For Quick Alerts
  ALLOW NOTIFICATIONS  
  For Daily Alerts

  ಡಬ್ಬಿಂಗ್: ಏನ್ ಶಿವಣ್ಣ ನಿಮ್ ಬಾಯಿಂದ ಇಂಥಾ ಮಾತಾ?

  By ಬಾಲರಾಜ್ ತಂತ್ರಿ
  |

  ಡಬ್ಬಿಂಗ್ ಪರ, ವಿರೋಧ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದೆ. ಹಲವು ವರ್ಷಗಳಿಂದ ಡಬ್ಬಿಂಗ್ ವಿವಾದ ನಡೆಯುತ್ತಲೇ ಬಂದಿದ್ದರೂ ಈ ಬಾರಿ ಮಾತ್ರ ಅದು ಕನ್ನಡ ಚಿತ್ರರಂಗವನ್ನೇ ಅಕ್ಷರಸಃ ಇಬ್ಬಾಗದತ್ತ ದೂಡಿದಿರುವುದಂತೂ ನಿಜ.

  ಡಬ್ಬಿಂಗ್ ಪರ ನಿಲುವಿಗೆ ಚಿತ್ರರಂಗದ ಒಂದು ಪ್ರಮುಖ ಭಾಗದಿಂದ ಈ ರೀತಿಯ ಬೆಂಬಲ ಸಿಗುತ್ತದೆ ಎಂದು ಬಹುಷಃ ಡಬ್ಬಿಂಗ್ ವಿರೋಧಿ ಬಣ ಊಹಿಸರಲಿಕ್ಕಿಲ್ಲ. ಹಲವು ವರ್ಷಗಳಿಂದ ಡಬ್ಬಿಂಗಿಗೆ ವಿರೋಧಿಸಲೇ ಬರುತ್ತಿದ್ದ ನಿರ್ಮಾಪಕರ ಸಂಘ ಈ ಬಾರಿ ಡಬ್ಬಿಂಗಿಗೆ ಬೆಂಬಲ ಸೂಚಿಸಿರುವುದು ಕನ್ನಡ ಚಿತ್ರರಂಗ ಒಡೆದ ಮನಸಾಗಿರುವುದಕ್ಕೆ ಹಿಡಿದ ಕನ್ನಡಿ. (ಬಂದ್ ಗೆ 'ಮಠ' ಗುರು, ನಿರ್ಮಾಪಕ ಸಂಘ ವಿರೋಧ)

  ಡಬ್ಬಿಂಗ್ ವಿವಾದ ಇಂದು ನಿನ್ನೆಯದಲ್ಲ, ಅದಕ್ಕೆ ಐವತ್ತು ವರ್ಷಗಳ ಇತಿಹಾಸವಿದೆ. ರಾಜ್ ಕಾಲದಿಂದಲೂ ಚಾಲ್ತಿಯಲ್ಲಿರುವ ಕನ್ನಡ ಚಿತ್ರರಂಗದ ಮತ್ತು ಕನ್ನಡಿಗರ ಜ್ವಲಂತ ಸಮಸ್ಯೆ ಅನ್ನಬಹುದು. ರಾಜ್ ಕಾಲದಲ್ಲಿ ನಡೆಯುತ್ತಿದ್ದ ಹೋರಾಟಕ್ಕೂ ಈಗಿನ ಹೋರಾಟದ ಹಿಂದಿನ ವ್ಯಾವಹಾರಿಕ ದೃಷ್ಠಿಗೂ ಬಹಳ ವ್ಯತ್ಯಾಸವಿದೆ.

  ನಿರ್ಮಾಪಕರಲ್ಲಿ 'ಅನ್ನದಾತ'ರನ್ನು ಕಂಡವರು ಡಾ.ರಾಜ್ ಅವರು. ನಿರ್ಮಾಪಕರೇ ಅನ್ನದಾತರು ಎನ್ನುವ ಧ್ಯೇಯವಾಕ್ಯವನ್ನು ಚಿತ್ರರಂಗಕ್ಕೆ ಪರಿಚಯಿಸಿದವರು ರಾಜ್. ಆದರೆ ರಾಜ್ ಪುತ್ರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೆಲವು ದಿನಗಳ ಹಿಂದೆ ಡಬ್ಬಿಂಗ್ ವಿಚಾರದಲ್ಲಿ ಸಹನೆಯ ಕಟ್ಟೆಯೊಡೆದು ನಿರ್ಮಾಪಕರೊಬ್ಬರನ್ನು ತರಾಟೆಗೆ ತೆಗೆದುಕೊಳ್ಳಲು ಬಳಸಿಕೊಂಡ ಪದ ಮಾತ್ರ ಒಪ್ಪುವಂತದಲ್ಲ.

  ನಿರ್ಮಾಪಕರನ್ನು ಅನ್ನದಾತರೆನ್ನುತ್ತಿದ್ದ ರಾಜ್ ಪುತ್ರ ಶಿವಣ್ಣ ಅವರ ಬಾಯಿಯಿಂದ ಇಂಥಾ ಮಾತೇ? ಎಂದೂ ಇನ್ನೊಬ್ಬರನ್ನು ನೋಯಿಸಿ ಮಾತನಾಡದ ಶಿವಣ್ಣ ಮೊನ್ನೆ ಡಬ್ಬಿಂಗ್ ಸಂಬಂಧ ವಿಚಾರದಲ್ಲಿ ನಿರ್ಮಾಪಕರೊಬ್ಬರಿಗೆ ಕೈಲಾಗದಿದ್ದಲ್ಲಿ ಬಳೆ ತೊಟ್ಟು ಕೊಂಡು ಮನೇಲಿರಿ ಎನ್ನುವ ಮಾತನ್ನಾಡಿದ್ದರು.

  ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಗಿಂತಲೂ ಹೆಚ್ಚಿನ ತೊಂದರೆ ಆಗುತ್ತಿರುವುದು ಪರಭಾಷಾ ಚಿತ್ರಗಳಿಂದ. ಡಬ್ಬಿಂಗ್ ವಿರೋಧಿಸುವವರು ಮೊದಲು ಪರಭಾಷಾ ಚಿತ್ರಗಳ ಹಾವಳಿಯನ್ನು ನಿಲ್ಲಿಸಲಿ. ಕನ್ನಡ ಚಿತ್ರ ನಿರ್ಮಿಸಿ ಮನೆ, ಮಠ ಕಳೆದು ಕೊಂಡೆ. ಮುಖವಾಡ ಹಾಕಿಕೊಂಡು ವ್ಯವಹಾರ ನಡೆಸುವವನು ನಾನಲ್ಲ. ಡಬ್ಬಿಂಗ್ ಚಿತ್ರದಿಂದ ನನ್ನ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳುತ್ತೇನೆ ಎಂದು ಹಿರಿಯ ನಿರ್ಮಾಪಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಹೇಳಿದ್ದರು. ಅವರ ಮಾತಲ್ಲಿ ನೋವಿತ್ತು.

  ಇದಕ್ಕೆ ಅತ್ಯಂತ ಖಾರವಾಗಿ ಉತ್ತರಿಸಿದ್ದ ಶಿವಣ್ಣ, ಕನ್ನಡ ಸಿನಿಮಾಗಳಿಂದ ನಷ್ಟವಾಗಿದೆ ಎಂದು ಡಬ್ಬಿಂಗ್ ಪರ ಮಾತನಾಡುವವರು ಮನೆಯಲ್ಲಿ ಬಳೆ ತೊಟ್ಟು ಕೊಂಡು ಕೂತಿರಲಿ. ಕಳೆದು ಕೊಂಡದ್ದನ್ನು ಪಡೆದು ಕೊಳ್ಳಲು ಸಾಕಷ್ಟು ದಾರಿಗಳಿವೆ. ಕೂಲಿ ಮಾಡಿಯಾದರೂ ಕುಟುಂಬವನ್ನು ಸಾಕುತ್ತೇನೆ ಎನ್ನುವ ಗಂಡಸುತನ ಇರಬೇಕು. ಅದಾಗದಿದ್ದಲ್ಲಿ ಅಂಥವರಿಗೆ ಚಿತ್ರರಂಗ ಯಾಕೆ ಬೇಕು? ಬಳೆ ತೊಟ್ಟು ಕೊಂಡು ಮನೇಲಿ ಇರಬಾರದೇ? ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. (ತಾಖತ್ ಇದ್ರೆ ಕರ್ವಾಲೋ ಸಿನಿಮಾ ಮಾಡಿ ಆಸ್ಕರ್ ಗೆಲ್ಲಿ)

  ಒಬ್ಬ ನಿರ್ಮಾಪಕರಿಗೆ ಶಿವರಾಜ್ ಕುಮಾರ್ ಈ ರೀತಿ ಹೇಳಿದ್ದು ಸರಿಯೇ? ಹಿರಿಯ ನಿರ್ಮಾಪಕರೊಬ್ಬರಿಗೆ ಶಿವಣ್ಣ ಬಳಸಿದ ಪದ ಆಕ್ಷೇಪಾರ್ಹವಲ್ಲವೇ? ಪರಿಸ್ಥಿತಿಯ ಒತ್ತಡಕ್ಕೊಳಗಾಗಿ ಶಿವಣ್ಣ ಈ ಪದ ಬಳಸಿರ ಬಹುದಾದರೂ ಕನ್ನಡ ಚಿತ್ರೋದ್ಯಮದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿವಣ್ಣ ಬಾಯಿಯಿಂದ ಇಂಥಾ ಮಾತೇ, ಅದೂ ಅಣ್ಣಾವ್ರ ಮಗನಾಗಿ?

  ಡಬ್ಬಿಂಗ್ ವಿವಾದ ಯಾರಿಗೂ ಪ್ರತಿಷ್ಠೆಯ ವಿಚಾರ ಆಗುವುದು ಬೇಡ. ಸ್ಯಾಂಡಲ್ ವುಡ್ ಎನ್ನುವ ಪುಟ್ಟ ಸಂಸಾರದಲ್ಲಿ ಬಿರುಕು ಕಾಣಿಸಿಕೊಳ್ಳದಿರಲಿ. ಚಿತ್ರರಂಗದ ಒಳಿತಿಗಾಗಿ ಕೂತು ಮಾತುಕತೆ ನಡೆಸಿ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಿ. ಸಮಸ್ಯೆ ಎಂದ ಮೇಲೆ ಅದಕ್ಕೆ ಪರಿಹಾರ ಇದ್ದೇ ಇರುತ್ತೆ.

  ಕನ್ನಡ ಚಿತ್ರಗಳು ಎನ್ನುವ ಅಸಡ್ಡೆಯಿಂದ ಕನ್ನಡಿಗ ಹೊರ ಬರುತ್ತಿರುವ ಈ ಸಮಯದಲ್ಲಿ ಚಿತ್ರೋದ್ಯಮದಲ್ಲಿನ ಒಳ ಜಗಳದಿಂದ ಬೇಸತ್ತು ಕನ್ನಡಿಗ ಕನ್ನಡ ಚಿತ್ರಗಳತ್ತ ಮತ್ತೆ ವಿಮುಖರಾಗದಿರಲಿ ಎನ್ನುವುದು ಎಲ್ಲರ ಆಶಯ.

  English summary
  Hatrick Hero Shivaraj Kumar statement on Senior Producer SV Rajendra Singh Babu on Dubbing issue.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X