ಶಿವರಾಜ್ ಕುಮಾರ್ ನಟನೆಯ 'ಜನುಮದ ಜೋಡಿ' ಚಿತ್ರಕ್ಕೆ 24 ವರ್ಷ ತುಂಬಿದ ಸಂತಸ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ 'ಜನುಮದ ಜೋಡಿ' ಚಿತ್ರಕ್ಕೆ 24 ವರ್ಷ ತುಂಬಿದೆ. 1996 ನವೆಂಬರ್15ರಂದು ರಿಲೀಸ್ ಆದ ಈ ಸಿನಿಮಾ ಭರ್ಜರಿ ಪ್ರದರ್ಶನ ಕಂಡು ಚಿತ್ರಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು. ಈ ಸಿನಿಮಾ ರಿಲೀಸ್ ಆಗಿ 24 ವರ್ಷ ಕಳೆದರು ಸಿನಿರಸಿಕರು ಇಂದಿಗೂ ಈ ಸಿನಿಮಾವನ್ನು ನೆನಪಿಸಿಕೊಳ್ಳುತ್ತಾರೆ, ಹಾಡುಗಳನ್ನು ಗುನುಗುತ್ತಿರುತ್ತಾರೆ.
ಜನುಮದ ಜೋಡಿ ಚಿತ್ರದಲ್ಲಿ ಶಿವರಾಜ್ ಕುಮಾರ್ ಗೆ ನಾಯಕಿಯಾಗಿ ನಟಿ ಶಿಲ್ಪಾ ಕಾಣಿಸಿಕೊಂಡಿದ್ದರು. ಮಲಯಾಳಂ ನಟಿ ಶಿಲ್ಪಾ ನಟನೆಯ ಮೊದಲ ಕನ್ನಡ ಸಿನಿಮಾವಿದು. ನಾಗಾಭರಣ ಸಾರಥ್ಯದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ಶಿವಣ್ಣ ಹಳ್ಳಿಯ ಮುಗ್ಧ ಯುವಕ ಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರ ಎಷ್ಟು ಯಶಸ್ಸು ಗಳಿಸಿತ್ತೊ ಹಾಡುಗಳು ಸಹ ಅಷ್ಟೇ ಹಿಟ್ ಆಗಿವೆ.
ವಿ ಮನೋಹರ್ ಸಂಗೀತ ನಿರ್ದೇಶನದಲ್ಲಿ ಚಿತ್ರದ ಹಾಡುಗಳು ಮೂಡಿ ಬಂದಿವೆ. ಇನ್ನೂ ಚಿತ್ರದಲ್ಲಿ ಪವಿತ್ರಾ ಲೋಕೇಶ್, ಏಣಗಿ ಬಳಪ್ಪ, ಹೊನ್ನವಳ್ಳಿ ಕೃಷ್ಣ, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಈ ಸಿನಿಮಾ ಮೂಲಕ ನಟ ಮಂಡ್ಯ ರಮೇಶ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ.

ಜನುಮದ ಜೋಡಿ ಸಿನಿಮಾ ಉತ್ತಮ ಪ್ರದರ್ಶನ ಕಾಣುವ ಜೊತೆಗೆ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ನಟಿ ಶಿಲ್ಪಾ ಮೊದಲ ಕನ್ನಡ ಸಿನಿಮಾದಲ್ಲೇ ಅತ್ಯುತ್ತಮ ನಟಿ ಫಿಲ್ಮ್ ಫೇರ್ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡರು. ಸಾಕಷ್ಟು ಫಿಲ್ಮ್ ಫೇರ್ ಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿಗಳನ್ನು ಈ ಸಿನಿಮಾ ಗೆದ್ದಿದೆ. ಹುಬ್ಬಳ್ಳಿ, ಬಿಜಾಪುರ ಹಾಗೂ ಬೆಳಗಾವಿಯ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಒಂದು ವರ್ಷಕ್ಕು ಅಧಿಕ ಪ್ರದರ್ಶನ ಕಂಡಿದೆ.


Click it and Unblock the Notifications











