ನಟಿ ಲೀಲಾವತಿ ಮನೆಗೆ ಶಿವಣ್ಣ ಭೇಟಿ: ಆ ವೈರಾಗ್ಯ ಬೇಡ ಎಂದು ವಿನೋದ್ ರಾಜ್‌ಗೆ ಕಿವಿಮಾತು
ಹಿರಿಯ ನಟಿ ಲೀಲಾವತಿ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಸಿನಿಮಾ ತಾರೆಯರು ನೆಲಮಂಗಲದ ಸೋಲದೇವನಹಳ್ಳಿಯಲ್ಲಿರುವ ಲೀಲಾವತಿ ಅವರ ತೋಟದ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಪುತ್ರ ವಿನೋದ್ ರಾಜ್‌ಗೆ ಧೈರ್ಯ ತುಂಬುತ್ತಿದ್ದಾರೆ.
ಇತ್ತೀಚೆಗೆ ನಟ ದರ್ಶನ್ ಸೇರಿದಂತೆ ಹಲವು ಲೀಲಾವತಿ ಅವರ ಮನೆಗೆ ಭೇಟಿ ನೀಡಿದ್ದರು. ಇದೀಗ ನಟ ಶಿವರಾಜ್‌ಕುಮಾರ್ ಹಾಗೂ ಗೀತಾ ದಂಪತಿ ಕೂಡ ಲೀಲಾವತಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಪುತ್ರ ವಿನೋದ್ ರಾಜ್ ಆರೈಕೆಯಲ್ಲಿ ಲೀಲಾವತಿ ದಿನಗಳನ್ನು ದೂಡುತ್ತಿದ್ದಾರೆ. ಸದ್ಯಕ್ಕೆ ಅವರಿಗೆ ಟ್ಯೂಬ್ ಸಹಾಯದಿಂದ ದ್ರವಾಹಾರವನ್ನು ನೀಡಲಾಗುತ್ತಿದೆ. ಮೊನ್ನೆ ಮೊನ್ನೆ ಬಹುಭಾಷಾ ನಟ ಅರ್ಜುನ್ ಸರ್ಜಾ, ಅಭಿಷೇಕ್ ಅಂಬರೀಶ್ ಸಹ ಹಿರಿಯ ನಟಿಯ ಆರೋಗ್ಯ ವಿಚಾರಿಸಿದ್ದರು.

ಲೀಲಾವತಿ ಹಾಗೂ ವಿನೋದ್ ರಾಜ್ ಭೇಟಿ ಮಾಡಿದ ಬಳಿಕ ನಟ ಶಿವರಾಜ್‌ಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿದರು. "ಈ ವಯಸ್ಸಿನಲ್ಲಿ ಇದನ್ನೆಲ್ಲಾ ತಡೆದುಕೊಳ್ಳುವ ಶಕ್ತಿ ಯಾರಿಗೂ ಇರಲ್ಲ. ಯೋಗಪುರುಷರು ಅಂತಾರೆ. ಅದಕ್ಕೆ ಲೀಲಾವತಿಯವರು ಅಷ್ಟು ಶಕ್ತಿಯಿಂದ ತಡೆದುಕೊಂಡಿದ್ದಾರೆ. ಆಗಿನ ಕಾಲದವರು ಬಗಳ ಸ್ಟ್ರಾಂಗ್ ಆಗಿ ಇರ್ತಾರೆ. ಒಳ್ಳೆ ವ್ಯಕ್ತಿತ್ವ, ಮನಸ್ಸಿನವರು ಲೀಲಾವತಿ ಅಮ್ಮ"
"ನಾವು ಯಾಕೆ ಲೀಲಾವತಿ ಅವರನ್ನು ನಾವು ಯಾಕೆ ಪ್ರೀತಿಸುತ್ತೀವಿ ಅಂದ್ರೆ ಅವತ್ತಿನಿಂದ ಅದೇ ಅನುಬಂಧ ಇದೆ. ಚಿಕ್ಕ ವಯಸ್ಸಿನಿಂದ ಅವರನ್ನು ನೋಡುತ್ತಿದ್ದೇನೆ. ಯಾವಾಗ ಕಂಡರೂ ಅದೇ ಆತ್ಮೀಯತೆ, ಅನುಬಂಧ ಇದೆ. ಅವರನ್ನು ಮರೆಯೋಕೆ ಸಾಧ್ಯವಿಲ್ಲ. ವಿನೋದ್ ಅವರನ್ನು ನೋಡಿದರೆ ಅವ್ರ ತಾಯಿಯನ್ನು ನೋಡಿದಂತೆ ಆಗುತ್ತದೆ"

"ಬೇಸರವಾಗುತ್ತದೆ. ಇನ್ನು ಬಹಳ ದಿನ ಇರ್ತಾರೆ ಎಂದು ನಮ್ಮ ಮನಸ್ಸಿಗೆ ಅನಿಸುತ್ತಿದೆ. ಚೆನ್ನಾಗಿ ಇರ್ತಾರೆ ಅವ್ರು. ದೇವರ ಆಶೀರ್ವಾದ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ವಿನೋದ್ ಪ್ರೀತಿ ಇದೆ. ನಮ್ಮ ಪ್ರೀತಿ, ಜನಗಳ ಪ್ರೀತಿ, ಅಭಿಮಾನ ಇದೆ. ಇನ್ನು ಇರಬೇಕು ಅವ್ರು. ನಮ್ಮನ್ನು ಬಿಟ್ಟು ಹೋಗಬಾರದು. ನಮ್ಮೊಟ್ಟಿಗೆ ಇರಬೇಕು"
"ತಾಯಿ ಅಂದ್ರೆ ಪ್ರೀತಿ ಇರುತ್ತಲ್ಲ. ಅವರಿಗೂ ಮಗ ಅಂದ್ರೆ ಅದೇ ಪ್ರೀತಿ ಇರುತ್ತದೆ. ಅದನ್ನು ವಿನೋದ್ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಆ ವೈರಾಗ್ಯ ಬರಬಾರದು. ನಮ್ಮ ಮನೆಯಲ್ಲಿ ಪೋಷಕರು ಎಲ್ಲರೂ ಚೆನ್ನಾಗಿರಬೇಕು ಅಂತಾರೆ. ನೀವು ಯಾವುದೇ ತೀರ್ಮಾಣ ತೆಗೆದುಕೊಳ್ಳಬೇಡಿ. ನೋವಾಗುತ್ತದೆ. ಅದನ್ನು ತಡೆದುಕೊಳ್ಳಬೇಕು. ಧೈರ್ಯವಾಗಿರಿ" ಎಂದು ವಿನೋದ್ ರಾಜ್‌ಗೆ ಶಿವಣ್ಣ ಧೈರ್ಯ ತುಂಬಿದರು.


Click it and Unblock the Notifications











