ಶಿವಣ್ಣನ 'ಘೋಸ್ಟ್' ಸಿನಿಮಾ ಚಿತ್ರೀಕರಣಕ್ಕೆ ಕುಂಬಳಕಾಯಿ: ಟೀಸರ್ ರಿಲೀಸ್‌ಗೆ ಮುಹೂರ್ತ ಫಿಕ್ಸ್
ಶ್ರೀನಿ ನಿರ್ದೇಶನದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 'ಘೋಸ್ಟ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕಿದೆ. ಕನ್ನಡ ಮಾತ್ರವಲ್ಲದೇ ಪರಭಾಷೆಯ ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಶಿವಣ್ಣನ ಲುಕ್ ಕುತೂಹಲ ಕೆರಳಿಸಿದೆ. ಟೈಟಲ್‌ನಿಂದಲೇ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಈವರೆಗೆ 'ಘೋಸ್ಟ್' ಚಿತ್ರದ ಅಧಿಕೃತ ಪೋಸ್ಟರ್, ಟೀಸರ್ ಇನ್ನು ರಿಲೀಸ್ ಆಗಿಲ್ಲ.
'ಟೋಪಿವಾಲ', 'ಶ್ರೀನಿವಾಸ ಕಲ್ಯಾಣ', 'ಬೀರ್‌ಬಲ್', 'ಓಲ್ಡ್ ಮಾಂಕ್' ರೀತಿಯ ವಿಭಿನ್ನ ಸಿನಿಮಾಗಳನ್ನು ಕೊಟ್ಟ ಶ್ರೀನಿ ಈಗ ಹ್ಯಾಟ್ರಿಕ್ ಹೀರೊಗೆ ಆಕ್ಷನ್ ಕಟ್ ಹೇಳಿದ್ದಾರೆ. 'ವೇದ' ನಂತರ ಶಿವಣ್ಣ ಹೀರೊ ಆಗಿ ನಟಿಸಿದ ಯಾವುದೇ ಸಿನಿಮಾ ರಿಲೀಸ್ ಆಗಿದೆ. ಸದ್ಯ 'ಘೋಸ್ಟ್' ಸಿನಿಮಾ ಚಿತ್ರೀಕರಣ ಮುಗಿಸಿರುವುದಾಗಿ ಚಿತ್ರತಂಡ ಘೋಷಿಸಿದೆ. ಶೀಘ್ರದಲ್ಲೇ ಟೀಸರ್ ರಿಲೀಸ್ ಮಾಡುವುದಾಗಿಯೂ ಸುಳಿವು ನೀಡಿದೆ. ಪ್ರೇಕ್ಷಕರು 'ಘೋಸ್ಟ್' ಅವತಾರದಲ್ಲಿ ಸೆಂಚುರಿ ಸ್ಟಾರ್‌ನ ನೋಡಲು ಕಾಯ್ತಿದ್ದಾರೆ.

'ಘೋಸ್ಟ್' ಚಿತ್ರಕ್ಕೆ ನಿರ್ದೇಶಕ ಶ್ರೀನಿ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಂಭಾಷಣೆ ಜವಾಬ್ದಾರಿಯನ್ನು ಮಾಸ್ತಿ ಹಾಗೂ ಪ್ರಸನ್ನ ವಹಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ಅದ್ಧೂರಿಯಾಗಿ ನಿರ್ಮಾಣ ಆಗುತ್ತಿದೆ. ಭಾರೀ ವೆಚ್ಚದಲ್ಲಿ ಬಹಳ ರೋಚಕವಾಗಿ ಸಿನಿಮಾ ಸೆರೆಹಿಡಿಯಲಾಗಿದೆ.
ಶಿವಣ್ಣನ ಹುಟ್ಟುಹಬ್ಬಕ್ಕೆ ಟೀಸರ್
ಜುಲೈ 12ಕ್ಕೆ ಸೆಂಚುರಿ ಸ್ಟಾರ್ ಹುಟ್ಟುಹಬ್ಬ. ಅದೇ ಸಂಭ್ರಮದಲ್ಲಿ 'ಘೋಸ್ಟ್' ಸಿನಿಮಾ ಟೀಸರ್ ರಿಲೀಸ್ ಪ್ಲ್ಯಾನ್ ನಡೀಯಿದೆ. ಸದ್ಯ ಚಿತ್ರದ ಪ್ರೀ ಪ್ರೊಡಕ್ಷನ್ ವರ್ಕ್ ಶುರುವಾಗುತ್ತಿದ್ದು ಆಗಸ್ಟ್ ವೇಳೆಗೆ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. ಶ್ರೀನಿ ಶಿವಣ್ಣನ ಅಭಿಮಾನಿ. ತನ್ನ ನೆಚ್ಚಿನ ನಟನನ್ನು ಬಹಳ ವಿಭಿನ್ನವಾಗಿ ತೆರೆಮೇಲೆ ತೋರಿಸಬೇಕು ಎಂದು ಶ್ರೀನಿ ತೀರ್ಮಾನಿಸಿ ಬಹಳ ವಿಭಿನ್ನವಾಗಿ ಈ ಸಿನಿಮಾ ಕಟ್ಟಿಕೊಟ್ಟಿದ್ದಾರೆ.

ಬರೀ ಸೆಟ್‌ಗಳಲ್ಲಿ ಚಿತ್ರೀಕರಣ
'ಘೋಸ್ಟ್' ಚಿತ್ರದ ಬಹುತೇಕ ಶೂಟಿಂಗ್ ಸೆಟ್‌ಗಳಲ್ಲೇ ನಡೆದಿದೆ. 3 ಕೋಟಿ ವೆಚ್ಚದಲ್ಲಿ 15 ಸೆಟ್‌ಗಳನ್ನು ನಿರ್ಮಿಸಿ ಸನ್ನಿವೇಶಗಳನ್ನು ಸೆರೆ ಹಿಡಿಯಲಾಗಿದೆ. ಕಲಾ ನಿರ್ದೇಶಕ ಮೋಹನ್ ಬಿ ಕೆರೆ, ಬೆಂಗಳೂರಿನ ಮಿನರ್ವ ಮಿಲ್ ಹಾಗೂ ಮೈಸೂರಿನಲ್ಲಿ ಸೆಟ್‌ಗಳನ್ನು ನಿರ್ಮಿಸಿದ್ದರು. ಮಿನರ್ವ ಮಿಲ್‌ನಲ್ಲಿ ಮುಹೂರ್ತ ನೆರವೇರಿಸಿ ಜೈಲ್ ಸೆಟ್‌ನಲ್ಲಿ ಸಿನಿಮಾ ಚಿತ್ರೀಕರಣ ಆರಂಭಿಸಲಾಗಿತ್ತು. ಅಲ್ಲೇ 25 ದಿನಗಳ ಕಾಲ ಶೂಟಿಂಗ್ ನಡೆದಿತ್ತು.
ಕುತೂಹಲ ಕೆರಳಿಸುವ ಕಥೆ
ಅಂದಹಾಗೆ 'ಘೋಸ್ಟ್' ಚಿತ್ರದಲ್ಲಿ ನಾಯಕಿ ಇಲ್ಲ. ಇದು 48 ಘಂಟೆಗಳಲ್ಲಿ ನಡೆಯುವ ಕಥೆ. ಇಲ್ಲಿ ನಾಯಕಿ, ಡ್ಯುಯೆಟ್ ಯಾವುದಕ್ಕೂ ಜಾಗವಿಲ್ಲ. ಶಿವರಾಜಕುಮಾರ್, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ಬಣ್ಣ ಹಚ್ಚಿ ನಟಿಸಿದ್ದಾರೆ. ಮಲಯಾಳಂ ನಟ ಜಯರಾಮ್ ಪೊಲೀಸ್ ಆಫೀಸರ್ ರೋಲ್‌ನಲ್ಲಿ ನಟಿಸಿದ್ದಾರೆ. ಬಾಲಿವುಡ್ ನಟ ಅನುಪಮ್ ಕೇರ್ ಕೂಡ ತಾರಾಗಣದಲ್ಲಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾ?
ಸದ್ಯ ಈಗ ಎಲ್ಲೆಲ್ಲೂ ಪ್ಯಾನ್ ಇಂಡಿಯಾ ಟ್ರೆಂಡ್ ನಡೀತಿದೆ. ಈಗಾಗಲೇ ಶಿವಣ್ಣನ ಸಿನಿಮಾಗಳು ಬೇರೆ ಭಾಷೆಗೆ ಡಬ್ ಆಗಿ ರಿಲೀಸ್ ಆಗಿರುವ ಉದಾಹರಣೆ ಇದೆ. ಆದರೆ ಏಕಕಾಲಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿಲ್ಲ. 'ಘೋಸ್ಟ್' ಯೂನಿವರ್ಸಲ್ ಸಬ್ಜೆಕ್ಟ್ ಆಗಿರುವುದರಿಂದ ಬೇರೆ ಭಾಷೆಗಳಿಗೂ ಡಬ್ ಮಾಡಿ ರಿಲೀಸ್ ಮಾಡುವ ಸಾಧ್ಯತೆಯಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಇನ್ನು ಸಿಕ್ಕಿಲ್ಲ.


Click it and Unblock the Notifications











