ಶಿವಣ್ಣನ ಕೈಲಿ ವೀರಪ್ಪನ್ ಹತ್ಯೆ ಮಾಡಿಸ್ತಾರೆ ವರ್ಮಾ.!
ಕಾಂಟ್ರವರ್ಶಿಯಲ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರಂತೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಸಿನಿಮಾ ಮಾಡ್ತಿದ್ದಾರಂತೆ. ಹೀಗಂತ ಕಳೆದ ಎರಡು ದಿನಗಳಿಂದ ಗಾಂಧಿನಗರದಲ್ಲಿ ಅಂತೆ-ಕಂತೆ ಸುದ್ದಿಗಳು ಹರಿದಾಡುತ್ತಿತ್ತು. ಆ ಅಂತೆ-ಕಂತೆ ಈಗ ನಿಜವಾಗಿದೆ.
ರಾಮ್ ಗೋಪಾಲ್ ವರ್ಮಾ ಸಾಹೇಬ್ರು ಶಿವರಾಜ್ ಕುಮಾರ್ ಗೆ ಆಕ್ಷನ್ ಕಟ್ ಹೇಳೋದು 200% ಕನ್ಫರ್ಮ್ ಆಗಿದೆ. ಈ ವಿಷಯವನ್ನ ಖುದ್ದು ರಾಮ್ ಗೋಪಾಲ್ ವರ್ಮಾ ಖಚಿತ ಪಡಿಸಿದ್ದಾರೆ. ಅಷ್ಟೇ ಅಲ್ಲದೇ, ಸಿನಿಮಾದ ಕುರಿತ ಇಂಟ್ರೆಸ್ಟಿಂಗ್ ಮಾಹಿತಿಯನ್ನ ಹೊರಹಾಕಿದ್ದಾರೆ.

ಶಿವಣ್ಣ-ವರ್ಮಾ ಕಾಂಬಿನೇಷನ್ ನಲ್ಲಿ ಸೆಟ್ಟೇರಲಿರುವ ಚಿತ್ರದ ಹೆಸರು 'ಕಿಲ್ಲಿಂಗ್ ವೀರಪ್ಪನ್'! ಹೌದು, ಕಾಡುಗಳ್ಳ, ನರಹಂತಕ, ದಂತಚೋರ ಅಂದೇ ಕುಖ್ಯಾತಿ ಗಳಿಸಿದ್ದ ವೀರಪ್ಪನ್ ಕುರಿತು ರಾಮ್ ಗೋಪಾಲ್ ವರ್ಮಾ ನಿರ್ದೇಶಿಸುತ್ತಿರುವ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾದಲ್ಲಿ ಶಿವರಾಜ್ ಕುಮಾರ್ ಹೀರೋ..!
ಮುಂಚಿನಿಂದಲೂ ವೀರಪನ್ ಬಗ್ಗೆ ಸಿನಿಮಾ ಮಾಡುವ ಹಂಬಲ ವರ್ಮಾಗೆ ಇತ್ತಾದರೂ, ಅವರಿಗೆ ಸೂಕ್ತ ಮಾಹಿತಿ ಲಭ್ಯವಾಗಿರಲಿಲ್ಲ. ಕಳೆದ ಹಲವು ವರ್ಷಗಳಿಂದ ಸುದೀರ್ಘ ರಿಸರ್ಚ್ ಮಾಡಿರುವ ಆರ್.ಜಿ.ವಿಗೆ ವೀರಪ್ಪನ್ ಕುರಿತಾದ ಕೆಲ ರಹಸ್ಯ ವಿಚಾರಗಳು ದೊರಕಿವೆ. ಅದನ್ನೇ ಇಟ್ಟುಕೊಂಡು ವರ್ಮಾ ಈಗಾಗಲೇ ಸ್ಕ್ರಿಪ್ಟ್ ಕೂಡ ರೆಡಿ ಮಾಡಿ 'ಕಿಲ್ಲಿಂಗ್ ವೀರಪ್ಪನ್' ಅಂತ ಟೈಟಲ್ ಫಿಕ್ಸ್ ಮಾಡಿದ್ದಾರೆ. [ರಾಮ್ ಗೋಪಾಲ್ ವರ್ಮಾ ನಿರ್ದೇಶನದಲ್ಲಿ ಶಿವಣ್ಣ]

ರಾಮ್ ಗೋಪಾಲ್ ವರ್ಮಾ ಪ್ರಕಾರ ವಿಶ್ವ ಕಂಡ ಅತ್ಯಂತ ನಟೋರಿಯಸ್ ಕ್ರಿಮಿನಲ್ ವೀರಪ್ಪನ್ ನ ಕೊಂದ ವ್ಯಕ್ತಿ ನಿಜವಾದ ಹೀರೋ. ಆ ಹೀರೋ ಕುರಿತ ಚಿತ್ರವೇ 'ಕಿಲ್ಲಿಂಗ್ ವೀರಪ್ಪನ್'. ಕಾಡುಗಳ್ಳ ವೀರಪ್ಪನ್ ಸಾವಿನ ಕುರಿತು ಈವರೆಗೂ ಯಾರೂ ಹೇಳಿರದ ನೈಜಕಥೆಯನ್ನ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಮೂಲಕ ವರ್ಮಾ ಬಹಿರಂಗ ಪಡಿಸಲಿದ್ದಾರೆ. [ಹನ್ನೆರಡು ವರ್ಷಗಳ ಹಿಂದೆ: ಈ ದಿನ ಕರಾಳ ದಿನ]
ಆನೆಗಳು, ಅನೇಕ ನಿಷ್ಠಾವಂತ ಪೊಲೀಸ್ ಅಧಿಕಾರಿಗಳು, 227ಕ್ಕೂ ಹೆಚ್ಚು ಅಮಾಯಕ ಜನರನ್ನ ಕೊಂದ ಪಾತಕಿ ವೀರಪ್ಪನ್. ಇಂಥ ಅಪಾಯಕಾರಿ ವ್ಯಕ್ತಿಯನ್ನ ಸೆರೆ ಹಿಡಿಯುವ ಉದ್ದೇಶಕ್ಕೆ ಮೂರು ರಾಜ್ಯ ಸರ್ಕಾರಗಳು ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿತ್ತು.

ದಂತಚೋರನ ಸೆರೆಹಿಡಿಯುವುದಕ್ಕೆ ಹದಿನೈದು ವರ್ಷಗಳ ಕಾಲ ಪೊಲೀಸರು, ದಟ್ಟವಾದ ಮತ್ತು ಬೃಹತ್ ಅರಣ್ಯದಲ್ಲಿ ವನವಾಸ ಪಡಬೇಕಾಯ್ತು. [ರಾಜಕುಮಾರ್ ಅಪಹರಣ ಕೇಸ್, ಪಾರ್ವತಮ್ಮ ಗೆ ಸಮನ್ಸ್]
ಇಷ್ಟೆಲ್ಲಾ ಹರಸಾಹಸದ ನಂತರ ವೀರಪನ್ ನ ಕೊಂದದ್ದು ಒಬ್ಬನೇ ಒಬ್ಬ ವ್ಯಕ್ತಿ. ಆ ವ್ಯಕ್ತಿಯ ಕುರಿತಾದ ಚಿತ್ರವೇ 'ಕಿಲ್ಲಿಂಗ್ ವೀರಪ್ಪನ್'. ವೀರಪ್ಪನ್ ಕೊಂದ ವ್ಯಕ್ತಿಯ ಪಾತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸಲಿದ್ದಾರೆ.

ಹಾಗ್ನೋಡಿದ್ರೆ, ಡಾ.ಶಿವರಾಜ್ ಕುಮಾರ್ ತಂದೆ ಡಾ.ರಾಜ್ ಕುಮಾರ್ ಅವರನ್ನ ವೀರಪ್ಪನ್ ಅಪಹರಿಸಿದ್ದರು. ನಿಜ ಜೀವನದಲ್ಲಿ ತಂದೆಯನ್ನ ಅಪಹರಿಸಿದವರ ವಿರುದ್ಧ ರೀಲ್ ಲೈಫ್ ನಲ್ಲಿ ರಿವೆಂಜ್ ತೀರಿಸುವ ಅಪರೂಪದ ಸಿನಿಮಾ ಈ 'ಕಿಲ್ಲಿಂಗ್ ವೀರಪ್ಪನ್'. [ರಾಜ್ ಬಿಡುಗಡೆಗೆ ಹಣ ಕೊಟ್ಟಿದ್ದ್ದು ನಿಜ: ಶಿವಣ್ಣ]
ಇದುವರೆಗೂ ಅದೆಷ್ಟೋ ನೈಜಕಥೆ ಆಧರಿಸಿರುವ ಸಿನಿಮಾಗಳನ್ನ ತೆರೆಗೆ ತಂದು ಸೈ ಅನಿಸಿಕೊಂಡಿರುವ ಆರ್.ಜಿ.ವಿ ಈಗ ವೀರಪ್ಪನ್ ಕುರಿತ ಸಿನಿಮಾದಲ್ಲಿ ಕನ್ನಡಿಗರ ಆರಾಧ್ಯದೈವ ಡಾ.ರಾಜ್ ಸುಪುತ್ರ ಶಿವಣ್ಣನಿಗೆ ವಿಶೇಷ ಪಾತ್ರ ನೀಡಿರುವುದು ಎಲ್ಲರ ಕಣ್ಣರಳಿಸಿದೆ.

ಸದ್ಯಕ್ಕೆ 'R' ಕಂಪನಿ ಕಡೆಯಿಂದ ಬಂದಿರುವ ಖಾಸ್ ಖಬರ್ ಇಷ್ಟು. 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ. ಇನ್ನಷ್ಟು ಡೀಟೇಲ್ಸ್ ಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











