HHB-2: 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ- 2': ನಾನು ಸೀನಿಯರ್ ಪಾತ್ರದಲ್ಲಿ ನಟಿಸೋಕೆ ಸಿದ್ಧ"- ಶಿವಣ್ಣ
ಹೊಸ ಪ್ರತಿಭೆಗಳ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಈ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿಸಿದ್ದು ಗೊತ್ತೇಯಿದೆ. ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ಈ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಗುವಂತೆ ನಗಿಸಿತ್ತು. ಭರ್ಜರಿ ಮನರಂಜನರ ಉಣಬಡಿಸಿ ಸಕ್ಸಸ್ ಕಂಡಿತ್ತು.
ವರುಣ್ ಸ್ಟುಡಿಯೋಸ್ ಹಾಗೂ ಗುಲ್‌ಮೊಹರ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಿತ್ತು. ಕನ್ನಡ ಬಳಿಕ ತೆಲುಗಿಗೂ ಡಬ್ ಆಗಿ ರಿಲೀಸ್ ಆಗಿತ್ತು. ಹೊಸಬರ ಪ್ರಯತ್ನಕ್ಕೆ ಕನ್ನಡ ಚಿತ್ರರಂಗದ ಸ್ಟಾರ್ ನಟರು ಬೆಂಬಲವಾಗಿ ನಿಂತಿದ್ದರು. ದಿವಂಗತ ನಟ ಪುನೀತ್ ರಾಜ್‌ಕುಮಾರ್ ಚಿತ್ರದ ಟೈಟಲ್ ಲಾಂಚ್ ಮಾಡಿ ಶುಭ ಕೋರಿದ್ದರು. ನಟಿ ರಮ್ಯಾ, ರಿಷಬ್ ಶೆಟ್ಟಿ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ರಕ್ಷಿತ್ ಶೆಟ್ಟಿ ಸಿನಿಮಾ ಅರ್ಪಿಸಿದರೆ ಶಿವಣ್ಣ ಸಿನಿಮಾ ನೋಡಿ ತಂಡದ ಬೆನ್ನು ತಟ್ಟಿದ್ದರು.

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಭರ್ಜರಿ ಗೆಲುವಿನ ಸಂಭ್ರಮಾಚರಣೆ ನಡೆಯುತ್ತಲೇ ಇದೆ. ಚಿತ್ರ 50 ದಿನ ಪೂರೈಸಿದಾಗ ಸಂತೋಷ್ ಥಿಯೇಟರ್ ಮುಂದೆ ಚಿತ್ರತಂಡ ಕೇಕ್ ಕತ್ತರಿಸಿ ಸಂಭ್ರಮಿಸಿತ್ತು. ಇದೀಗ ಮತ್ತೊಮ್ಮೆ ಚಿತ್ರದ ಸಕ್ಸಸ್ ಈವೆಂಟ್ ಮಾಡಿ ಖುಷಿಪಟ್ಟಿದೆ. ಈ ಕಾರ್ಯಕ್ರಮಕ್ಕೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ವಸಿಷ್ಠ ಸಿಂಹ ಸೇರಿದಂತೆ ಹಲವರು ಹಾಜರಾಗಿದ್ದರು. ಹೊಸತಂಡದ ಸಕ್ಸಸ್ ಸಂಭ್ರಮದಲ್ಲಿ ಭಾಗಿ ಆಗಿದ್ದರು.
ನಗರದ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಬಹಳ ಅದ್ಧೂರಿಯಾಗಿ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಸಕ್ಸಸ್ ಸಂಭ್ರಮಾಚರಣೆ ನಡೀತು. ವೇದಿಕೆ ಏರಿ ಮಾತನಾಡಿದ ಶಿವಣ್ಣ ಸಿನಿಮಾ ಸೀಕ್ವೆಲ್‌ನಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ. ವೇದಿಕೆ ಏರುತ್ತಿದ್ದಂತೆ OG ಎಂದು ಕೂಗು ಜೋರಾಗಿತ್ತು. ಶಿವಣ್ಣ ನಾನು ಗ್ಯಾಂಗ್‌ಸ್ಟರ್ ಅಲ್ಲ. ಒಳ್ಳೆ ಮನುಷ್ಯ. ನನ್ನ ಕೈಗೆ ಲಾಂಗು ಬರುತ್ತೆ. ತಂಗಿ ಕೈ ಹಿಡಿದು ಓಡಾಡುತ್ತೀನಿ ಎಂದು ಶಿವಣ್ಣ ಹೇಳಿದ್ದಾರೆ.
"ನನಗೆ ಹಾಸ್ಟೆಲ್ ಜೀವನ ಗೊತ್ತಿಲ್ಲ. ಇಂದಿರಾಗಾಂಧಿ ನಿಧನರಾದ ಸಮಯದಲ್ಲಿ ಒಂದೆರಡು ದಿನ ಹಾಸ್ಟೆಲ್‌ನಲ್ಲಿ ಇರುವಂತಾಯಿತು. ಅದು ಬಿಟ್ಟರೆ ನನ್ನನ್ನು ಹಾಸ್ಟೆಲ್‌ಗೆ ಸೇರಿಸಲಿಲ್ಲ. ಸ್ಕೂಲ್ ದಿನಗಳಿಂದಲೂ ನಾನು ಬಹಳ ನಾಟಿ ಆಗಿದ್ದೆ. ಹಾಸ್ಟೆಲ್‌ಗೆ ಹೋದರೆ ಅಷ್ಟೇ ಕತೆ ಅಂತ ಮನೆಯಲ್ಲಿ ಒಪ್ಪಲಿಲ್ಲ. 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಪಾರ್ಟ್-2ಗೆ ನಾನು ಕಾಯ್ತಿದ್ದೀನಿ. ಸಿನ್ಮಾದಲ್ಲಿ ರಮ್ಯಾ ಇದ್ದರು. ಸೆಕೆಂಡ್ ಪಾರ್ಟ್‌ನಲ್ಲಿ ಸೀನಿಯರ್ ಕ್ಯಾರೆಕ್ಟರ್ ಬಂದರೆ ಪ್ರೊಫೆಸರ್ ತರ ನಾನು ಮಾಡೋಕೆ ಸಿದ್ಧ" ಎಂದಿದ್ದಾರೆ.
ಜುಲೈ 21ರಂದು ಬಿಡುಗಡೆಯಾಗಿದ್ದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ನೋಡ ನೋಡುತ್ತಲೇ ಸಿನಿರಸಿಕರ ಮನಗೆದ್ದಿದ್ದರು. ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಕ್ಕು ಖುಷಿಪಟ್ಟರು. ಸಿನಿಮಾ 15 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸದ್ದು ಮಾಡಿತ್ತು. ತುಂಗಾ ಹಾಸ್ಟೆಲ್‌ನಲ್ಲಿ ಒಂದು ರಾತ್ರಿಯಲ್ಲಿ ನಡೆಯುವ ಕತೆ ಸಖತ್ ಮಜವಾಗಿತ್ತು.
ಹಾಸ್ಟೆಲ್‌ನಲ್ಲಿ ದಿಢೀರನೆ ವಾರ್ಡನ್ ಸತ್ತು ಹೋದಂತೆ ಸನ್ನಿವೇಶ ನಿರ್ಮಾಣವಾಗುತ್ತದೆ. ವಾರ್ಡನ್ ಶವವನ್ನು ಹೊರಗೆ ಸಾಗಿಸಲು ಹಾಸ್ಟೆಲ್ ಹುಡುಗರು ಮಾಡುವ ಪ್ರಯತ್ನಗಳನ್ನೇ ಬಹಳ ತಮಾಷೆಯಾಗಿ ಚಿತ್ರದಲ್ಲಿ ಕಟ್ಟಿಕೊಡಲಾಗಿತ್ತು. ವಾರ್ಡನ್ ಸತ್ತಿದ್ದು ನಿಜಾನಾ? ಮುಂದೇನು ಆಗುತ್ತದೆ? ಎನ್ನುವ ಅಂಶಗಳು ಪ್ರೇಕ್ಷಕರಿಗೆ ಬಹಳ ಇಷ್ಟವಾಗಿತ್ತು. ಸಿನಿಮಾ ನೋಡಿದ ಹಲವರು ಸೀಕ್ವೆಲ್ ಬರಬೇಕು ಎಂದಿದ್ದರು.
ಸೀಕ್ವೆಲ್‌ಗೆ ಬೇಕಾದ ಸಾಕಷ್ಟು ವಿಚಾರಗಳನ್ನು ಮೊದಲ ಭಾಗದಲ್ಲಿ ಸೇರಿಸಲಾಗಿತ್ತು. ಅದನ್ನೆಲ್ಲಾ ಸೇರಿಸಿ ಹೊಸ ಸಿನಿಮಾ ಮಾಡಿದ್ದರೆ ಚೆನ್ನಾಗಿರುತ್ತದೆ ಎನ್ನುವ ಚರ್ಚೆ ನಡೀತಿದೆ. ನಿತಿನ್ ಕೃಷ್ಣಮೂರ್ತಿ ಅಂಡ್ ಟೀಮ್ ಇದೀಗ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ'-2 ಕತೆ ಕಟ್ಟಿಕೊಡುವ ಹುಮ್ಮಸ್ಸಿನಲ್ಲಿದೆ.


Click it and Unblock the Notifications











