ಇದೇ ಕ್ರಿಸ್‌ಮಸ್‌ಗೆ ರಣ ಬೇಟೆಗಾರ ಬರ್ತಾನೆ ರೆಡಿ ಇರಿ ಎಂದ ಶಿವಣ್ಣ
ಈ ವರ್ಷ ಇಲ್ಲಿಯವರೆಗೂ ಶಿವರಾಜ್ ಕುಮಾರ್ ಅಭಿನಯದ ಕೇವಲ 2 ಚಿತ್ರಗಳು ಮಾತ್ರ ಬಿಡುಗಡೆಯಾಗಿವೆ. ಅಪ್ಪು ಅಭಿನಯದ ಜೇಮ್ಸ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶಿವರಾಜ್ ಕುಮಾರ್ ಅಭಿನಯದ ಬೈರಾಗಿ ಚಿತ್ರ ಕೂಡ ಇದೇ ವರ್ಷ ತೆರೆಕಂಡಿತ್ತು ಹಾಗೂ ಬೈರಾಗಿ ಶಿವಣ್ಣ ಅಭಿನಯದ ಕೊನೆಯ ಚಿತ್ರವೂ ಸಹ ಆಗಿದೆ.
ಹೀಗೆ ಬೈರಾಗಿ ಬಳಿಕ ಶಿವಣ್ಣ ಅಭಿನಯದ ಸಾಲು ಸಾಲು ಚಿತ್ರಗಳು ಚಿತ್ರೀಕರಣಗೊಳ್ಳುತ್ತಿದ್ದು, ಮುಂದಿನ ವರ್ಷ ಹೆಚ್ಚು ಚಿತ್ರಗಳು ಚಿತ್ರಮಂದಿರಕ್ಕೆ ಲಗ್ಗೆ ಇಡಲಿವೆ. ಇನ್ನು ಈ ವರ್ಷದ ಅಂತಿಮ ವಾರದಲ್ಲಿ ಶಿವಣ್ಣ ಅಭಿನಯದ ಮತ್ತೊಂದು ಚಿತ್ರ ಬೆಳ್ಳಿತೆರೆಗೆ ಅಪ್ಪಳಿಸಲು ತಯಾರಾಗಿದೆ.
ಹೌದು, ಶಿವರಾಜ್ ಕುಮಾರ್ ಹಾಗೂ ಎ ಹರ್ಷ ಕಾಂಬಿನೇಷನ್ ಅಡಿಯಲ್ಲಿ ತಯಾರಾಗುತ್ತಿರುವ ನಾಲ್ಕನೇ ಚಿತ್ರವಾದ ವೇದ ಇದೇ ವರ್ಷದ ಅಂತಿಮ ವಾರದಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಚಿತ್ರಮಂದಿರಗಳಿಗೆ ಪ್ರವೇಶಿಸಲಿದೆ. ನಿನ್ನೆಯಷ್ಟೆ ( ಸೆಪ್ಟೆಂಬರ್ 29 ) ಪೋಸ್ಟ್ ಹಂಚಿಕೊಂಡಿದ್ದ ಚಿತ್ರತಂಡ ನಾಳೆಯ ದಿನ ಚಿತ್ರದ ವಿಶೇಷ ಪೋಸ್ಟರ್ ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿತ್ತು.

ಅದರಂತೆ ಇಂದು ಚಿತ್ರದ ನಾಯಕ ಶಿವರಾಜ್ ಕುಮಾರ್ ಸೇರಿದಂತೆ ಚಿತ್ರತಂಡದ ಹಲವು ಕಲಾವಿದರು ವೇದ ಚಿತ್ರದ ರಗಡ್ ಪೋಸ್ಟರ್ ಒಂದನ್ನು ಶೇರ್ ಮಾಡಿದ್ದಾರೆ. ಶಿವರಾಜ್ ಕುಮಾರ್ ರಕ್ತಸಿಕ್ತ ಮುಖದೊಂದಿಗೆ ಖಡಕ್ ಪೋಸ್ ನೀಡಿದ್ದಾರೆ. 'ರಣ ಬೇಟೆಗಾರನ ರಕ್ತಸಿಕ್ತ ಅಧ್ಯಾಯಕ್ಕೆ ಮುನ್ನುಡಿ. ಕ್ರಿಸ್ಮಸ್ ಹಬ್ಬ ದಿಂದ ಬೇಟೆ ಶುರುವಾಗಲಿದೆ' ಎಂದು ಶಿವರಾಜ್ ಕುಮಾರ್ ಬರೆದುಕೊಂಡಿದ್ದಾರೆ. ಈ ಚಿತ್ರಕ್ಕೆ ಗೀತಾ ಪಿಕ್ಚರ್ಸ್ ಅಡಿಯಲ್ಲಿ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಬಂಡವಾಳ ಹೂಡಿದ್ದು ಜೀ ಸ್ಟುಡಿಯೋಸ್ ಕೂಡ ಸಹ ನಿರ್ಮಾಪಕರಾಗಿದ್ದಾರೆ.


Click it and Unblock the Notifications











