ಶಿವಣ್ಣ, ಡಾಲಿ ಹಾಗೂ ಹೇಮಂತ್ ಸಿನಿಮಾ ಟೀಸರ್ ಬಂದೇಬಿಡ್ತು; ಟೈಟಲ್ ರಿವೀಲ್ ಆಯ್ತು
ಕನ್ನಡ ಚಿತ್ರರಂಗದಲ್ಲಿ ಕ್ರೇಜಿ ಕಾಂಬಿನೇಷನ್ ಸಿನಿಮಾಗಳು ಆಗಾಗ್ಗೆ ಸದ್ದು ಮಾಡುತ್ತವೆ. ಹೇಮಂತ್ ರಾವ್ ನಿರ್ದೇಶನದಲ್ಲಿ ಶಿವಣ್ಣ ಹಾಗೂ ಡಾಲಿ ಧನಂಜಯ್ ಒಟ್ಟಿಗೆ ನಟಿಸುವ ಸಿನಿಮಾ ಬಗ್ಗೆ ಕಳೆದೊಂದು ವಾರದಿಂದ ಗುಸುಗುಸು ಶುರುವಾಗಿತ್ತು. ಇದೀಗ ಅದು ಪಕ್ಕಾ ಆಗಿದೆ. ಟೈಟಲ್ ಆನಿಮೇಷನ್ ಮೋಷನ್ ಟೀಸರ್ ಸಮೇತ ಸಿನಿಮಾ ಘೋಷಣೆ ಆಗಿದೆ.
'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಕವಲುದಾರಿ', 'ಸಪ್ತಸಾಗರದಾಚೆ ಎಲ್ಲೋ' ಸೈಟ್- A ಹಾಗೂ ಸೈಡ್- B ರೀತಿಯ ವಿಭಿನ್ನ ಸಿನಿಮಾಗಳನ್ನು ನಿರ್ದೇಶಿಸಿ ಹೇಮಂತ್ ರಾವ್ ಗೆದ್ದಿದ್ದಾರೆ. ಶಿವರಾಜ್‌ಕುಮಾರ್ ಹೀರೊ ಆಗಿ 'ಭೈರವನ ಕೊನೆಪಾಠ' ಎಂಬ ಸಿನಿಮಾ ಘೋಷಣೆ ಮಾಡಿದ್ದರು. ಇದೀಗ ಅದನ್ನು ಪಕ್ಕಕ್ಕಿಟ್ಟು ಹೊಸ ಸಿನಿಮಾ ಆರಂಭಿಸುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಸಿನಿಮಾ ಸೆಟ್ಟೇರುತ್ತದೆ ಎನ್ನುವ ಚರ್ಚೆ ಶುರುವಾಗಿದೆ.

ಹೇಮಂತ್ ರಾವ್ ತಮ್ಮ ಮುಂದಿನ ಚಿತ್ರಕ್ಕೆ '666 ಆಪರೇಷನ್ ಡ್ರೀಮ್ ಥಿಯೇಟರ್' ಎಂಬ ಹೆಸರಿಟ್ಟಿದ್ದಾರೆ. ವಿಜೆಎಫ್ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ಡಾ. ವೈಶಾಖ್ ಜೆ. ಗೌಡ 'ಭೈರವನ ಕೊನೆಪಾಠ' ಸಿನಿಮಾ ನಿರ್ಮಾಣವಾಗಬೇಕಿತ್ತು. ಅದೇ ಸಂಸ್ಥೆ ಇದೀಗ ಹೊಸ ಸಿನಿಮಾ ಕೈಗೆತ್ತಿಕೊಳ್ಳುತ್ತಿದೆ. ಈಗಾಗಲೇ 'ಟಗರು' ಹಾಗೂ 'ಬೈರಾಗಿ' ಸಿನಿಮಾಗಳಲ್ಲಿ ಶಿವಣ್ಣ ಹಾಗೂ ಧನು ಒಟ್ಟಿಗೆ ನಟಿಸಿದ್ದರು. ಇಬ್ಬರೂ ಎದುರಾಳಿಗಾಗಿಯೇ ಅಬ್ಬರಿಸಿದ್ದರು. ಇದೀಗ '666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರದಲ್ಲಿ ಅವರಿಬ್ಬರ ಪಾತ್ರಗಳು ಹೇಗಿರುತ್ತದೆ ಎನ್ನುವ ಕುತೂಹಲ ಮೂಡಿದೆ.
"ಶಿವಣ್ಣ, ಧನಂಜಯ್ ಹಾಗೂ ವೈಶಾಕ್ ಜೆ ಫಿಲ್ಮ್ಸ್ ಜೊತೆ ನನ್ನ ಮುಂದಿನ ಸಿನಿಮಾ '666 ಆಪರೇಷನ್ ಡ್ರೀಮ್ ಥಿಯೇಟರ್'. ಶೀಘ್ರದಲ್ಲೇ ಶೂಟಿಂಗ್ ಪ್ರಾರಂಭವಾಗುತ್ತದೆ. ಬಹಳ ಉತ್ಸುಕನಾಗಿದ್ದೇನೆ" ಎಂದು ನಿರ್ದೇಶಕ ಹೇಮಂತ್ ರಾವ್ ಟ್ವೀಟ್ ಮಾಡಿದ್ದಾರೆ. ಟೈಟಲ್ ಟೀಸರ್ ಲಿಂಕ್ ಹಂಚಿಕೊಂಡಿದ್ದಾರೆ.
ಶಿವಣ್ಣ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವುದು ಗೊತ್ತೇಯಿದೆ. ಧನಂಜಯ್ ಕೂಡ ಮೂರ್ನಾಲ್ಕು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಆದರೆ ಸದ್ಯಕ್ಕೆ ಯಾವುದು ಕೂಡ ಬಿಡುಗಡೆಗೆ ಸಜ್ಜಾಗಿಲ್ಲ. ಇದೆಲ್ಲದರ ನಡುವೆ ಹೊಸ ಸಿನಿಮಾ ಶುರುವಾಗುತ್ತಿದೆ. ಇತ್ತೀಚೆಗೆ ಹೇಮಂತ್ ರಾವ್ ನಿರ್ಮಾಣದ 'ಅಜ್ಞಾತವಾಸಿ' ಸಿನಿಮಾ ತೆರೆಗೆ ಬಂದು ಗೆದ್ದಿತ್ತು. ಇದೀಗ ತಮ್ಮದೇ ನಿರ್ದೇಶನದಲ್ಲಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಟೈಟಲ್ ಟೀಸರ್ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಮೂವರ ಕಾಂಬಿನೇಷನ್ ಬಹುತೇಕರಿಗೆ ಖುಷಿ ತಂದಿದೆ.
'666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರಕ್ಕೆ ಕ್ರೇಜಿ ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ ಟ್ಯೂನ್ ಹಾಕಲಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗಲಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ. ಟೈಟಲ್ ಟೀಸರ್ ನೋಡಿದರೆ ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳು ಚಿತ್ರದಲ್ಲಿರುವ ಸಾಧ್ಯತೆಯಿದೆ. ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ ಮಾಡಲಿದ್ದಾರೆ. ಒಂದೊಳ್ಳೆ ತಂಡ ಕಟ್ಟಿಕೊಂಡು ಹೇಮಂತ್ ಅಖಾಡಕ್ಕೆ ಇಳಿಯುತ್ತಿದ್ದಾರೆ.
ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ. ಮುಂದಿನ ವರ್ಷವೇ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. ಶಿವಣ್ಣ ಸದ್ಯ 'ಎ ಫಾರ್ ಆನಂದ್' ಸೇರಿ ಒಂದಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅರ್ಜುನ್ ಜನ್ಯಾ ನಿರ್ದೇಶನದಲ್ಲಿ '45' ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ತೆಲುಗು 'ಪೆದ್ದಿ' ಹಾಗೂ ತಮಿಳಿನ 'ಜೈಲರ್- 2' ಚಿತ್ರದ ಅತಿಥಿ ಪಾತ್ರಗಳಲ್ಲಿ ಮಿಂಚಲು ಸಜ್ಜಾಗಿದ್ದಾರೆ. 'ಉತ್ತರಕಾಂಡ' ಸಿನಿಮಾ ತಡವಾಗುತ್ತಿದೆ.


Click it and Unblock the Notifications











