ಗುಳ್ಳೆ ನರಿ ಬುದ್ದಿಯ 'ಕರಟಕ ದಮನಕ' ಕಥೆ ಹೇಳಿ ಎಚ್ಚರಿಕೆ ಕೊಟ್ಟಿದ್ಯಾಕೆ ಭಟ್ರು?
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ಪ್ರಭುದೇವ ನಟನೆಯ 'ಕರಟಕ ದಮನಕ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ರಾಕ್‌ಲೈನ್ ಎಂಟರ್ಟೈನ್ಮೆಂಟ್ ಬ್ಯಾನರ್‌ನಲ್ಲಿ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರಕ್ಕೆ ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬರೀ ಟೈಟಲ್‌ನಿಂದಲೇ ಈ ಮಲ್ಟಿಸ್ಟಾರರ್ ಸಿನಿಮಾ ಬಹಳ ಕುತೂಹಲ ಮೂಡಿಸಿದೆ.
"ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ ಹೆಸರು "ಕರಟಕ" ಇನ್ನೊಂದರ ಹೆಸರು "ದಮನಕ". ಈ ಎರಡೂ ನರಿಗಳು ಕಾಡು ಮತ್ತು ನಾಡಿನ ತಲೆ ಕೆಡಿಸಿ ಇತಿಹಾಸವಾದವು.
ಆ ಕುತಂತ್ರಿ ನರಿಗಳು ಇಂದು ಇಲ್ಲಿ ಮಾನವ ರೂಪ ತಾಳಿವೆ. ಎಚ್ಚರಿಕೆ" ಎನ್ನುವ ಸಾಲುಗಳು ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ನಿರ್ದೇಶಕರಾದ ಯೋಗರಾಜ್ ಭಟ್ ಮಾತನಾಡಿ ಸಿನಿಮಾ ಕಾನ್ಸೆಪ್ಟ್ ಹಾಗೂ ಈ ಟೈಟಲ್ ಯಾಕೆ ಎನ್ನುವ ಮಾಹಿತಿ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಶಿವಣ್ಣ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಆದರೆ 2 ದಿನಗಳ ಬಳಿಕ 'ಕರಟಕ ದಮನಕ' ಪೋಸ್ಟರ್ ರಿಲೀಸ್ ಆಗಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಗೌರಿಬಿದನೂರು ಹಾಗೂ ಉತ್ತರ ಕರ್ನಾಟಕದಲ್ಲಿ ಈಗಾಗಲೇ ಸಾಕಷ್ಟು ಚಿತ್ರೀಕರಣ ನಡೆದಿದೆ. ಸಾಕಷ್ಟು ಸಿನಿಮಾಗಳಲ್ಲಿ ಶಿವಣ್ಣ ಬ್ಯುಸಿಯಾಗಿದ್ದಾರೆ. ಆದರೆ ಯೋಗರಾಜ್ ಭಟ್ ನಿರ್ದೇಶನ, ಪ್ರಭುದೇವ ಕಾಂಬಿನೇಷನ್ ಎನ್ನುವ ಕಾರಣಕ್ಕೆ ಈ ಸಿನಿಮಾ ಬಹಳ ನಿರೀಕ್ಷೆ ಮೂಡಿಸಿರುವುದು ಸುಳ್ಳಲ್ಲ. ಬಹಳ ದಿನಗಳ ನಂತರ ಪ್ರಭುದೇವ ಕನ್ನಡ ಚಿತ್ರದಲ್ಲಿ ನಟಿಸ್ತಿದ್ದಾರೆ.
ಇನ್ನು ಚಿತ್ರದಲ್ಲಿ ಶಿವರಾಜಕುಮಾರ್, ಪ್ರಭುದೇವ ಜೊತೆಗೆ ರವಿಶಂಕರ್, ತನಿಕೆಲ್ಲ ಭರಣಿ, ರಂಗಾಯಣ ರಘು, ಪ್ರಿಯಾ ಆನಂದ್, ನಿಶ್ವಿಕಾ ನಾಯ್ಡು ಸೇರಿದಂತೆ ದೊಡ್ಡ ತಾರಾಗಣವಿದೆ. ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆಯಿದೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ.
ನಿರ್ದೇಶಕ ಯೋಗರಾಜ್ ಭಟ್ ಹಾಗೂ ರವಿ ಈ ಚಿತ್ರಕ್ಕೆ ಕಥೆ ರಚಿಸಿದ್ದು, ಚಿತ್ರಕಥೆಯನ್ನು ಯೋಗರಾಜ್ ಭಟ್, ರವಿ ಹಾಗೂ ಸುಬ್ರಹ್ಮಣ್ಯ ಬರೆದಿದ್ದಾರೆ. ಭಟ್ರ 'ಗರಡಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇನ್ನು 'ಕರಟಕ ದಮನಕ' ಸಿನಿಮಾ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ ಎಂದು ಯೋಗರಾಜ್ ಭಟ್ ಹೇಳಿದ್ದಾರೆ. ಈ ಸುದ್ದಿ ಕೇಳಿ ಈ ವರ್ಷವೇ ಶಿವಣ್ಣನ ಮತ್ತೊಂದು ಸಿನಿಮಾ ರಿಲೀಸ್ ಆಗುತ್ತದೆ ಎಂದು ಅಭಿಮಾನಿಗಳು ಖುಷಿಯಾಗಿದ್ದಾರೆ.

ಕಳೆದ ವರ್ಷ 'ವೇದ' ಸಿನಿಮಾ ಮೂಲಕ ಶಿವಣ್ಣ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ವರ್ಷ 'ಕಬ್ಜ' ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿ ಪ್ರೇಕ್ಷಕರಿಗೆ ಥ್ರಿಲ್ ಕೊಟ್ಟಿದ್ದರು. ಸದ್ಯ ಶ್ರೀನಿ ನಿರ್ದೇಶನದ 'ಘೋಸ್ಟ್' ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಶಿವಣ್ಣನ ಹುಟ್ಟುಹಬ್ಬಕ್ಕೆ ಟೀಸರ್ ರಿಲೀಸ್ ಆಗಿತ್ತು. 'ಘೋಸ್ಟ್' ನಂತರ ಸೆಂಚುರಿ ಸ್ಟಾರ್ ಸಿನಿಮಾಗಳ ರಿಲೀಸ್ ಸಾಲಿನಲ್ಲಿ 'ಕರಟಕ ದಮನಕ' ನಿಲ್ಲಲಿದೆ.
ಇನ್ನುಳಿದಂತೆ ಅರ್ಜುನ್ ಜನ್ಯಾ ನಿರ್ದೇಶನದ '45', 'ಸತ್ಯಮಂಗಲ', 'ಬೈರತಿ ರಣಗಲ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ 'ಕ್ಯಾಪ್ಟನ್ ಮಿಲ್ಲರ್' ಧನುಷ್ ಜೊತೆ ಅದೇ ರೀತಿ 'ಜೈಲರ್' ರಜನಿಕಾಂತ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇನ್ನು ಸೂರಿ ಸೈ ಅಂದ್ರೆ 'ಟಗರು' ಚಿತ್ರದಲ್ಲಿ ನಟಿಸೋಕು ಸಿದ್ಧ ಎಂದು ಶಿವಣ್ಣ ಹೇಳಿದ್ದಾರೆ.


Click it and Unblock the Notifications











