"ನಾನು ಮಾಡಿರುವ ಆ ನಾಲ್ಕು ಪಾತ್ರಗಳು ನನ್ನನ್ನು ಬಹಳ ಕಾಡುತ್ತವೆ": ಶಿವಣ್ಣ
ವಯಸ್ಸು 60 ದಾಟಿದ್ರು, ಶಿವರಾಜ್‌ಕುಮಾರ್ ಇವತ್ತಿಗೂ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಪ್ರೇಕ್ಷಕರನ್ನು ರಂಜಿಸ್ತಿದ್ಧಾರೆ. ಈ ವಯಸ್ಸಲ್ಲೂ ಶಿವಣ್ಣನ ಕೈಯಲ್ಲಿ ಐದಾರು ಸಿನಿಮಾಗಳಿವೆ. ಸದ್ಯ 'ಬೈರತಿ ರಣಗಲ್' ಸಿನಿಮಾ ಸೆಟ್ಟೇರಿದೆ. 100ಕ್ಕೂ ಅಧಿಕ ಸಿನಿಮಾಗಳಲ್ಲಿ ನೂರಾರು ಪಾತ್ರಗಳಲ್ಲಿ ಹ್ಯಾಟ್ರಿಕ್ ಹೀರೊ ಕಮಾಲ್ ಮಾಡಿದ್ದಾರೆ. ಆದರೆ 4 ಪಾತ್ರಗಳು ಬಹಳ ಕಾಡುತ್ತವೆ ಎಂದು ಹೇಳಿದ್ದಾರೆ.
'ಆನಂದ್' ಚಿತ್ರದ ಮೂಲಕ 80ರ ದಶಕದ ಕೊನೆಗೆ ಹೀರೊ ಆಗಿ ಶಿವಣ್ಣ ಚಿತ್ರರಂಗಕ್ಕೆ ಬಂದರು. ಡಾ. ರಾಜ್‌ಕುಮಾರ್ ಮಗನಾದರೂ ನಟನಾಗೋಕೆ ಬೇಕಾದ ತಯಾರಿ ಜೊತೆಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಮೊದಲ 3 ಸಿನಿಮಾಗಳು ಹಿಟ್ ಆಗಿ ಹ್ಯಾಟ್ರಿಕ್ ಹೀರೊ ಬಿರುದು ಸಿಕ್ಕಿತ್ತು. ಆಕ್ಷನ್, ಕಾಮಿಡಿ, ರೊಮ್ಯಾಂಟಿಕ್, ಹಾರರ್ ಹೀಗೆ ಎಲ್ಲಾ ಜಾನರ್ ಸಿನಿಮಾಗಳಲ್ಲೂ ಶಿವಣ್ಣ ನಟಿಸಿದ್ದಾರೆ. ದೊಡ್ಡ ದೊಡ್ಡ ನಿರ್ದೇಶಕರ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ.

ಇವತ್ತಿಗೂ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟನಾಗಿ ಶಿವಣ್ಣ ಗುರ್ತಿಸಿಕೊಂಡಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿದ್ಧಾರೆ. ತಮ್ಮ ಡ್ಯಾನ್ಸ್ ಮೂಲಕ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡ್ತಿದ್ದಾರೆ. ಮಲ್ಟಿಸ್ಟಾರರ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಸೈ ಎನ್ನುತ್ತಿದ್ದಾರೆ. ಇಂತಿಪ್ಪ ಶಿವಣ್ಣನಿಗೆ ತಾವು ನಟಿಸಿದ ಸಿನಿಮಾ 4 ಪಾತ್ರಗಳು ಬಹಳ ಕಾಡುತ್ತವೆ ಎಂದು ಹೇಳಿದ್ದಾರೆ.
'ಬೈರತಿ ರಣಗಲ್' ಸಿನಿಮಾ ಮುಹೂರ್ತ ಸಮಾರಂಭದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಶಿವಣ್ಣ ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ. ಈ ಪಾತ್ರ ನಿಮಗೆ ಎಷ್ಟು ಕಾಡುತ್ತದೆ ಎನ್ನುವ ಪ್ರಶ್ನೆಗೆ ಖಂಡಿತ ಈ ಪಾತ್ರ ಇಷ್ಟ ಎಂದಿದ್ದಾರೆ. 'ಟಗರು' ಸಿನಿಮಾ ರಿಲೀಸ್ ಆಗಿದ್ದಾಗ ಅಮೇರಿಕಾದ ಸ್ನೇಹಿತರೊಬ್ಬರು ಮೆಸೇಜ್ ಮಾಡಿದ್ದರು. ನಿಮ್ಮ ಸಿನಿಮಾಗಳಲ್ಲಿ 4 ಪಾತ್ರಗಳನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದರು.

'ಓಂ' ಸತ್ಯ
ಉಪೇಂದ್ರ ನಿರ್ದೇಶನದ 'ಓಂ' ಚಿತ್ರದಲ್ಲಿ ರೌಡಿ ಸತ್ಯನಾಗಿ ಶಿವಣ್ಣ ಅಭಿನಯವನ್ನು ಸಿನಿರಸಿಕರು ಇಂದಿಗೂ ಮರೆತ್ತಿಲ್ಲ. ದೇವಸ್ಥಾನದ ಅರ್ಚಕರ ಮಗ ಮುಗ್ಧ ಸತ್ಯ ಒಬ್ಬ ಹುಡುಗಿಗಾಗಿ ಲಾಂಗ್ ಹಿಡಿದು ಮುಂದೆ ಏನೆಲ್ಲಾ ಆಗುತ್ತದೆ. ಕೊನೆಗೆ ಅದರಿಂದ ಆತ ಹೇಗೆ ಹೊರ ಬರುತ್ತಾನೆ ಎನ್ನುವುದನ್ನು ಉಪ್ಪಿ ಕೊಟ್ಟಿಕೊಟ್ಟಿದ್ದರು. ನಿಜ ಜೀವನದ ರೌಡಿಗಳು ಕೂಡ ಈ ಚಿತ್ರದಲ್ಲಿ ನಟಿಸಿದ್ದರು. ಸತ್ಯನ ಪಾತ್ರ ಅಭಿಮಾನಿಗಳನ ಮನಸ್ಸಿನಲ್ಲಿ ಉಳಿದುಬಿಟ್ಟಿದೆ.
'ಜೋಗಿ' ಮಾದೇಸ
ಪ್ರೇಮ್ ನಿರ್ದೇಶನದ 'ಜೋಗಿ' ಚಿತ್ರದಲ್ಲಿ ರೌಡಿಸಂ ಜೊತೆಗೆ ಮದರ್ ಸೆಂಟಿಮೆಂಟ್ ಕಥೆ ಇತ್ತು. ಮಾದೇಶ್ವರ ಬೆಟ್ಟದ ಮುಗ್ಧ ಮಾದೇಶ ಬೆಂಗಳೂರಿಗೆ ಬಂದು ತನಗೆ ಗೊತ್ತಿಲ್ಲದೇ ಭೂಗತ ಲೋಕ ಪ್ರವೇಶಿಸುವ ಕಥೆ, ಶಿವಣ್ಣ ಅಭಿನಯ ಮರೆಯೋಕೆ ಸಾಧ್ಯವಿಲ್ಲ. ಜೋಗಿ ತಾಯಿ ಪಾರ್ವತಮ್ಮ ಆಗಿ ಅರುಂಧತಿ ನಾಗ್ ಅಭಿನಯ ಕೂಡ ಪ್ರೇಕ್ಷಕರ ಮನಮುಟ್ಟಿತ್ತು.

'ಮಫ್ತಿ' ಬೈರತಿ ರಣಗಲ್
2017ರಲ್ಲಿ ಬಂದಿದ್ದ 'ಮಫ್ತಿ' ಸಿನಿಮಾ ಕೂಡ ಹಿಟ್ ಲಿಸ್ಟ್ ಸೇರಿತ್ತು. ಚಿತ್ರದಲ್ಲಿ ಮಾಫಿಯಾ ಡಾನ್ ಬೈರತಿ ರಣಗಲ್ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದರು. ಹೆಚ್ಚು ಡೈಲಾಗ್ಸ್ ಇಲ್ದೆ ಬರೀ ಕಣ್ಣಲ್ಲೇ ಶಿವಣ್ಣ ನಟಿಸಿ ಗೆದ್ದಿದ್ದರು. ನಿಜ ಹೇಳಬೇಕು ಅಂದರೆ ಚಿತ್ರದಲ್ಲಿ ಇಂಟರ್‌ವಲ್ ನಂತರ ಶಿವಣ್ಣ ಎಂಟ್ರಿ ಆಗುತ್ತಾರೆ. ಸಿನಿಮಾ ಒಪ್ಪಿಕೊಂಡಾಗ ಶಿವಣ್ಣ- ಗೀತಾ ದಂಪತಿಗೂ ಇದು ಚೆನ್ನಾಗಿರುತ್ತಾ? ಜನ ಒಪ್ತಾರಾ? ಅಂದುಕೊಂಡಿದ್ದರಂತೆ. ಆದರೆ ತೆರೆಮೇಲೆ ಪಾತ್ರ ಮ್ಯಾಜಿಕ್ ಮಾಡಿತ್ತು. ಈಗ ಅದೇ ಪಾತ್ರದ ಸುತ್ತ ಹೊಸ ಸಿನಿಮಾ ಸೆಟ್ಟೇರಿದೆ.
'ಟಗರು' ಶಿವ
ಸೂರಿ ನಿರ್ದೇಶನದ 'ಟಗರು' ಸಿನಿಮಾ ಕೂಡ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಚಿತ್ರದಲ್ಲಿ ಪೊಲೀಸ್ ಆಫೀಸರ್ ಟಗರು ಶಿವನ ಪಾತ್ರದಲ್ಲಿ ಸೆಂಚುರಿ ಸ್ಟಾರ್ ಅಬ್ಬರಿಸಿದ್ದರು. ಆ ಪಾತ್ರದ ಬಗ್ಗೆ ಕೂಡ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಇದೇ ಚಿತ್ರದಲ್ಲಿ ಡಾಲಿಯಾಗಿ ಧನಂಜಯ್ ಮೋಡಿ ಮಾಡಿದರು. ಟೈಟಲ್ ಸಾಂಗ್ ಇನ್ನು ಅಭಿಮಾನಿಗಳ ಕಿವಿಯಲ್ಲಿ ಗುಂಯ್‌ಗುಡುತ್ತಿದೆ.


Click it and Unblock the Notifications











