ಶಿವಣ್ಣನ ಕೆನ್ನೆ ಗಿಂಡಿದ ದಚ್ಚು, ಅಪ್ಪು ಹಾಡು ಹಾಡಿ, ರಣ್‌ವೀರ್ ಜೊತೆ ಶಿವಣ್ಣ ಸ್ಟೆಪ್ಸ್!
ಕಳೆದೆರಡು ದಿನಗಳಿಂದ ಬೆಂಗಳೂರಿನಲ್ಲಿ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ನಡೀತಿದೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಕಳೆದ ವರ್ಷ ತೆರೆಕಂಡ ಸಿನಿಮಾಗಳಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. 10ನೇ ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯುತ್ತಿರುವುದು ವಿಶೇಷ. ದಕ್ಷಿಣ ಭಾರತದ ತಾರೆಯರ ಜೊತೆಗೆ ಬಾಲಿವುಡ್ ತಾರೆಯರು ಒಂದೇ ಅದ್ಧೂರಿ ವೇದಿಕೆಯಲ್ಲಿ ಕಾಣಿಸಿಕೊಂಡು ರಂಗೇರಿಸಿದ್ದಾರೆ.
ಕಮಲ್ ಹಾಸನ್, ರಣ್‌ವೀರ್ ಸಿಂಗ್, ದರ್ಶನ್, ಯಶ್, ಅಲ್ಲು ಅರ್ಜುನ್, ಶಿವರಾಜ್‌ಕುಮಾರ್ ಸೇರಿದಂತೆ ಸಾಕಷ್ಟು ಸೂಪರ್ ಸ್ಟಾರ್‌ಗಳು ಈವೆಂಟ್‌ನಲ್ಲಿ ಭಾಗಿಯಾಗಿದ್ದಾರೆ. ಕಾರ್ಯಕ್ರಮ ಶೀಘ್ರದಲ್ಲೇ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಸದ್ಯ ಕಾರ್ಯಕ್ರಮಕ್ಕೆ ಸಂಬಂಧಿಸಿದ ಕೆಲ ಸಣ್ಣಪುಟ್ಟ ಫೋಟೊಗಳು, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಹಲತ್ತು ಹಲವು ಸುಂದರ ಕ್ಷಣಗಳಿಗೆ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಸಾಕ್ಷಿಯಾಗುತ್ತಿದೆ.
ನಿನ್ನೆ (ಸೆಪ್ಟೆಂಬರ್ 10) ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ತೆಲುಗು ಸಿನಿಮಾಗಳಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ರಾಬರ್ಟ್' ಚಿತ್ರಕ್ಕೆ ಅತೀ ಹೆಚ್ಚು ಪ್ರಶಸ್ತಿಗಳು ಲಭಿಸಿವೆ. ಇನ್ನು 10ನೇ ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಅರ್ಪಣೆ ಮಾಡಲಾಗಿದೆ. 'ಯುವರತ್ನ' ಚಿತ್ರದ ನಟನೆಗಾಗಿ ಅಪ್ಪುಗೆ ಅತ್ಯುತ್ತಮ ನಟ ಪ್ರಶಸ್ತಿ ಘೋಷಣೆ ಆಗಿದೆ.

ವೇದಿಕೆಯಲ್ಲಿ ಅಪ್ಪು ನೆನೆದು ಶಿವಣ್ಣ ಭಾವುಕ
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಪತ್ನಿ ಗೀತಾ ಹಾಗೂ ಸಹೋದರಿಯರ ಜೊತೆ ಸೈಮಾ 2022 ವೇದಿಕೆ ಏರಿದ್ದರು. ಪುನೀತ್ ರಾಜ್‌ಕುಮಾರ್ ಸ್ಪೆಷಲ್ ಎವಿ ಪ್ರದರ್ಶಿಸಲಾಯಿತು. ನಂತರ ಸಹೋದರನ ನೆನೆದು ಶಿವಣ್ಣ ಭಾವುಕರಾದರು. 'ಭಾಗ್ಯವಂತ' ಚಿತ್ರದ ಅಪ್ಪು ನೆಚ್ಚಿನ 'ಬಾನದಾರಿಯಲ್ಲಿ ಸೂರ್ಯ ಜಾರಿಹೋದ' ಹಾಡನ್ನು ಶಿವಣ್ಣ ಹಾಡಿದರು. ಹಾಡು ಹಾಡುತ್ತಲೇ ಗದ್ಗದಿತರಾದರು.ಸೈಮಾ 2022: ಕನ್ನಡದ ಅತ್ಯುತ್ತಮ ನಟ, ಚಿತ್ರ, ನಿರ್ದೇಶಕ, ನಟಿ ಪ್ರಶಸ್ತಿ ಯಾರ ಪಾಲು? ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ

ಶಿವಣ್ಣನ ಕೆನ್ನೆ ಗಿಂಡಿದ ದರ್ಶನ್
ಬೆಂಗಳೂರಿನ ಜಯಮಹಲ್ ಪ್ಯಾಲೇಸ್‌ನಲ್ಲಿ ಸೈಮಾ 2022 ಕಾರ್ಯಕ್ರಮ ನಡೀತಿದೆ. ದರ್ಶನ್ ನಟನೆಯ 'ರಾಬರ್ಟ್' ಚಿತ್ರದಲ್ಲಿ ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಸಂಗೀತ ನಿರ್ದೇಶನದ ವಿಭಾಗಗಳಲ್ಲಿ ಪ್ರಶಸ್ತಿ ಸಿಕ್ಕಿದೆ. ಕಾರ್ಯಕ್ರಮಕ್ಕೆ ಅಭಿಷೇಕ್ ಅಂಬರೀಶ್ ಜೊತೆ ದರ್ಶನ್ ಬಂದಿದ್ದರು. ಕಾರ್ಯಕ್ರಮದಲ್ಲಿ ಶಿವಣ್ಣನನ್ನು ನೋಡಿದೊಡನೆ ದರ್ಶನ್ ಕೆನ್ನೆ ಗಿಂಡಿ ಖುಷಿಯಿಂದ ಸಮಾಲೋಚನೆ ನಡೆಸಿರುವ ವಿಡಿಯೋ ಸಖತ್ ವೈರಲ್ ಆಗಿದೆ.

ರಣ್‌ವೀರ್ ಸಿಂಗ್ ಜೊತೆ ಶಿವಣ್ಣ ಸ್ಟೆಪ್ಸ್
ಶಿವಣ್ಣ ವೇದಿಕೆಯಲ್ಲಿ ಇದ್ದಾರೆ ಅಂದರೆ ಎನರ್ಜಿ ಎಷ್ಟಿರುತ್ತೆ ಎಂದು ಹೇಳುವುದೇ ಬೇಡ. ಸೈಮಾ 2022 ವೇದಿಕೆಯಲ್ಲಿ ಶಿವಣ್ಣ 'ರಾಮ್‌ಲೀಲಾ' ಚಿತ್ರದ ಸಾಂಗ್‌ಗೆ ರಣ್‌ವೀರ್ ಸಿಂಗ್ ಜೊತೆ ಹೆಜ್ಜೆ ಹಾಕಿದ್ದಾರೆ. ಸೆಂಚುರಿ ಸ್ಟಾರ್ ಎನರ್ಜಿ ನೋಡಿದವರು ಬೆರಗಾಗಿದ್ದಾರೆ. ಈ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ.

'ಪುಷ್ಪ' ಡೈಲಾಗ್ ಹೊಡೆದ ಅಲ್ಲು ಅರ್ಜುನ್
ಕಳೆದ ವರ್ಷ ಬಾಕ್ಸಾಫೀಸ್ ಶೇಕ್ ಮಾಡಿದ ಸಿನಿಮಾ 'ಪುಷ್ಪ'. ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಅಲ್ಲುಅರ್ಜುನ್ ಸ್ಟೈಲ್, ಮ್ಯಾನರಿಸಂ ನೋಡಿ ಬಾಲಿವುಡ್ ಮಂದಿ ಕೂಡ ಫಿದಾ ಆಗಿದ್ದರು. ಚಿತ್ರದ ನಟನೆಗಾಗಿ ಸ್ಟೈಲಿಶ್ ಸ್ಟಾರ್ ಅತ್ಯುತ್ತಮ ನಟ ಸೈಮಾ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಚಿತ್ರದ ಸೂಪರ್ ಹಿಟ್ ಡೈಲಾಗ್ ಹೇಳಿ ನೆರೆದಿದ್ದವರನ್ನು ರಂಜಿಸಿದ್ದಾರೆ.


Click it and Unblock the Notifications











