Shiva Rajkumar: ಗಣೇಶ್, ಅಜೇಯ್ ರಾವ್ ಜತೆ ಶಿವಣ್ಣನ ಸಿನಿಮಾ; ಹುಟ್ಟುಹಬ್ಬದ ಪ್ರಯುಕ್ತ ಅನೌನ್ಸ್ ಆದ ಮಲ್ಟಿಸ್ಟಾರರ್ ಚಿತ್ರಗಳಿವು!
Shivarajkumar: ಇಂದು ( ಜುಲೈ 12 ) ಸ್ಯಾಂಡಲ್‌ವುಡ್ ಕಿಂಗ್ ಶಿವರಾಜಕುಮಾರ್ ಅವರ 62ನೇ ಹುಟ್ಟುಹಬ್ಬದ ಸಂಭ್ರಮ. ನೆಚ್ಚಿನ ನಟನ ಹುಟ್ಟುಹಬ್ಬವನ್ನು ಶಿವಣ್ಣನ ಅಭಿಮಾನಿಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಆಚರಿಸುತ್ತಿದ್ದಾರೆ.
ಮಧ್ಯರಾತ್ರಿ ನಾಗವಾರದಲ್ಲಿನ ಶಿವ ರಾಜ್‌ಕುಮಾರ್ ನಿವಾಸದ ಮುಂದೆ ಜಮಾಯಿಸಿದ್ದ ಶಿವಣ್ಣನ ಅಭಿಮಾನಿಗಳು ಕೇಕ್ ಹಾಗೂ ಹಾರಗಳನ್ನು ಹೊತ್ತೊಯ್ದು ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿ, ಜೈಕಾರ ಕೂಗಿ ಸಂಭ್ರಮಿಸಿದ್ದಾರೆ.

ಹೀಗೆ ಕೆಲ ಅಭಿಮಾನಿಗಳು ಶಿವರಾಜ್‌ಕುಮಾರ್ ಮನೆ ಮುಂದೆ ಜಮಾಯಿಸಿ ಶಿವಣ್ಣನಿಗೆ ಶುಭ ಕೋರಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರೆ, ಇನ್ನೂ ಹಲವಾರು ಶಿವರಾಜ್‌ಕುಮಾರ್ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಶಿವರಾಜ್‌ಕುಮಾರ್ ಅವರ ವಿಭಿನ್ನ ಫೋಟೊಗಳನ್ನು ಹಂಚಿಕೊಂಡು ಶುಭ ಕೋರಿ ಸಂತಸ ಹೊರಹಾಕುತ್ತಿದ್ದಾರೆ.
ಇನ್ನು ಹುಟ್ಟುಹಬ್ಬ ಬಂತೆಂದರೆ ಶಿವರಾಜ್‌ಕುಮಾರ್ ಅವರ ಮುಂದಿನ ಚಿತ್ರಗಳು ವಿಶೇಷ ಪೋಸ್ಟರ್ ಬಿಡುಗಡೆ ಮಾಡುವುದು ಕಾಮನ್ ಆಗಿದ್ದು, ಅವುಗಳ ಜತೆಗೆ ಇನ್ನೂ ಹೊಸ ಹೊಸ ಚಿತ್ರಗಳು ಈ ದಿನ ರಿವೀಲ್ ಆಗುವುದು ವಿಶೇಷವಾಗಿರಲಿದೆ.
ಅದರಂತೆ ಈ ವರ್ಷವೂ ಸಹ ಶಿವರಾಜ್‌ಕುಮಾರ್ ಒಪ್ಪಿಗೆ ನೀಡಿರುವ ಹಲವಾರು ಚಿತ್ರಗಳ ವಿಶೇಷ ಪೋಸ್ಟರ್ ಈಗಾಗಲೇ ವೈರಲ್ ಆಗಿವೆ. ಶಿವರಾಜ್‌ಕುಮಾರ್ ಮಾತ್ರ ನಾಯಕನಾಗಿ ನಟಿಸುತ್ತಿರುವ ಹೊಸ ಚಿತ್ರಗಳು ಒಂದಷ್ಟು ಸದ್ದು ಮಾಡುತ್ತಿದ್ದರೆ, ಮತ್ತೊಂದೆಡೆ ಶಿವರಾಜ್‌ಕುಮಾರ್ ನಟನೆಯ ಮಲ್ಟಿಸ್ಟಾರರ್ ಚಿತ್ರಗಳು ಘೋಷಣೆಯಾಗಿ ಕುತೂಹಲ ಕೆರಳಿಸಿವೆ.
ಅದರಲ್ಲಿಯೂ ಇಷ್ಟು ದಿನಗಳವರೆಗೆ ಸುದೀಪ್ ಹಾಗೂ ಉಪೇಂದ್ರ ರೀತಿಯ ಸ್ಟಾರ್ ನಟರ ಜತೆ ಮಲ್ಟಿಸ್ಟಾರರ್ ಚಿತ್ರಗಳಲ್ಲಿ ನಟಿಸುತ್ತಿದ್ದ ಶಿವರಾಜ್‌ಕುಮಾರ್ ಈಗ ಗೋಲ್ಡನ್ ಸ್ಟಾರ್ ಗಣೇಶ್, ಅಜೇಯ್ ಕೃಷ್ಣ ಹಾಗೂ ಪ್ರಭುದೇವ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಹೀಗೆ ಶಿವರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಹಲವಾರು ಮಲ್ಟಿಸ್ಟಾರರ್ ಚಿತ್ರಗಳು ಘೋಷಣೆಯಾಗಿದ್ದು, ಅವುಗಳು ಯಾವುವು ಹಾಗೂ ಆ ಚಿತ್ರಗಳಿಗೆ ನಿರ್ದೇಶನ ಮಾಡುತ್ತಿರುವವರು ಯಾರು ಮತ್ತು ಅವುಗಳಿಗೆ ಬಂಡವಾಳ ಹೂಡುವವರು ಯಾರು ಎಂಬ ಮಾಹಿತಿ ಈ ಕೆಳಕಂಡಂತಿದೆ..
ಶಿವರಾಜ್‌ಕುಮಾರ್ - ಗಣೇಶ್ ಕೊಂಬೊ: ಶಿವರಾಜ್‌ಕುಮಾರ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಇದೇ ಮೊದಲ ಬಾರಿಗೆ ಚಿತ್ರವೊಂದಕ್ಕಾಗಿ ಒಂದಾಗುತ್ತಿದ್ದು, ಈ ಚಿತ್ರಕ್ಕೆ ಇನ್ನೂ ಸಹ ಶೀರ್ಷಿಕೆಯನ್ನು ಇಟ್ಟಿಲ್ಲ. ಚಿತ್ರಕ್ಕೆ ಕೆ ಎಸ್ ರವಿಕುಮಾರ್ ಆಕ್ಷನ್ ಕಟ್ ಹೇಳಲಿದ್ದು, ಎಂ ಬಿ ಬಾಬು ಬಂಡವಾಳ ಹೂಡಲಿದ್ದಾರೆ. ಈ ಚಿತ್ರತಂಡ ಸಹ ಶಿವರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದೆ.
ಶಿವರಾಜ್‌ಕುಮಾರ್ - ಶಿವರಾಜ್‌ಕುಮಾರ್ ಹಾಗೂ ಅಜೇಯ್ ರಾವ್ ಸಹ ಒಂದು ಮಲ್ಟಿಸ್ಟಾರರ್ ಚಿತ್ರಕ್ಕಾಗಿ ಒಂದಾಗುತ್ತಿದ್ದು, ಈ ಚಿತ್ರಕ್ಕೆ ಕಿರಣ್ ಎಂಬುವವರು ಬಂಡವಾಳ ಹೂಡಲು ಮುಂದಾಗಿದ್ದು, ಬಾಹುಬಲಿ ಎಸ್ ಕೆ ಆಕ್ಷನ್ ಕಟ್ ಹೇಳಲಿದ್ದಾರೆ.
ಶಿವರಾಜ್‌ಕುಮಾರ್ - ಪ್ರಭುದೇವ: ಶಿವರಾಜ್‌ಕುಮಾರ್ ಹಾಗೂ ಪ್ರಭುದೇವ ಒಂದೇ ಚಿತ್ರದಲ್ಲಿ ನಟಿಸುತ್ತಿರುವ ವಿಷಯ ಹಳೆಯದೇ. ಆದರೆ ಈ ಚಿತ್ರಕ್ಕೆ ಕರಟಕ ದಮನಕ ಎಂದು ಹೆಸರಿಡಲಾಗಿದ್ದು, ಇಲ್ಲಿಯವರೆಗೂ ಒಮ್ಮೆಯೂ ಸಹ ಚಿತ್ರತಂಡ ಶೀರ್ಷಿಕೆಯನ್ನು ಯಾವ ಪೋಸ್ಟರ್‌ನಲ್ಲಿಯೂ ಬಳಸಿರಲಿಲ್ಲ. ಆದರೀಗ ಈ ಟೈಟಲ್ ಅನ್ನು ಬಳಸಲು ಚಿತ್ರತಂಡ ಮುಂದಾಗಿದ್ದು, ಇಂದು ಶಿವಣ್ಣನ ಹುಟ್ಟುಹಬ್ಬದ ಪ್ರಯುಕ್ತ ಈ ಚಿತ್ರದ ವಿಶೇಷ ಪೋಸ್ಟರ್ ಬಿಡುಗಡೆಯಾಗಲಿದೆ.


Click it and Unblock the Notifications











