ಯಪ್ಪಾ ಏನ್ ಗುರೂ ಇದೂ ಟೀಸರ್ರು; '45' ಝಲಕ್ ನೋಡಿದವರು ಏನಂದ್ರು?
ಅರ್ಜುನ್ ಜನ್ಯಾ ನಿರ್ದೇಶನದಲ್ಲಿ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್. ಬಿ ಶೆಟ್ಟಿ ನಿರ್ದೇಶನದ ಸಿನಿಮಾ '45'. ವಿಭಿನಯ್ ಟೈಟಲ್ ಹಾಗೂ ಪೋಸ್ಟರ್‌ಗಳಿಂದ ಸದ್ದು ಮಾಡುತ್ತಾ ಬಂದಿದ್ದ ಸಿನಿಮಾ ಇದೀಗ ಮತ್ತಷ್ಟು ಸೌಂಡ್ ಮಾಡ್ತಿದೆ. ಯುಗಾದಿ ಹಬ್ಬದ ಸಂಭ್ರಮದಲ್ಲಿ ಚಿತ್ರದ ಟೀಸರ್ ರಿಲೀಸ್ ಆಗಿದೆ.
ನಗರದ ಒರಾಯನ್ ಮಾಲ್‌ನಲ್ಲಿ '45' ಟೀಸರ್ ರಿಲೀಸ್ ಕಾರ್ಯಕ್ರಮ ನಡೀತಿದೆ. ಶಿವಣ್ಣ, ಉಪ್ಪಿ ಹಾಗೂ ರಾಜ್. ಬಿ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ರಮೇಶ್ ರೆಡ್ಡಿ ಚಿತ್ರಕ್ಕೆ ಹಣ ಹೂಡಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಈ ಆಕ್ಷನ್ ಕಾಮಿಡಿ ಫ್ಯಾಂಟಸಿ ಸಿನಿಮಾ ನಿರ್ಮಾಣವಾಗಿದೆ. ಆಗಸ್ಟ್ 15ಕ್ಕೆ ವಿಶ್ವದಾದ್ಯಂತ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗ್ತಿದೆ.

ಮೊದಲ ಬಾರಿ ಆಕ್ಷನ್ ಕಟ್ ಹೇಳುತ್ತಿರುವ ಅರ್ಜುನ್ ಜನ್ಯಾ ಹೊಸ ಪ್ರಪಂಚವನ್ನೇ ಕಟ್ಟಿಕೊಟ್ಟಿದ್ದಾರೆ. ಶಿವಣ್ಣ, ಉಪ್ಪಿ, ರಾಜ್ ಪಾತ್ರಗಳು, ಲುಕ್, ಡೈಲಾಗ್ಸ್, ಚಿತ್ರ ವಿಚಿತ್ರ ಜೀವಿಗಳು ತೆರೆಮೇಲೆ ಬಂದು ಕಿಕ್ ಕೊಡ್ತಿದೆ. ಮೊದಲ ನೋಟದಲ್ಲೇ ಟೀಸರ್ ಹಿಟ್ ಆಗಿದೆ. ಕನ್ನಡದಲ್ಲಿ ಇಂತಾದೊಂದು ಪ್ರಯತ್ನ ಮಾಡುತ್ತಿರುವುದಕ್ಕೆ ಸಿನಿರಸಿಕರು ಫಿದಾ ಆಗಿದ್ದಾರೆ.
ನಿರ್ದೇಶನದ ಜೊತೆಗೆ ಸ್ವತಃ ಅರ್ಜುನ್ ಜನ್ಯಾ '45' ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಹಂಟಿಂಗ್ ಬಿಜಿಎಂ ಟೀಸರ್‌ಗೆ ಮತ್ತಷ್ಟು ಬಲ ತಂದುಕೊಟ್ಟಿದೆ. ಸದ್ಯ ಸಣ್ಣ ಝಲಕ್ ನೋಡಿರುವ ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಬೇಕು ಎಂದು ಫಿಕ್ಸ್ ಆಗಿಬಿಟ್ಟಿದ್ದಾರೆ.
ಮೇಕಿಂಗ್, ಆಕ್ಷನ್, ವಿಷ್ಯುವಲ್ಸ್, ಸ್ಕೇಲ್, ಬಿಜಿಎಂ, ಗ್ರಾಫಿಕ್ಸ್ ಎಲ್ಲವೂ ಅಬ್ಬಬ್ಬಾ ಎನಿಸುವಂತಿದೆ. ಬಹಳ ದೊಡ್ಡಮಟ್ಟದಲ್ಲೇ ಸಿನಿಮಾ ಮೂಡಿ ಬರುತ್ತಿರುವುದು ಗೊತ್ತಾಗುತ್ತಿದೆ. '45' ಸಿನಿಮಾ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆಯೇ ಶಿವಣ್ಣ ಅನಾರೋಗ್ಯಕ್ಕೆ ತುತ್ತಾಗಿದ್ದರು. ಆದರೂ ಸಿನಿಮಾ ಮುಗಿಸಿ ತಮ್ಮ ಪಾತ್ರದ ಡಬ್ಬಿಂಗ್ ಕೂಡ ಕಂಪ್ಲೀಟ್ ಮಾಡಿ ಶಿವಣ್ಣ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದರು.
ಕಥೆಯ ಬಗ್ಗೆ ಹೆಚ್ಚು ರಿವೀಲ್ ಮಾಡದೇ ಸಣ್ಣ ಪಂಚಿಂಗ್ ಡೈಲಾಗ್ಸ್ ಜೊತೆ ಟೀಸರ್ ಕಟ್ ಮಾಡಲಾಗಿದೆ. ಒಳ್ಳೆಯದು ಹಾಗೂ ಕೆಟ್ಟದರ ನಡುವಿನ ಸಂಘರ್ಷದ ಕಥೆ ಅನ್ನೋದು ಮಾತ್ರ ಗೊತ್ತಾಗುತ್ತಿದೆ. ಕೊನೆ ಶಾಟ್‌ನಲ್ಲಿ ನಾಯಿಯ ಮುಂದೆ ಉಪ್ಪಿ ಕೂತು ಅದರಂತೆ ವರ್ತಿಸುವ ಫ್ರೇಮ್ ಮಜವಾಗಿದೆ.
ಇನ್ನು ಶಿವಣ್ಣ ಹಾಗೂ ಉಪ್ಪಿ ಎದಿರು ಬದಿರಾಗಿ 'ಓಂ' ಚಿತ್ರದ ಹಿನ್ನೆಲೆಯಲ್ಲಿ ಕೊಡುವ ಕೌಂಟರ್ ಅಭಿಮಾನಿಗಳ ಮನಗೆದ್ದಿದೆ. '45' ಸಿನಿಮಾ ಟೀಸರ್‌ನಲ್ಲಿ ಇದೇ ಹೈಲೆಟ್ ಎನಿಸಿಕೊಂಡಿದೆ. ಕೆನಡಾದಲ್ಲಿ ಚಿತ್ರದ ಸಿಜಿ ವರ್ಕ್ ಮಾಡಲಾಗಿದೆ. ದೊಡ್ಡ ಬಾವಲಿ ಸೇರಿದಂತೆ ಚಿತ್ರ ವಿಚಿತ್ರ ಜೀವಿಗಳನ್ನು ಗ್ರಾಫಿಕ್ಸ್‌ನಲ್ಲಿ ತೋರಿಸಲಾಗಿದೆ. ಯಾವುದೋ ಹಾಲಿವುಡ್ ಫ್ಯಾಂಟಸಿ ಸಿನಿಮಾ ನೋಡುವ ಅನುಭವ ಕೊಡುತ್ತದೆ. ಈಗಾಗಲೇ ಚಿತ್ರರಂಗದ ಕೆಲವರು '45' ಸಿನಿಮಾ ಸನ್ನಿವೇಶಗಳನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ವಿಷ್ಯುವಲಿ ಸಿನಿಮಾ ಅದ್ಭುತ ಅನುಭವ ಕೊಡುತ್ತದೆ ಎಂದಿದ್ದಾರೆ.
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಇತ್ತೀಚೆಗೆ ಟ್ವೀಟ್ ಮಾಡಿ '45' ಸಿನಿಮಾ ಮೇಕಿಂಗ್ ಬಗ್ಗೆ ಕೊಂಡಾಡಿದ್ದರು. ನಾಳೆ ಏನಾಗುತ್ತೆ ಯಾರಿಗೆ ಗೊತ್ತು, ನನಗೆ ಭಯ ಇತ್ತು. ನಾವು ಮಾಡುವ ಕೆಲಸದ ಬಗ್ಗೆ ಬದ್ಧತೆ ಇರಬೇಕು. ಅದೇ ಕಾರಣಕ್ಕೆ ನಾನು ಸಿನಿಮಾ ಮುಗಿಸಿ, ಡಬ್ಬಿಂಗ್ ಕೂಡ ಕಂಪ್ಲೀಟ್ ಮಾಡಿ ಅಮೆರಿಕಾಗೆ ಹೊರಟೆ ಎಂದು ಶಿವಣ್ಣ ಹೇಳಿದ್ದಾರೆ.
'45' ನನಗೆ ಬಹಳ ಇಷ್ಟವಾದ ಸಿನಿಮಾ. ಕಾರಣ ಸಾಕಷ್ಟು ತೂಕದ ವಿಚಾರಗಳಿವೆ. ನಿಜಕ್ಕೂ ಇದು ಅದ್ಭುತ ಸಿನಿಮಾ. ಬೇರೆಯದ್ದೇ ಪ್ರಪಂಚ ಈ ಚಿತ್ರದಲ್ಲಿದೆ. ಕ್ಲೈಮ್ಯಾಕ್ಸ್‌ನಲ್ಲಿ ಅದು ಮತ್ತೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಈ ಸಿನಿಮಾ ನೀವು ಮಾಡದೇ ಹೋಗಿದ್ದರೆ ನಾವು ಒಳ್ಳೆ ನಿರ್ದೇಶಕರನ್ನು ಕಳೆದುಕೊಳ್ಳುತ್ತಿದ್ದೆವು. ಭಾರತೀಯ ಚಿತ್ರರಂಗದಲ್ಲೇ ದೊಡ್ಡ ನಿರ್ದೇಶಕರಾಗುತ್ತೀರಾ" ಎಂದು ಶಿವಣ್ಣ ಅರ್ಜುನ್ ಜನ್ಯಾ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ಸಿನಿಮಾ ಹಾಡುಗಳನ್ನು ಕೂಡ ಅರ್ಜುನ್ ಜನ್ಯಾ ಬಹಳ ವಿಭಿನ್ನವಾಗಿ ಡಿಸೈನ್ ಮಾಡಿದ್ದಾರಂತೆ. ಶೀಘ್ರದಲ್ಲೇ ಹಾಡುಗಳು ರಿಲೀಸ್ ಆಗುತ್ತದೆ. ಮತ್ತೊಂದು ಟೀಸರ್, ಟ್ರೈಲರ್ ಸಹ ಬರಲಿದೆ ಎಂದು ಹೇಳಿದ್ದಾರೆ. ಪರಭಾಷೆಯಿಂದಲೂ ಸಿನಿಮಾ ವಿತರಣೆಗೆ ಬೇಡಿಕೆ ಶುರುವಾಗಿದೆ, ಭಾರೀ ಮೊತ್ತಕ್ಕೆ ರೈಟ್ಸ್ ಕೇಳುತ್ತಿದ್ದಾರೆ ಎಂದು ಅರ್ಜುನ್ ಜನ್ಯಾ ಹೇಳಿದ್ದಾರೆ.
ಕಮರ್ಷಿಯಲ್ ಸಿನಿಮಾದಲ್ಲಿ ಫಿಲಾಸಫಿ ಹೇಳುವ ಪ್ರಯತ್ನ ಮಾಡಿದ್ದೇವೆ ಎಂದು ಅರ್ಜುನ್ ಜನ್ಯಾ ಹೇಳಿದ್ದಾರೆ. ಮಳೆಯಲ್ಲಿ 'ಓಂ' ಸಿನಿಮಾ ಡೈಲಾಗ್ ಹೇಳುವ ಸನ್ನಿವೇಶ ಚಿತ್ರೀಕರಣ ಬಹಳ ಚಾಲೆಂಜಿಂಗ್ ಆಗಿತ್ತು ಎಂದು ನಿರ್ದೇಶಕರು ಹೇಳಿದ್ದಾರೆ. ಮಲ್ಟಿಸ್ಟಾರರ್ ಸಿನಿಮಾ. ಹಾಗಾಗಿ ಯಾವ ಪಾತ್ರವನ್ನು ಎಷ್ಟು ತೋರಿಸಬೇಕು, ಹೇಗೆ ತೋರಿಸಬೇಕು ಎಂದು ಬಹಳ ಜಾಣತನದಿಂದ ಅರ್ಜುನ್ ಜನ್ಯಾ ಮಾಡಿದ್ದಾರೆ ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.
ಹಾಲಿವುಡ್ ಸಿನಿಮಾಗಳ ರೀತಿ ಪ್ರೀ ವಿಷ್ಯುವಲ್ಸ್ ಮಾಡಿ ಬಳಿಕ ಅದನ್ನು ಚಿತ್ರೀಕರಣ ಮಾಡುವ ಪ್ರಯತ್ನ ಮಾಡಲಾಗಿದೆ. ಕನ್ನಡದಲ್ಲಿ ಇದು ಹೊಸ ಪ್ರಯತ್ನ. ಕೋಣದ ರೀತಿ ಕಾಣುವ ಬೈಕ್ ಏರಿ ಬರುವ ಉಪೇಂದ್ರ, "ಮನುಷ್ಯ ಸತ್ತಮೇಲೆ ತೋರಿಸುವ ಪ್ರೀತಿಯನ್ನು ಅವನು ಬದಕಿದ್ದಾಗಲೇ ತೋರಿಸಿ" ಎನ್ನುವ ಶಿವಣ್ಣ ಡೈಲಾಗ್ ಕುತೂಹಲ ಮೂಡಿಸುವಂತಿದೆ.
ಚಿತ್ರಕ್ಕೆ '45' ಎನ್ನುವ ಟೈಟಲ್ ಯಾಕೆ? ಅದಕ್ಕೂ ಕಥೆಗೂ ಏನು ಸಂಬಂಧ ಎನ್ನುವ ಪ್ರಶ್ನೆಗೆ ಉತ್ತರ ಕೊಡದೇ ನಿರ್ದೇಶಕ ಅರ್ಜುನ್ ಜನ್ಯಾ ಗುಟ್ಟು ಕಾಪಾಡಿಕೊಂಡಿದ್ದಾರೆ. ಚಿತ್ರದ ಪ್ರತಿ ಫ್ರೇಮ್ ಒಂದೊಂದು ಕಥೆ ಹೇಳುತ್ತದೆ. ಅದರಲ್ಲಿ ತೋರಿಸಿರುವ ಕೆಂಪು, ಹಳದಿ, ಕಪ್ಪು ಬಣ್ಣಗಳಿಗೆ ಒಂದೊಂದು ಅರ್ಥ ಇದೆ. ಎಲ್ಲದಕ್ಕೂ ಮುಂದಿನ ದಿನಗಳಲ್ಲಿ ಉತ್ತರ ಸಿಗುತ್ತದೆ ಎಂದು ತಿಳಿಸಿದ್ದಾರೆ.
'45' ಚಿತ್ರದಲ್ಲಿ ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಮಾತ್ರವಲ್ಲ ಜಗಪತಿ ಬಾಬು, ಚೇತನ್ ಅಹಿಂಸಾ, ಜಿಸ್ಸು ಸೇನ್‌ಗುಪ್ತ್, ರವಿ ಮರಿಯಾ, ಕೌಸ್ತುಬಾ ಮಣಿ ಸೇರಿ ದೊಡ್ಡ ಕಲಾವಿದರ ದಂಡೇ ಇದೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಅದ್ಧೂರಿ ಸೆಟ್‌ಗಳನ್ನು ನಿರ್ಮಿಸಿ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.
ಸತ್ಯಾ ಹೆಗಡೆ ಛಾಯಾಗ್ರಹಣ, ಕೆ. ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ಚಿತ್ರಕ್ಕೆ ಅನಿಲ್ ಕುಮಾರ್ ಸಂಭಾಷಣೆ ಬರೆದಿದ್ದಾರೆ. ಚಿನ್ನಿ ಪ್ರಕಾಶ್ ಹಾಗೂ ಧನಂಜಯ್ ಚಿತ್ರದ ಹಾಡುಗಳಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಮೋಹನ್ ಪಂಡಿತ್ ಆರ್ಟ್ ಡೈರೆಕ್ಟರ್ ಆಗಿ ಸೆಟ್‌ಗಳನ್ನು ನಿರ್ಮಾಣ ಮಾಡಿದ್ದಾರೆ. ರವಿ ವರ್ಮಾ, ಜಾಲಿ ಬಾಸ್ಟಿನ್, ಡಿಫ್‌ರೆಂಟ್ ಡ್ಯಾನಿ ಹಾಗೂ ಚೇತನ್ ಡಿಸೋಜಾ ಆಕ್ಷನ್ ಕಂಪೋಸ್ ಮಾಡಿದ್ದಾರೆ.
ತಮ್ಮ ವೃತ್ತಿ ಬದುಕಿನಲ್ಲೇ '45' ವಿಶೇಷ ಸಿನಿಮಾ ಎಂದು ಶಿವಣ್ಣ ಹೇಳಿರುವುದು ನಿರೀಕ್ಷೆ ಹುಟ್ಟುಹಾಕಿದೆ. ಉಗಾಂಡಾ ದೇಶದಲ್ಲಿ ಚಿತ್ರದ ಪ್ರಮೋಷನಲ್ ಸಾಂಗ್ ಶೂಟ್ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಶೀಘ್ರದಲ್ಲೇ ಚಿತ್ರತಂಡ ಅಲ್ಲಿಗೆ ಪಯಣ ಬೆಳೆಸಲಿದೆ. ಸಿನಿಮಾ ಚಿತ್ರೀಕರಣಕ್ಕೆ ಮಾತ್ರವಲ್ಲ ಪೋಸ್ಟ್ ಪ್ರೊಡಕ್ಷನ್‌ಗೆ ಹೆಚ್ಚಿನ ಸಮಯ ಮೀಸಲಿಡಲಾಗಿದೆ. ಯಾವುದಕ್ಕೂ ರಾಜಿಯಾಗದೇ ನಿರ್ಮಾಪಕರು ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. '45' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸುವ ಸುಳಿವು ಸಿಕ್ತಿದೆ. ಪರಭಾಷಿಕರು ಈಗಾಗಲೇ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ.


Click it and Unblock the Notifications











