Karataka Damanaka Trailer: ಊರು, ನೀರು, ತೇರು; 'ಕರಟಕ ದಮನಕ' ಹಾವಳಿ ಜೋರು
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ಡ್ಯಾನ್ಸ್ ಕಿಂಗ್ ಪ್ರಭುದೇವ ನಟನೆಯ 'ಕರಟಕ ದಮನಕ' ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಯೋಗರಾಜ್ ಭಟ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ತೆರೆಗಪ್ಪಳಿಸಲು ಕೆಲವೇ ಗಂಟೆಗಳು ಬಾಕಿಯಿದೆ. ಶಿವರಾತ್ರಿ ಸಂಭ್ರಮದಲ್ಲಿ ಈ ವಾರವೇ ಸಿನಿಮಾ ಬಿಡುಗಡೆ ಆಗ್ತಿದೆ.
ಈಗಾಗಲೇ ಟೀಸರ್, ಸಾಂಗ್ಸ್‌ನಿಂದ ಕುತೂಹಲ ಕೆರಳಿಸಿದ್ದ 'ಕರಟಕ ದಮನಕ' ಚಿತ್ರದ ಟ್ರೈಲರ್ ಕೂಡ ಸಿನಿರಸಿಕರ ಗಮನ ಸೆಳೆದಿದೆ. ಶಿವಣ್ಣ ಹಾಗೂ ಪ್ರಭುದೇವಾಗೆ ಪ್ರಿಯಾ ಆನಂದ್ ಹಾಗೂ ನಿಶ್ವಿಕಾ ನಾಯ್ಡು ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ವಿ. ಹರಿಕೃಷ್ಣ ಮ್ಯೂಸಿಕ್, ಸಂತೋಷ್ ರೈ ಪಾತಾಜೆ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ಉತ್ತರ ಕರ್ನಾಟಕ ಭಾಗದ ಕಾಲ್ಪನಿಕ ಹಳ್ಳಿಯೊಂದರಲ್ಲಿ ಕಥೆಯನ್ನು ಕಟ್ಟಿ ಕೊಡುವ ಪ್ರಯತ್ನ ಮಾಡಿರುವಂತೆ ಕಾಣುತ್ತಿದೆ.

ನಂದಿಕೋಲೂರು ಎನ್ನುವ ಊರು. ನೀರಿಲ್ಲದೇ ಊರು ಬಿಟ್ಟು ಗುಳೆ ಹೊರಟ ಜನ. ಯಾರು ಇಲ್ಲದೇ ಅನಾಥವಾದ ಊರಿಗೆ ಕರಟಕ(ಶಿವರಾಜ್‌ಕುಮಾರ್), ದಮಕನ(ಪ್ರಭುದೇವ) ಪ್ರವೇಶವಾಗುತ್ತದೆ. ಮುಂದೆ ಏನಾಗುತ್ತದೆ? ಊರಿನ ಜಾತ್ರೆ ಮಾಡಬೇಕು ಅಂತ ಎಲ್ಲರೂ ಪ್ರಯತ್ನಿಸುವುದು ಯಾಕೆ? ಊರಿಗೆ ಕಂಟಕವಾದ ದುಷ್ಟರು ಯಾರು? ಕರಟಕ ದಮನಕ ಊರಿಗೆ ಬಂದು ನಾಟಕ ಮಾಡುವುದು ಯಾಕೆ? ಮುಂದೆ ಏನಾಗುತ್ತದೆ? ಅನ್ನೋದು ಸಿನಿಮಾ ಕಥೆ ಅನ್ನೋದು ಟ್ರೈಲರ್ ನೋಡಿದರೆ ಅರ್ಥವಾಗುತ್ತದೆ.
ಇಲ್ಲಿ ಊರು ಕೂಡ ಮಾತನಾಡುತ್ತದೆ. ತನ್ನ ಕಷ್ಟವನ್ನು ತಾನೇ ಹೇಳಿಕೊಳ್ಳುತ್ತದೆ. ಮನುಷ್ಯನ ದುರಾಸೆಗೆ ಮೂಖ ಪ್ರೇಕ್ಷಕನಾಗಿದೆ. ಅದು ಯಾಕೆ? ನಿರ್ದೇಶಕ ಯೋಗರಾಜ್ ಭಟ್ ಊರಿನ ಧ್ವನಿಯಾಗಿದ್ದಾರೆ(ವಾಯ್ಸ್). ಸಣ್ಣ ಪಾತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಪಂಚತಂತ್ರ ಕಥೆಯ ಕರಟಕ ಹಾಗೂ ದಮನಕ ಎನ್ನುವ ಕುತಂತ್ರ ನರಿಗಳ ಪಾತ್ರಗಳಿಂದ ಸ್ಫೂರ್ತಿ ಪಡೆದು ಈ ಸಿನಿಮಾ ಕಟ್ಟಿಕೊಡಲಾಗಿದೆ.
ಹಳ್ಳಿ ಜನರಿಗೆ ಕಂಟಕವಾದವರನ್ನು ಕರಟಕ ದಮನಕ ತಮ್ಮ ಕುತಂತ್ರದಿಂದ ಹೇಗೆ ಬಗ್ಗುಬಡಿಯುತ್ತಾರೆ? ಅವರಿಬ್ಬರಿಗೂ ನಂದಿ ಕೋಲೂರಿಗೂ ಏನು ಸಂಬಂಧ ಎನ್ನುವುದನ್ನು ತೆರೆಮೇಲೆ ನೋಡಬೇಕಿದೆ. ಸುಬ್ರಮಣ್ಯ, ವಿಕಾಸ್ ಹಾಗೂ ಯೋಗರಾಜ್ ಭಟ್ ಸೇರಿ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದುಕೊಂಡಿದ್ದಾರೆ.

ಬಿರಾದಾರ್, ತನಿಕೇಲ ಭರಣಿ, ರಂಗಾಯಣ ರಘು, ಆರ್ಮುಗ ರವಿಶಂಕರ್, ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಗೌರಿ ಬಿದನೂರು ಹಾಗೂ ರಾಮಚಂದ್ರಪುರದ ಸುತ್ತಾಮುತ್ತಾ 'ಕರಟಕ ದಮನಕ' ಸಿನಿಮಾ ಚಿತ್ರೀಕರಣ ನಡೆದಿದೆ. ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ.
ಭೂಷಣ್ ಮಾಸ್ಟರ್ ಚಿತ್ರದ ಹಾಡುಗಳಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಶಿವಣ್ಣ- ಪ್ರಭುದೇವ ಇಬ್ಬರು ಜೊತೆ ಜೊತೆಯಾಗಿ ಇಡೀ ಸಿನಿಮಾ ಕಾಣಿಸಿಕೊಳ್ಳಲಿದ್ದಾರೆ. ಇಬ್ಬರಿಗೂ ಸರಿಸಮನಾದ ಸ್ಕ್ರೀನ್ ಸ್ಪೇಸ್ ಸಿಕ್ಕಿರುವಂತೆ ಕಾಣುತ್ತಿದೆ. ಇಬ್ಬರೂ ಜಬರ್ದಸ್ತ್ ಆಕ್ಷನ್ ಸೀಕ್ವೆನ್ಸ್‌ನಲ್ಲಿ ಮಿಂಚಿದ್ದಾರೆ. ವಿಕ್ರಂ ಮೋರ್, ರಾಮಕೃಷ್ಣ ಹಾಗೂ ಅರ್ಜುನ್ ಸ್ಟಂಟ್ಸ್ ಕಂಪೋಸ್ ಮಾಡಿದ್ದಾರೆ. ರವಿಶಂಕರ್ ಹಾಗೂ ರಂಗಾಯಣ ರಘು ನೆಗೆಟಿವ್ ರೋಲ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಶಿವರಾತ್ರಿ ಸಂಭ್ರಮದಲ್ಲಿ ದೊಡ್ಡಮಟ್ಟದಲ್ಲೇ 'ಕರಟಕ ದಮನಕ' ಸಿನಿಮಾ ಬಿಡುಗಡೆ ಆಗುತ್ತಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಕೂಡ ಓಪನ್ ಆಗಿದೆ. ಆದರೆ ಟಿಕೆಟ್ ಬುಕ್ಕಿಂಗ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸದ್ಯ ಸಿನಿಮಾ ಟ್ರೈಲರ್ ಭರವಸೆ ಮೂಡಿಸಿದ್ದು ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಗುವ ನಿರೀಕ್ಷೆಯಿದೆ. ವೀಕೆಂಡ್ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ರಾಜ್ಯಾದ್ಯಂತ ದೊಡ್ಡಮಟ್ಟದಲ್ಲೇ 'ಕರಟಕ ದಮನಕ' ಸಿನಿಮಾ ತೆರೆಗಪ್ಪಳಿಸುತ್ತಿದೆ. ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ಬೆಳಂ ಬೆಳಗ್ಗೆ 6.30ಕ್ಕೆ ಮೊದಲ ಪ್ರದರ್ಶನ ಆರಂಭವಾಗಲಿದೆ.


Click it and Unblock the Notifications











