"ನಾವ್ ಏನ್ ಮಾಡ್ತೀವಿ ಅದು ಸರೀನಾ ಅಂತ ನಾವು ಯೋಚಿಸ್ಬೇಕು"; ಶಿವಣ್ಣ
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ವಿಚಾರಣಾಧೀನ ಕೈದಿಯಾಗಿ ಜೈಲು ಸೇರಿದ್ದಾರೆ. ಈ ಬಗ್ಗೆ ಈಗಾಗಲೇ ಕನ್ನಡ ಚಿತ್ರರಂಗದ ತಾರೆಯರೆಲ್ಲಾ ಒಬ್ಬೊಬ್ಬರಾಗಿ ಮಾತನಾಡುತ್ತಿದ್ದಾರೆ. ಇದೀಗ ನಟ ಶಿವರಾಜ್‌ಕುಮಾರ್ ಸಹ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ನಿರ್ಮಾಪಕರ ಸಂಘದ ಹೊಸ ಕಟ್ಟಡದ ಉದ್ಘಾಟನೆ ಕಾರ್ಯಕ್ರಮಕ್ಕೆ ಶಿವರಾಜ್‌ಕುಮಾರ್ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡುವಾಗ ರೇಣುಕಾಸ್ವಾಮಿ ಪ್ರಕರಣದ ವಿಚಾರದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದರು. ಪೊಲೀಸರ ತನಿಖೆ ನಡೆಯುತ್ತಿದೆ. ಏನಾಗುತ್ತದೋ ನೋಡೋಣ ಎಂದಿದ್ದಾರೆ.

"ಈ ರೀತಿ ಆಗುತ್ತದೆ. ಏನೂ ಮಾಡೋಕೆ ಆಗಲ್ಲ. ಹಣೆಬರಹ. ಏನೇ ಮಾಡಿದರೂ ನಾವು ಮಾಡಿದ್ದು ಸರೀನಾ ಎಂದು ನಾವು ಯೋಚನೆ ಮಾಡಬೇಕು. ನೋವಾಗುತ್ತೆ. ಯಾಕಪ್ಪ ಹಿಂಗಾಯ್ತು ಅಂತ ಬೇಸರ ಆಗುತ್ತದೆ. ರೇಣುಕಾ ಸ್ವಾಮಿ ಕುಟುಂಬಕ್ಕೆ, ದರ್ಶನ್ ಅವರ ಕುಟುಂಬಕ್ಕೆ ನೋವಾಗುತ್ತದೆ. ದರ್ಶನ್ ಮಗನ ಬಗ್ಗೆ ಬೇಸರ ಆಗುತ್ತೆ. ನಾವು ಎಲ್ಲವನ್ನು ಎದುರಿಸಬೇಕು. ಇದು ಜೀವನದ ಒಂದು ಘಟ್ಟ"
"ಈಗಾಗಲೇ ತನಿಖೆ ನಡೆದಾಗಿದೆ. ಏನಾಗುತ್ತದೋ ನೋಡೋಣ. ಏನಾಗಬೇಕೋ ಅದೇ ಆಗುತ್ತದೆ. ನ್ಯಾಯ ಏನಿದೆಯೋ ಅದೇ ಆಗುತ್ತದೆ. ಇದರ ಮೇಲೆ ಇನ್ನೇನೂ ಹೇಳಲು ನಾನು ಇಷ್ಟಪಡಲ್ಲ. ಎಲ್ಲವೂ ಹಣೆಬರಹ" ಎಂದು ಶಿವಣ್ಣ ವಿಶ್ಲೇಷಿಸಿದ್ದಾರೆ.
ಜೂನ್ 8ರಂದು ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ದರ್ಶನ್ ಆಪ್ತರು ಪುಸಲಾಯಿಸಿ ಬೆಂಗಳೂರಿಗೆ ಕರೆ ತಂದಿದ್ದರು. ಪಟ್ಟಣಗೆರೆ ಬಳಿಯ ಶೆಡ್‌ವೊಂದರಲ್ಲಿ ಆತನ್ನು ಕೂಡಿ ಹಾಕಿ ಥಳಿಸಲಾಗಿತ್ತು. ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದಾನೆ ಎಂದು ಆತನನ್ನು ಅಪಹರಿಸಿ ಥಳಿಸಲಾಗಿತ್ತು. ಈ ವೇಳೆ ಆತನ ಪ್ರಾಣವೇ ಹೋಗಿದ್ದು ದರ್ಶನ್ ಮತ್ತವರ ಗ್ಯಾಂಗ್ ಸಂಕಷ್ಟಕ್ಕೆ ಸಿಲುಕಿದೆ.
ಈಗಾಗಲೇ ಕಿಚ್ಚ ಸುದೀಪ್, ಉಪೇಂದ್ರ, ಶ್ರುತಿ, ಜಗ್ಗೇಶ್, ರಮ್ಯಾ, ರಚಿತಾ ರಾಮ್ ಸೇರಿದಂತೆ ಹಲವರು ಈ ಬಗ್ಗೆ ಪ್ರತಿಕ್ರಿಸಿದ್ದಾರೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ. ಕೆಲವರು ದರ್ಶನ್ ಪರ ಮಾತನಾಡುತ್ತಿದ್ದಾರೆ. ಕೆಲ ಅಭಿಮಾನಿಗಳು ಬೆಂಬಲಿಸುತ್ತಿದ್ದಾರೆ. ಸದ್ಯ 12 ದಿನಗಳ ಕಾಲ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ಭೇಟಿ ಮಾಡಿ ಬಂದಿದ್ದಾರೆ. ವಿನೋದ್ ಪ್ರಭಾಕರ್ ಹಾಗೂ ರಕ್ಷಿತಾ-ಪ್ರೇಮ್ ದಂಪತಿ ಕೂಡ ಭೇಟಿ ಮಾಡಿದ್ದಾರೆ. ಮತ್ತೊಂದು ಕಡೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ನಟ ದರ್ಶನ್ ಒಂದಷ್ಟು ಸಿನಿಮಾಗಳಲ್ಲಿ ನಟಿಸೋಕೆ ಅಡ್ವಾನ್ಸ್ ಪಡೆದಿದ್ದಾರೆ. ಆ ನಿರ್ಮಾಪರಿಗೆ ಆತಂಕ ಶುರುವಾಗಿದೆ.


Click it and Unblock the Notifications











