twitter
    For Quick Alerts
    ALLOW NOTIFICATIONS  
    For Daily Alerts

    ರಾಜ್‌ ಚಿತ್ರರಂಗಕ್ಕೇನು ಕೊಟ್ಟಿದ್ದಾರೆ

    By *ಸತ್ಯನಾರಾಯಣ
    |

    '2002 ನೇ ಇಸವಿಯಿಂದ ರಿಮೇಕ್‌ ಚಿತ್ರಗಳಲ್ಲಿ ನಟಿಸೋದಿಲ್ಲ " ಎಂದು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಶಿವರಾಜ್‌ ಹೇಳಿದ್ದಕ್ಕಿಂಥ ಹೆಚ್ಚು ಸುದ್ದಿಯಾಗಿದ್ದು ಅವರೇ ಪ್ರಕಟಿಸಿದ ಬೆಂಗಳೂರು ಮತ್ತು ಮೈಸೂರು ನಡುವೆ ಫಿಲಂ ಸಿಟಿ ಸ್ಥಾಪಿಸುವ ಅವರ ಯೋಜನೆ.

    ಈ ಹಿಂದೆ ರವಿಚಂದ್ರನ್‌ ಹೆಸರಘಟ್ಟದಲ್ಲಿ ಫಿಲಂಸಿಟಿ ಸ್ಥಾಪಿಸುವ ಕನಸು ಕಂಡಿದ್ದರು. ಆದರೆ ಸರ್ಕಾರದಿಂದ ಗ್ರೀನ್‌ ಸಿಗ್ನಲ್‌ ಸಿಗಲಿಲ್ಲ . ಅನಂತರ ರಾಜೇಂದ್ರಸಿಂಗ್‌ ಬಾಬು ಮೈಸೂರಲ್ಲಿ ಫಿಲಂಸಿಟಿ ನಿರ್ಮಿಸುವಂತೆ ಅಂಬರೀಶ್‌ ಅವರನ್ನು ಹುರಿದುಂಬಿಸಿದ್ದರು. ರಾಜಕೀಯದಲ್ಲಿ ಮುಳುಗಿದ್ದ ಅಂಬಿಯ ಕಿವಿಗೆ ಈ ಕರೆ ಕೇಳಿಸಲೇ ಇಲ್ಲ . ಪುರುಸೊತ್ತಾದಾಗಲೆಲ್ಲ ಫಿಲಂಸಿಟಿಯ ಬಗ್ಗೆ ಮಾತನಾಡುತ್ತಿದ್ದ ಫಿಲಂಚೇಂಬರ್‌ ಇತ್ತೀಚೆಗೆ ಆ ವಿಷಯ ಮರೆತು ಕುಳಿತಿದೆ. ಇಂಥಾ ಸಂದರ್ಭದಲ್ಲಿ ಮರೆತುಹೋಗಿದ್ದ ವಿಷಯವನ್ನು ಶಿವಣ್ಣ ಮತ್ತೆ ನೆನಪಿಸಿದ್ದಾರೆ.

    ಶಿವರಾಜ್‌ ಅವರ ಹೇಳಿಕೆ ಚಿತ್ರೋದ್ಯಮಿಗಳನ್ನು ಚಕಿತರನ್ನಾಗಿಸಿದೆ. ಯಾಕೆಂದರೆ ಕಳೆದ 12 ವರ್ಷಗಳ ತಮ್ಮ ವೃತ್ತಿಬದುಕಲ್ಲಿ ಶಿವಣ್ಣ ಯಾವತ್ತೂ ನಟನೆಯಿಂದಾಚೆ ತಮ್ಮ ಕಾರ್ಯ ಕ್ಷೇತ್ರವನ್ನು ವಿಸ್ತರಿಸಿಯೇ ಇಲ್ಲ . ರಾಜ್‌ ಮಗ ಅನ್ನುವ ಹ್ಯಾಂಗೋವರ್‌ನಿಂದ ಈಚೆ ಬರುವುದಕ್ಕೆ ಅವರಿಗೆ ಕೆಲವು ವರ್ಷ ಹಿಡಿಯಿತು. ಅನಂತರ ಇಮೇಜ್‌ನಿಂದ ಕಳಚಿಕೊಳ್ಳುವುದಕ್ಕೆ ಇನ್ನೊಂದಿಷ್ಟು ವರ್ಷ. ಸದ್ಯಕ್ಕಂತೂ ಅವರು ಕನ್ನಡದ ಪ್ರಬುದ್ಧ ನಟರಲ್ಲೊಬ್ಬರು ಅನ್ನುವ ಪ್ರಶಂಸೆಯನ್ನು ಪಡೆದುಕೊಂಡಿದ್ದಾರೆ. ಆದರೆ ಈ ಪ್ರಬುದ್ಧತೆಯನ್ನು ತಲುಪುವ ಹಂತದಲ್ಲೆಲ್ಲೋ ಅವರ ಜನಪ್ರಿಯತೆಯ ಗ್ರಾಫ್‌ ಇಳಿಮುಖವನ್ನೂ ಕಂಡಿದೆ. ಅದನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಅವರು ರಿಮೇಕ್‌ ಕಡೆ ಹೊರಳಿದರು. ಆದರೆ ಅದರಿಂದ ಹೆಚ್ಚಿನ ಲಾಭವೇನೂ ಆದಂತಿಲ್ಲ .

    ಯಾಕೆಂದರೆ ಅಂಕಿಅಂಶಗಳು ಹೇಳುವ ಪ್ರಕಾರ ಶಿವರಾಜ್‌ ಒಂದೇ ಒಂದು ಹಿಟ್‌ ಚಿತ್ರವನ್ನೂ ಕೊಡದೆ ಎರಡು ವರ್ಷವೇ ಆಯಿತು. ಅವರ ಸೋಲಿನ ಸರಮಾಲೆಗೆ ಇತ್ತೀಚಿನ ಸೇರ್ಪಡೆ ಅಂದರೆ ಅಸುರ ಎಂಬ ರಿಮೇಕ್‌ ಚಿತ್ರ. ಮುಂದಿನ ವರ್ಷದಿಂದ ರಿಮೇಕ್‌ಗೆ ವಿದಾಯ ಎಂಬ ನಿರ್ಧಾರವೂ ಕಾರ್ಯರೂಪಕ್ಕೆ ಬರೋದು ಕಷ್ಟವೇ. ಅವರ ಕೈಲಿರುವ ಚಿತ್ರಗಳ ಪಟ್ಟಿ ನೋಡಿದರೇ ಅದು ಸ್ಪಷ್ಟವಾಗುತ್ತೆ. ಬಹಳ ಚೆನ್ನಾಗಿದೆ (ಬಿಡುಗಡೆಗೆ ಸಿದ್ಧ), ಸುಂದರಕಾಂಡ, ಭಾವ ಬಾಮೈದ, ಯುವರಾಜ, ನಿನ್ನೆ ಪ್ರೀತಿಸುವೆ, ಕೋದಂಡರಾಮ, ರಾಕ್‌ಲೈನ್‌ ನಿರ್ಮಾಣದ ಹೆಸರಿಡದ ಚಿತ್ರ- ಹೀಗೆ ಏಳು ರಿಮೇಕ್‌ ಚಿತ್ರಗಳನ್ನು ಅವರು ಒಪ್ಪಿಕೊಂಡಿದ್ದಾರೆ. ಇವೆಲ್ಲಾ ಮುಗಿಯೋದಿಕ್ಕೆ ಕಡಿಮೆ ಎಂದರೂ ಎರಡು ವರ್ಷ ಬೇಕು. ಎಂಬಲ್ಲಿಗೆ ಸಿನಿಮಾಗಳ ಸಂಖ್ಯೆಯಲ್ಲೂ ಕಡಿತ ಮಾಡ್ತೀನಿ ಅನ್ನುವ ಶಿವರಾಜ್‌ ನಿರ್ಧಾರಾನೂ ಕಾರ್ಯ ರೂಪಕ್ಕೆ ಬರೋದು ಕೊಂಚ ಕಷ್ಟಾನೇ. ಈ ಮಧ್ಯೆ ಫಿಲಂಸಿಟಿಯೆಂಬ ಹೊಸ ಜವಾಬ್ದಾರಿಯನ್ನು ಅವರು ಒಪ್ಪಿಕೊಂಡಿದ್ದಾರೆ.

    ಫಿಲಂಸಿಟಿ ಸ್ಥಾಪನೆಗೆ ಶಿವರಾಜ್‌ ಜೊತೆ ಇನ್ನೊಬ್ಬ ಉದ್ಯಮಿ ಕೈ ಜೋಡಿಸಿದ್ದಾರೆ. ಅವರ ಹೆಸರು ಇನ್ನೂ ಪತ್ತೆಯಾಗಿಲ್ಲ . ಇವರಿಬ್ಬರೂ ಜೊತೆಯಾಗಿ ಬೆಂಗಳೂರು- ಮೈಸೂರು ನಡುವೆ ನಲವತ್ತು ಎಕರೆ ಜಾಗವನ್ನು ಖರೀದಿಸಿದ್ದಾರೆ. ಎರಡೂ ನಗರಗಳಿಗೆ ಸಮೀಪವಿರುವ ಜಾಗವಾದ್ದರಿಂದ, ಪರಭಾಷೆಯಿಂದ ಚಿತ್ರೀಕರಣಕ್ಕೆ ಬರುವವರಿಗೆ ಅನುಕೂಲವಾಗುತ್ತದೆ. ಮಹದೇವಪುರ, ಚಿಕ್ಕಾಡೆಯಂಥ ಗ್ರಾಮೀಣ ಲೊಕೇಷನ್‌ಗಳಲ್ಲೂ ಅವರು ಚಿತ್ರೀಕರಣ ನಡೆಸಬಹುದು. ಹೀಗೆ ತಮ್ಮ ಯೋಜನೆಯ ನೀಲ ನಕಾಶೆಯನ್ನು ಮುಂದಿಡುವ ಶಿವಣ್ಣ , ನವಂಬರ್‌ 1 ಕ್ಕೆ ಫಿಲಂಸಿಟಿಯ ಕಾರ್ಯ ಆರಂಭವಾಗಬಹುದು ಅನ್ನುತ್ತಾರೆ.

    ಫಿಲಂಸಿಟಿ ಸ್ಥಾಪನೆಗೆ ಶಿವರಾಜ್‌ ಮುಂದಾಗಿರುವುದರ ಹಿಂದಿನ ಕಾರಣವೇನು ಅನ್ನುವುದು ಇನ್ನೂ ಪತ್ತೆಯಾಗಿಲ್ಲ . ಇದು ಶಿವರಾಜ್‌ಗೆ ಒಗ್ಗದ ಕ್ಷೇತ್ರ ಅನ್ನುವವರೂ ಇದ್ದಾರೆ. ಯಾಕೆಂದರೆ ಅವರ ವ್ಯವಹಾರಜ್ಞಾನದ ಬಗ್ಗೆ ಹತ್ತಾರು ಜೋಕ್‌ಗಳು ಚಾಲ್ತಿಯಲ್ಲಿವೆ. ಶಿವರಾಜ್‌ ಮನೆ ಪಕ್ಕಾನೇ ಅವರದೇ ಆವಿಡ್‌ ಎಡಿಟಿಂಗ್‌ ಸ್ಟುಡಿಯೋ ಇದ್ದರೂ, ಅದರ ಖರ್ಚುವೆಚ್ಚದ ವಿವರ ಬೇಕಿದ್ದರೆ ನೀವು ಗೀತಾ ಶಿವರಾಜ್‌ ಅವರನ್ನೇ ಸಂಪರ್ಕಿಸಬೇಕು. ತೆರೆಯೀಚೆಗೆ ಶಿವಣ್ಣ ಜನನಾಯಕರಾಗಿ ಕಾಣಿಸಿಕೊಂಡಿದ್ದೂ ಇಲ್ಲ . ರಾಜ್‌ ಅಪಹರಣದ ಸಂದರ್ಭದಲ್ಲಿ ಮಾವ ಬಂಗಾರಪ್ಪನವರ ಒತ್ತಾಯಕ್ಕೆ ಬೀದಿಗಿಳಿದು ಭಾಷಣ ಮಾಡಿದ್ದರ ಹೊರತಾಗಿ ಅವರಿಗೆ ಪಬ್ಲಿಕ್‌ ಸಂಪರ್ಕವೇ ಇಲ್ಲ .

    ಅದೇನೇ ಇರಬಹುದು, ಈ ಫಿಲಂಸಿಟಿ ಏನಾದರೂ ಸ್ಥಾಪನೆಯಾದರೆ ರಾಜ್‌ ಕುಟುಂಬದ ಮೇಲಿರುವ ಒಂದು ಅಪವಾದವಂತೂ ದೂರವಾಗುತ್ತದೆ. ರಾಜ್‌ ಚಿತ್ರರಂಗಕ್ಕೇನು ಕೊಟ್ಟಿದ್ದಾರೆ ಅನ್ನುವ ಹಳೇ ಪ್ರಶ್ನೆಗೆ ಮಗನ ಮೂಲಕವಾದರೂ ಉತ್ತರ ಸಿಗುತ್ತದೆ. ಕೆರೆಯ ನೀರನು ಕೆರೆಗೆ ಚೆಲ್ಲುವ ಕೆಲಸ ನಿಧಾನವಾಗಿಯಾದರೂ ಆದರೆ ಅದೇ ಸಂತೋಷ. ಅಷ್ಟಕ್ಕೂ ಫಿಲಂಸಿಟಿ ಅನ್ನೋದು ಇಂದಿನ ಸಂದರ್ಭದಲ್ಲಿ ಬರೀ ಚೆಲ್ಲುವ ಕೆಲಸ ತಾನೆ ? ಆದರೆ ನೀರಲ್ಲ , ನೀರಿನಂತೆ ಹಣ ಚೆಲ್ಲಬೇಕಾಗುತ್ತೆ. ಗುಡ್‌ ಲಕ್‌ ಶಿವಣ್ಣ.

    English summary
    Shivraj Kumar will not act in remake films
    Tuesday, July 9, 2013, 11:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X