ಸಿಕ್ಸ್ ಪ್ಯಾಕ್ ಶೇಪ್ ಗಾಗಿ ಶಿವರಾಜ್ ಕುಮಾರ್ ಕಸರತ್ತು
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಿಕ್ಸ್ ಪ್ಯಾಕ್ ಶೇಪ್ ಗಾಗಿ ತಮ್ಮ ದೇಹವನ್ನು ಹುರಿಗೊಳಿಸಲು ಅಣಿಯಾಗಿದ್ದಾರೆ. ದುನಿಯಾ ಸೂರಿ ನಿರ್ದೇಶನದಲ್ಲಿ ಬರುತ್ತಿರುವ ಕಡ್ಡಿಪುಡಿ ಚಿತ್ರೀಕರಣವನ್ನು ಮುಗಿಸಿರುವ ಶಿವಣ್ಣ ಈಗ ತಮ್ಮ ಮುಂದಿನ ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಕಸರತ್ತು ಶುರುವಾಗಲಿದೆ.
ಇಷ್ಟೆಲ್ಲಾ ಸಾಹಸಕ್ಕೆ ಶಿವಣ್ಣ ಕೈಹಾಕುತ್ತಿರುವುದು ತಮ್ಮ ಮುಂದಿನ ಚಿತ್ರ ಭಜರಂಗಿ ಚಿತ್ರಕ್ಕಾಗಿ. ಈ ಚಿತ್ರವನ್ನು ಕೊರಿಯೋಗ್ರಾಫರ್ ಹರ್ಷ ನಿರ್ದೇಶಿಸುತ್ತಿದ್ದು ಶಿವಣ್ಣನ ದೇಹವನ್ನು ಸಿಕ್ಸ್ ಪ್ಯಾಕ್ ಗೆ ತರಲು ಡಯಟ್, ಜಿಮ್ಮು ಶೀಘ್ರದಲ್ಲೇ ಆರಂಭವಾಗಲಿದೆ.
ಜೀವನ ಪಯಣದಲ್ಲಿ ಶಿವಣ್ಣ ಈಗಾಗಲೆ ಅರ್ಧ ಸೆಂಚುರಿ ಬಾರಿಸಿದ್ದರೂ ಅವರು ಇನ್ನೂ ಈಗಷ್ಟೇ ಬೆಳ್ಳಿಪರದೆಗೆ ಅಡಿಯಿಟ್ಟಂತಿದ್ದಾರೆ. ಸಿಕ್ಸ್ ಪ್ಯಾಕ್ ಮಾಡಿಕೊಳ್ಳುವುದೇನು ಅವರಿಗೆ ಕಷ್ಟದ ಕೆಲಸವಲ್ಲ ಬಿಡಿ. ಈಗಾಗಲೆ ಪುನೀತ್ ರಾಜ್ ಕುಮಾರ್ (ಅಣ್ಣಾಬಾಂಡ್), ದುನಿಯಾ ವಿಜಯ್ (ಶಂಕರ್ ಐಪಿಎಸ್), ಚೇತನ್ ಚಂದ್ರ (ಕುಂಭರಾಶಿ) ಸಿಕ್ಸ್ ಪ್ಯಾಕ್ ನಲ್ಲೂ ಹೆಂಗೆಳೆಯರ ಹೃದಯ ಕದ್ದಿದ್ದಾರೆ.ಸಿಕ್ಸ್ ಪ್ಯಾಕ್ ಗಾಗಿ ಶಿವಣ್ಣ ತಯಾರಿಯೂ ಜೋರಾಗಿಯೇ ಇದೆ. "ಚಿತ್ರದಲ್ಲಿ ಶಿವಣ್ಣ ಅವರು ಎರಡು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಲಿದ್ದಾರೆ. ಎರಡೂ ಪಾತ್ರಗಳ ಬಾಡಿ ಲಾಂಗ್ವೇಜ್ ಹಾಗೂ ಲುಕ್ ವಿಭಿನ್ನವಾಗಿರುತ್ತದೆ " ಎನ್ನುತ್ತಾರೆ ಹರ್ಷಾ.
"ನಾನು ಶಾಲಾ ಬಾಲಕನಾಗಿದ್ದಾಗಿನಿಂದಲೂ ಶಿವಣ್ಣ ಅವರ ಅಭಿಮಾನಿ. ಅವರಂತೆ ಹೇರ್ ಸ್ಟೈಲ್ ಮಾಡುವುದು, ಡಾನ್ಸ್ ಮಾಡುತ್ತಿದ್ದೆ. ಅವರ ಇತ್ತೀಚಿನ 'ಶಿವ' ಚಿತ್ರಕ್ಕೂ ನೃತ್ಯ ಸಂಯೋಜನೆ ಮಾಡುವ ಅಪೂರ್ವ ಅವಕಾಶ ಸಿಕ್ಕಿತ್ತು. ಈಗ ಅವರ ಚಿತ್ರವನ್ನು ನಿರ್ದೇಶಿಸುತ್ತಿರುವ ಬಗ್ಗೆ ಸಿಕ್ಕಾಪಟ್ಟೆ ಖುಷಿಯಾಗುತ್ತಿದೆ ಎಂದಿದ್ದಾರೆ ಹರ್ಷಾ.
ಶಿವಣ್ಣ ಹಾಗೂ ನಿರ್ಮಾಪಕ ನಟರಾಜ್ ಗೌಡ ಅವರು ಕತೆ ಕೇಳಿದ ಕೂಡಲೆ 'ಭಜರಂಗಿ' ಚಿತ್ರವನ್ನು ಓಕೆ ಮಾಡಿದ್ದಾರೆ. ಹರ್ಷಾ ಅವರನ್ನು ಶಿವಣ್ಣ ಕೇಳಿದ್ದು ಒಂದೇ ಒಂದು ಪ್ರಶ್ನೆಯಂತೆ, ಚಿತ್ರೀಕರಣ ಯಾವಾಗಿಂದ ಶುರುವಚ್ಚಿಕೊಳ್ಳೋಣ ಎಂದು.
2013ರ ಫೆಬ್ರವರಿಯಿಂದ ಶೂಟಿಂಗ್ ಪ್ರಾರಂಭವಾಲಿದೆ. ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು ಸೂಕ್ತ ನಾಯಕಿಗಾಗಿ ಹುಡುಕಾಟ ನಡೆದಿದೆ. ಶಿವಣ್ಣ ಜೊತೆ ಇದುವರೆಗೂ ಅಭಿನಯಿಸದ ತಾರೆಯನ್ನು ಕರೆತರುವ ಬಗ್ಗೆ ಹರ್ಷಾ ಚಿಂತಿಸಿದ್ದಾರೆ. ಖಳನಟನ ಪಾತ್ರಕ್ಕೆ ಬಡಾ ಸ್ಟಾರ್ ಒಬ್ಬರನ್ನು ಕರೆತರುವುದಾಗಿಯೂ ವಿವರ ನೀಡಿದ್ದಾರೆ.
'ಭಜರಂಗಿ' ಚಿತ್ರಕ್ಕೆ ಸ್ಟಿಲ್ಸ್ ಅಥವಾ ಪೋಸ್ಟರ್ಸ್ ಮೂಲಕವಲ್ಲದೆ ಕ್ಯಾರಿಕೇಚರ್ ಗಳ (ವ್ಯಂಗ್ಯ ಚಿತ್ರಗಳು) ಮೂಲಕ ವಿಭಿನ್ನ ಪ್ರಚಾರ ನೀಡಲಾಗುತ್ತದಂತೆ. ಬಹುಶಃ ಡಿಸೆಂಬರ್ ವೇಳೆಗೆ ಚಿತ್ರದ ಕ್ಯಾರಿಕೇಚರ್ ಗಳು ಸಿದ್ಧವಾಗಲಿವೆ ಎಂದಿದ್ದಾರೆ ಹರ್ಷಾ. (ಏಜೆನ್ಸೀಸ್)


Click it and Unblock the Notifications












