ರಾಮ್ ಚರಣ್ ಚಿತ್ರದಲ್ಲಿ ನಟಿಸುವ ಬಗ್ಗೆ ಕೊನೆಗೂ ಖಚಿತಪಡಿಸಿದ ಶಿವಣ್ಣ
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸದ್ಯ ಕನ್ನಡದ ಜೊತೆಗೆ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ತೆಲುಗು ಸಿನಿಮಾದಲ್ಲಿ ನಟಿಸುವ ಬಗ್ಗೆ ಚರ್ಚೆ ನಡೀತಿದೆ. ಇದೀಗ ಈ ಬಗ್ಗೆ ಸ್ವತಃ ಶಿವಣ್ಣ ಮಾಹಿತಿ ನೀಡಿದ್ದಾರೆ. ಈ ಹಿಂದೆ ತೆಲುಗಿನ 'ಗೌತಮಿಪುತ್ರ ಶಾತಕರ್ಣಿ' ಚಿತ್ರದ ಹಾಡೊಂದರಲ್ಲಿ ಹ್ಯಾಟ್ರಿಕ್ ಹೀರೊ ಕಾಣಿಸಿಕೊಂಡಿದ್ದರು.
ಕನ್ನಡದಲ್ಲಿ ಸದ್ಯ ಐದಾರು ಸಿನಿಮಾಗಳು ಶಿವಣ್ಣನ ಕೈಯಲ್ಲಿವೆ. 'ಕರಟಕ ದಮನಕ' ಚಿತ್ರೀಕರಣ ಮುಗಿದಿದೆ. 'ಭೈರತಿ ರಣಗಲ್' ಶೇ 60ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ ಎಂದು ಶಿವಣ್ಣ ಹೇಳಿದ್ದಾರೆ. ಇನ್ನು ಅರ್ಜುನ್ ಜನ್ಯಾ ನಿರ್ದೇಶನದಲ್ಲಿ ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ಜೊತೆಗೆ ನಟಿಸುತ್ತಿದ್ದಾರೆ. ಒಂದೆರಡು ತಮಿಳು ಸಿನಿಮಾಗಳ ಬಗ್ಗೆಯೂ ಚರ್ಚೆ ನಡೀತಿದೆ. ಈಗಾಲೇ 2 ಕಥೆ ಇಷ್ಟವಾಗಿದೆ ಎಂದು ಹೇಳಿದ್ದಾರೆ.

ತಮಿಳು ಸಂದರ್ಶನದಲ್ಲಿ ಮಾತನಾಡಿರುವ ಶಿವರಾಜ್‌ಕುಮಾರ್ ಶೀಘ್ರದಲ್ಲೇ ರಾಮ್‌ಚರಣ್ ಜೊತೆ ನಟಿಸುತ್ತಿದ್ದೇನೆ ಎಂದಿದ್ದಾರೆ. "ರಾಮ್ ಚರಣ್ ಸಿನಿಮಾದ ಬಗ್ಗೆ ಸದ್ಯಕ್ಕೆ ಏನು ಹೇಳುವುದಿಲ್ಲ. ಅದರ ಬಗ್ಗೆ ಒಂದಷ್ಟು ಸುದ್ದಿಗಳು ಹರಿದಾಡುತ್ತಿವೆ. ಆದರೆ ನಾನು ಈ ಬಗ್ಗೆ ಮಾತನಾಡಲಾರೆ. ಈಗ ಮಾತನಾಡಿ ಸಿನಿಮಾ ಮಾಡದಿದ್ದರೆ ಅಭಿಮಾನಿಗಳಿಗೆ ನಿರಾಸೆಯಾಗಲಿದೆ. 'ಉಪ್ಪೆನ' ಸಿನಿಮಾ ಮಾಡಿದ ಬುಚ್ಚಿಬಾಬು ನನ್ನನ್ನು ಭೇಟಿಯಾಗುವಂತೆ ಕೇಳಿದ್ದಾರೆ. ಮುಂದೆ ಏನಾಗುತ್ತೋ ನೋಡೋಣ' ಎಂದು ಶಿವಣ್ಣ ಹೇಳಿದ್ದಾರೆ.
ಸದ್ಯ ಶಂಕರ್ ನಿರ್ದೇಶನದ 'ಗೇಮ್ ಚೇಂಜರ್' ಚಿತ್ರದಲ್ಲಿ ರಾಮ್‌ಚರಣ್ ನಟಿಸುತ್ತಿದ್ದಾರೆ. ಬಳಿಕ ಬುಚ್ಚಿಬಾಬು ನಿರ್ದೇಶನದ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ನಿರ್ದೇಶಕ ಸುಕುಮಾರ್ ಶಿಷ್ಯ ಬುಚ್ಚಿಬಾಬು. 'ರಂಗಸ್ಥಳಂ' ಚಿತ್ರಕ್ಕೂ ಸಹಾಯಕರಾಗಿ ಕೆಲಸ ಮಾಡಿದ್ದರು. ಇನ್ನು ಹೆಸರಿಡದ ಚಿತ್ರದಲ್ಲಿ ಚರಣ್- ಬುಚ್ಚಿಬಾಬು ಕೆಲಸ ಮಾಡಲಿದ್ದಾರೆ. ಇದು ಮೆಗಾ ಪವರ್ ಸ್ಟಾರ್ 16ನೇ ಸಿನಿಮಾ ಅನ್ನೋದು ವಿಶೇಷ.
ಶಿವಣ್ಣ 'ಜೈಲರ್' ಸಿನಿಮಾದಲ್ಲಿ ನರಸಿಂಹ ಆಗಿ ಅಬ್ಬರಿಸಿದ ಬಳಿಕ ತೆಲುಗು, ತಮಿಳಿನ ನಿರ್ದೇಶಕರು ತಮ್ಮ ಸಿನಿಮಾಗಳಲ್ಲಿ ಅವರಿಗೆ ಪಾತ್ರ ಬರೆಯಲು ಆರಂಭಿಸಿದ್ದಾರೆ. ಅದೇ ರೀತಿ ಬುಚ್ಚಿಬಾಬು ಮುಂದಿನ ಚಿತ್ರದಲ್ಲಿ ಶಿವಣ್ಣನನ್ನು ಕಾಸ್ಟ್ ಮಾಡಲು ಬಯಸಿದ್ದಾರೆ. ಆದರೆ ಯಾವ ಪಾತ್ರ ಎನ್ನುವುದು ಕನ್ಫರ್ಮ್ ಆಗಿಲ್ಲ. ಟಾಲಿವುಡ್‌ನಲ್ಲಿ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಚಿತ್ರದಲ್ಲಿ ಚರನ್ ಮೆಂಟರ್ ಆಗಿ ಶಿವಣ್ಣ ನಟಿಸುತ್ತಾರೆ ಎನ್ನಲಾಗ್ತಿದೆ.

ಬುಚ್ಚಿಬಾಬು RC16 ಚಿತ್ರದಲ್ಲಿ ಒಂದು ಹಳ್ಳಿ ಹಿನ್ನೆಲೆಯ ಕಥೆ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ಗ್ರಾಮೀಣ ಕ್ರೀಡೆಯೊಂದರ ಸುತ್ತ ಕಥೆ ಸುತ್ತುವ ಸಾಧ್ಯತೆಯಿದೆ. ಈ ಕಥೆಯಲ್ಲಿ ಚರಣ್ ಗುರುವಿನ ಪಾತ್ರದಲ್ಲಿ ಸೆಂಚುರಿ ಸ್ಟಾರ್ ಕಾಣಿಸಿಕೊಳ್ಳುವ ಬಗ್ಗೆ ಊಹಾಪೋಹ ಶುರುವಾಗಿದೆ. ಫ್ಯಾಶ್‌ಬ್ಯಾಕ್ ಎಪಿಸೋಡ್‌ನಲ್ಲಿ ಶಿವಣ್ಣ ಮಿಂಚುವ ಸಾಧ್ಯತೆಯಿದೆ. ಈ ಸುದ್ದಿ ಈಗ ಟಾಲಿವುಡ್‌ನಲ್ಲಿ ಭಾರೀ ಸದ್ದು ಮಾಡ್ತಿದೆ.
ಶಿವಣ್ಣ ನಟನೆಯ 'ವೇದ' ಸಿನಿಮಾ ಕೂಡ ತೆಲುಗಿಗೆ ಡಬ್ ಆಗಿ ರಿಲೀಸ್ ಆಗಿತ್ತು. ಹಾಗಾಗಿ ತೆಲುಗು ಪ್ರೇಕ್ಷಕರಿಗೆ ಶಿವಣ್ಣನ ಪರಿಚಯವಾಗಿದೆ. ಇನ್ನು ಎನ್‌ಟಿಆರ್ ಶತ ಜನ್ಮದಿನೋತ್ಸವದಲ್ಲಿ ಶಿವಣ್ಣ ಭಾಗಿ ಆಗಿ ಮಾತನಾಡಿದ್ದರು. ಬಾಲಕೃಷ್ಣ ಜೊತೆ ನಟಿಸುವ ಇಂಗಿತ ವ್ಯಕ್ತಪಡಿಸಿದ್ದರು. ಈ ಬಾರಿ ಅತಿಥಿ ಪಾತ್ರ ಅಲ್ಲದೇ ಇಡೀ ಸಿನಿಮಾ ಕಾಣಿಸಿಕೊಳ್ಳುತ್ತೇನೆ ಎಂದಿದ್ದರು.
ಇನ್ನು ಚಿರಂಜೀವಿ ಹಾಗೂ ಡಾ. ರಾಜ್‌ಕುಮಾರ್ ಕುಟುಂಬದ ನಡುವೆ ಆತ್ಮೀಯ ಒಡನಾಟವಿದೆ. ಮೆಗಾಸ್ಟಾರ್ ಡ್ಯಾನ್ಸ್‌ಗೆ ಅಪ್ಪು ದೊಡ್ಡ ಅಭಿಮಾನಿ ಆಗಿದ್ದರು. ರಾಮ್‌ಚರಣ್ ಕೂಡ ಶಿವಣ್ಣ, ಪುನೀತ್ ಜೊತೆ ಆತ್ಮೀಯ ಅನುಬಂಧ ಇಟ್ಟುಕೊಂಡಿದ್ದಾರೆ. ಇದೀಗ ರಾಮ್‌ಚರಣ್ ಜೊತೆ ಶಿವಣ್ಣ ನಟಿಸುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.


Click it and Unblock the Notifications











