ಪತ್ನಿ ಗೀತಾ ಶಿವರಾಜ್‌ಕುಮಾರ್ ನಾಮಪತ್ರ ಸಲ್ಲಿಕೆ ವೇಳೆ ಸೆಂಚುರಿ ಸ್ಟಾರ್ ಆಸ್ತಿ ವಿವರ ಬಹಿರಂಗ
ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟ ಶಿವರಾಜ್‌ಕುಮಾರ್. ಸದಾ ಶಿವಣ್ಣನ ಕೈಯಲ್ಲಿ ಐದಾರು ಸಿನಿಮಾಗಳಿರುತ್ತವೆ. 125ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೆಂಚುರಿ ಸ್ಟಾರ್ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇಷ್ಟೆಲ್ಲಾ ಸಿನಿಮಾಗಳಲ್ಲಿ ನಟಿಸಿರುವ ಶಿವಣ್ಣ ಎಷ್ಟು ಸಂಪಾದಿಸಿದ್ದಾರೆ. ಎಷ್ಟು ಕೋಟಿ ರೂ. ಆಸ್ತಿ ಅವರ ಬಳಿಯಿದೆ ಎನ್ನುವ ಕುತೂಹಲ ಸಹಜ.
ಸಾಮಾನ್ಯವಾಗಿ ಸಿನಿಮಾ ಕಲಾವಿದರ ಸಂಭಾವನೆ, ಆಸ್ತಿ ಮೌಲ್ಯದ ಬಗ್ಗೆ ಜನರಲ್ಲಿ ಕುತೂಹಲ ಇರುತ್ತದೆ. ಸಿನಿಮಾ, ಜಾಹೀರಾತು ಅಂತೆಲ್ಲಾ ಕೋಟಿ ಕೋಟಿ ಸಂಭಾವನೆ ಪಡೆಯುವ ಸೆಲೆಬ್ರೆಟಿಗಳು ಆ ಹಣವನ್ನು ಏನು ಮಾಡ್ತಾರೆ? ಎನ್ನುವುದನ್ನು ತಿಳಿಯಲು ಆಸಕ್ತರಾಗಿರುತ್ತದೆ. ಸದ್ಯ ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್‌ಕುಮಾರ್ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಕೆಲ ದಿನಗಳಿಂದ ನಟ ಶಿವಣ್ಣ ಕೂಡ ಸಿನಿಮಾ ಕೆಲಸಗಳಿಗೆ ಬ್ರೇಕ್ ಹಾಕಿ ಪತ್ನಿ ಪರ ಚುನಾವಣಾ ಪ್ರಚಾರದಲ್ಲಿ ಭಾಗಿ ಆಗಿದ್ದಾರೆ. ಸೋಮವಾರ(ಏಪ್ರಿಲ್ 15) ಗೀತಾ ಶಿವರಾಜ್‌ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ತಮ್ಮ ಹಾಗೂ ಪತಿ ಶಿವರಾಜ್‌ಕುಮಾರ್ ಬಳಿ ಇರುವ ಆಸ್ತಿ ಬಗ್ಗೆ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಚರಾಸ್ತಿ, ಸ್ಥಿರಾಸ್ತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
89.04 ಕೋಟಿ ರೂ. ಮೌಲ್ಯದ ಆಸ್ತಿ
ಗೀತಾ ಶಿವರಾಜ್‌ಕುಮಾರ್ ಬಳಿ 40.04 ಕೋಟಿ ರೂ. ಆಸ್ತಿ ಇದ್ದು ಪತಿ ಶಿವರಾಜ್‌ಕುಮಾರ್ ಬಳಿ 49 ಕೋಟಿ ರೂ. ಆಸ್ತಿ ಇರುವುದಾಗಿ ತಿಳಿಸಿದ್ದಾರೆ. ಒಟ್ಟಾರೆ ದಂಪತಿ ಬಳಿ 89.04 ಕೋಟಿ ರೂ. ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಇನ್ನು ಕಳೆದ ಆರ್ಥಿಕ ವರ್ಷದ(2022-2023) ಆರ್ಥಿಕ ಆದಾಯದ ಬಗ್ಗೆ ಅಫಿಡವಿಡ್‌ನಲ್ಲಿ ಮಾಹಿತಿ ನೀಡಿದ್ದಾರೆ. ಗೀತಾ ಶಿವರಾಜ್‌ಕುಮಾರ್ 2,97,27,100 ರೂ. ಗಳಿಸಿದ್ದರೆ ಶಿವಣ್ಣ 1,48,63,750 ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ.
ಕನಪುರದಲ್ಲಿ ಕೃಷಿ ಭೂಮಿ
ಸದ್ಯ ತಮ್ಮ ಬಳಿ ಇರುವ ನಗದು ಹಣದ ಬಗ್ಗೆಯೂ ಹೇಳಿದ್ದು ಶಿವರಾಜ್‌ಕುಮಾರ್ ಬಳಿ 22 ಲಕ್ಷ ರೂ, ನಗದು ಇದ್ದರೆ ಪತ್ನಿ ಗೀತಾ ಬಳಿ 3 ಲಕ್ಷ ರೂಪಾಯಿ ನಗದು ಇದೆ. ಇನ್ನು ಶಿವಣ್ಣನ ಬಳಿ 18 ಕೋಟಿ ರೂ. ಹಾಗೂ ಪತ್ನಿ ಬಳಿ 5.54 ಕೋಟಿ ರೂ. ಚರಾಸ್ತಿಯಿದೆ. ಕನಕಪುರ ಬಳಿ ದಂಪತಿ ಹೆಸರಿನಲ್ಲಿ ಐದೂವರೆ ಎಕರೆ ಕೃಷಿ ಭೂಮಿ ಇದ್ದು ಅದರ ಬೆಲೆ ಒಟ್ಟು 3 ಕೋಟಿ ರೂ. ಎಂದು ಮಾಹಿತಿ ನೀಡಿದ್ದಾರೆ.

54 ಕೋಟಿ ರೂ. ಮೌಲ್ಯದ ಮನೆ
ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಶಿವಣ್ಣ ಒಡೆತನದ ಶ್ರೀಮುತ್ತು ನಿವಾಸ ಇದೆ. ದಂಪತಿ 1.48 ಎಕರೆ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದು ಅದರ ಮೌಲ್ಯ 54 ಕೋಟಿ ರೂ. (ತಲಾ 27 ಕೊಟಿ ರೂ.) ಎಂದು ದಾಖಲೆಗಳಲ್ಲಿ ತಿಳಿಸಿದ್ದಾರೆ. ಅದಕ್ಕಾರಿ ಮುಕ್ಕಾಲು ಎಕರೆ ಜಾಗದಲ್ಲಿ ಮನೆ ಕಟ್ಟಡ ನಿರ್ಮಾಣವಾಗಿದೆ.
11 ಕೆಜಿ ಚಿನ್ನ 30 ಕೆಜಿ ಬೆಳ್ಳಿ
ಎಂಎಸ್ ಪುಟ್ಟಸ್ವಾಮಿ ಎನ್ನುವುದು ಶಿವಣ್ಣನ ನಿಜವಾದ ಹೆಸರು. ಹಾಗಾಗಿ ಅದೇ ಹೆಸರಿನಲ್ಲಿ ಆಸ್ತಿ ವಿವರ ಸಲ್ಲಿಸಲಾಗಿದೆ. ಪ್ರತಿಷ್ಠಿತ ಕೋರಮಂಗಲ ಬಡಾವಣೆಯಲ್ಲಿ ಗೀತಾ ಅವರ ಒಂದು ವಾಣಿಜ್ಯ ಕಟ್ಟಡವಿದ್ದು ಅದರ ಮೌಲ್ಯ 6 ಕೋಟಿ ರೂ. ಎಂದು ಮಾಹಿತಿ ನೀಡಿದ್ದಾರೆ. ಇನ್ನು ಗೀತಾ ಅವರ ಬಳಿ 11.54 ಕೆಜಿ ಚಿನ್ನ ಹಾಗೂ ವಜ್ರಾಭರಣಗಳಿವೆ. ಜೊತೆಗೆ 30 ಕೆಜಿ ಬೆಳ್ಳಿ ಇದ್ದು ಇದರ ಮೌಲ್ಯ 3.5 ಕೋಟಿ ರೂ. ಎಂದು ತಿಳಿಸಿದ್ದಾರೆ.
ಸಾಲ ಹಾಗೂ ಅಡ್ವಾನ್ಸ್
ಕಾರುಗಳ ವಿಚಾರಕ್ಕೆ ಬಂದರೆ ಗೀತಾ ಅವರ ಬಳಿ 1.07 ಕೋಟಿ ರೂ. ಮೌಲ್ಯದ ಟೊಯೋಟಾ ಹೈಬ್ರಿಡ್, ಶಿವಣ್ಣನ ಬಳಿ ಟೊಯೋಟಾ ಫಾರ್ಚೂನರ್, ಮಾರುತಿ ಎರ್ಟಿಗಾ ಮತ್ತು ವೋಲ್ವೋ ಎಸ್90 ಕಾರುಗಳಿವೆ. ಇವುಗಳ ಮೌಲ್ಯ 87.70 ಲಕ್ಷ ರೂ. ಮಾಹಿತಿ ನೀಡಿದ್ದಾರೆ. ಆಸ್ತಿ ಮೌಲ್ಯ ಮಾತ್ರವಲ್ಲ ಸಾಲ ಹಾಗೂ ಅಡ್ವಾನ್ಸ್ ಪಡೆದಿರುವ ಬಗ್ಗೆಯೂ ಅಫಿಡವಿಟ್‌ನಲ್ಲಿ ನಮೂದಿಸಲಾಗಿದೆ.
ತಮ್ಮದೇ ಗೀತಾ ಪಿಕ್ಚರ್ಸ್‌ಗೆ ಶಿವರಾಜ್‌ಕುಮಾರ್ 6 ಕೋಟಿ ರೂ. ಸಾಲ ನೀಡಿದ್ದಾರೆ. ಇತರರಿಗೆ 2.13 ಕೋಟಿ ರೂ.ವರೆಗೆ ಸಾಲ ಕೊಟ್ಟಿದ್ದಾರೆ. ಇನ್ನು ಮುತ್ತು ಸಿನಿ ಸರ್ವೀಸ್ ಬ್ಯಾನರ್‌ಗೆ ಗೀತಾ ಅವರು 25.60 ಲಕ್ಷ ರೂ. ಸಾಲ ಕೊಟ್ಟಿದ್ದರೆ, ಶಿವಣ್ಣ 1.64 ಕೋಟಿ ರೂ. ಸಾಲ ಕೊಟ್ಟಿರುವ ಬಗ್ಗೆ ತಿಳಿಸಿದ್ದಾರೆ. ಗೀತಾ ಅವರು ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 57.40 ಕೋಟಿ ರೂ. ಕಾರು ಸಾಲ ಹೊಂದಿದ್ದಾರೆ. ಪತಿ ಶಿವರಾಜ್ ಕುಮಾರ್ ಬಳಿ 6 ಕೋಟಿ ರೂ. ಸಾಲ ಪಡೆದಿದ್ದಾರೆ. ಇದು ಬಿಟ್ಟು 57.55 ಲಕ್ಷ ರೂ. ಸಾಲ ತೆಗೆದುಕೊಂಡಿರುವ ಬಗ್ಗೆ ಅಫಿಡವಿಟ್‌ನಲ್ಲಿ ನಮೂದಿಸಿದ್ದಾರೆ.
ಆದಾಯದ ಮೂಲದ ಬಗ್ಗೆ ಮಾಹಿತಿ
ಕೋಟಕ್ ಬ್ಯಾಂಕ್‌ನಲ್ಲಿ ಶಿವಣ್ಣಗೆ 3.94 ಕೋಟಿ ರೂ. ಸಾಲ ಇದೆ. ಕೆಲ ಸಿನಿಮಾಗಳು ಮತ್ತು ಜಾಹೀರಾತುಗಳಿಗಾಗಿ 13.06 ಕೋಟಿ ರೂ. ಅಡ್ವಾನ್ಸ್ ಪಡೆದಿದ್ದಾರೆ. ಉದ್ಯಮ ಹಾಗೂ ಮನೆ ಸ್ವತ್ತು ತಮ್ಮ ಆದಾಯದ ಮೂಲ ಎಂದು ಗೀತಾ ಶಿವರಾಜ್‌ಕುಮಾರ್ ಹೇಳಿದ್ದಾರೆ. ಸಿನಿಮಾ ಹಾಗೂ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ತಮ್ಮ ಆದಾಯದ ಮೂಲ ಎಂದು ಶಿವಣ್ಣ ತಿಳಿಸಿದ್ದಾರೆ.
ಶಿವಮೊಗ್ಗ ಡಿಸಿ ಕಛೇರಿಯಲ್ಲಿ ಗೀತಾ ಶಿವರಾಜ್‌ಕುಮಾರ್ ನಾಮಪತ್ರ ಸಲ್ಲಿಸಿದರು. ಈ ವೇಳೆ ಪತಿ ಶಿವರಾಜ್‌ಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಉಪಸ್ಥಿತರಿದ್ದರು. ಸಾಕಷ್ಟು ಬೆಂಬಲಿಗರು ಸಾಥ್ ನೀಡಿದರು. ಶಿವಣ್ಣ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ಧಾರೆ. ಹಲವು ನಿರ್ಮಾಪಕರು, ನಿರ್ದೇಶಕರು ಸೆಂಚುರಿ ಸ್ಟಾರ್ ಜೊತೆ ಸಿನಿಮಾ ಮಾಡಲು ಉತ್ಸುಕರಾಗಿದ್ದಾರೆ.


Click it and Unblock the Notifications











