Shivarajkumar: ಹಾಸ್ಟೆಲ್ ಹುಡುಗರು Vs ರಮ್ಯಾ ವಿವಾದದ ಬಗ್ಗೆ ಶಿವಣ್ಣ ಏನಂದ್ರು?
ನಿತಿನ್ ಕೃಷ್ಣಮೂರ್ತಿ ನಿರ್ದೇಶನದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಿಷಬ್ ಶೆಟ್ಟಿ, ರಮ್ಯಾ ಸೇರಿದಂತೆ ಸ್ಟಾರ್ ಕಲಾವಿದರು ಕೂಡ ತಂಡದ ಬೆಂಬಲಕ್ಕೆ ನಿಂತಿದ್ದಾರೆ. ಎಲ್ಲರಿಗಿಂತ ಮೊದಲು ಪುನೀತ್ ರಾಜ್‌ಕುಮಾರ್ ತಂಡಕ್ಕೆ ಸಾಥ್ ನೀಡಿದ್ದರು. ಇದೀಗ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಕೂಡ ಹೊಸಬರ ಸಿನಿಮಾ ಬೆನ್ನು ತಟ್ಟಿದ್ದಾರೆ.
ನಿನ್ನೆಯಷ್ಟೆ(ಜುಲೈ 21) ಗೀತಾ ಶಿವರಾಜ್‌ಕುಮಾರ್ ಹಾಗೂ ಪುತ್ರಿ ನಿವೇದಿತಾ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಶಿವಣ್ಣನ ಮನೆಯಲ್ಲೇ ಇಂದು ಚಿತ್ರದ ಸಕ್ಸಸ್ ಪ್ರೆಸ್‌ಮೀಟ್ ಮಾಡಲಾಯಿತು. ಚಿತ್ರತಂಡದ ಜೊತೆ ಶಿವಣ್ಣ ಕೂಡ ಮಾತನಾಡಿದರು. ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಅಭಿಮಾನಿ ದೇವರುಗಳು ಒಳ್ಳೆ ಸಿನಿಮಾ ಕೈ ಬಿಡಲ್ಲ ಎನ್ನುವುದು ಮತ್ತೆ ಸಾಬೀತಾಯಿತು ಎಂದಿದ್ದಾರೆ. ಸೋಮವಾರ ತಾನು ಸಿನಿಮಾ ನೋಡುವುದಾಗಿ ಹೇಳಿದ್ದಾರೆ. ಇದೇ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ಶಿವಣ್ಣ ಮಾತನಾಡಿದರು.

ಚಿತ್ರಕ್ಕೆ ರಮ್ಯಾ ಸಮಸ್ಯೆ ಮಾಡಿದ್ದರು ಎನ್ನುವುದರ ಬಗ್ಗೆ ಶಿವಣ್ಣ ಮಾತನಾಡಿ "ಯಾರ ಬಗ್ಗೆ ಏನು ಕಮೆಂಟ್ ಮಾಡುವುದು ಬೇಡ. ಎಲ್ಲದಕ್ಕಿಂತ ಕೊನೆಗೆ ಗೆಲುವು ಮುಖ್ಯ. ಸಿನಿಮಾ ಬರೋಕು ಮೊದಲು ಒಳ್ಳೆ ರಿಪೋರ್ಟ್ ಇತ್ತು. ಒಳ್ಳೆ ಮನಸ್ಸಿನಿಂದ ಮಾಡಿದರೆ ಅದಕ್ಕೆ ಯಾವುದೇ ತಡೆ ಬರಲ್ಲ. ಅದಕ್ಕೆ ಇದೇ ಉತ್ತಮ ಉದಾಹರಣೆ. ಅಭಿಮಾನಿ ದೇವರುಗಳು ಒಳ್ಳೆ ಸಿನಿಮಾ ಕೈಬಿಡಲ್ಲ. ಸತ್ಯ ಇದ್ದರೆ ಜಯ ಇದ್ದೇ ಇರುತ್ತೆ. ಅವರವರು ತಿಳಿದುಕೊಳ್ಳಬೇಕು. ಯಾಕೆ ಈಗಾಯ್ತು ಅನ್ನೋದು ಗೊತ್ತಾಗ್ತಿಲ್ಲ. ನಮ್ಮ ಇಂಡಸ್ಟ್ರಿ ಬೆಳೀಬೇಕು ಅಷ್ಟೆ. ಅದನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಹೊಸಬರು ಬಂದಾಗ ಎಲ್ಲರೂ ಸಪೋರ್ಟ್ ಮಾಡಬೇಕು. ಆ ವಿಚಾರವನ್ನು ಈಗ ದೊಡ್ಡದು ಮಾಡುವುದು ಬೇಡ" ಎಂದಿದ್ದಾರೆ.
ಇನ್ನು ಸಿನಿಮಾ ಬಗ್ಗೆ ಶಿವಣ್ಣ ಮಾತನಾಡಿ, "ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಇಡೀ ತಂಡಕ್ಕೆ ಗುಡ್ ಲಕ್. ನಿನ್ನೆ ನಾನು ಸಿನಿಮಾ ನೋಡಬೇಕಿತ್ತು. ವರುಣ್‌ಗೆ ಹೇಳಿದ್ದೇ ನಾನು ಫಸ್ಟ್ ಡೇ ನೋಡುತ್ತೇನೆ ಎಂದು. ಆದರೆ ಜಾಹೀರಾತು ಶೂಟ್ ಇದ್ದಿದ್ದರಿಂದ ಆಗಲಿಲ್ಲ. ಅದಕ್ಕೆ ಗೀತಾ ಬಂದಿದ್ದರು. ಮೋರಲ್ ಸಪೋರ್ಟ್ ಆಗಿರುತ್ತದೆ ಎಂದಿದ್ದೆ. ಸಿನಿಮಾ ಚೆನ್ನಾಗಿದ್ದರೆ ಮೋರಲ್ ಸಪೋರ್ಟ್‌ಗಿಂತ ನಾವು ನೋಡಿ ತೃಪ್ತಿಪಡಬಹುದು. ನನ್ನ ಪರವಾಗಿ, ನನ್ನ ಚಿಕ್ಕ ಮಗಳು ನಿವೇದಿತಾ ಎಲ್ಲರೂ ಸಿನಿಮಾ ನೋಡಿದರು."
"ಚಿತ್ರದ ನಿರ್ಮಾಪಕ ವರುಣ್ ನನಗೆ 15 ವರ್ಷದಿಂದ ಗೊತ್ತು. ಆ ಸಮಯದಿಂದ ನೋಡುತ್ತಿದ್ದೇನೆ. ತುಂಬ ಕಷ್ಟಪಟ್ಟು ಮೇಲೆ ಬಂದವರು. ಯಾವುದೇ ಮಾಡಿದರು ಬಹಳ ಶಿಸ್ತಿನಿಂದ ಮಾಡುತ್ತಾನೆ. ಆತನಲ್ಲಿ ಪ್ರಾಮಾಣಿಕತೆ ಇದೆ. ನನಗೆ ಅದು ತುಂಬಾ ಇಷ್ಟ. ಸಾಂಗ್ಸ್ ಎಲ್ಲಾ ನೋಡಿದಾಗ ತುಂಬಾ ಇಂಟ್ರೆಸ್ಟಿಂಗ್ ಅನಿಸಿತು. ಒನ್ಸ್ ನೋಡಿದಾಗ ಒಂದು ಸ್ಟೈಕ್ ಆಯ್ತು. ಜನ ಥಿಯೇಟರ್‌ಗೆ ಬರದ ಸಮಯದಲ್ಲಿ ಜನ ಥಿಯೇಟರ್‌ಗೆ ಬಂದು ಸಪೋರ್ಟ್ ಮಾಡಿದ್ದಾರೆ. ಇಡೀ ಸ್ಯಾಂಡಲ್‌ವುಡ್ ಸಿನಿಮಾಗೆ ಸಾಥ್ ಕೊಟ್ಟಿದೆ. ಇಂಡಸ್ಟ್ರಿ ಅಂದರೆ ಒಂದು ಫ್ಯಾಮಿಲಿ. ಫ್ಯಾಮಿಲಿ ಅಂದಾಗ ಯಾರದ್ದೇ ಸಿನಿಮಾವಾಗಲಿ ಪ್ರೋತ್ಸಾಹ ಮಾಡಬೇಕು" ಎಂದರು.
ಗೀತಾ ಶಿವರಾಜ್ ಕುಮಾರ್ ಮಾತನಾಡಿ, "ಈ ತರ ಸಿನಿಮಾ ನೋಡಿ ಬಹಳ ವರ್ಷವಾಗಿತ್ತು. ವರುಣ್ ನಮ್ಮ ಕುಟುಂಬ. ನಿರ್ದೇಶಕರಿಂದ ಹಿಡಿದು ಎಲ್ಲರು ಹೊಸಬರೇ. ಎಲ್ಲವೂ ಹೊಸತನದಿಂದ ಕೂಡಿದೆ. ಹಾಸ್ಟೆಲ್ ಲೈಫ್ ಹೀಗೆ ಇತ್ತೇನೋ ಅನಿಸುವಷ್ಟು ಬಹಳ ಸ್ವಾಭಾವಿಕವಾಗಿತ್ತು. ಎಲ್ಲಾ ಫ್ಯಾಮಿಲಿ ಕುಳಿತು ನೋಡಬಹುದು. ಈ ತರ ಸಿನಿಮಾಗಳು ಮತ್ತಷ್ಟು ಬರಬೇಕು. ಆರಂಭದಿಂದ ಕೊನೆತನಕ ಎಲ್ಲಿಯೂ ಬೋರ್ ಆಗುವುದಿಲ್ಲ. ನಾನು ಸಿನಿಮಾ ಎಂಜಾಯ್ ಮಾಡಿದೆ. ಇಡೀ ತಂಡಕ್ಕೆ ಎಲ್ಲರಿಗೂ ಒಳ್ಳೆದಾಗಲಿ" ಎಂದು ಶುಭ ಹಾರೈಸಿದ್ದಾರೆ.


Click it and Unblock the Notifications











