ಶಿವಣ್ಣನ ಜೊತೆ 'ಕಬ್ಜ'ಕ್ಕಿಂತ ದೊಡ್ಡ ಚಿತ್ರಕ್ಕೆ ಆರ್. ಚಂದ್ರು ಪ್ಲ್ಯಾನ್; ಪರಭಾಷೆಯ ಸ್ಟಾರ್ ನಟರು ಸಾಥ್
ಎಲ್ಲೆಲ್ಲೂ ಈಗ ಪ್ಯಾನ್ ಇಂಡಿಯಾ ಸಿನಿಮಾಗಳದ್ದೇ ದರ್ಬಾರ್ ನಡೀತಿದೆ. ಕನ್ನಡದಲ್ಲಿ ಕೂಡ ಅಂತಹ ಪ್ರಯತ್ನಗಳು ಶುರುವಾಗಿದೆ. 'ಕಬ್ಜ' ಸಿನಿಮಾ ನಿರ್ಮಿಸಿ, ನಿರ್ದೇಶನ ಮಾಡಿದ್ದ ಆರ್. ಚಂದ್ರು ಬಳಿಕ ಸೈಲೆಟ್ ಆಗಿದ್ದಾರೆ. ಆರ್. ಸಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಬಹುಭಾಷೆಗಳಲ್ಲಿ 5 ಸಿನಿಮಾಗಳನ್ನು ಘೋಷಿಸಿದ್ದರು. ಅದರಲ್ಲಿ 'ಫಾದರ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ.
ಇದೀಗ ಶಿವರಾಜ್‌ಕುಮಾರ್ ಕಾಂಬಿನೇಷನ್‌ನಲ್ಲಿ ಆರ್. ಚಂದ್ರು ಭಾರೀ ಪ್ರಾಜೆಕ್ಟ್ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ. ಈ ಹಿಂದೆಯೇ ಈ ಬಗ್ಗೆ ಮಾಹಿತಿ ನೀಡಿದ್ದರು. ಇದೀಗ ಸ್ಟ್ರಿಪ್ಟ್ ಕೆಲಸಗಳು ಭರದಿಂದ ಸಾಗುತ್ತಿದ್ದು ಈ ವರ್ಷವೇ ಸಿನಿಮಾ ಚಿತ್ರೀಕರಣ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗ್ತಿದೆ. ಶಿವಣ್ಣ ಹಾಗೂ ಚಂದ್ರು ಕಾಂಬಿನೇಷನ್‌ನಲ್ಲಿ 'ಮೈಲಾರಿ' ಸಿನಿಮಾ 16 ವರ್ಷಗಳ ಹಿಂದೆ ತೆರೆಗೆ ಬಂದು ಗೆದ್ದಿತ್ತು. ಸಿನಿಮಾ ಚಿತ್ರೀಕರಣ ಆರಂಭಿಸಿ 14 ವರ್ಷ ಪೂರೈಸಿದ ಸಮಯದಲ್ಲಿ ಮತ್ತೆ ಶಿವಣ್ಣನ ಜೊತೆ ಸಿನಿಮಾ ಮಾಡುವುದಾಗಿ ಚಂದ್ರು ಹೇಳಿದ್ದರು.

"ಕನ್ನಡದ ಸೂಪರ್ ಹಿಟ್ ಚಿತ್ರ ಮೈಲಾರಿ ಮುಹೂರ್ತಕ್ಕೆ 14 ವರ್ಷಗಳು ತುಂಬಿದ ಈ ಶುಭ ಸಂದರ್ಭದಲ್ಲಿ, ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ರವರಿಗೆ ಹೊಸ ಚಿತ್ರ ಆರಂಭಿಸುತ್ತಿರುವುದು ಮತ್ತಷ್ಟು ಖುಷಿ ತಂದಿದೆ. ತಮ್ಮೆಲ್ಲರ ಆಶೀರ್ವಾದ ಇರಲಿ ಧನ್ಯವಾದಗಳು" ಎಂದು ಚಂದ್ರು ಟ್ವೀಟ್ ಮಾಡಿದ್ದರು. ಅಂದಹಾಗೆ ಈ ಚಿತ್ರದಲ್ಲಿ ಪರಭಾಷೆಯ ಸ್ಟಾರ್ ಹೀರೊಗಳು ಕೂಡ ನಟಿಸುತ್ತಾರೆ ಎಂದು ಹೇಳಲಾಗ್ತಿದೆ. ಮೂಲಗಳ ಪ್ರಕಾರ ಈ ಬಾರಿ ಚಂದ್ರು ದೊಡ್ಡ ಮಟ್ಟದಲ್ಲೇ ಪ್ರೇಕ್ಷಕರ ಮುಂದೆ ಬರಲು ಅಣಿಯಾಗಿದ್ದಾರೆ.
'ಕಬ್ಜ' ಸಿನಿಮಾ ಫಲಿತಾಂಶ ಏನೇ ಇದ್ದರೂ ನಷ್ಟವಾಗಲಿಲ್ಲ ಎಂದು ಆರ್. ಚಂದ್ರು ಹೇಳಿದ್ದರು. ಉಪೇಂದ್ರ ನಟನೆಯ ಚಿತ್ರದಲ್ಲಿ ಕಿಚ್ಚ ಸುದೀಪ್ ಹಾಗೂ ಶಿವಣ್ಣ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಸದ್ಯ ಶಿವಣ್ಣ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆ ಸಿನಿಮಾಗಳನ್ನೆಲ್ಲಾ ಮುಗಿಸಿದ ಬಳಿಕ ಆರ್. ಚಂದ್ರು ಜೊತೆ ಕೈಜೋಡಿಸಲಿದ್ದಾರೆ.

ದೊಡ್ಡ ಸಿನಿಮಾ ಆಗಿರುವುದರಿಂದ ಹೆಚ್ಚು ಕಾಲ್‌ಶೀಟ್ ದಿನ ಬೇಕಿದೆ. ಬೇರೆ ಸಿನಿಮಾಗಳ ನಡುವೆ ಮಾಡುವುದು ಬೇಡ. ಸದ್ಯ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿದ ಬಳಿಕ ಶಿವಣ್ಣನ ಕಾಲ್‌ಶೀಟ್ ಕೇಳುವ ಆಲೋಷನೆಯಲ್ಲಿದ್ದಾರೆ ಚಂದ್ರು. ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬೇರೆ ಭಾಷೆಯ ದೊಡ್ಡ ಕಲಾವಿದರನ್ನು ಅತಿಥಿ ಪಾತ್ರಗಳಲ್ಲಿ ತೋರಿಸುವ ಟ್ರೆಂಡ್ ನಡೀತಿದೆ. ಶಿವಣ್ಣ ಹಾಗೂ ಆರ್. ಚಂದ್ರು ಚಿತ್ರದಲ್ಲಿ ಕೂಡ ಅದೇ ಪ್ಲ್ಯಾನ್ ಮಾಡಲಾಗ್ತಿದೆ. ಅಕ್ಕಪಕ್ಕದ ಇಂಡಸ್ಟ್ರಿಯಿಂದ ಯಾರು ಬರ್ತಾರೆ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್.
'ಫಾದರ್' ಜೊತೆಗೆ 'POK', 'ಶ್ರೀರಾಮಬಾಣ ಚರಿತ', 'ಡಾಗ್', 'ಕಬ್ಜ- 2' ಸಿನಿಮಾಗಳನ್ನು ಆರ್.ಚಂದ್ರು ಘೋಷಣೆ ಮಾಡಿದ್ದಾರೆ. ಅದರಲ್ಲಿ 'POK' ಹಾಗೂ 'ಕಬ್ಜಾ- 2' ಸಿನಿಮಾಗಳನ್ನು ತಾವೇ ನಿರ್ದೇಶನ ಮಾಡುವುದಾಗಿ ಹೇಳಿದ್ದರು. ಶಿವಣ್ಣ ನಟನೆಯ 'ಪೆದ್ದಿ' ಸಿನಿಮಾ ಜೂನ್ 4ಕ್ಕೆ ತೆರೆಗೆ ಬರಲಿದೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನು ರಜನಿಕಾಂತ್ ಜೊತೆ 'ಜೈಲರ್'-2 ಚಿತ್ರದಲ್ಲಿ ಮತ್ತೆ ನರಸಿಂಹ ಆಗಿ ಅಬ್ಬರಿಸಿದ್ದಾರೆ.
ತೆಲುಗಿನ 'ಗುಮ್ಮಡಿ ನರಸಯ್ಯ' ಬಯೋಪಿಕ್ ಚಿತ್ರದಲ್ಲಿ ಸೆಂಚುರಿ ಸ್ಟಾರ್ ನಟಿಸುತ್ತಿದ್ದಾರೆ. 'ಡ್ಯಾಡ್' ಎಂಬ ಕನ್ನಡ ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. 'ಉತ್ತರಕಾಂಡ' ಹಾಗೂ '666 ಆಪರೇಷನ್ ಡ್ರೀಮ್ ಥಿಯೇಟರ್' ಸೇರಿ ಹಲವು ಸಿನಿಮಾಗಳು ಅವರ ಕೈಯಲ್ಲಿದೆ. ಶೀಘ್ರದಲ್ಲೇ ಹೀರೊ ಆಗಿ ತಮಿಳು ಚಿತ್ರರಂಗ ಪ್ರವೇಶಿಸಲಿದ್ದಾರೆ.


Click it and Unblock the Notifications