26ನೇ ದಿನವೂ 'ವೇದ' ಹೌಸ್‌ಫುಲ್: 4ನೇ ವಾರ ಬೆಂಗಳೂರಿನ ಎಷ್ಟು ಸ್ಕ್ರೀನ್‌ಗಳಲ್ಲಿ ಶಿವಣ್ಣನ ಆರ್ಭಟ ನಡೀತಿದೆ?
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 'ವೇದ' ಸಿನಿಮಾ 25 ದಿನ ಪೂರೈಸಿ 50ನೇ ದಿನದತ್ತ ಮುನ್ನುಗ್ಗುತ್ತಿದೆ. ಮಾಸ್ ಎಂಟರ್‌ಟೈನರ್ ಸಿನಿಮಾ ಅಭಿಮಾನಿಗಳನ್ನು ರಂಜಿಸ್ತಿದೆ. 26ನೇ ದಿನವೂ ಕೆಲವೆಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಎ. ಹರ್ಷ ನಿರ್ದೇಶನದ ಚಿತ್ರಕ್ಕೆ ಫ್ಯಾಮಿಲಿ ಅಡಿಯನ್ಸ್ ಮನ ಸೋತಿದ್ದಾರೆ. ಪರಭಾಷೆಯ 4 ದೊಡ್ಡ ಸಿನಿಮಾಗಳ ನಡುವೆಗೂ 'ವೇದ' ಅಬ್ಬರ ಜೋರಾಗಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಕನ್ನಡ ಸಿನಿರಸಿಕರು ಸಿನಿಮಾ ನೋಡಲು ಮುಗಿಬಿದ್ದಿದ್ದರು.
ತಂದೆ 'ವೇದ', ಮಗಳು ಕನಕಳ ಪ್ರತಿಕಾರದ ಕಥೆ ಪ್ರೇಕ್ಷಕರಿಗೆ ಇಷ್ಟವಾಗಿದೆ. 125ನೇ ಸಿನಿಮಾದಲ್ಲಿ ಶಿವಣ್ಣನಿಗಿಂತ ಮಹಿಳಾ ಪಾತ್ರಗಳಿಗೆ ಹೆಚ್ಚಿನ ಮಹತ್ವ ಸಿಕ್ಕಿದೆ. ಅದಿತಿ ಅರುಣ್ ಸಾಗರ್, ಗಾನವಿ ಲಕ್ಷ್ಮಣ್, ಶ್ವೇತಾ ಚೆಂಗಪ್ಪ ಪ್ರಮುಖ ಪಾತ್ರಗಳಲ್ಲಿ ಅಬ್ಬರಿಸಿದ್ದಾರೆ. ಒಬ್ಬರಿಗಿಂತ ಒಬ್ಬರು ರೋಷವೇಶ ಪ್ರದರ್ಶನ ಮಾಡಿದ್ದಾರೆ. ಒಂದು ಘಟನೆಯಿಂದ ಒಂದು ಕುಟುಂಬ ಹೇಗೆಲ್ಲಾ ತತ್ತರಿಸಿ ಹೋಗುತ್ತದೆ? ಆ ಮನೆಯ ಆಧಾರಸ್ತಂಭವಾದ ನಾಯಕ ಅದಕ್ಕೆ ಹೇಗೆ ಪ್ರತಿಕಾರ ತೀರಿಸಿಕೊಳ್ಳುತ್ತಾನೆ ಎನ್ನುವುದು ಚಿತ್ರದ ಕಥೆ. 3 ಕಾಲಘಟ್ಟದಲ್ಲಿ ಕತೆ ಸಾಗುತ್ತದೆ. ಸಿಂಪಲ್ ಕಥೆಯಾದರೂ ಟ್ರೀಟ್‌ಮೆಂಟ್ ಚೆನ್ನಾಗಿದೆ.

ಶಿವಣ್ಣ 'ವೇದ' ಆಗಿ ಮತ್ತೊಮ್ಮೆ ಅದ್ಭುತ ಅಭಿನಯ ಪ್ರದರ್ಶಿಸಿದ್ದಾರೆ. ಅದಿತಿ ಅರುಣ್ ಸಾಗರ್ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಡಿಸೆಂಬರ್ 23ಕ್ಕೆ ರಿಲೀಸ್ ಆಗಿದ್ದ ಸಿನಿಮಾ ಯಶಸ್ವಿಯಾಗಿ 25 ದಿನ ಪೂರೈಸಿದೆ. ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಗೀತಾ ಶಿವರಾಜ್‌ಕುಮಾರ್ ಮೊದಲ ಬಾರಿಗೆ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. 26ನೇ ದಿನವೂ ನಗರದ ಕೆಲವೆಡೆ ಸಿನಿಮಾ ಹೌಸ್‌ಫುಲ್ ಆಗಿತ್ತು. ಸದ್ಯ ಬೆಂಗಳೂರಿನಲ್ಲಿ 30ಕ್ಕೂ ಅಧಿಕ ಶೋಗಳು ಪ್ರದರ್ಶನ ಆಗುತ್ತಿದೆ.

ತೆಲುಗಿನ 'ವೀರಸಿಂಹ ರೆಡ್ಡಿ' ಹಾಗೂ 'ವಾಲ್ತೇರು ವೀರಯ್ಯ', ತಮಿಳಿನ 'ವಾರಿಸು' ಮತ್ತು 'ಥುನಿವು' ಸಿನಿಮಾಗಳು ಕರ್ನಾಟಕದಲ್ಲಿ ದೊಡ್ಡದಾಗಿ ತೆರೆಗಪ್ಪಳಿಸಿವೆ. ಆದರೆ ಆ 4 ಸಿನಿಮಾಗಳ ಎದುರು 'ವೇದ' ಸಿನಿಮಾ ಅಬ್ಬರಿಸುತ್ತಿದೆ. 26ನೇ ದಿನವೂ ಸಿನಿಮಾ ಕೆಲವೆಡೆ ಹೌಸ್‌ಫುಲ್ ಪ್ರದರ್ಶನ ಕಂಡಿರುವುದು ವಿಶೇಷ. ಇನ್ನು ಈಗಾಗಲೇ ಚಿತ್ರತಂಡ ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಜಯಯಾತ್ರೆ ಕೈಗೊಂಡು ಸಿನಿಮಾ ಗೆಲ್ಲಿಸಿದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿ ಬಂದಿದೆ.

4ನೇ ಬಾರಿಗೆ ಶಿವಣ್ಣ- ಎ. ಹರ್ಷ ಒಟ್ಟಾಗಿ ಈ ಚಿತ್ರಕ್ಕೆ ಕೆಲಸ ಮಾಡಿದ್ದರು. ಮೊದಲ ದಿನದಿಂದಲೇ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. 2 ವಾರಗಳಲ್ಲಿ ಸಿನಿಮಾ 26 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿತ್ತು. ಚೆನ್ನೈ, ಹೈದರಾಬಾದ್ ಹಾಗೂ ಮುಂಬೈನಲ್ಲೂ 'ವೇದ' ಸಿನಿಮಾ ಪ್ರದರ್ಶನ ಕಂಡಿತ್ತು. ಇನ್ನು ಸಿನಿಮಾ ಸೀಕ್ವೆಲ್ ಮಾಡುವ ಸಾಧ್ಯತೆ ಕೂಡ ಇದೆ.


Click it and Unblock the Notifications











