Ghost: ಬಾಕ್ಸಾಫೀಸ್ ಪಂಡಿತರ ಲೆಕ್ಕಚಾರ ಉಲ್ಟಾ ಪಲ್ಟಾ ಮಾಡಿದ 'ಘೋಸ್ಟ್': 6ನೇ ದಿನ ದಾಖಲೆ
ಸ್ಯಾಂಡಲ್‌ವುಡ್ ಕಿಂಗ್ ಶಿವರಾಜ್‌ಕುಮಾರ್ ನಟನೆಯ 'ಘೋಸ್ಟ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ದಿನದಿಂದ ದಿನಕ್ಕೆ ಕ್ರೇಜ್ ಹೆಚ್ಚಿಸಿಕೊಳ್ಳುತ್ತಾ ಸಾಗುತ್ತಿರುವ ಸಿನಿಮಾ 6ನೇ ದಿನ ದಾಖಲೆಯ ಪ್ರದರ್ಶನ ಕಾಣುತ್ತಿದೆ. ಶ್ರೀನಿ- ಶಿವಣ್ಣ ಕಾಂಬೋ ಮ್ಯಾಜಿಕ್ ಮಾಡ್ತಿದೆ.
ಅಕ್ಟೋಬರ್ 19ರಂದು ಬಿಡುಗಡೆಯಾಗಿದ್ದ 'ಘೋಸ್ಟ್' ಸಿನಿಮಾ ಸಾಧಾರಣ ಓಪನಿಂಗ್ ಪಡೆದುಕೊಂಡಿತ್ತು. ತಮಿಳಿನ 'ಲಿಯೋ'ಗೆ ಹೋಲಿಸಿದರೆ 'ಘೋಸ್ಟ್' ಆರ್ಭಟ ಕಮ್ಮಿ ಇತ್ತು. ಆದರೆ ಬಳಿಕ ಶಿವಣ್ಣನ ಅಸಲಿ ದರ್ಬಾರ್ ಶುರುವಾಯಿತು. ದಸರಾ ಸಂಭ್ರಮದಲ್ಲಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಲಾಂಚ್ ಫೆಸ್ಟಿನಲ್ ವೀಕೆಂಡ್ ಚಿತ್ರದ ಕಲೆಕ್ಷನ್‌ಗೆ ಪ್ಲಸ್ ಆಗಿದೆ. ಪ್ರೇಕ್ಷಕರು ಹಬ್ಬ ಮುಗಿಸಿ 'ಘೋಸ್ಟ್' ಸಿನಿಮಾ ಕಣ್ತುಂಬಿಕೊಳ್ಳಲು ಮುಗಿಬಿದ್ದಿದ್ದಾರೆ.

ಜೈಲೊಂದನ್ನು ಹೈಜಾಕ್ ಮಾಡುವ ಕಥೆಗೆ ಮತ್ತಷ್ಟು ಉಪ ಕತೆಗಳನ್ನು ಸೇರಿಸಿ, ಮೊದಲ ಅಧ್ಯಾಯ ಮುಗಿಸಿ ಮುಂದಿನ ಅಧ್ಯಾಯಕ್ಕೆ 'ಘೋಸ್ಟ್' ಚಿತ್ರದಲ್ಲಿ ಶ್ರೀನಿ ಪೀಠಿಕೆ ಹಾಕಿಕೊಂಡಿದ್ದಾರೆ. ಸಿನಿಮಾ ನೋಡಿದವರು ಬೇಗ ಸೀಕ್ವೆಲ್ ಮಾಡಿ ಎಂದು ಬೇಡಿಕೆ ಇಡುವಂತೆ ಸಿನಿಮಾ ಮಾಡಿ ಚಿತ್ರತಂಡ ಗೆದ್ದಿದೆ. ಸಣ್ಣ ಪುಟ್ಟ ತಪ್ಪುಗಳನ್ನು ಅಲ್ಲಲ್ಲಿ ಲಾಜಿಕ್ ಅನ್ನು ಹೊರತುಪಡಿಸಿ ಪ್ರೇಕ್ಷಕರ ಜಾಣ್ಮೆ ಪರೀಕ್ಷಿಸುವ 'ಘೋಸ್ಟ್' ಸಿನಿಮಾ ಅಭಿಮಾನಿಗಳಿಗೆ ಹಬ್ಬದೂಟ. ಇನ್ನು ಒರಿಜಿನಲ್ ಗ್ಯಾಂಗ್‌ಸ್ಟರ್ ಆಗಿ ಶಿವಣ್ಣದ ಆರ್ಭಟ ಕಣ್ಣಿಗೆ ಹಬ್ಬ.
ಜಯರಾಮ್, ಅನುಪಮ್ ಕೇರ್ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಬಹುತೇಕರಿಗೆ 'ಘೋಸ್ಟ್' ಸಿನಿಮಾ ಇಷ್ಟವಾಗಿದೆ. ಇನ್ನು ಗುರುವಾರಕ್ಕಿಂತ ಶುಕ್ರವಾರ, ಶುಕ್ರವಾರಕ್ಕಿಂತ ಭಾನುವಾರ ಹೀಗೆ ದಿನದಿಂದ ದಿನಕ್ಕೆ ಸಿನಿಮಾ ಕಲೆಕ್ಷನ್ ಹೆಚ್ಚಿಸಿಕೊಂಡು ಸಾಗುತ್ತಿದೆ. 6ನೇ ದಿನವಾದ ಇಂದು(ಅಕ್ಟೋಬರ್ 24) ಅತಿ ಹೆಚ್ಚು ಕಲೆಕ್ಷನ್ ಮಾಡುವ ಸುಳಿವು ಸಿಗುತ್ತಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್‌ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ 'ಘೋಸ್ಟ್' ಸಿನಿಮಾ ಮೂಡಿಬಂದಿದೆ. ಶಿವಣ್ಣ ಜೈಲನ್ನು ಹೈಜಾಕ್ ಮಾಡುವುದರೊಂದಿಗೆ 'ಘೋಸ್ಟ್' ಸಿನಿಮಾ ಕತೆ ಆರಂಭವಾಗುತ್ತದೆ. 48 ಗಂಟೆಗಳಲ್ಲಿ ನಡೆಯುವ ಕತೆಯನ್ನು ಶ್ರೀನಿ ಇಲ್ಲಿ ಹೇಳಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ಸೆಟ್‌ಗಳಲ್ಲೇ ನಡೆದಿದೆ. ಇನ್ನು ಮಾಸ್ತಿ ಡೈಲಾಗ್ಸ್ ಚಿತ್ರದ ಮತ್ತೊಂದು ಹೈಲೆಟ್.
ಶಿವಣ್ಣ ಹಾಗೂ ಜಯರಾಂ ಹಾವು ಏಣಿ ಆಟ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಡುತ್ತದೆ. ಆಕ್ಷನ್ ಹಾಗೂ ಡೈಲಾಗ್ಸ್ ಡೆಲಿವರಿ ಮೂಲಕ ಶಿವಣ್ಣ ಪ್ರೇಕ್ಷಕರು ಸೀಟ್‌ನಿಂದ ಎದ್ದು ನಿಲ್ಲುವಂತೆ ಮಾಡಿದ್ದಾರೆ. ಇನ್ನು 'ಘೋಸ್ಟ್' ಸಿನಿಮಾ ಶ್ರೀನಿ ಸಿನಿಮ್ಯಾಟಿಕ್ ಯೂನಿವರ್ಸ್ ಭಾಗವಾಗಿದ್ದು ಮುಂದಿನ ಸಿನಿಮಾಗಳ ಬಗ್ಗೆ ಕುತೂಹಲ ಕೆರಳುವಂತೆ ಮಾಡಿದೆ.
ತಮಿಳಿನ 'ಲಿಯೋ' ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದ್ದು 'ಘೋಸ್ಟ್'ಗೆ ಪ್ಲಸ್ ಆಗಿದೆ. ಇನ್ನು ಬೆಂಗಳೂರಿನಲ್ಲಿ ಮಾತ್ರ 'ಲಿಯೋ' ಸಿನಿಮಾ ಹೆಚ್ಚು ಸದ್ದು ಮಾಡ್ತಿದೆ. ಉಳಿದ ಜಿಲ್ಲೆಗಳಲ್ಲಿ 'ಘೋಸ್ಟ್' ಶಿವಣ್ಣನ ದರ್ಬಾರ್ ಜೋರಾಗಿದೆ. ಮೊದಲ ದಿನಕ್ಕಿಂತ ಎರಡನೇ ದಿನ ಸಿನಿಮಾ ಚೇತರಿಸಿಕೊಂಡಿತ್ತು. 3ನೇ ದಿನ 4.40 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗಿತ್ತು. 5ನೇ ಭಾನುವಾರವೂ ಗಳಿಕೆ ಚೆನ್ನಾಗಿತ್ತು.
ಟ್ರೇಡ್ ಎಕ್ಸ್‌ಪರ್ಟ್ ಪ್ರಕಾರ 'ಘೋಸ್ಟ್' ಮೊದಲ ದಿನ 1.40 ಕೋಟಿ ರೂ. 2ನೇ ದಿನ 2 ಕೋಟಿ ರೂ. 3ನೇ ದಿನ 4.40 ಕೋಟಿ ರೂ. ಸೇರಿ ಅಂದಾಜು 8 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಆದರೆ ಭಾನುವಾರ, ಸೋಮವಾರ, ಮಂಗಳವಾರ ಸಿನಿಮಾ ಕಲೆಕ್ಷನ್ ಹೆಚ್ಚಾಗಿದೆ. 6ನೇ ದಿನ ಸಾಕಷ್ಟು ಥಿಯೇಟರ್‌ಗಳ ಮುಂದೆ ಹೌಸ್‌ಫುಲ್ ಬೋರ್ಡ್ ಬಿದ್ದಿದೆ. ಇನ್ನು ಶೀಘ್ರದಲ್ಲೇ ಚಿತ್ರತಂಡ ಒಟ್ಟು ಕಲೆಕ್ಷನ್ ಬಗ್ಗೆ ಅಧಿಕೃತ ಮಾಹಿತಿ ನೀಡುವ ಸಾಧ್ಯತೆಯಿದೆ.


Click it and Unblock the Notifications











