮಾರಾಮಾರಿ ಸಿನಿಮಾ ಆಗಿಸುವುದಕ್ಕಿಂಥ, ಪ್ರೇಮ +ಫೈಟ್‌ =ಮಸಾಲೆ ಚಿತ್ರವಾಗಿಸುವತ್ತ ತುಳಸಿಪತಿಯವರ ಆಸಕ್ತಿ . ಆ ಕಾರಣಕ್ಕಾಗಿಯೇ 7 ಹಾಡುಗಳನ್ನು ಸಿನಿಮಾದಲ್ಲಿ ಬಳಸಲು ಶಿವಮಣಿ ಉದ್ದೇಶಿಸಿದ್ದಾರೆ.

ನಾಯಕಿ ಹಾಗೂ ತಂತ್ರಜ್ಞರ ಆಯ್ಕೆ ಇನ್ನೂ ಪಕ್ಕಾ ಆಗಿಲ್ಲ . ಸಿನಿಮಾ ಮಾತ್ರ ಬರುವ ಜನವರಿಯಲ್ಲಿ ತೆರೆ ಕಾಣುವುದು ಗ್ಯಾರಂಟಿ ಅನ್ನುವುದು ನಿರ್ಮಾಪಕ ಸಂಪತ್‌ಕುಮಾರನ್‌ ಅವರ ವಿಶ್ವಾಸ. ಹೊಸಬರನ್ನು ಪ್ರೋತ್ಸಾಹಿಸಲೆಂದು ಕೋಟಿ ರುಪಾಯಿ ಖರ್ಚು ಮಾಡಿ ಸಿನಿಮಾ ತೆಗೆಯಲು ಸಂಪತ್‌ ಮುಂದಾಗಿದ್ದಾರೆ. ಅವರ ಉತ್ಸಾಹಕ್ಕೆ, ಧೈರ್ಯಕ್ಕೆ ಜೈ ಅನ್ನೋಣವಾ!?

English summary
Shivamani to act as a hero of kannada movie Love you

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X