ಶಿವಣ್ಣ - ಯಶ್ ಒಟ್ಟಿಗೆ ನಟಿಸಿದ್ದ ಚಿತ್ರಕ್ಕೆ 13 ವರ್ಷಗಳ ಸಂಭ್ರಮ!
ರಾಕಿಂಗ್ ಸ್ಟಾರ್ ಯಶ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 16 ವರ್ಷಗಳು ಕಳೆದಿವೆ. 2008ರಲ್ಲಿ ಬಿಡುಗಡೆಗೊಂಡಿದ್ದ ಮೊಗ್ಗಿನ ಮನಸು ಎಂಬ ಚಿತ್ರದಲ್ಲಿ ನಾಯಕ ನಟನಾಗಿ ಬಡ್ತಿ ಪಡೆದ ಯಶ್ ಮೊದಲು ಬಣ್ಣ ಹಚ್ಚಿದ್ದು 2007ರಲ್ಲಿ ಬಿಡುಗಡೆಗೊಂಡಿದ್ದ ಜಂಭದ ಹುಡುಗಿ ಎಂಬ ಚಿತ್ರದ ಮೂಲಕ.
ಮೊಗ್ಗಿನ ಮನಸು ಯಶಸ್ಸಿನ ಬಳಿಕ ಯಶ್ ಹಲವು ಚಿತ್ರಗಳಲ್ಲಿ ನಟಿಸಲು ಆಫರ್ ಪಡೆದರು. ಬಳಿಕ ರಾಕಿ, ಕಳ್ಳರ ಸಂತೆ, ಗೋಕುಲ ಚಿತ್ರಗಳಲ್ಲಿಯೂ ಸಹ ಯಶ್ ನಟಿಸಿದರು. ರಾಕಿ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಯಶ್ ಕಳ್ಳರ ಸಂತೆ ಹಾಗೂ ಗೋಕುಲ ಚಿತ್ರಗಳಲ್ಲಿ ಎರಡನೇ ನಾಯಕನಾಗಿ ನಟಿಸಿದ್ದರು.

ಹೀಗೆ ಆರಂಭದ ಅನೇಕ ಚಿತ್ರಗಳಲ್ಲಿ ಯಶ್ ಎರಡನೇ ನಾಯಕನಾಗಿ ನಟಿಸಿದ ಉದಾಹರಣೆಗಳಿದ್ದು, ಕೆಲ ಚಿತ್ರಗಳಲ್ಲಿ ಅತಿಥಿ ಪಾತ್ರ ಹಾಗೂ ವಿಶೇಷ ಪಾತ್ರಗಳಲ್ಲಿಯೂ ಸಹ ಕಾಣಿಸಿಕೊಂಡಿದ್ದುಂಟು.
ಈ ಪೈಕಿ ತಮಸ್ಸು ಚಿತ್ರ ಸಹ ಒಂದು. ಹೌದು, 2010ರಲ್ಲಿ ಬಿಡುಗಡೆಗೊಂಡಿದ್ದ ತಮಸ್ಸು ಚಿತ್ರದಲ್ಲಿಯೂ ಸಹ ರಾಕಿಂಗ್ ಸ್ಟಾರ್ ಯಶ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಇಮ್ರಾನ್ ಎಂಬ ಅತಿಥಿ ಪಾತ್ರವನ್ನು ಯಶ್ ನಿರ್ವಹಿಸಿದ್ದರು.
ಈ ಚಿತ್ರದಲ್ಲಿ ಶಿವ ರಾಜ್‌ಕುಮಾರ್ ನಾಯಕನಾಗಿ ನಟಿಸಿದ್ದರೆ, ಪದ್ಮಪ್ರಿಯಾ ನಾಯಕಿಯಾಗಿ ನಟಿಸಿದ್ದರು. ಚಿತ್ರಕ್ಕೆ ಅಗ್ನಿ ಶ್ರೀಧರ್ ನಿರ್ದೇಶನವಿತ್ತು ಹಾಗೂ ನಸ್ಸರ್, ಶರತ್ ಲೋಹಿತಾಶ್ವ ಹಾಗೂ ಹರ್ಷಿಕಾ ಪೂಣಚ್ಚ ಮುಖ್ಯ ಪಾತ್ರಗಳಲ್ಲಿ ಮಿಂಚಿದ್ದರು.
ಈ ಚಿತ್ರ 2010ರ ಜೂನ್ 11ರಂದು ತೆರೆಗೆ ಬಂದಿತ್ತು. ಈ ಮೂಲಕ ಇಂದಿಗೆ ಈ ವರ್ಷ ಬಿಡುಗಡೆಯಾಗಿ 13 ವರ್ಷಗಳು ಕಳೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರದ ವಾರ್ಷಿಕೋತ್ಸವದ ಕುರಿತು ಪೋಸ್ಟ್‌ಗಳನ್ನು ಸಿನಿಮಾ ರಸಿಕರು ಹಂಚಿಕೊಳ್ಳುತ್ತಿದ್ದಾರೆ.
ಇನ್ನು ಈ ಚಿತ್ರದ ಕಥೆ 2002ರಲ್ಲಿ ಗುಜರಾತ್‌ನಲ್ಲಿ ನಡೆದಿದ್ದ ಧರ್ಮಗಳ ನಡುವಿನ ಘರ್ಷಣೆಯ ನೈಜ ಘಟನೆಗಳ ಮೇಲೆ ಆಧಾರವಾಗಿತ್ತು. ಹಿಂದೂ - ಮುಸ್ಲಿಂ ನಡುವಿನ ಬಾಂಧವ್ಯವನ್ನು ಸಾರುವ ಕಥೆಯನ್ನು ಈ ಚಿತ್ರ ಹೊಂದಿತ್ತು. "ಧರ್ಮದ ಗಡಿಗಳನ್ನು ದಾಟುವ ಮಾನವ ಚೇತನಗಳ ಮನ ಮಿಡಿಯುವ ನೈಜ ಕಥೆ" ಎಂಬ ವಿಶೇಷ ಬರಹದೊಂದಿಗೆ ಬಿಡುಗಡೆಗೊಂಡಿದ್ದ ಈ ಚಿತ್ರ ಬಹುತೇಕ ಪಾಸಿಟಿವ್ ವಿಮರ್ಶೆಗಳನ್ನೇ ಪಡೆದುಕೊಂಡಿತ್ತು.
ಈ ಚಿತ್ರ ವಾರ್ಷಿಕೋತ್ಸವ ಆಚರಣೆ ವೇಳೆ ಯಶ್ ಹಾಗೂ ಶಿವ ರಾಜ್‌ಕುಮಾರ್ ಒಟ್ಟಿಗೆ ನಟಿಸಿದ್ದ ಚಿತ್ರ ಎಂಬುದನ್ನು ಕೇಳಿ ಕೆಲ ನೆಟ್ಟಿಗರು ಯಶ್ ಹಾಗೂ ಶಿವಣ್ಣ ಒಂದೇ ಚಿತ್ರದಲ್ಲಿ ನಟಿಸಿದ್ರಾ? ನಮಗೆ ನೆನಪೇ ಇಲ್ಲವಲ್ಲಾ ಎಂದು ಕಾಮೆಂಟ್ ಮಾಡಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ಕೆಲವರು ಚಿತ್ರದಲ್ಲಿ ಇಬ್ಬರು ನಿರ್ವಹಿಸಿದ್ದ ಪಾತ್ರಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಬರೆದುಕೊಳ್ಳುತ್ತಿದ್ದಾರೆ. ಅಲ್ಲದೇ ಈ ಜೋಡಿ ಈಗಿನ ಸಮಯಕ್ಕೆ ತಕ್ಕ ಹಾಗೆ ಒಂದು ಮಲ್ಟಿಸ್ಟಾರರ್ ಚಿತ್ರದಲ್ಲಿ ಒಟ್ಟಿಗೆ ನಟಿಸಬೇಕು ಎಂದು ಆಶಯವನ್ನೂ ಸಹ ಹಲವಾರು ಮಂದಿ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











