'ಬೈರತಿ ರಣಗಲ್' ಮುಹೂರ್ತ.. ಕಪ್ಪು ಶರ್ಟ್, ಕಪ್ಪು ಪಂಚೆಯಲ್ಲೇ ಮಿಂಚಿದ ಶಿವಣ್ಣ
ಶಿವಣ್ಣ- ನರ್ತನ್ ಕಾಂಬಿನೇಷನ್ 'ಬೈರತಿ ರಣಗಲ್' ಸಿನಿಮಾ ಸೆಟ್ಟೇರಿದೆ. ನಗರದ ಬಂಡೆ ಮಾಕಾಳಮ್ಮ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಚಿತ್ರಕ್ಕೆ ಚಾಲನೆ ಕೊಡಲಾಗಿದೆ. 6 ವರ್ಷಗಳ ಹಿಂದೆ ಬಂದಿದ್ದ 'ಮಫ್ತಿ' ಸಿನಿಮಾ ಪ್ರೀಕ್ವೆಲ್ ಇದು. 'ಬೈರತಿ ರಣಗಲ್' ಹಿನ್ನೆಲೆ ಏನು ಎನ್ನುವ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗ್ತಿದೆ. ಗೀತಾ ಪಿಕ್ಚರ್ಸ್ ಸಂಸ್ಥೆ ಚಿತ್ರ ನಿರ್ಮಿಸ್ತಿದೆ.
ಚಿತ್ರದ ಮುಹೂರ್ತ ಸಮಾರಂಭಕ್ಕೆ ಸೆಂಚುರಿ ಸ್ಟಾರ್ ಬ್ಲ್ಯಾಕ್ ಅಂಡ್ ಬ್ಲ್ಯಾಕ್‌ನಲ್ಲಿ 'ಬೈರತಿ ರಣಗಲ್' ಗೆಟಪ್‌ನಲ್ಲೇ ಬಂದಿದ್ದು ವಿಶೇಷ. ನಿರ್ಮಾಪಕರಾದ ಕೆ. ಪಿ ಶ್ರೀಕಾಂತ್, ಕಾರ್ತಿಕ್ ಗೌಡ, ನಿರ್ದೇಶಕ ನರ್ತನ್, ಗೀತಾ ಶಿವರಾಜ್‌ಕುಮಾರ್ ಸೇರಿದಂತೆ ಸಾಕಷ್ಟು ಗಣ್ಯರು ಮುಹೂರ್ತ ಸಮಾರಂಭಕ್ಕೆ ಸಾಕ್ಷಿ ಆದರು. 2017ರಲ್ಲಿ ಒಂದಿದ್ದ 'ಮಫ್ತಿ' ಸೂಪರ್ ಹಿಟ್ ಆಗಿತ್ತು. ಅದರಲ್ಲೂ ಶಿವಣ್ಣ ಮಾಡಿದ್ದ 'ಬೈರತಿ ರಣಗಲ್' ಪಾತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಅದೇ ಪಾತ್ರವನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗ್ತಿದೆ.

'ಮಫ್ತಿ' ಸಿನಿಮಾ ಸಕ್ಸಸ್ ಆಗ್ತಿದ್ದಂತೆ ಶಿವಣ್ಣ 'ಬೈರತಿ ರಣಗಲ್' ಸಿನಿಮಾ ಮಾಡುವುದಾಗಿ ಹೇಳಿದ್ದರು. ಆದರೆ ಕಾರಣಾಂತರಗಳಿಂದ ತಡವಾಗಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಶಿವಣ್ಣ 125ನೇ ಸಿನಿಮಾ ಇದೇ ಆಗಬೇಕಿತ್ತು. ಕೊಂಚ ತಡವಾದರೂ 'ರಣಗಲ್' ನಿಮಗೆ ಥ್ರಿಲ್ ಕೊಡೋದು ಗ್ಯಾರೆಂಟಿ ಎಂದು ಚಿತ್ರತಂಡ ಹೇಳಿದೆ. ಸಿನಿಮಾ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಚಿತ್ರತಂಡ ಉತ್ತರಿಸಿದೆ.

ಚಿತ್ರದಲ್ಲಿ ಸ್ಪೆಷಲ್ ಎಲಿಮೆಂಟ್
ಸದ್ಯ ಮಲ್ಟಿಸ್ಟಾರರ್ ಸಿನಿಮಾಗಳ ಟ್ರೆಂಡ್ ನಡೀತಿದೆ. 'ಮಫ್ತಿ' ಚಿತ್ರದಲ್ಲೂ ಶಿವಣ್ಣನ ಜೊತೆ ಶ್ರೀಮುರಳಿ ಅಬ್ಬರಿಸಿದ್ದರು. 'ಬೈರತಿ ರಣಗಲ್' ಚಿತ್ರದಲ್ಲಿ ಯಾರದರೂ ಸ್ಟಾರ್ ನಟರು ಇರ್ತಾರಾ? ಎನ್ನುವ ಪ್ರಶ್ನೆಗೆ ಶಿವಣ್ಣ ಪ್ರತಿಕ್ರಿಯಿಸಿದ್ದಾರೆ. "ಈಗಲೇ ನಾವು ಹೇಳುವುದು ಕಷ್ಟ. ಮುಂದಿನ ದಿನಗಳಲ್ಲಿ ಹೇಳ್ತೇವೆ. ಅವರು ಬರ್ತಾರೆ ಇವ್ರು ಇರ್ತಾರೆ ಅಂತ ಹೇಳಲ್ಲ. ಒಂದು ವೇಳೆ ಹೇಳಿ ಬರದೇ ಇದ್ದರೆ ನಿಮಗೂ ಬೇಸರಾಗುತ್ತೆ. ಆದರೆ ಒಂದು ಸ್ಪೆಷಲ್ ಎಲಿಮೆಂಟ್ ಇದೆ. ಅದು ಫೈನಲ್ ಆದಮೇಲೆ ಖಂಡಿತ ಹೇಳುತ್ತೇವೆ" ಎಂದು ಶಿವಣ್ಣ ಉತ್ತರಿಸಿದ್ದಾರೆ.
26ರ ಯುವಕನಾಗಿ ಶಿವಣ್ಣ
ಇದು 'ಮಫ್ತಿ'ಗಿಂತ ಹಿಂದಿನ ಕಥೆ. ಅಂದರೆ 'ಬೈರತಿ ರಣಗಲ್' ಹಿನ್ನಲೆ ಏನು? ಆತ ಯಾಕೆ ರಾಕ್ಷಸನಂತಾದ ಎನ್ನುವ ಕಥೆ. ಹಾಗಾಗಿ ಶಿವಣ್ಣ ಎಷ್ಟು ಯಂಗ್ ಆಗಿ ಕಾಣಿಸಿಕೊಳ್ತಾರೆ? ಎನ್ನುವ ಪ್ರಶ್ನೆ ಮೂಡುತ್ತೆ. ಈ ಪ್ರಶ್ನೆಗೆ ನಿರ್ಮಾಪಲ ಕೆ. ಪಿ ಶ್ರೀಕಾಂತ್ ಮಾತನಾಡಿ "26ರ ಯುವಕನಾಗಿ ಶಿವಣ್ಣ ಕಾಣಿಸಿಕೊಳ್ಳುತ್ತಾರೆ. 'ಮಫ್ತಿ' ಚಿತ್ರದಲ್ಲಿ 33 ವರ್ಷದವರಾಗಿ ನೋಡಿದ್ದೇವೆ, ಅದಕ್ಕಿಂತ ಐದಾರು ವರ್ಷ ಹಿಂದೆ ಕಥೆ" ಎಂದಿದ್ದಾರೆ.
ನಾಯಕಿ ಯಾರು?
ಚಿತ್ರದಲ್ಲಿ 'ಬೈರತಿ ರಣಗಲ್'ಗೆ ನಾಯಕಿ ಕೂಡ ಇದ್ದಾಳೆ. ಯಾರು ನಾಯಕಿ ಆಗಬಹುದು ಎನ್ನುವ ಪ್ರಶ್ನೆಗೆ "ಕಥೆಗೆ ಯಾರು ಹೊಂದಿಕೊಳ್ಳುತ್ತಾರೋ ಅವರನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಕನ್ನಡ ನಟಿ ಆದರೂ ಸರಿ. ಆ ಪಾತ್ರಕ್ಕೆ ಬಹಳ ಮಹತ್ವ ಇದೆ. ಆ ಪಾತ್ರಕ್ಕೆ ಬಹಳ ಭಾವನೆಗಳು ಇವೆ. ಅದು ರಣಗಲ್ ಪಾತ್ರಕ್ಕೆ ಚೆನ್ನಾಗಿ ಹೊಂದಿಕೆ ಆಗುತ್ತದೆ. ಆದಷ್ಟು ಬೇಗ ನಾಯಕಿ ಯಾರು ಅಂತ ಹೇಳ್ತೀವಿ" ಎಂದಿದ್ದಾರೆ.
ಬಳ್ಳಾರಿ, ಮೈಸೂರಿನಲ್ಲಿ ಶೂಟಿಂಗ್
ಬಾಲಕೃಷ್ಣ ಜೊತೆಗೂ ಒಂದು ಸಿನಿಮಾ ಮಾಡುವುದಾಗಿ ಶಿವಣ್ಣ ಹೇಳಿದ್ದಾರೆ. ಬಳ್ಳಾರಿ, ಮೈಸೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ. 'ಮಫ್ತಿ' ಚಿತ್ರಕ್ಕೆ ಕೆಲಸ ಮಾಡಿದ್ದ ತಂಡವೇ ಈ ಚಿತ್ರಕ್ಕೂ ಬಹುತೇಕ ಕೆಲಸ ಮಾಡಲಿದೆ. ಆ ಚಿತ್ರದಲ್ಲಿದ್ದ ಕೆಲ ಪಾತ್ರಗಳು ಇಲ್ಲಿ ಇರಲಿವೆ. ಜೂನ್ 10ಕ್ಕೆ ಸಿನಿಮಾ ಚಿತ್ರೀಕರಣ ಶುರುವಾಗಲಿದೆ.


Click it and Unblock the Notifications











