ಶಿವಣ್ಣನಿಗೆ ಬಂದಿದ್ದ ಬಿಗ್ ಆಫರ್ ಮಿಸ್ ಆಯ್ತು; ಮಾತುಕತೆ ಬಳಿಕ ಏನಾಯ್ತು?
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 'ಭೈರತಿ ರಣಗಲ್' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿ ಮುನ್ನುಗ್ಗುತ್ತಿದೆ. ಸೋಮವಾರದ ಪರೀಕ್ಷೆ ಗೆದ್ದು ರಣಗಲ್ ದರ್ಬಾರ್ ನಡೆಸುತ್ತಿದ್ದಾನೆ. ನರ್ತನ್ ನಿರ್ದೇಶನಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಔಟ್ ಅಂಡ್ ಔಟ್ ಮಾಸ್ ಕಮರ್ಷಿಯಲ್ ಸಿನಿಮಾ 'ಭೈರತಿ ರಣಗಲ್'. ತಮ್ಮದೇ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಿಸಿ ನಟಿಸಿ ಶಿವಣ್ಣ ಸಕ್ಸಸ್ ಕಂಡಿದ್ದಾರೆ. ಮತ್ತೊಂದು ಕಡೆ ಸೆಂಚುರಿ ಸ್ಟಾರ್ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅನಾರೋಗ್ಯದ ನಡುವೆಯೂ ಸಿನಿಮಾ ಶೂಟಿಂಗ್, ಪ್ರಮೋಷನ್ ಕೆಲಸಗಳಲ್ಲಿ ಭಾಗಿ ಆಗುತ್ತಿದ್ದಾರೆ.

10ಕ್ಕೂ ಅಧಿಕ ಚಿತ್ರಗಳಿಗೆ ಶಿವರಾಜ್‌ಕುಮಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದರಲ್ಲಿ ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಸಿನಿಮಾಗಳು ಕೂಡ ಇದೆ. ತೆಲುಗಿನಲ್ಲಿ ರಾಮ್‌ಚರಣ್ ಜೊತೆ ಒಂದು ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ತಮಿಳಿನಲ್ಲಿ ಹೀರೊ ಆಗಿ ಒಂದಷ್ಟು ಕಥೆಗಳನ್ನು ಕೇಳಿದ್ದಾರೆ. ಯೋಗಿ ಬಾಬು ಜೊತೆ ಇಡೀ ಸಿನಿಮಾ ಇರುವಂತ ಲೀಡ್ ರೋಲ್‌ನಲ್ಲಿ ನಟಿಸುವುದು ಖಚಿತವಾಗಿದೆ.
ನಟ ದಳಪತಿ ವಿಜಯ್ ಅಭಿನಯದ ಕೊನೆಯ ಚಿತ್ರದಲ್ಲಿ ಕೂಡ ಶಿವರಾಜ್‌ಕುಮಾರ್ ನಟಿಸುತ್ತಿರುವುದಾಗಿ ಹೇಳಲಾಗಿತ್ತು. ಹೌದು ಸ್ವತಃ ಶಿವರಾಜ್‌ಕುಮಾರ್ ತಾವು ದಳಪತಿ69 ಚಿತ್ರದ ಪಾತ್ರವೊಂದರಲ್ಲಿ ನಟಿಸೋ ಬಗ್ಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ನಿರ್ದೇಶಕ ಹೆಚ್. ವಿನೋದ್ ತಮ್ಮೊಟ್ಟಿಗೆ ಚರ್ಚಿಸಿರುವುದಾಗಿ ತಿಳಿಸಿದ್ದರು. ಆದರೆ ಇದೀಗ ಆ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಸ್ವತಃ ಸೆಂಚುರಿ ಸ್ಟಾರ್ ಹೇಳಿದ್ದಾರೆ.

'ಭೈರತಿ ರಣಗಲ್' ಚಿತ್ರದ ಪ್ರಚಾರದ ಭಾಗವಾಗಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗೆ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅದು ಒಳ್ಳೆ ಪಾತ್ರ ಆಗಿತ್ತು, ಕೆಲ ವಾರಗಳ ಹಿಂದೆ ನಿರ್ದೇಶಕ ವಿನೋದ್ ಬಂದು ನನ್ನೊಟ್ಟಿಗೆ ಚಿತ್ರದ ಬಗ್ಗೆ ಚರ್ಚಿಸಿದ್ದರು. ಬಳಿಕ ಬಂದು ಇಲ್ಲ, ಅದು ಸಾಧ್ಯವಾಗುತ್ತಿಲ್ಲ ಎಂದರು. ಮುಂದಿನ ಬಾರಿ ನಿಮಗೋಸ್ಕರ ಇನ್ನೊಂದು ಪಾತ್ರ ರೆಡಿ ಮಾಡ್ತೀನಿ ಅಂತ ಹೇಳಿ ಹೋಗಿದ್ದಾಗಿ ಮಾಹಿತಿ ನೀಡಿದ್ದಾರೆ.
ವಿನೋದ್ ಬಂದು ನನಗೆ ಬಂದು ಕಥೆ ಹೇಳಿದ ನಂತರ ಎಲ್ಲಾ ಓಕೆ ಆಗಿತ್ತು. ಆದರೆ ಕೊನೆ ಕ್ಷಣದಲ್ಲಿ ಬಂದು ಯಾಕೆ ಕ್ಯಾನ್ಸಲ್ ಮಾಡಿದ್ರು ಅಂತ ನನಗೆ ಗೊತ್ತಾಗಿಲ್ಲ ಅಂತ ಶಿವಣ್ಣ ಹೇಳಿದ್ಧಾರೆ. ಆದರೂ ನನಗೇನೂ ಬೇಜಾರಾಗಿಲ್ಲ. ಆದರೆ ಅದು ತುಂಬಾ ಒಳ್ಳೆಯ ಪಾತ್ರ ಎಂದು ವಿವರಿಸಿದ್ದಾರೆ. ಇನ್ನುಳಿದಂತೆ ಕನ್ನಡದಲ್ಲಿ '45' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ.
ಅರ್ಜುನ್ ಜನ್ಯಾ ನಿರ್ದೇಶನದ '45' ಚಿತ್ರದಲ್ಲಿ ಉಪೇಂದ್ರ ಹಾಗೂ ರಾಜ್. ಬಿ ಶೆಟ್ಟಿ ಕೂಡ ನಟಿಸಿದ್ದಾರೆ. ಶ್ರೀನಿ ನಿರ್ದೇಶನದಲ್ಲಿ 'A ಫಾರ್ ಆನಂದ್' ಎಂಬ ಚಿತ್ರ ಘೋಷಣೆ ಆಗಿದೆ. ಧನಂಜಯ ನಟನೆಯ 'ಉತ್ತರಕಾಂಡ' ಚಿತ್ರದ ಮುಖ್ಯ ಪಾತ್ರದಲ್ಲಿ ಕೂಡ ಶಿವಣ್ಣ ಬಣ್ಣ ಹಚ್ಚಿದ್ದಾರೆ. ಹೇಮಂತ್ ರಾವ್ ನಿರ್ದೇಶನದ 'ಭೈರವನ ಕೊನೆಪಾಠ' ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
'ಮಫ್ತಿ' ಸೀಕ್ವೆಲ್ ಮಾಡುವ ಬಗ್ಗೆಯೂ ಚರ್ಚೆ ನಡೀತಿದೆ. ನಂದ ಕಿಶೋರ್ ನಿರ್ದೇಶನದ 'ಶಿವಗಣ' ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಹೀಗೆ ಶಿವಣ್ಣ ನಟಿಸಲಿರುವ ಸಿನಿಮಾಗಳ ಪಟ್ಟಿ ಬೆಳೆಯುತ್ತಾ ಹೋಗುತ್ತಿದೆ. ಸದ್ಯ ಅನಾರೋಗ್ಯದಿಂದ ಬಳಲುತ್ತಿರುವ ಸೆಂಚುರಿ ಸ್ಟಾರ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು ಶೀಘ್ರದಲ್ಲೇ ಶಸ್ತ್ರಚಿಕಿತ್ಸೆ ಕೂಡ ನಡೆಯಲಿದೆ. ಇದಿಷ್ಟೆ ಅಲ್ಲ ಮತ್ತಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ಒಳ್ಳೆ ಕಥೆಗಳಲ್ಲಿ ನಟಿಸೋಕೆ ಹಿಂದು ಮುಂದು ನೋಡದೇ ಒಪ್ಪಿಕೊಳ್ಳುತ್ತಿದ್ದಾರೆ.


Click it and Unblock the Notifications











