ಶಿವಣ್ಣ-ಗೀತಕ್ಕನನ್ನು ಬಿಡ್ತಿಲ್ಲ ದರ್ಶನ್ ಫ್ಯಾನ್ಸ್, ಕಾರಣವೇನು ?
ನಟಿ ರಮ್ಯಾ ಹಾಗೂ ದರ್ಶನ್ ಫ್ಯಾನ್ಸ್ ನಡುವಿನ ವಾರ್ ಮತ್ತಷ್ಟು ಕಾವು ಪಡೆದುಕೊಳ್ಳುತ್ತಿದ್ದಾರೆ. ಚಿತ್ರರಂಗದ ತಾರೆಯರು ಒಬ್ಬೊಬ್ಬರಾಗಿ ರಮ್ಯಾ ಪರ ನಿಲ್ಲುತ್ತಿದ್ದಾರೆ. ದರ್ಶನ್ ಅಭಿಮಾನಿಗಳನ್ನು ಸಮರ್ಥಿಸಿಕೊಳ್ಳುವವರು ಇದ್ದಾರೆ. ಇದೀಗ ನಟ ಶಿವರಾಜ್‌ಕುಮಾರ್ ಹಾಗೂ ಗೀತಾ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ರಮ್ಯಾ ಪರ ಬೆಂಬಲ ಸೂಚಿಸಿದ್ದಾರೆ.
"ರಮ್ಯಾ ಅವರ ವಿರುದ್ಧ ಬಳಸಿರುವ ಪದಗಳು ಖ೦ಡನೀಯ. ಯಾವ ಮಹಿಳೆಯ ವಿರುದ್ಧವೂ ಆ ರೀತಿ ಮಾತನಾಡುವುದು ಸರಿಯಲ್ಲ; ಅದನ್ನು ನಾವು ಸಹಿಸಬಾರದು. ಮಹಿಳೆಯರನ್ನು ತಾಯಿಯಾಗಿ, ಅಕ್ಕನಾಗಿ, ಮಗಳಾಗಿ, ಮಡದಿಯಾಗಿ ಮತ್ತು ಮೊಟ್ಟಮೊದಲು ಒಬ್ಬ ವ್ಯಕ್ತಿಯಾಗಿ ಗೌರವಿಸುವುದು ತುಂಬಾ ಮುಖ್ಯ. ಸೋಶಿಯಲ್ ಮೀಡಿಯಾ ತುಂಬಾ ಬಲಿಷ್ಠವಾದ ಅಸ್ತ, ಅದನ್ನು ತಮ್ಮ ಏಳಿಗೆಗಾಗಿ ಬಳಸಬೇಕೇ ಹೊರತು, ಅವಾಚ್ಯ ಶಬ್ದಗಳಿಂದ ನಿ೦ದಿಸಿ, ದ್ವೇಷ- ಅಸೂಯೆಯನ್ನು ಬಿತ್ತಲು ಬಳಸಬಾರದು. ನಿಮ್ಮ ನಿಲುವು ಸರಿಯಿದೆ, ರಮ್ಯಾ. ನಿಮ್ಮ ಜೊತೆಗೆ ನಾವು ಸದಾ ನಿಲ್ಲುತ್ತೇವೆ" ಎಂದು ಶಿವಣ್ಣ ದಂಪತಿ ಪೋಸ್ಟ್ ಮಾಡಿದ್ದಾರೆ.

ಶಿವಣ್ಣ ದಂಪತಿ ರಮ್ಯಾ ಪರ ಬೆಂಬಲ ಸೂಚಿಸುತ್ತಿದ್ದಂತೆ ಅವರನ್ನು ಕೂಡ ಕೆಲವರು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಬೇರೆ ಬೇರೆ ಸಂದರ್ಭಗಳಲ್ಲಿ ಮಾತನಾಡಲಿಲ್ಲ, ಈಗ ರಮ್ಯಾ ಪರ ಮಾತ್ರ ಮಾತನಾಡುತ್ತಿದ್ದೀರಾ? ರಮ್ಯಾ ಕಥೆ ಆಮೇಲೆ, ಮೊದಲು ಯುವ ಪತ್ನಿ ಶ್ರೀದೇವಿಗೆ ನ್ಯಾಯ ಕೊಡಿಸಿ ಶಿವಣ್ಣ ಎಂದು ವ್ಯಂಗ್ಯ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಒಟ್ಟಾರೆ ನಟಿ ರಮ್ಯಾ ಪರ ಮಾತನಾಡುವುದು ತಪ್ಪಾ ? ಎನ್ನುವಂತಾಗಿದೆ. ಶಿವಣ್ಣ ಮಾಡಿರುವ ಪೋಸ್ಟ್ ಅನ್ನು ರಮ್ಯಾ ಹಂಚಿಕೊಂಡಿದ್ದಾರೆ. ಶಿವಣ್ಣನಿಗೆ ಅಭಿಮಾನಿಗಳ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ನಟಿ ರಮ್ಯಾ ಆಗ್ರಹಿಸಿದ್ದರು. ಈ ಸಂಬಂಧ ಆಕೆ ಮಾಡಿದ್ದ ಪೋಸ್ಟ್ ದರ್ಶನ್ ಅಭಿಮಾನಿಗಳನ್ನು ಕೆರಳಿಸಿತ್ತು. ಆಕೆಯನ್ನು ಕೆಟ್ಟದಾಗಿ ಟ್ರೋಲ್ ಮಾಡುವುದು ಮಾತ್ರವಲ್ಲ, ಆಕೆಗೆ ನೇರವಾಗಿ ಕೆಟ್ಟದಾಗಿ ಮೆಸೇಜ್ ಕಳುಹಿಸಿ ಕಿರುಕುಳ ನೀಡಿದ್ದರು. ಇದನ್ನು ಸ್ಕ್ರೀನ್‌ಶಾಟ್ ಸಮೇತ ರಮ್ಯಾ ಎಲ್ಲರ ಮುಂದಿಟ್ಟಿದ್ದರು. ಅಷ್ಟಕ್ಕೆ ಸುಮ್ಮನಾಗದೇ ಈ ಸಂಬಂಧ ಆಕೆ ಈಗಾಗಲೇ ಪೊಲೀಸ್ ಆಯುಕ್ತರಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. 43 ಮಂದಿ ದರ್ಶನ್ ಅಭಿಮಾನಿಗಳ ಸೋಶಿಯಲ್ ಮೀಡಿಯಾ ಖಾತೆಗಳನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಹಿಳಾ ಆಯೋಗ ಕೂಡ ರಮ್ಯಾ ಪರ ನಿಂತು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಹೆಣ್ಣು ಮಕ್ಕಳಿಗೆ ಹೀಗೆ ಕೆಟ್ಟದಾಗಿ ಮೆಸೇಜ್ ಕಳುಹಿಸುವ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ವಿನಯ್ ರಾಜ್‌ಕುಮಾರ್ ಕೂಡ ಈಗಾಗಲೇ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಯಾವುದೇ ರೀತಿಯ ಕಿರುಕುಳದ ವಿರುದ್ಧ ನಿಲ್ಲುವುದು ನಮ್ಮ ಕರ್ತವ್ಯ. ಹೆಣ್ಮಕ್ಕಳನ್ನು ಕೀಳಾಗಿ ಕಾಣುವ ಪ್ರಪಂಚ, ಬೆಳವಣಿಗೆಗೂ ಮುನ್ನ ನಾಶವಾಗಬೇಕು" ಎಂದು ವಿನಯ್ ಪೋಸ್ಟ್ ಮಾಡಿದ್ದರು.
ಇನ್ನು ರಮ್ಯಾ ಪರ ಫಿಲಂ ಇಂಡಸ್ಟ್ರಿ ಫಾರ್ ರೈಟ್ಸ್ & ಈಕ್ವಾಲಿಟಿ ಸಂಸ್ಥೆ ಗೃಹ ಸಚಿವರಿಗೆ ಪತ್ರ ಬರೆದಿದೆ. ನಟಿ ರಮ್ಯಾಗೆ ಕೆಟ್ಟದಾಗಿ ಮೆಸೇಜ್ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.
ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಕೂಡ ದರ್ಶನ್ ಹಾಗೂ ದರ್ಶನ್ ಅಭಿಮಾನಿಗಳ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದಾರೆ. "ಎಲ್ಲರೂ ನಟಿ ರಮ್ಯ ಪರ ನಿಲ್ಲೋಣ. ಈಗಲೂ ನಾವು ರಮ್ಯರವರ ಆತ್ಮಗೌರವದ ಪರ ನಿಲ್ಲದೇ ಹೋದರೆ ನಾವು ಕಲಾವಿದರಾಗೋಕೆ ನಾಚಿಕೆಯಾಗಬೇಕು. ಕನ್ನಡ ಚಿತ್ರರಂಗವನ್ನ ಭಯದಿಂದ ಮುಕ್ತಗೊಳಿಸೋಣ. ಇಷ್ಟೆಲ್ಲಾ ಆದ್ರೂ ಜಾಣಕಿವುಡರಾಗಿರೋ ಪುಣ್ಯಾತ್ಮ ಕಲಾವಿದರಿಗೆ ದೇವರು ನೂರ್ಕಾಲ ಆಯಸ್ಸು ನೀಡಲೆಂದು ಪ್ರಾರ್ಥನೆ" ಎಂದು ಪ್ರಥಮ್ ಟ್ವೀಟ್ ಮಾಡಿದ್ದರು.


Click it and Unblock the Notifications











