40 Years of Shivanna: ಸಿನಿಮಾಗಾಗಿ ಹುಟ್ಟಿದವ್ರು.. ಸಮಯ, ಜ್ಞಾಪಕಶಕ್ತಿ, ಶ್ರದ್ಧೆ ಅಂದ್ರೆ ಶಿವಣ್ಣ
ಚಿತ್ರರಂಗದಲ್ಲಿ ಒಬ್ಬ ನಟ 40 ವರ್ಷಗಳ ಕಾಲ ಹೀರೊ ಆಗಿ ಮೆರೆಯುವುದು ಇವತ್ತಿಗೂ ಬೇಡಿಕೆ ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ನಟ ಶಿವರಾಜ್‌ಕುಮಾರ್ ಆ ಸಾಧನೆ ಮಾಡಿದ್ದಾರೆ. ಅಣ್ಣಾವ್ರು, ವಿಷ್ಣು, ಅಂಬಿ ಬಳಿಕ ಆ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದವರು ಶಿವಣ್ಣ.
ಇವತ್ತಿಗೂ ಕನ್ನಡದ ನಂಬರ್ 1 ಸ್ಟಾರ್ ನಟರ ಪಟ್ಟಿಯಲ್ಲಿ ಸೆಂಚುರಿ ಸ್ಟಾರ್ ಹೆಸರಿದೆ. ಯುವ ನಟರನ್ನು ನಾಚಿಸುವಂತೆ ಶಿವಣ್ಣ ತಮ್ಮ ಡ್ಯಾನ್ಸ್, ಪರ್ಫಾರ್ಮನ್ಸ್ ಮೂಲಕ ಸದ್ದು ಮಾಡ್ತಿದ್ದಾರೆ. ಕೆಲಸದ ಮೇಲಿನ ಬದ್ಧತೆ ಅವರನ್ನು ಯಶಸ್ಸಿನ ಶಿಖರ ಏರುವಂತೆ ಮಾಡಿದೆ. ಅಣ್ಣಾವ್ರ ಮಗನಾಗಿದ್ದರೂ ಚೆನ್ನೈ ಫಿಲ್ಮ್ ಇನ್ಸಿಟ್ಯೂಟ್‌ನಲ್ಲಿ ನಟನೆಯ ಪಟ್ಟುಗಳನ್ನು ಕಲಿತು ಬಂದಿದ್ದರು. 80 ದಶಕದ ಕೊನೆಯಲ್ಲಿ 'ಆನಂದ್' ಸಿನಿಮಾ ಮೂಲಕ ಗೆದ್ದು ಬೀಗಿದರು. ಮೊದಲ 3 ಸಿನಿಮಾಗಳು ಹಿಟ್ ಆಗಿ ಹ್ಯಾಟ್ರಿಕ್ ಹೀರೊ ಬಿರುದು ಸಿಕ್ಕಿತ್ತು.

ಆಕ್ಷನ್, ರೌಡಿಸಂ, ಫ್ಯಾಮಿಲಿ ಎಂಟರ್‌ಟೈನರ್, ಕಾದಂಬರಿ ಆಧರಿದ ಸಿನಿಮಾಗಳು ಸೇರಿ ಹಲವು ಬಗೆಯ ಸಿನಿಮಾಗಳಲ್ಲಿ ಶಿವರಾಜ್‌ಕುಮಾರ್ ನಟಿಸಿದ್ದಾರೆ. ಅವಕಾಶ ಸಿಕ್ಕಾಗ ಪೌರಾಣಿಕ, ಭಕ್ತಿಪ್ರದಾನ ಸಿನಿಮಾಗಳಲ್ಲಿ ನಟಿಸಿದ್ದು ಇದೆ. ಶಿವಣ್ಣನ ಜೊತೆ ನಾಲ್ಕೈದು ಸಿನಿಮಾಗಳನ್ನು ಮಾಡಿರುವ ನಿರ್ದೇಶಕರು ಇದ್ದಾರೆ. ಅವರಲ್ಲಿ ಓಂ ಸಾಯಿ ಪ್ರಕಾಶ್ ಹಾಗೂ ಎ. ಹರ್ಷ ಇಬ್ಬರಿಗೂ ಹೆಚ್ಚು ಅವಕಾಶ ಸಿಕ್ಕಿದೆ.
'ಗಡಿಬಿಡಿ ಅಳಿಯ' ಚಿತ್ರದಲ್ಲಿ ಶಿವಣ್ಣ ಹಾಗೂ ಸಾಯಿ ಪ್ರಕಾಶ್ ಕಾಂಬಿನೇಷನ್ ಶುರುವಾಯಿತು. ಮುಂದೆ 'ಗಡಿಬಿಡಿ ಕೃಷ್ಣ', 'ತವರಿಗೆ ಬಾ ತಂಗಿ', 'ಅಣ್ಣ- ತಂಗಿ', 'ತವರಿನ ಸಿರಿ', 'ಲವ-ಕುಶ', 'ಭಾಗ್ಯದ ಬಳೆಗಾರ', 'ದೇವರು ಕೊಟ್ಟ ತಂಗಿ' ಹೀಗೆ ಹಲವು ಸಿನಿಮಾಗಳಲ್ಲಿ ಈ ಜೋಡಿ ಒಟ್ಟಿಗೆ ಕೆಲಸ ಮಾಡಿ ಗೆದ್ದಿತ್ತು. ಸಿನಿಮಾ ಮೇಲಿನ ಶ್ರದ್ಧೆ, ಪ್ರೀತಿ ಹಾಗೂ ಕಲಾವಿದರು, ತಂತ್ರಜ್ಞರ ಜೊತೆಗಿನ ಆತ್ಮೀಯ ಒಡನಾಟವೇ ಶಿವಣ್ಣನ ಯಶಸ್ಸಿಗೆ ಕಾರಣ ಎಂದು ನಿರ್ದೇಶಕ ಸಾಯಿ ಪ್ರಕಾಶ್ ಹೇಳಿದ್ದಾರೆ. ಈ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ಅವರು ಮಾತನಾಡಿದ್ದಾರೆ.
"ನಮ್ಮಿಬ್ಬರ ಕಾಂಬಿನೇಷನ್ ಮೊದಲ ಸಿನಿಮಾ 'ಗಡಿಬಿಡಿ ಅಳಿಯ'. ವರದಪ್ಪ ಹಾಗೂ ಅಣ್ಣಾವ್ರಿಗೆ ಕಥೆ ಹೇಳಿದ್ದೆ. ಅವ್ರು ಒಪ್ಪಿ ಸಿನಿಮಾ ಶುರುವಾಯಿತು. ಸಿನಿಮಾ ಅದ್ಭುತವಾಗಿ ಬಂತು. ಶಿವಣ್ಣ ಅಂದ್ರೆ ಸಮಯ ಪ್ರಜ್ಞೆ. ಬೆಳಗ್ಗೆ 7 ಗಂಟೆಗೆ ಸೆಟ್‌ಗೆ ಬರಬೇಕು ಅಂದ್ರೆ ಬರ್ತಾರೆ. ಬಂದಮೇಲೆ ಸುಖಾಸುಮ್ಮನೆ ಕ್ಯಾತೆ ತೆಗೆಯುವುದಿಲ್ಲ. ಕೆಲಸವೇ ಮುಖ್ಯ. ನಿರ್ಮಾಪಕರು ಚೆನ್ನಾಗಿರಬೇಕು ಎಂದು ಬಯಸುತ್ತಾರೆ. ಹಗಳು ಶೂಟಿಂಗ್ ಮಾಡಿ ರಾತ್ರಿ ಒಂದು ಸಾಂಗ್ ಶೂಟಿಂಗ್ ಅಂದ್ರೆ, ಸರಿ ಮುಗಿಸಿಬಿಡೋಣ ಎನ್ನುತ್ತಾರೆ. ಯಾಕೆ? ಸುಸ್ತು ಅದು ಇದು ಎನ್ನುವುದಿಲ್ಲ" ಎಂದು ನಿರ್ದೇಶಕ ಸಾಯಿ ಪ್ರಕಾಶ್ ಬಣ್ಣಿಸಿದ್ದಾರೆ.
ಶಿವಣ್ಣನ ನೆನಪಿನ ಶಕ್ತಿ ಬಗ್ಗೆ ಸಾಕಷ್ಟು ಜನ ಮಾತನಾಡಿದ್ದಾರೆ. ಡೈಲಾಗ್‌ಗಳನ್ನು ನೆನಪಿಟ್ಟುಕೊಂಡು ನಟಿಸುತ್ತಾರೆ ಎಂದು ಹೇಳುತ್ತಿರುತ್ತಾರೆ. ನಿರ್ದೇಶಕ ಸಾಯಿಪ್ರಕಾಶ್ ಅದನ್ನೇ ಪುನರುಚ್ಚರಿಸಿದ್ದಾರೆ. "ಒಮ್ಮೆ ಸ್ಕ್ರಿಪ್ಟ್ ಕೇಳಿದ ಬಳಿಕ ಅದನ್ನು ಶಿವಣ್ಣ ಮರೆಯುವುದಿಲ್ಲ. ಡೈಲಾಗ್ ಸಮೇತ ಅದನ್ನು ನೆನಪಿಟ್ಟುಕೊಳ್ಳುತ್ತಾರೆ. ಅವರ ಜ್ಞಾಪಕಶಕ್ತಿ ಅದ್ಭುತ. ಅವತ್ತು ಕಥೆ ಹೇಳುವಾಗ ಹಿಂಗೆ ಅಂದ್ರೆ ಹೇಳಿದ್ರಿ, ಈಗ ಯಾಕೆ ಬದಲಾವಣೆ ಎಂದು ಕೇಳುತ್ತಾರೆ. ಸಮಯ ಪ್ರಜ್ಞೆ, ಜ್ಞಾಪಕಶಕ್ತಿ, ಶ್ರದ್ಧೆ ಹಾಗೂ ಎಲ್ಲರಿಗೂ ಗೌರವ ಕೊಡುವ ಗುಣ ಅವರದ್ದು" ಎಂದಿದ್ದಾರೆ.
ಶಿವಣ್ಣ ಅಂದ್ರೆ ಯಾವುದೇ ಬಿಲ್ಡಪ್ ಇರಲ್ಲ. ಶೂಟಿಂಗ್ ವೇಳೆ ಎಲ್ಲರ ಜೊತೆ ಬೆರೆಯುತ್ತಾರೆ. ಹೀರೊ ಎಂದು ಬಿಲ್ಡಪ್ ತಗೊಳ್ಳಲ್ಲ. ಗೆಲವು, ಸೋಲು ನಿರ್ಮಾಪಕರು, ನಿರ್ದೇಶಕರಿಗೆ ಬಿಟ್ಟಿದ್ದು. ಅವರಿಬ್ಬರು ಬಯಸಿದಂತೆ ಸಿನಿಮಾ ಬರಬೇಕು ಅಂತಾರೆ. ಕಥೆಯಲ್ಲಿ ತಲೆ ಹಾಕುವುದಿಲ್ಲ. ಇದು ಕೂಡ ಒಳ್ಳೆ ಗುಣ. ಸಾಂಗ್ ರೆಕಾರ್ಡಿಂಗ್ ಮಾಡುವಾಗ ಜೊತೆಗಿದ್ದು ಬೆಂಬಲ ಸೂಚಿಸುತ್ತಾರೆ. ಸಿನಿಮಾ ಪ್ರಚಾರಕ್ಕೆ ಜೊತೆಯಾಗಿ ನಿಲ್ಲುತ್ತಾರೆ. ಮೊದಲ ದಿನ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಸಂಭ್ರಮಿಸುತ್ತಾರೆ. ನಾನು ಅಣ್ಣಾವ್ರ ಜೊತೆ ಕೆಲಸ ಮಾಡಲಿಲ್ಲ, ಶಿವಣ್ಣನನ್ನು ನೋಡಿದ್ರೆ, ಅಣ್ಣಾವ್ರು ಹೀಗೆ ಇದ್ರು ಅನ್ನಿಸುತ್ತೆ ಎಂದು ನಿರ್ದೇಶಕ ಸಾಯಿಪ್ರಕಾಶ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
'ತವರಿಗೆ ಬಾ ತಂಗಿ' ಚಿತ್ರದಿಂದ ಶಿವಣ್ಣನಿಗೆ ಅಣ್ಣನ ಪಟ್ಟ ಸಿಕ್ತು. ಅಣ್ಣ- ತಂಗಿ ಆಗಿ ರಾಧಿಕಾ ಕುಮಾರಸ್ವಾಮಿ ಹಾಗೂ ಶಿವಣ್ಣ ಕೆಮೆಸ್ಟ್ರಿ ಚೆನ್ನಾಗಿ ವರ್ಕ್ ಆಯಿತು. ಸಹ ಕಲಾವಿದರ ಜೊತೆ ಬೆರೆತು ಸನ್ನಿವೇಶಗಳಲ್ಲಿ ನಟಿಸುತ್ತಾರೆ. ತನ್ನ ಡೈಲಾಗ್ ಹೇಳಿ ಹೋದರೆ ಸಾಕು ಎನ್ನುವವರಲ್ಲ. "ಅಣ್ಣ- ತಂಗಿ' ಚಿತ್ರದಲ್ಲಿ ಹುತ್ತವನ್ನು ಒಡೆಯುವ ಸನ್ನಿವೇಶ ಇದೆ. ಬೇರೆ ಕಲಾವಿದರು ಅದನ್ನು ಮಾಡಲು ಒಪ್ಪಲ್ಲ. ದೇವರಿಗೆ ಅಪಚಾರ ಎಂದು ಅಂದುಕೊಳ್ಳುತ್ತಾರೆ. ಕೆಲವರು ಇದೇ ಮಾತನ್ನು ಶಿವಣ್ಣಗೆ ಹೇಳಿದ್ರು. ಆಗ ಶಿವಣ್ಣ 'ಇದು ಆಕ್ಟಿಂಗ್. ದೇವರು ಏನು ಮಾಡಲ್ಲ ಎಂದುಕೊಂಡು ನಾನು ಮಾಡ್ತೀನಿ, ಸುಮ್ಮನಿರಿ' ಎಂದು ಹೇಳಿ ಆ ದೃಶ್ಯದಲ್ಲಿ ನಟಿಸಿದ್ದರು. ಕ್ಲೈಮ್ಯಾಕ್ಸ್‌ನಲ್ಲಿ ಅವರ ನಟನೆ ನೋಡಿ ನಾವು ಭಾವುಕರಾಗಿದ್ದೆವು" ಎಂದು ಸಾಯಿ ಪ್ರಕಾಶ್ ಮೆಲುಕು ಹಾಕಿದ್ದಾರೆ.

ಡ್ಯಾನ್ಸರ್ ಆಗಿ ಕೊರಿಯೋಗ್ರಫರ್ ಆಗಿ ಬಳಿಕ ನಿರ್ದೇಶಕರಾಗಿ ಗೆದ್ದವರು ಎ. ಹರ್ಷ. ಶಿವಣ್ಣ ಸಾಕಷ್ಟು ಸಿನಿಮಾಗಳಿಗೆ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ. 'ಡಾನ್' ಚಿತ್ರದಲ್ಲಿ ಶಿವಣ್ಣನ ಹಿಂದೆ ಡ್ಯಾನ್ಸರ್ ಆಗಿ ಹೆಜ್ಜೆ ಹಾಕಿದ್ದರು. ಬಳಿಕ ಶಿವಣ್ಣ ನಟಿಸಿದ 4 ಸಿನಿಮಾಗಳಿಗೆ ಆಕ್ಷನ್ ಕಟ್ ಕೇಳಿದ್ದಾರೆ.
ಎ. ಹರ್ಷ ಮಾತನಾಡಿ "ನಾನು 'ಇನ್ಸ್‌ಪೆಕ್ಟರ್ ವಿಕ್ರಂ' ಸಿನಿಮಾ ಸಮಯದಿಂದ ಶಿವಣ್ಣನ ಅಭಿಮಾನಿ. ಚಿಕ್ಕಂದಿನಲ್ಲೇ ಆ ಸಿನಿಮಾ ನೋಡಿ ಖುಷಿಪಟ್ಟಿದ್ದರೆ. ಸಾಕಷ್ಟು ಕಾರ್ಯಕ್ರಮಗಳಲ್ಲಿ ಅವರಿಗೆ ಕೊರಿಯೋಗ್ರಫಿ ಮಾಡುವ ಅವಕಾಶ ಸಿಕ್ಕಿತ್ತು. ಬಳಿಕ ಅವರಿಗೆ ಸಿನಿಮಾ ಹಾಡುಗಳಿಗೆ ಕೊರಿಯೋಗ್ರಫಿ ಮಾಡಿದ್ದೆ. 'ಡಾನ್' ಚಿತ್ರದಲ್ಲಿ ಅವರೊಟ್ಟಿಗೆ ಹೆಜ್ಜೆ ಹಾಕಿದ್ದೆ. ಅದೇ ಒಡನಾಟದಿಂದ 'ಭಜರಂಗಿ' ಚಿತ್ರ ನಿರ್ದೇಶನ ಮಾಡುವ ಅವಕಾಶ ಸಿಕ್ಕಿತ್ತು ಎಂದು ಎ. ಹರ್ಷ ನೆನಪಿಸಿಕೊಂಡಿದ್ದಾರೆ.
"ಒಬ್ಬ ಅಭಿಮಾನಿಯಾಗಿದ್ದ ನಾನು ಅವರನ್ನು ನಿರ್ದೇಶನ ಮಾಡುವ ಮಟ್ಟಕ್ಕೆ ಬೆಳೆದೆ. 'ಭಜರಂಗಿ' ಬಳಿಕ 'ವಜ್ರಕಾಯ', 'ಭಜರಂಗಿ'-2 ಬಳಿಕ 'ವೇದ' ಸಿನಿಮಾ ಮಾಡಿದೆ. ತಮ್ಮ ಬ್ಯಾನರ್ ಮೊದಲ ಚಿತ್ರಕ್ಕೆ ನನ್ನನ್ನೇ ಕರೆದು ಅವಕಾಶ ಕೊಟ್ಟರು. ಅದು ಬಹಳ ಖುಷಿ ಆಯಿತು. ಶಿವಣ್ಣನ ಸಿಂಪ್ಲಿಸಿಟಿಯೇ ಅವರನ್ನು ಇಷ್ಟು ವರ್ಷ ಯಶಸ್ವಿಯಾಗಿ ಚಿತ್ರರಂಗದಲ್ಲಿ ಉಳಿಯುವಂತೆ ಮಾಡಿದೆ. ಅವ್ರ ಕೋಪ ಬಹಳ ಹೊತ್ತು ಇರಲ್ಲ. ಬಹಳ ಬೇಗ ಕ್ಷಮಿಸಿಬಿಡ್ತಾರೆ. ನನ್ನ ಪ್ರಕಾರ ಅವ್ರಿಗೆ ಸಿನಿಮಾ ಬಿಟ್ಟರೆ ಬೇರೇನು ಗೊತ್ತಿಲ್ಲ" ಎಂದು ಹರ್ಷ ಬಣ್ಣಿಸಿದ್ದಾರೆ.
ಸಮಯಕ್ಕೆ ಸರಿಯಾಗಿ ಶಿವಣ್ಣ ಚಿತ್ರೀಕರಣಕ್ಕೆ ಬರ್ತಾರೆ. ಚಿತ್ರೀಕರಣಕ್ಕೆ ಎಂದೂ ತೊಂದರೆ ಮಾಡುವುದಿಲ್ಲ ಎಂದು ನಿರ್ದೇಶಕರು ಹೇಳುತ್ತಾರೆ. ಇದೇ ಮಾತನ್ನು ನಿರ್ದೇಶಕ ಹರ್ಷ ಸಹ ಹೇಳಿದ್ದಾರೆ. "ಶಿವಣ್ಣನಿಂದ ಚಿತ್ರೀಕರಣ ತಡವಾಯಿತು ಎನ್ನುವ ಮಾತೇ ಬಂದಿಲ್ಲ. ಅವ್ರು ಸಿನಿಮಾಗಾಗಿ ಹುಟ್ಟಿರುವವರು. ಸಿನಿಮಾಗಾಗಿ ದೇವರು ಅವ್ರನ್ನು ಸೃಷ್ಟಿ ಮಾಡಿರುವುದು. ಎಷ್ಟೇ ಆರೋಗ್ಯ ಸಮಸ್ಯೆ ಆಗಿದ್ದರೂ ಅವ್ರು ಬಿಡಲಿಲ್ಲ, ನಮ್ಮ ಸಿನ್ಮಾನ ವೇಳೆ ಕೈಗೆ ಸರ್ಜರಿ ಆಗಿತ್ತು. ಬ್ರೇನ್ ಸರ್ಜರಿ, ಕ್ಯಾನ್ಸರ್ ಗೆದ್ದು ಬಂದಿದ್ದಾರೆ. ಅವ್ರು ಇರುವುದೇ ಸಿನಿಮಾಗಾಗಿ. ಈ ಭಾಗ್ಯ ಎಲ್ಲರಿಗೂ ಸಿಗಲ್ಲ, ಅವ್ರು ಅದೃಷ್ಟವಂತ. ಅವ್ರು ಮತ್ತಷ್ಟು ವರ್ಷ ಚಿತ್ರರಂಗದಲ್ಲಿ ಇರಲಿ, ಅವರ ಎನರ್ಜಿ ಮೇಲೆ ಎಲ್ಲರಿಗೂ ಕಣ್ಣು. ಅದು ಕುಗ್ಗದಿರಲಿ" ಎಂದು ಎ. ಹರ್ಷ ಹಾರೈಸಿದ್ದಾರೆ.


Click it and Unblock the Notifications











