Ghost: 'ಘೋಸ್ಟ್' ರನ್‌ಟೈಮ್ ಬಿಚ್ಚಿಟ್ಟ ಶಿವಣ್ಣ: ಫಸ್ಟ್ ಹಾಫ್‌ಗಿಂತ ಸೆಕೆಂಡ್ ಹಾಫ್ ಚಿಕ್ಕದು
ವರ್ಷಕ್ಕೆ ಮೂರ್ನಾಲ್ಕು ಸಿನಿಮಾಗಳನ್ನು ಕೊಡುವ ಶಿವಣ್ಣ ಈ ವರ್ಷ ಕೊಂಚ ತಡ ಮಾಡುತ್ತಿದ್ದಾರೆ. 'ವೇದ' ಕಳೆದ ವರ್ಷದ ಕೊನೆಗೆ ರಿಲೀಸ್ ಆಗಿತ್ತು. ಸದ್ಯ ತಮಿಳಿನ 'ಜೈಲರ್' ಚಿತ್ರ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿದೆ. ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಶಿವಣ್ಣ ನಟಿಸಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಅಕ್ಟೋಬರ್‌ನಲ್ಲಿ 'ಘೋಸ್ಟ್' ಆಗಿ ಶಿವಣ್ಣ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಶ್ರೀನಿ ನಿರ್ದೇಶನದ ಗ್ಯಾಂಗ್‌ಸ್ಟರ್ ಸಿನಿಮಾ 'ಘೋಸ್ಟ್' ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಈಗಾಗಲೇ ಬಿಗ್ ಡ್ಯಾಡಿ ಟೀಸರ್ ರಿಲೀಸ್ ಆಗಿ ಬೇಜಾನ್ ಸದ್ದು ಮಾಡಿದೆ. ಅಕ್ಟೋಬರ್ 19ಕ್ಕೆ ಸಿನಿಮಾ ತೆರೆಗೆ ತರುವುದಾಗಿ ಚಿತ್ರತಂಡ ಘೋಷಿಸಿದೆ. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಸಿನಿಮಾ ಬಹಳ ಅದ್ಧೂರಿಯಾಗಿ ಮೂಡಿ ಬಂದಿದೆ. ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಆಗಿ ಸೆಂಚುರಿ ಸ್ಟಾರ್ ಲುಕ್ ಬಹಳ ಕುತೂಹಲ ಕೆರಳಿಸಿದೆ.

'ಘೋಸ್ಟ್' ಚಿತ್ರಕ್ಕೆ ಸ್ವತಃ ಶ್ರೀನಿ ಕಥೆ, ಚಿತ್ರಕಥೆ ಬರೆದಿದ್ದಾರೆ. ಮಾಸ್ತಿ ಹಾಗೂ ಪ್ರಸನ್ನ ಸಂಭಾಷಣೆ ನಿರೀಕ್ಷೆ ಹುಟ್ಟಾಕ್ಕಿದೆ. ಅರ್ಜುನ್ ಜನ್ಯ ಸಂಗೀತ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣ ಚಿತ್ರದಲ್ಲಿದೆ. ಅಂದಹಾಗೆ ಇದು ಮಾಮೂಲಿ ಕಮರ್ಷಿಯಲ್ ಸಿನಿಮಾ ಅಲ್ಲ. ನಾಯಕಿ, ಡ್ಯುಯೆಟ್ ಇರಲ್ಲ. ಇದು 48 ಘಂಟೆಗಳಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ. ಶಿವಣ್ಣನ ಜೊತೆಗೆ ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ಬಣ್ಣ ಹಚ್ಚಿ ನಟಿಸಿದ್ದಾರೆ.
ಮಲಯಾಳಂ ನಟ ಜಯರಾಮ್ ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಅಬ್ಬರಿಸಿದ್ದಾರೆ. ಬಾಲಿವುಡ್ ನಟ ಅನುಪಮ್ ಕೇರ್ ಕೂಡ ತಾರಾಗಣದಲ್ಲಿದ್ದಾರೆ. ಚಿತ್ರವನ್ನು ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಭಾಷೆಗಳಲ್ಲೂ ಡಬ್ ಮಾಡಿ ರಿಲೀಸ್ ಮಾಡಲಾಗುತ್ತಿದೆ. 'ಜೈಲರ್' ಚಿತ್ರದ ನರಸಿಂಹ ಪಾತ್ರದಿಂದ ಸದ್ಯ ಅಕ್ಕಪಕ್ಕದ ಇಂಡಸ್ಟ್ರಿಗಳಲ್ಲೂ ಶಿವಣ್ಣ ಸ್ಕ್ರೀನ್ ಪ್ರೆಸೆನ್ಸ್ ಬಗ್ಗೆ ಟಾಕ್ ನಡೀತಿದೆ. ಹಾಗಾಗಿ ಇದು 'ಘೋಸ್ಟ್' ಚಿತ್ರಕ್ಕೆ ಪ್ಲಸ್ ಆಗಲಿದೆ.
ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳ ರನ್‌ಟೈಲ್ ಬಹಳ ಮುಖ್ಯವಾಗುತ್ತದೆ. ಪ್ರೇಕ್ಷಕರನ್ನು ಎಂಗೇಜಿಂಗ್ ಆಗಿ ಇಟ್ಟುಕೊಳ್ಳುವುದು ಕಷ್ಟದ ಕೆಲಸ. ಕಾಲಾವಧಿ ಹೆಚ್ಚಾದಷ್ಟು ರಿಸ್ಕ್ ಅಂತಲೇ ಹೇಳಬೇಕು. ಆದರೆ 'ಘೋಸ್ಟ್' ಬಹಳ ಚಿಕ್ಕ ಸಿನಿಮಾ. ಇದನ್ನು ಸ್ವತಃ ಶಿವರಾಜ್‌ಕುಮಾರ್ ತೆಲುಗು ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ. ಅಷ್ಟೇ ಅಲ್ಲ ಟೀಸರ್‌ನಲ್ಲಿ ಇರುವ ಪಾನಿಪುರಿ ಸನ್ನಿವೇಶದ ಬಗ್ಗೆ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ.
ಇಂಡಿಯಾ ಗ್ಲಿಟ್ಸ್ ತೆಲುಗು ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡುತ್ತಾ ಶಿವಣ್ಣ "ಘೋಸ್ಟ್ ಸಿನಿಮಾ ಬಹಳ ನ್ಯಾಚುರಲ್ ಆಗಿ ಇರುತ್ತದೆ. ಇದು ಮಾಮೂಲಿ ಕಮರ್ಷಿಯಲ್ ಸಿನಿಮಾ ರೀತಿ ಇರಲ್ಲ. ಸಿನಿಮಾ ಕಾಲಾವಧಿ 2 ಗಂಟೆ 8 ನಿಮಿಷ ಮಾತ್ರ. ಫಸ್ಟ್ ಹಾಫ್ 1 ಗಂಟೆ 7 ನಿಮಿಷ, ಸೆಕೆಂಡ್ ಹಾಫ್ 1 ಗಂಟೆ 1 ನಿಮಿಷ ಮಾತ್ರ ಇರುತ್ತದೆ. ಇದು ಬಹಳ ಚಿಕ್ಕ ಸಿನಿಮಾ. 2 ಗಂಟೆ 8 ನಿಮಿಷ ಅಷ್ಟೆ" ಎಂದಿದ್ದಾರೆ.
'ಘೋಸ್ಟ್' ಬಿಗ್‌ಡ್ಯಾಡಿ ಟೀಸರ್‌ನಲ್ಲಿ ಶಿವಣ್ಣ ಪಾನಿಪುರಿಯನ್ನು ವಿಸ್ಕಿಯಲ್ಲಿ ಅದ್ದಿ ತಿನ್ನುವ ಸನ್ನಿವೇಶ ಇದೆ. ಅಭಿಮಾನಿಗಳು ಇದನ್ನು ನೋಡಿ ಸಖತ್ ಥ್ರಿಲ್ ಆಗಿದ್ದರು. ನಿಜ ಜೀವನದಲ್ಲೂ ಈ ರೀತಿ ಮಾಡಿದ್ದೀರಾ? ಎನ್ನುವ ಪ್ರಶ್ನೆಗೆ ಶಿವಣ್ಣ "ಯಾವಾಗಲೂ ಅಲ್ಲ, ಆಗೊಮ್ಮೆಈಗೊಮ್ಮೆ ಪಾರ್ಟಿಗಳಲ್ಲಿ ಮಾಡುತ್ತೇನೆ. ಕಾಲೇಜು ದಿನಗಳಲ್ಲಿ ಅಲ್ಲ. ಆ ಬಳಿಕ" ಎಂದು ಉತ್ತರಿಸಿದ್ದಾರೆ.
ಅಂದಹಾಗೆ ಈ ಚಿತ್ರದ ಬಹುತೇಕ ಶೂಟಿಂಗ್ ಸೆಟ್‌ಗಳಲ್ಲೇ ನಡೆದಿದೆ. 3 ಕೋಟಿ ವೆಚ್ಚದಲ್ಲಿ 15 ಸೆಟ್‌ಗಳನ್ನು ನಿರ್ಮಿಸಿ ಚಿತ್ರದ ಪ್ರಮುಖ ಸನ್ನಿವೇಶಗಳನ್ನು ಸೆರೆ ಹಿಡಿಯಲಾಗಿದೆ. ಬೆಂಗಳೂರಿನ ಮಿನರ್ವ ಮಿಲ್ ಹಾಗೂ ಮೈಸೂರಿನಲ್ಲಿ ಮೋಹನ್ ಬಿ ಕೆರೆ, ಸೆಟ್‌ಗಳನ್ನು ನಿರ್ಮಿಸಿದ್ದರು. ಮಿನರ್ವ ಮಿಲ್‌ನಲ್ಲಿ ಮುಹೂರ್ತ ನೆರವೇರಿಸಿ ಅಲ್ಲೇ ಜೈಲ್ ಸೆಟ್‌ನಲ್ಲಿ ಸಿನಿಮಾ ಚಿತ್ರೀಕರಣ ಆರಂಭಿಸಲಾಗಿತ್ತು.


Click it and Unblock the Notifications










