ವೇದಿಕೆಯಲ್ಲೇ ಶಿವಣ್ಣನ ಜೊತೆ ಸಿನಿಮಾ ಘೋಷಿಸಿದ ಉಮಾಪತಿ: ಆ ಟೈಟಲ್ ಬೇಡ ಎಂದಿದ್ದೇಕೆ ಸೆಂಚುರಿ ಸ್ಟಾರ್?
ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣದ 'ಉಪಾಧ್ಯಕ್ಷ' ಸಿನಿಮಾ ಜನವರಿ 26ಕ್ಕೆ ತೆರೆಗೆ ಬರ್ತಿದೆ. ಚಿತ್ರದಲ್ಲಿ ಚಿಕ್ಕಣ್ಣ ಹೀರೊ ಆಗಿ ನಟಿಸಿದ್ದಾರೆ. ಸೂಪರ್ ಹಿಟ್ 'ಅಧ್ಯಕ್ಷ' ಸೀಲ್ವೆಲ್ ಆಗಿರುವ ಈ ಕಾಮೆಡಿ ಎಂಟರ್‌ಟೈನರ್ ಚಿತ್ರಕ್ಕೆ ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ.
ಇತ್ತೀಚೆಗೆ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ 'ಉಪಾಧ್ಯಕ್ಷ' ಚಿತ್ರದ ಟ್ರೈಲರ್ ಲಾಂಚ್ ಈವೆಂಟ್ ನಡೀತು. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ವೇದಿಕೆಯಲ್ಲಿ ಮಾತನಾಡುವ ವೇಳೆಗೆ ಶಿವಣ್ಣ ನಟನೆಯ ಸಿನಿಮಾ ನಿರ್ಮಾಣ ಮಾಡುವುದಾಗಿ ನಿರ್ಮಾಪಕ ಉಮಾಪತಿ ಹೇಳಿದರು.

ಉಮಾಪತಿ ಮಾತಿಗೆ ಸರಿ ಎಂದ ಶಿವಣ್ಣ ಸಿನಿಮಾ ಮಾಡೋಣ ಎಂದೇಬಿಟ್ಟರು. ಆದರೆ ನಿರ್ಮಾಪಕರು ಒಂದು ಟೈಟಲ್ ಅನ್ನು ಕೂಡ ರಿಜಿಸ್ಟರ್ ಮಾಡಿಸಿದ್ದು ಅದೇ ಟೈಟಲ್‌ನಲ್ಲಿ ಸಿನಿಮಾ ಮಾಡೋಣ ಎಂದರು. ಆದರೆ ಶಿವಣ್ಣ ಆ ಟೈಟಲ್ ಬೇಡ ನಾನೇ ಒಂದು ಟೈಟಲ್ ಕೊಡ್ತೀನಿ ಎಂದು ಹೇಳಿದ್ದಾರೆ.
"ಶಿವಣ್ಣ ಅವರನ್ನು ಎರಡು ಬಾರಿ ಭೇಟಿ ಆಗಿದ್ದೀನಿ. ನಿಜಕ್ಕೂ ಅವರು ದೊಡ್ಮನೆಯವರು. ಪುನೀತ್ ರಾಜ್‌ಕುಮಾರ್ ಅವರನ್ನು ಒಮ್ಮೆ ಭೇಟಿ ಮಾಡಿದ್ದೆ. ಅಂದು ಅವರು ಹೇಳಿದ ಮಾತು ನನಗೆ ಇನ್ನು ನೆನಪಿದೆ. ನಾನು ಚಿತ್ರರಂಗಕ್ಕೆ ಬಂದು 7 ವರ್ಷ ಆಯಿತು. ಶಿವಣ್ಣನ ಜೊತೆ ಒಂದು ಸಿನಿಮಾ ಮಾಡಲಿಲ್ಲ ಎನ್ನುವ ಬೇಸರ ಇದೆ. ನನಗೆ 'ದೊರೆ' ಚಿತ್ರದ ಹಾಡುಗಳು ಬಹಳ ಇಷ್ಟ. ಆ ಟೈಟಲ್ ಕೂಡ ರಿಜಿಸ್ಟರ್ ಮಾಡಿಸಿದ್ದೀನಿ" ಎಂದರು.
ಬಳಿಕ ವೇದಿಕೆ ಏರಿದ ಶಿವಣ್ಣ, "ಎರಡು ಬಾರಿ ಉಮಾಪತಿ ಅವರನ್ನು ಭೇಟಿ ಮಾಡಿದ್ದೆ. ಹಿಂದೆ ಕಾರ್ಯಕ್ರಮವೊಂದರಲ್ಲಿ ಭಾಗಿ ಆಗಬೇಕಿತ್ತು. ಸಾಧ್ಯವಾಗಿರಲಿಲ್ಲ. ನಮ್ಮ ಸಿನಿಮಾದಲ್ಲೇ ಮಾಡೋಣ ಬಿಡಿ, ನಿಮ್ಮಂಥ ನಿರ್ಮಾಪಕರ ಜೊತೆ ಸಿನಿಮಾ ಮಾಡೋದು ನಮ್ಮ ಕರ್ತವ್ಯ. ಕಂಡಿತ ಮಾಡ್ತೀವಿ. ನೀವು ಯಾವ ಸಿನಿಮಾ ಆದರೂ ಹೇಳಿ, 'ದೊರೆ' ಅಂದ್ರು. ಆ ಟೈಟಲ್ ಬೇಡ. ಅದು ಬಂದಿದೆ. ಬೇರೆ ಟೈಟಲ್ ನಾನು ಹೇಳಿದ್ದೀನಿ. ಅದು ರಿಜಿಸ್ಟರ್ ಆದಮೇಲೆ ಹೇಳ್ತಾರೆ. ಅವ್ರು ಅಷ್ಟು ಆಸೆಯಿಂದ ಹೇಳುವಾಗ ನಾನು ಅದನ್ನು ವೇದಿಕೆ ಹೇಳೋಣ ಅಂತ ಹೇಳಿದ್ದೀನಿ" ಎಂದು ಒಟ್ಟಿಗೆ ಸಿನಿಮಾ ಮಾಡುವ ಬಗ್ಗೆ ಶಿವಣ್ಣ ಒಪ್ಪಿಗೆ ಸೂಚಿಸಿದ್ದಾರೆ.
'ಹೆಬ್ಬುಲಿ' ಚಿತ್ರದ ಸಹನಿರ್ಮಾಪಕರಾಗಿ ಚಿತ್ರರಂಗಕ್ಕೆ ಬಂದ ಉಮಾಪತಿ, ಬಳಿಕ 'ಒಂದಲ್ಲ ಎರಡಲ್ಲ', 'ರಾಬರ್ಟ್' ಹಾಗೂ 'ಮದಗಜ' ಸಿನಿಮಾಗಳನ್ನು ನಿರ್ಮಿಸಿ ಗೆದ್ದರು. ಇದೀಗ 'ಉಪಾಧ್ಯಕ್ಷ' ಚಿತ್ರವನ್ನು ಪ್ರೇಕ್ಷಕರ ಮುಂದೆ ತರ್ತಿದ್ದಾರೆ. ಚಿತ್ರದಲ್ಲಿ ಮಲೈಕಾ ನಾಯಕಿಯಾಗಿ ನಟಿಸುತ್ತಿದ್ದು ಶರಣ್ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನುಳಿದಂತೆ ರವಿಶಂಕರ್, ಕೀರ್ತಿರಾಜ್, ಸಾಧುಕೋಕಿಲ ತಾರಾಗಣದಲ್ಲಿದ್ದಾರೆ.
ಮತ್ತೊಂದು ಕಡೆ ಶಿವಣ್ಣ ಐದಾರು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಸಿನಿಮಾಗಳಿಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕನ್ನಡದಲ್ಲಿ 'ಕರಟಕ ದಮನಕ' ಸಿನಿಮಾ ಬಿಡುಗಡೆಗೆ ಸಜ್ಜಾಗ್ತಿದೆ. '45' ಎನ್ನುವ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಮ್ಮದೇ ಬ್ಯಾನರ್‌ನಲ್ಲಿ 'ಭೈರತಿ ರಣಗಲ್' ಚಿತ್ರಕ್ಕೂ ಬಣ್ಣ ಹಚ್ಚಿದ್ದಾರೆ.

ತಮಿಳಿನಲ್ಲಿ ಶಿವಣ್ಣ ವಿಶೇಷ ಪಾತ್ರದಲ್ಲಿ ನಟಿಸಿರುವ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಬಿಡುಗಡೆಯಾಗಿ ಸದ್ದು ಮಾಡ್ತಿದೆ. ಮತ್ತೊಮ್ಮೆ ಶಿವಣ್ಣನ ನಟನೆಗೆ ಕಾಲಿವುಡ್ ಮಂದಿ ಫಿದಾ ಆಗಿದ್ದಾರೆ. ಮತ್ತೆರಡು ತಮಿಳು ಸಿನಿಮಾಗಳನ್ನು ಓಕೆ ಮಾಡಿದ್ದಾರೆ. ತೆಲುಗಿನಲ್ಲಿ ರಾಮ್‌ಚರಣ್ ಮುಂದಿನ ಚಿತ್ರದಲ್ಲಿ ಸೆಂಚುರಿ ಸ್ಟಾರ್ ನಟಿಸೋದು ಬಹುತೇಕ ಖಚಿತವಾಗಿದೆ.


Click it and Unblock the Notifications











