ವೇದ ಚಿತ್ರದ ಮುಹೂರ್ತಕ್ಕೆ ದಿನಾಂಕ ನಿಗದಿ: ಚಿತ್ರೀಕರಣಕ್ಕೆ ಬರುತ್ತಾರಾ ಶಿವಣ್ಣ!
ನಟ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ದಿವಂಗತರಾಗಿ ವಾರಗಳು ಉರುಳುತ್ತಿವೆ. ಅಪ್ಪು ಅಗಲಿಕೆಯನ್ನು ಅವರನ್ನು ಅಪಾರವಾಗಿ ಪ್ರೀತಿಸುವ ಅಭಿಮಾನಿಗಳಿಗೆ ಅಪಾರ ನೋವು ಉಂಟು ಮಾಡಿದೆ. ಯಾರೇ ಅಪ್ಪು ಅವರನ್ನು ನೆನೆದರೆ ಆ ದೇವರಿಗೆ ಹಿಡಿ ಶಾಪ ಹಾಕುತ್ತಾ ಇದ್ದಾರೆ. ಇನ್ನು ಅವರ ಕುಟುಂಬದ ಸ್ಥಿತಿ ಊಹೆಗೆ ನಿಲುಕದ್ದು. ನಟ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಕಿರಿಯ ತಮ್ಮನನ್ನು ಕಳೆದುಕೊಂಡು ನೋವು ನುಂಗಿ ಬದುಕುತ್ತಾ ಇದ್ದಾರೆ. ಆದರೂ ಇರುವವರ ಜೀವನ ಮುಂದೆ ಸಾಗಲೇ ಬೇಕು. ಈ ಮಾತನ್ನು ನಟ ಶಿವರಾಜ್ ಕುಮಾರ್ ಹಲವು ಬಾರಿ ಹೇಳಿಕೊಂಡಿದ್ದಾರೆ. ನೋವುಗಳನ್ನು ನುಂಗಿ ನಿಂತಿರುವ ನಟ ಶಿವರಾಜಕುಮಾರ್ ತಮ್ಮ ಮುಂದಿನ ಸಿನಿಮಾ ಕೆಲಸದ ಕಡೆಗೂ ಗಮನ ಹರಿಸಿದ್ದಾರೆ.
ಭಜರಂಗಿ 2 ಬಳಿಕ ನಟ ಶಿವರಾಜ್‌ಕುಮಾರ್ ವೇದ ಸಿನಿಮಾವನ್ನು ಆರಂಭಿಸಬೇಕಿತ್ತು. ಆದರೆ ಭಜರಂಗಿ 2 ಸಿನಿಮಾದ ರಿಲೀಸ್ ದಿನವೇ ನಡೆಯ ಬಾರದ ಘಟನೆ ಶಿವರಾಜ್‌ಕುಮಾರ್ ಜೀವನದಲ್ಲಿ ನಡೆದು ಹೋಗಿದೆ. ಅಂದೆ ಅಪ್ಪು ಎಲ್ಲರನ್ನೂ ಬಿಟ್ಟು ಇಹಲೋಕ ತ್ಯಜಿಸಿದ್ದಾರೆ. ಮನಸ್ಸಿನಲ್ಲಿ ಬೆಟ್ಟದಷ್ಟು ನೋವಿದ್ದರು, ದಿಟ್ಟ ಹೆಜ್ಜೆ ಇಟ್ಟು ಮುಂದಿನ ದಾರಿಯತ್ತ ಸಾಗಿದ್ದಾರೆ. ನಟ ಶಿವರಾಜ್ ಕುಮಾರ್ 125ನೇ ಸಿನಿಮಾ ವೇದ ಸಿನಿಮಾದ ಶೂಟಿಂಗ್‌ಗೆ ಶಿವರಾಜ್‌ಕುಮಾರ್ ಸಜ್ಜಾಗಿದ್ದಾರೆ. ಈಗ ಈ ಚಿತ್ರದ ಮುಹೂರ್ತಕ್ಕೆ ದಿನಾಂಕ ನಿಗದಿ ಆಗಿದೆ.
ನಟ ಶಿವರಾಜ್ ಕುಮಾರ್ 125ನೇ ಸಿನಿಮಾ ವೇದ. ಶಿವರಾಜ್‌ಕುಮಾರ್ ಅವರ 125ನೇ ಸಿನಿಮಾದ ಬಗ್ಗೆ ಸಹಜವಾಗಿಯೇ ನಿರೀಕ್ಷೆಗಳು ಮನೆ ಮಾಡಿವೆ. ನೂರು ಸಿನಿಮಾಗಳ ಬಳಿಕವೂ ನಟ ಶಿವರಾಜ್‌ಕುಮಾರ್ ಸ್ಟಾರ್ ನಟನ ಪಟ್ಟದಲ್ಲಿಯೇ ಇದ್ದಾರೆ, ಇರುತ್ತಾರೆ. ಅವರ ಎನರ್ಜಿಗೆ ಮತ್ಯಾರು ಸಾಟಿ ಇಲ್ಲ. ನೂರ ಇಪ್ಪತೈದನೇ ಸಿನಿಮಾ ಆದರು ಮೊದಲ ಸಿನಿಮಾದ ಹಾಗೆ ಈ ಸಿನಿಮಾಗೂ ಶಿವರಾಜ್‌ಕುಮಾರ್ ತಯಾರಿ ನಡೆಸಿದ್ದರು.

ನವೆಂಬರ್ 8ರಂದೇ ಸೆಟ್ಟೇರಬೇಕಿದ್ದ ವೇದ!
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇದೇ ನವೆಂಬರ್ 8ರಂದು ವೇದ ಸಿನಿಮಾ ಸೆಟ್ಟೇರಬೇಕಿತ್ತು. ವೇದ ಚಿತ್ರಕ್ಕಾಗಿ ಶಿವರಾಜ್‌ಕುಮಾರ್ ಅವರ ಡೇಟುಗಳ ಹೊಂದಾಣಿಕೆಯೂ ಆಗಿತ್ತು. ಶೂಟಿಂಗ್ ಆರಂಭಿಸಲು ಚಿತ್ರ ತಂಡ ಎಲ್ಲಾ ರೀತಿಯ ತಯಾರಿಯನ್ನೂ ಮಾಡಿ ಕೊಂಡಿತ್ತು. ಅದರೆ ಅಷ್ಟರಲ್ಲಿ ಮನಸ್ಸಿಗೆ ಗಾಯ ಮಾಡುವ ಈ ದುರ್ಘಟನೆ ಕನ್ನಡ ಚಿತ್ರರಂಗದಲ್ಲಿ ನಡೆದು ಹೋಗಿದೆ. ಅಪ್ಪು ಎಲ್ಲರನ್ನು ಅಗಲಿ ಹೋಗಿದ್ದಾರೆ. ಹಾಗಾಗಿ ಸಿನಿಮಾದ ಕೆಲಗಳು ಮುಂದೆ ಹೋಗಿವೆ. ಸಿನಿಮಾದ ಮುಹೂರ್ತದ ದಿನಾಂಕ ಕೂಡ ಪೋಸ್ಟ್ ಪೋನ್ ಆಗಿದೆ.

ನವೆಂಬರ್ 21ಕ್ಕೆ ವೇದ ಚಿತ್ರದ ಮುಹೂರ್ತ!
ಈಗ ನವೆಂಬರ್ 8ರ ಬದಲಿಗೆ ನವೆಂಬರ್ 21 ಕ್ಕೆ ವೇದ ಸಿನಿಮಾದ ಮುಹೂರ್ತಕ್ಕೆ ದಿನಾಂಕ ನಿಗದಿ ಆಗಿದೆ. ಅಂದೆ ಚಿತ್ರ ಸೆಟ್ಟೇರಲಿದೆ. ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಮಾಡಲು ಚಿತ್ರ ತಮಡ ಪಯೋಜನೆ ಹಾಕಿ ಕೊಂಡಿದೆ. ಇನ್ನೂ ಸಿನಿಮಾದ ಶೂಟಿಂಗ್ ಪ್ಲ್ಯಾನ್ ಕೂಡ ತಯಾರಾಗಿದೆ. ಮುಹೂರ್ತದ ಬಳಿಕ ಸಿನಿಮಾ ತಂಡ ಶೂಟಿಂಗ್ ಆರಂಭಿಸಲಿದೆ. ಆದರೆ ವೇದ ಸಿನಿಮಾ ಆರಂಭಿಸಲು ಹೆಚ್ಚು ಸಮಯ ತೆಗೆದು ಕೊಂಡಿಲ್ಲ ನಟ ಶಿವರಾಜ್ ಕುಮಾರ್. ಚಿತ್ರತಂಡಕ್ಕೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಬೇಗನೇ ಸಿನಿಮಾ ತಂಡವನ್ನು ಸೇರಿಕೊಂಡಿದ್ದಾರೆ. ಅಂದು ಕೊಂಡಿದ್ದಕ್ಕಿಂತ 14ದಿನ ತಡವಾಗಿ ಚಿತ್ರಕ್ಕೆ ಚಾಲನೆ ಸಿಗುತ್ತಿದೆ.

ವೇದ ಲುಕ್‌ಗೆ ಫ್ಯಾನ್ಸ್ ಫಿದಾ!
ಶಿವಣ್ಣ ಅವರ ವೇದ ಫಸ್ಟ್ ಲುಕ್ ಬಿಡುತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಬಿಳಿ ಗಡ್ಡ ಬಿಟ್ಟು ವಯಸ್ಸಾದ ವ್ಯಕ್ತಿಯ ಗೆಟಪ್‌ನಲ್ಲಿ ಶಿವರಾಜ್‌ಕುಮಾರ್ ಲುಕ್ ಎಲ್ಲರಿಗೂ ಇಷ್ಟ ಆಗಿತ್ತು. ಇಡೀ ಸಿನಿಮಾದ ಮುಕ್ಕಾಲು ಭಾಗ ಇದೇ ಗೆಟಪ್‌ನಲ್ಲಿ ಶಿವಣ್ಣ ಮಿಂಚಲಿದ್ದಾರೆ. ವೇದ ಸಿನಿಮಾದ ಪ್ರಮುಖ ಗೆಟಪ್ ಇದೆನೇ. ಹೀಗಾಗಿ ಫಸ್ಟ್ ಲುಕ್ ಆಗಿ ಇದನ್ನೇ ರಿಲೀಸ್ ಮಾಡಿತ್ತು ಚಿತ್ರತಂಡ.

ಅಪ್ಪು ಅಗಲಿಕೆಯ ನೋವು ನುಂಗಿಕೊಂಡೇ ವೇದನಾಗಿ ಬಣ್ಣ ಹಚ್ಚಲಿರುವ ಸೆಂಚುರಿ ಸ್ಟಾರ್!
ಭಜರಂಗಿ, ವಜ್ರಕಾಯ, ಭಜರಂಗಿ 2 ನಂತರ ಈಗ ಶಿವಣ್ಣನೊಂದಿಗೆ ನಿರ್ದೇಶಕ ಎ.ಹರ್ಷ ನಾಲ್ಕನೇ ಸಿನಿಮಾ ಮಾಡುತ್ತಿದ್ದಾರೆ. ವೇದ ಚಿತ್ರದಲ್ಲಿ ಸೆಟ್ಟು ಪ್ರಮುಖ ಆಕರ್ಷಣೆ. ಇದು 60ರ ದಶಕದ ಕಥೆ. ಹಾಗಾಗಿ ಬಹುತೇಕ ಸಿನಿಮಾವನ್ನು ಸೆಟ್ಟಿನಲ್ಲೇ ಶೂಟಿಂಗ್ ಮಾಡಲಾಗುತ್ತದೆ. ಇದೇ ಮೊದಲ ಬಾರಿಗೆ ಶಿವರಾಜ್‌ಕುಮಾರ್ ಪತ್ನಿ ಗೀತಾ ಶಿವರಾಜ್‌ಕುಮಾರ್ ತಮ್ಮದೇ 'ಗೀತಾ ಪಿಕ್ಚರ್ಸ್' ಬ್ಯಾನರ್‌ನಲ್ಲಿ ಶಿವಣ್ಣನ 125ನೇ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕ ಚಿತ್ರರಂಗಕ್ಕೂ ಗೀತ ಶಿವರಾಜ್‌ಕುಮಾರ್ ಪದಾರ್ಪಣೆ ಮಾಡಿದಂತಾಗಿದೆ.


Click it and Unblock the Notifications











