ಜಯಲಲಿತಾ ಶವಯಾತ್ರೆ ಮಾಡಿದ ಶಿವಣ್ಣ ಫ್ಯಾನ್ಸ್

ಬೆಂಗಳೂರು ಗಾಂಧಿನಗರದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಮೈಸೂರು ವೃತ್ತದವರೆಗೆ ಸಾಗಿತು. ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ವಿರೋಧಿಸಿ ಶಿವಣ್ಣ ಅಭಿಮಾನಿಗಳು ಅರೆಬೆತ್ತಲೆಯಲ್ಲಿ ಸಾಗಿ ಮೆರವಣಿಗೆ ನಡೆಸಿದರು.
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಪ್ರತಿಕೃತಿಯನ್ನು ಚಟ್ಟದ ಮೇಲೆ ಹಾಕಿಕೊಂಡು ಅಣಕು ಶವಯಾತ್ರೆ ನಡೆಸಿದರು. ಬಳಿಕ ಪ್ರತಿಕೃತಿಗೆ ಚಪ್ಪಲಿ ಸೇವೆ ಮಾಡಿ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ದಹಿಸಲಾಯಿತು.
ಈ ಸಂದರ್ಭದಲ್ಲಿ ಶಿವಣ್ಣ ಅಭಿಮಾನಿಗಳು ಜಯಲಲಿತಾ ವಿರುದ್ಧ ಘೋಷಣೆಗಳನ್ನೂ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಶಿವಣ್ಣ ಅಭಿಮಾನಿಗಳ ಪ್ರತಿಭಟನೆಗೆ ಪಾರ್ವತಮ್ಮ ರಾಜ್ ಕುಮಾರ್ ಒಡೆತನದ ವಜ್ರೇಶ್ವರಿ ಕಂಬೈನ್ಸ್ ಚಿತ್ರ ನಿರ್ಮಾಣ ಸಂಸ್ಥೆಯೂ ಸಾಥ್ ನೀಡಿತು.
ಪ್ರತಿಭಟನೆಯಲ್ಲಿ ಅಖಿಲ ಕರ್ನಾಟಕ ಶಿವರಾಜ್ ಕುಮಾರ್ ಸೇನಾ ಸಮಿತಿ, ಗಂಡುಗಲಿ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ಶ್ರೀರಾಮ್ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ಸೇರಿದಂತೆ ಹಲವಾರು ಸಂಘಟನೆಗಳು ಪಾಲ್ಗೊಂಡಿದ್ದವು.
"ಕಾವೇರಿ ನಮ್ಮದು" ಎಂದು ಸಾಗಿದ ಬೃಹತ್ ಪ್ರತಿಭಟನೆಗೆ ಶಿವು ಅಡ್ಡ, ಶಿವ ಸೈನ್ಯ, ಡಾನ್ ಶಿವರಾಜ್ ಕುಮಾರ್ ಸೇನಾ ಸಮಿತಿ, ಅಖಿಲ ಕರ್ನಾಟಕ ಪುನೀತ್ ರಾಜ್ ಕುಮಾರ್ ಸಮಾಜ ಸೇವಾ ಸಂಘ, ಕೆಚ್ಚೆದೆಯ ಸಿಂಹ ಶಿವರಾಜ್ ಕುಮಾರ್ ಸೇನಾ ಸಮಿತಿ ಕೈಜೋಡಿಸಿದ್ದವು. (ಒನ್ಇಂಡಿಯಾ ಕನ್ನಡ)


Click it and Unblock the Notifications











