ಡಾ ರಾಜ್ 'ಬಂಗಾರದ ಮನುಷ್ಯ' ಚಿತ್ರಕ್ಕೆ ಮರುಜೀವ?
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 'ಬಂಗಾರ'ದಂತಹ ಮಾತನಾಡಿದ್ದಾರೆ. 70ರ ದಶಕದಲ್ಲಿ ತೆರೆಗೆ ಬಂದು ಸೂಪರ್ ಹಿಟ್ ದಾಖಲಿಸಿದ್ದ ಡಾ ರಾಜ್ ಕುಮಾರ್ ಹಾಗೂ ಭಾರತಿ ಅಭಿನಯದ 'ಬಂಗಾರದ ಮನುಷ್ಯ' ಚಿತ್ರವನ್ನು ಮತ್ತೆ ಮಾಡುವುದಿದ್ದರೆ ಅದರಲ್ಲಿ ನಾನು ನಟಿಸಲು ಸಿದ್ಧ ಎಂದಿದ್ದಾರೆ. 'ಬಂಗಾರದ ಮನುಷ್ಯ' ಚಿತ್ರವು ಆಗಿದ್ದ ಸ್ಟೇಟ್ಸ್ ಚಿತ್ರಮಂದಿರದಲ್ಲಿ ಸತತ ಎರಡು ವರ್ಷ ಪ್ರದರ್ಶನ ಕಂಡು ದಾಖಲೆ ನಿರ್ಮಿಸಿತ್ತು.
ಡಾ ರಾಜ್ ಕುಮಾರ್ ಅಭಿನಯದ 'ಬಂಗಾರದ ಮನುಷ್ಯ' ಚಿತ್ರವು ಕೇವಲ ಸಿನಿಮಾ ಎಂಬುದಷ್ಟೇ ಆಗಿರಲಿಲ್ಲ. ಅದು ಅಂದಿನ ಸಮಾಜದಲ್ಲಿ ಸಾಕಷ್ಟು ಬದಲಾವಣೆ ತಂದಿತ್ತು. ಹಳ್ಳಿಯಲ್ಲಿದ್ದ ಅದೆಷ್ಟೋ ಯುವಕರು ಪಟ್ಟಣ ಸೇರಿ ಸಿಕ್ಕ ಸಿಕ್ಕ ಕೆಲಸ ಮಾಡಿಕೊಂಡು ತಮ್ಮೂರನ್ನು ಮರೆತಿದ್ದ ಆ ಕಾಲದಲ್ಲಿ ಬಂದ ಆ ಚಿತ್ರ, ಕೃಷಿ ಹಾಗೂ ಹಳ್ಳಿಯ ಮಹತ್ವ ಸಾರಿ ಅವರನ್ನು ವಾಪಸ್ ಹಳ್ಳಿಗೆ ಹೋಗಿ ಕೃಷಿ ಮಾಡುವಂತೆ ಪ್ರೇರೇಪಿಸಿತ್ತು.
ಆ ಚಿತ್ರವನ್ನು ಒಮ್ಮೆ ನೋಡಿದವರಿಗಿಂತ ಹತ್ತಾರು ಬಾರಿ ನೋಡಿರುವವರೇ ಹೆಚ್ಚು. ಅಷ್ಟರ ಮಟ್ಟಿಗೆ ಆ ಕಾಲದ ಸಮಾಜವನ್ನು 'ಬಂಗಾರದ ಮನುಷ್ಯ' ಚಿತ್ರ ಸಂಪೂರ್ಣವಾಗಿ ಆವರಿಸಿಕೊಂಡುಬಿಟ್ಟಿತ್ತು. ಆ ಚಿತ್ರವನ್ನು ಇಂದಿಗೂ ಜನರು ನೆನಪಿಸಿಕೊಂಡು ಬಂಗಾರದ ಮನುಷ್ಯ ರೈತನ ಪಾತ್ರದಲ್ಲಿ ನಟಿಸಿದ್ದ ಡಾ ರಾಜ್ ಕುಮಾರ್ ಅವರನ್ನು ಮನದುಂಬಿ ನೆನಪಿಸಿಕೊಳ್ಳುತ್ತಾರೆ.
ಇತ್ತೀಚಿಗೆ ಆ ಕುರಿತು ಮಾತನಾಡಿರುವ ಶಿವರಾಜ್ ಕುಮಾರ್ "ಅಪ್ಪಾಜಿ ಜೀವನದಲ್ಲಿ ಮೈಲಿಗಲ್ಲಾಗಿದ್ದ 'ಬಂಗಾರದ ಮನುಷ್ಯ' ಚಿತ್ರವನ್ನು ಮತ್ತೆ ಮಾಡಿದರೆ ನಾನು ನಟಿಸಲು ಸಿದ್ಧನಿದ್ದೇನೆ" ಎಂದಿದ್ದಾರೆ. 1972ರಲ್ಲಿ ಬಿಡುಗಡೆಯಾಗಿದ್ದ ಸಿದ್ದಲಿಂಗಯ್ಯ ನಿರ್ದೇಶನದ 'ಬಂಗಾರದ ಮನುಷ್ಯ' ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಜಿಕೆ ವೆಂಕಟೇಶ್ ಸಂಗೀತ ನೀಡಿದ್ದರು. ಅವರು ಸಂಗೀತ ನೀಡಿದ್ದ ಎಲ್ಲಾ ಐದು ಹಾಡುಗಳು ಇಂದೂ ಜನಪ್ರಿಯತೆಯಲ್ಲೇ ಇವೆ. ಮುಂದಿನ ಪುಟ ನೋಡಿ...


Click it and Unblock the Notifications











