ಕಾವೇರಿ ಕಿಚ್ಚು.. ಕರ್ನಾಟಕದಲ್ಲಿ 'ಲಿಯೋ', ತಮಿಳುನಾಡಲ್ಲಿ 'ಘೋಸ್ಟ್'ಗೆ ಪ್ರಾಬ್ಲಂ ಆಗುತ್ತಾ? ಶಿವಣ್ಣ ಏನಂತಾರೆ?
ಕರ್ನಾಟಕಕ್ಕೆ ಈ ವರ್ಷ ಕಾವೇರಿ ನೀರಿನ ಅಭಾವ ಇದೆ. ಆದರೂ ತಮಿಳುನಾಡಿಗೆ ನೀರು ಬಿಡುವಂತಾಗಿದೆ. ರಾಜ್ಯದಲ್ಲಿ ಎಷ್ಟೇ ಪ್ರತಿಭಟನೆ ನಡೆದರೂ ಪ್ರಯೋಜನವಾಗುತ್ತಿಲ್ಲ. ಮತ್ತಷ್ಟು ಕಾವೇರಿ ನೀರು ಹರಿಸುವಂತೆ ಕರ್ನಾಟಕದ ಮೇಲೆ ಒತ್ತಡ ಹೇರಲು ತಮಿಳುನಾಡು ಸರ್ಕಾರ ತೀರ್ಮಾನಿಸಿದೆ. ಸದ್ಯಕ್ಕೆ ಈ ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ.
ಕಾವೇರಿ ಕಿಚ್ಚು ಆರುವ ಮುನ್ನವೇ ಶಿವಣ್ಣ ನಟನೆಯ 'ಘೋಸ್ಟ್' ಹಾಗೂ ದಳಪತಿ ವಿಜಯ್ ನಟನೆಯ 'ಲಿಯೋ' ಸಿನಿಮಾಗಳು ರಿಲೀಸ್‌ಗೆ ರೆಡಿಯಾಗುತ್ತಿದೆ. ಎರಡೂ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿವೆ. 'ಲಿಯೋ' ಕನ್ನಡಕ್ಕೆ ಡಬ್ ಆಗಿ ಇಲ್ಲಿ ರಿಲೀಸ್ ಆಗುತ್ತಿದೆ. 'ಘೋಸ್ಟ್' ತಮಿಳಿಗೆ ಡಬ್ ಆಗಿ ತಮಿಳುನಾಡಿನಲ್ಲಿ ರಿಲೀಸ್ ಆಗುತ್ತಿದೆ. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಎರಡೂ ರಾಜ್ಯಗಳಲ್ಲಿ ತಿಕ್ಕಾಟ ನಡೆಯುತ್ತಿರುವಾಗ ಈ ಎರಡೂ ಸಿನಿಮಾಗಳ ರಿಲೀಸ್ ವಿಚಾರ ಕುತೂಹಲ ಮೂಡಿಸಿದೆ.

ಕಾವೇರಿ ವಿವಾದದ ನಡುವೆ 'ಘೋಸ್ಟ್' ಹಾಗೂ 'ಲಿಯೋ' ಸಿನಿಮಾಗಳು ರಿಲೀಸ್ ಆಗುತ್ತಿರುವ ಬಗ್ಗೆ ಸ್ವತಃ ನಟ ಶಿವರಾಜ್‌ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ಕನ್ನಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ಶಿವಣ್ಣ ಮಾತನಾಡಿದ್ದಾರೆ. "ವಿಜಯ್ ಅವ್ರು ನಮಗೆ ಸ್ನೇಹಿತರು. ನಾನು ಕೂಡ ಅವ್ರ ಸಿನ್ಮಾಗೆ ಒಳ್ಳೆದಾಗಬೇಕು ಎಂದು ಬಯಸುತ್ತೇನೆ. ವಿಜಯ್ ಕಂಡ್ರೆ ನನಗೂ ಅಭಿಮಾನ ಪ್ರೀತಿ. ನನ್ನ 100ನೇ ಸಿನಿಮಾ ಮುಹೂರ್ತಕ್ಕೂ ಬಂದಿದ್ದರು. ಎರಡು ಸಿನಿಮಾಗಳು ಒಂದೇ ದಿನ ಬರುವಂತಾಗಿದೆ. ಒಳ್ಳೆ ಡೇಟ್ ಅಂತ ಬಂದಿದ್ದು ಅಷ್ಟೆ. ಆ ಚಿತ್ರಕ್ಕೂ ಒಳ್ಳೆದಾಗಬೇಕು. ಪ್ರೀತಿಯಿಂದ ಜೊತೆಗೆ ಬರ್ತಿದ್ದೀವಿ, ಪೈಪೋಟಿ ಇಲ್ಲ"
"ಕಾವೇರಿ ಸಮಸ್ಯೆ ಇತ್ತು. ದಿಢಿರನೇ ಈಗ ಮಳೆ ಬಂತು. ಈಗ 100 ಅಡಿ ನೀರು ತುಂಬಿದೆ. ಯಾರಿಗೆ ಗೊತ್ತಿತ್ತು. ದೇವ್ರು ಇರ್ತಾನೆ. ಕಂಡಿತ ಒಳ್ಳೆದಾಗೇ ಆಗುತ್ತದೆ. ಕೆಆರ್‌ಎಸ್ ನೀರು ಬಂದಿದೆ ಅಲ್ವಾ? ಕಬಿನಿಯಲ್ಲಿ ನೀರು ಇದೆ. ಇನ್ನು ಮಳೆ ಹುಯ್ಯುತ್ತೆ. ನೀರು ಬರುತ್ತೆ. ಕೆಆರ್‌ಎಸ್ ಪೂರ್ತಿ ತುಂಬಲಿ ಎಂದು ದೇವರಲ್ಲಿ ಬೇಡಿಕೊಳ್ತೀನಿ. ಒಳ್ಳೆದಾಗಬೇಕು. ಎರಡು ರಾಜ್ಯಗಳ ಸರ್ಕಾರಗಳು, ಕೇಂದ್ರ ಸರ್ಕಾರ ಕೂತು ಮಾತನಾಡಿ ಇದನ್ನು ಬಗೆಹರಿಸಬೇಕು. ಸಾಮಾನ್ಯ ಜನ ಚೆನ್ನಾಗಿರಬೇಕು. ಸರ್ಕಾರ ಅದರ ಜವಾಬ್ದಾರಿ ವಹಿಸಿಕೊಳ್ಳಬೇಕು" ಎಂದಿದ್ದಾರೆ.
ಕನ್ನಡದ ಕಲಿತು ಕನ್ನಡದಲ್ಲಿ ಡಬ್ ಮಾಡಿ ಕರ್ನಾಟಕದಲ್ಲಿ ಸಿನಿಮಾ ಪ್ರೆಸ್‌ಮೀಟ್ ಮಾಡಿದರೆ ಅಲ್ಲಿನ ಜನ ಗೆಟ್‌ಔಟ್ ಎಂದರ ಎನ್ನುವ ಸಿದ್ದಾರ್ಥ್ ಹೇಳಿಕೆ ಬಗ್ಗೆ ಕೂಡ ಶಿವಣ್ಣ ಮಾತನಾಡಿದ್ದಾರೆ. "ಆ ಕ್ಷಣಕ್ಕೆ ಅವರ ಮನಸ್ಸಿಗೆ ನೋವಾಗಿದೆ. ಹಾಗಾಗಿ ಸಿದ್ದಾರ್ಥ್ ಆ ರೀತಿ ಮಾತನಾಡಿದ್ದಾರೆ. ಅದಕ್ಕೆಲ್ಲಾ ನಾವು ಅಪಾರ್ಥ ಮಾಡಿಕೊಳ್ಳಬಾರದು. ಜನರಲ್ಲೂ ಅದೇ ಕೇಳಿಕೊಳ್ತೀನಿ. ಅಪಾರ್ಥ ಮಾಡಿಕೊಳ್ಳಬೇಡಿ. ಮನುಷ್ಯ ಅಂದ್ಮೇಲೆ ಮನಸ್ಸಿಗೆ ಬೇಸರ ಆಗುವುದು ಸಹಜ" ಎಂದು ಶಿವಣ್ಣ ಹೇಳಿದ್ದಾರೆ.
ಶ್ರೀನಿ ನಿರ್ದೇಶನದ 'ಘೋಸ್ಟ್' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಚಿತ್ರದ ಟ್ರೈಲರ್ ರಿಲೀಸ್ ಆಗಿ ಗಮನ ಸೆಳೆದಿದೆ. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಅಕ್ಟೋಬರ್ 18ರ ಮಧ್ಯರಾತ್ರಿ ಸಿನಿಮಾ ಪ್ರದರ್ಶನ ಆರಂಭವಾಗಲಿದೆ.
ದಳಪತಿ ವಿಜಯ್ ನಟನೆಯ 'ಲಿಯೋ' ಚಿತ್ರಕ್ಕೆ ಲೋಕೇಶ್ ಕನಕರಾಜ್ ಆಕ್ಷನ್ ಕಟ್ ಹೇಳಿದ್ದಾರೆ. ಸಂಜಯ್ ದತ್, ಅರ್ಜುನ್ ಸರ್ಜಾ ಸೇರಿದಂತೆ ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಮೂಡಿ ಬರ್ತಿದೆ.


Click it and Unblock the Notifications











