'ಅಭಿರಾಮಚಂದ್ರ' ಟೀಸರ್ ರಿಲೀಸ್ ಮಾಡಿ ರಿಷಬ್ ಶೆಟ್ಟಿ ಸಿನಿಮಾ ನೆನಪಿಸಿಕೊಂಡಿದ್ದೇಕೆ ಶಿವಣ್ಣ?
ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಸ್ಯಾಂಡಲ್‌ವುಡ್ ಫೇವರಿಟ್ ಸ್ಟಾರ್. ಹೊಸಬರು ಯಾರೇ ಬಂದರೂ ಅವರಿಗೆ ಇಲ್ಲ ಅನ್ನೋ ಮಾತೇ ಇಲ್ಲ. ಹೊಸ ಪ್ರತಿಭೆಗಳ ಸಿನಿಮಾ ಕಾರ್ಯಕ್ರಮಗಳಿಗೆ ಹೋಗಿ ಹರಸಿ ಬರುತ್ತಾರೆ. ಇಲ್ಲ ತಂಡವೇ ಮನೆಗೆ ಹೋಗಿ ಶಿವಣ್ಣನ ಭೇಟಿ ಮಾಡಿಬರುತ್ತೆ.
ಹೊಸಬರ ಸಿನಿಮಾಗಳಿಗೆ ಪ್ರೋತ್ಸಾಹ ನೀಡೋದು ಇತ್ತೀಚೆಗಿನ ಪರಿಪಾಠವೇನೂ ಅಲ್ಲ. ಹಲವು ವರ್ಷಗಳಿಂದ ಶಿವರಾಜ್‌ಕುಮಾರ್ ಈ ಪದ್ಧತಿಯನ್ನು ಅಭ್ಯಾಸ ಮಾಡಿಕೊಂಡು ಬಂದಿದ್ದಾರೆ. ಸದ್ಯಕ್ಕೀಗ 'ಅಭಿರಾಮಚಂದ್ರ' ತಂಡಕ್ಕೆ ಬೆಂಬಲವಾಗಿ ನಿಂತಿದ್ದಾರೆ.
ರಥ ಕಿರಣ್, ಸಿದ್ದು ಮೂಲಿಮನಿ, ನಾಟ್ಯ ರಂಗ ಲೀಡ್ ರೋಲ್‌ನಲ್ಲಿ ನಟಿಸಿರುವ 'ಅಭಿರಾಮಚಂದ್ರ'. ಇದೇ ಸಿನಿಮಾದ ಟೀಸರ್ ಶಿವಣ್ಣನೇ ರಿಲೀಸ್ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಟೀಸರ್ ನೋಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ನೆನಪಿಸಿಕೊಂಡಿದ್ದಾರೆ. ಅಷ್ಟಕ್ಕೂ ಟೀಸರ್ ನೋಡಿ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಸಿನಿಮಾವನ್ನು ನೆನಪಿಸಿಕೊಂಡಿದ್ದೇಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಅಭಿರಾಮಚಂದ್ರ' ಟೀಸರ್ ನೋಡಿ ಶಿವಣ್ಣ ಏನಂದ್ರು?
'ಅಭಿರಾಮಚಂದ್ರ' ಸಿನಿಮಾದ ಟೀಸರ್ ಅನ್ನು ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ರಿಲೀಸ್ ಮಾಡಿದ್ದಾರೆ. ಆ ಬಳಿಕ ಟೀಸರ್ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. "ಅಭಿರಾಮಚಂದ್ರ ಟೀಸರ್ ರಿಲೀಸ್ ಮಾಡಿದ್ದು ಬಹಳ ಖುಷಿಯಾಯ್ತು. ನಾಗೇಂದ್ರ ಗಾಣಿಗ ಡೈರೆಕ್ಷನ್ ಮಾಡಿದ್ದಾರೆ. ತುಂಬಾ ಬ್ಯೂಟಿಫುಲ್ ವಿಜ್ಯೂವಲ್ಸ್ ಇತ್ತು. ಮಕ್ಕಳ ಕಥೆ ಇದೆ. ಸ್ಟೋರಿಯಲ್ಲಿ ಬೇರೆ ಬೇರೆ ತಿರುವು ಕಾಣುತ್ತಿದೆ." ಎಂದು ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೇ ರಿಷಬ್ ಶೆಟ್ಟಿ ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ.
"ಅಭಿರಾಮಚಂದ್ರ ಸಿನಿಮಾದ ಟೀಸರ್ ನೋಡ್ತಿದ್ರೆ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ನೆನಪಾಯ್ತು. ಆ ಸಿನಿಮಾ ಹಾಗೇನೆ ಇದೂ ಕೂಡ ಹಿಟ್ ಆಗಲಿ. ಟೈಟಲ್ ತುಂಬಾ ಪಾಸಿಟಿವ್ ಆಗಿದೆ. ಸಿನಿಮಾ ಮೇ ನಲ್ಲಿ ರಿಲೀಸ್ ಆಗುತ್ತಿದೆ. ನಾನು ಈ ಸಿನಿಮಾ ನೋಡುತ್ತೇನೆ. ರವಿಬಸ್ರೂರ್ ಮ್ಯೂಸಿಕ್ ಮಾಡಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ " ಎಂದು ಚಿತ್ರತಂಡವನ್ನು ಹರಸಿದ್ದಾರೆ.
ಈ ಸಿನಿಮಾದ ಕಥೆಯೇನು?
'ಅಭಿರಾಮಚಂದ್ರ' ಸಿನಿಮಾ ಟೀಸರ್ ನೋಡಿದರೆ ಮಕ್ಕಳ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ ಅನ್ನೋ ಹಾಗಿದೆ. ಶಾಲಾ ದಿನಗಳ ಪ್ರೀತಿ, ತುಂಟಾಟ, ಮುಗ್ದ ಸ್ನೇಹ ಸುಂದರ ನೋಟ 'ಅಭಿರಾಮಚಂದ್ರ' ಟೀಸರ್‌ನಲ್ಲಿ ಎದ್ದು ಕಾಣುತ್ತಿದೆ. ಹೀಗಾಗಿ ಟೀಸರ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
'ಅಭಿರಾಮಚಂದ್ರ' ಸಿನಿಮಾವನ್ನು ನಾಗೇಂದ್ರ ಗಾಣಿಗ ನಿರ್ದೇಶನ ಮಾಡಿದ್ದು, ಇದು ಚೊಚ್ಚಲ ಸಿನಿಮಾ. ಈ ಹಿಂದೆ 'ಕಿರಿಕ್ ಪಾರ್ಟಿ' ಸಿನಿಮಾಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರು. ಹೀಗಾಗಿ ಸಿನಿಮಾದ ಕಂಟೆಂಟ್ ಬಗ್ಗೆ ನಿರೀಕ್ಷೆಗಳು ಇವೆ. ರಥ ಕಿರಣ ಸಿದ್ದು ಮೂಲಿಮನಿ, ನಾಟ್ಯರಂಗ ಜೊತೆ ಶಿವಾನಿ ರೈ ಹೀರೊಯಿನ್ ಆಗಿ ನಟಿಸುತ್ತಿದ್ದಾರೆ.
ರವಿ ಬಸ್ರೂರು ಮ್ಯೂಸಿಕ್
'ಅಭಿರಾಮಚಂದ್ರ' ಸಿನಿಮಾದ ಮತ್ತೊಂದು ಅಟ್ರ್ಯಾಕ್ಷನ್ ಅಂದ್ರೆ ರವಿ ಬಸ್ರೂರು. ಈ ಸಿನಿಮಾಗೆ ರವಿಬಸ್ರೂರು ಟ್ಯೂನ್ ಹಾಕಿದ್ದು, ರವಿ ಬಸ್ರೂರು ಮೂವೀಸ್ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿದೆ. ಕುಂದಾಪುರ, ಬೆಂಗಳೂರು, ಮೈಸೂರು ಭಾಗದಲ್ಲಿ ಈ ಸಿನಿಮಾದ ಶೂಟಿಂಗ್ ನಡೆದಿದೆ.

ರವಿ ಬಸ್ರೂರು ಪುತ್ರ ಪವನ್ ಕೂಡ ಈ ಸಿನಿಮಾದಲ್ಲಿ ನಟಿಸಿರೋದು ವಿಶೇಷ. ಹಾಗೇ ವೀಣಾ ಸುಂದರ್, ಸುಂದರ್ , ಎಸ್.ನಾರಾಯಣ್, ಪ್ರಕಾಶ್ ತೂಮಿನಾಡು ಸೇರಿದಂತೆ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಎ.ಜಿ.ಸುರೇಶ್ ಹಾಗೂ ಮಲ್ಲೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಸಂದೀಪ್ ವಲ್ಲೂರಿ ಕ್ಯಾಮರಾವರ್ಕ್, ಸುರೇಶ್ ಆರುಮುಗಂ ಎಡಿಟಿಂಗ್ ಇದೆ. ಇನ್ನು 'ಅಭಿರಾಮಚಂದ್ರ' ಸಿನಿಮಾ ಇದೇ ಮೇ ತಿಂಗಳಲ್ಲಿ ರಿಲೀಸ್ ಆಗಲಿದೆ.


Click it and Unblock the Notifications











