ಅಬ್ಬಬ್ಬಾ.. ಹೊರ ರಾಜ್ಯಗಳಿಗೂ 'ಭೈರತಿ ರಣಗಲ್' ಮೈಲಿಗಲ್ಲು
ಬಾಕ್ಸಾಫೀಸ್‌ನಲ್ಲಿ 'ಭೈರತಿ ರಣಗಲ್' ದರ್ಬಾರ್ ಜೋರಾಗಿದೆ. ಸಿನಿಮಾ ಎರಡನೇ ವಾರಕ್ಕೆ ಕಾಲಿಟ್ಟಿದೆ. ವಾರದ ದಿನಗಳಲ್ಲಿ ಕೂಡ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಪ್ರೇಕ್ಷಕರ ಪ್ರತಿಕ್ರಿಯೆ ಕಂಡು ಚಿತ್ರತಂಡ ಖುಷಿಯಾಗಿದೆ. ನಿಧಾನವಾಗಿ ಫ್ಯಾಮಿಲಿ ಆಡಿಯನ್ಸ್ ಥಿಯೇಟರ್ ಕಡೆ ಮುಖ ಮಾಡಿದ್ದಾರೆ.
ನರ್ತನ್ ನಿರ್ದೇಶನದ 'ಮಫ್ತಿ' ಪ್ರೀಕ್ವೆಲ್ 'ಭೈರತಿ ರಣಗಲ್' ಕಳೆದ ಶುಕ್ರವಾರ ತೆರೆಗೆ ಬಂದಿತ್ತು. ಅಡ್ವಾನ್ಸ್ ಬುಕ್ಕಿಂಗ್ ಕಮ್ಮಿ ಎನಿಸಿತ್ತು. ಆದರೆ ಮಾರ್ನಿಂಗ್ ಶೋಗಳು ಮುಗಿದು ಮ್ಯಾಟ್ನಿ ಶೋಗಳಲ್ಲೂ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿತ್ತು. ಬಳಿಕ ಸಿನಿಮಾ ಆರ್ಭಟ ಜೋರಾಗಿತ್ತು. ವೀಕೆಂಡ್ ಎಲ್ಲೆಡೆ ಶೋಗಳು ಹೌಸ್‌ಫುಲ್ ಆಗಿತ್ತು.

ಬುಕ್‌ಮೈ ಶೋನಲ್ಲಿ ದಿನದಿಂದ ದಿನಕ್ಕೆ ಟಿಕೆಟ್ ಬುಕ್ಕಿಂಗ್ ಹೆಚ್ಚಾಗಿತ್ತು. ಇನ್ನು ನೇರವಾಗಿ ಚಿತ್ರಮಂದಿರಕ್ಕೆ ಬಂದು ಟಿಕೆಟ್ ಖರೀದಿಸಿ ಸಿನಿಮಾ ನೋಡುತ್ತಿರುವವರಿಗೆ ಲೆಕ್ಕವಿಲ್ಲ. ಫಸ್ಟ್ ವೀಕೆಂಡ್ ಬಳಿಕ ಸೋಮವಾರ, ಮಂಗಳವಾರ ಕೂಡ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಾ ಬಂತು. ಫಸ್ಟ್ ಶೋ, ಸೆಕೆಂಡ್ ಶೋಗಳು ಹೌಸ್‌ಫುಲ್ ಆಗುತ್ತಿದೆ. ಇದೀಗ 'ಭೈರತಿ ರಣಗಲ್' ಸಿನಿಮಾ ತೆಲುಗು, ತಮಿಳಿಗೆ ಡಬ್ ಆಗಿ ಬಿಡುಗಡೆಗೆ ಸಜ್ಜಾಗಿದೆ.
ಮುಂದಿನ ವಾರವೇ ಸಿನಿಮಾ ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಬಿಡುಗಡೆ ಆಗಲಿದೆ. ಈಗಾಗಲೇ ಅದಕ್ಕಾಗಿ ಭರ್ಜರಿ ತಯಾರಿ ನಡೀತಿದೆ. ನಟ ಶಿವರಾಜ್‌ಕುಮಾರ್ ಈಗಾಗಲೇ ತೆಲುಗು, ತಮಿಳು ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ. ಇದಕ್ಕೂ ಮುನ್ನ 'ವೇದ' ಚಿತ್ರವನ್ನು ಅಲ್ಲಿ ಬಿಡುಗಡೆ ಮಾಡಲಾಗಿತ್ತು. ಇನ್ನು 'ಜೈಲರ್' ಚಿತ್ರದ ನರಸಿಂಹ ಆಗಿ ಸೆಂಚುರಿ ಸ್ಟಾರ್ ನಟನೆಗೆ ಪಕ್ಕದ ರಾಜ್ಯಗಳಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು.
ತೆಲುಗಿನಲ್ಲಿ ಬಾಲಕೃಷ್ಣ ನಟನೆಯ 'ಗೌತಮಿಪುತ್ರ ಶಾತಕರ್ಣಿ' ಚಿತ್ರದ ಹಾಡೊಂದರಲ್ಲಿ ಶಿವಣ್ಣ ಮಿಂಚಿದ್ದರು. ಇನ್ನು 'ಮಫ್ತಿ' ಚಿತ್ರವನ್ನು ಯೂಟ್ಯೂಬ್‌ನಲ್ಲಿ ನೋಡಿ ಪರಭಾಷಿಕರು ಮೆಚ್ಚಿಕೊಂಡಿದ್ದರು. ಅದೇ ಕಾರಣಕ್ಕೆ 'ಭೈರತಿ ರಣಗಲ್' ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಒಮ್ಮೆಲೆ ಬಿಡುಗಡೆ ಆಗಿರಲಿಲ್ಲ.
ಒಟ್ಟಿಗೆ ಎಲ್ಲಾ ಭಾಷೆಗಳಲ್ಲಿ 'ಭೈರತಿ ರಣಗಲ್' ಸಿನಿಮಾ ರಿಲೀಸ್ ಮಾಡಬೇಕು ಎಂದು ಅಭಿಮಾನಿಗಳು ಕೇಳಿದ್ದರು. ಕೊಂಚ ತಡವಾಗಿ ಆದರೂ ಸಿನಿಮಾ ತಮಿಳು, ತೆಲುಗು ಪ್ರೇಕ್ಷಕರ ಮುಂದೆ ಹೋಗುತ್ತಿದೆ. ಶಿವಣ್ಣ ಖಡಕ್ ನಟನೆಗೆ ಅಲ್ಲೂ ಒಳ್ಳೆ ರೆಸ್ಪಾನ್ಸ್ ಸಿಗುವ ನಿರೀಕ್ಷೆಯಿದೆ. ಈಗಾಗಲೇ ಕೆಲ ಪರಭಾಷಿಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಬೇಗ ತೆಲುಗು, ತಮಿಳಿನಲ್ಲಿ ಬಿಡುಗಡೆ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಸದ್ಯ ವಿದೇಶಗಳಲ್ಲಿ ಸಿನಿಮಾ ತೆರೆಗಪ್ಪಳಿಸಿದೆ.
'ಭೈರತಿ ರಣಗಲ್' ಚಿತ್ರದಲ್ಲಿ ನಟಿಸಿರುವ ಕೆಲ ಕಲಾವಿದರು ಪರಭಾಷಿಕರಿಗೂ ಚಿರಪರಿಚಿತ. ಹಾಗಾಗಿ ಸಿನಿಮಾ ಎಲ್ಲರಿಗೂ ಆಪ್ತ ಎನಿಸುತ್ತದೆ. ಇನ್ನು ಕರ್ನಾಟಕದಲ್ಲಿ ಸಿನಿಮಾ ಕಲೆಕ್ಷನ್ ಬಗ್ಗೆ ಮಾತನಾಡುವುದಾದರೆ ಮೊದಲ 4 ದಿನಕ್ಕೆ 10 ಕೋಟಿ ರೂ. ಗಳಿಕೆ ಕಂಡಿತ್ತು. ಒಟ್ಟಾರೆ ಮೊದಲ ವಾರವೇ ಸಿನಿಮಾ 13 ಕೋಟಿ ರೂ. ಕೊಳ್ಳೆ ಹೊಡೆದಿರುವ ಅಂದಾಜಿದೆ.
ಈ ವೀಕೆಂಡ್ ಕೂಡ ಕರ್ನಾಟಕದಲ್ಲಿ 'ಭೈರತಿ ರಣಗಲ್' ಅಬ್ಬರ ಮುಂದುವರೆಯಲಿದೆ. 'ಜೀಬ್ರಾ', 'ಮರ್ಯಾದೆ ಪ್ರಶ್ನೆ' ಸೇರಿದಂತೆ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು ಈ ವಾರ ಕನ್ನಡದಲ್ಲಿ ರಿಲೀಸ್ ಆಗಿದೆ. ಆದರೂ ಕೂಡ ಸಾಕಷ್ಟು ಜನ ರಣಗಲ್ ರಣಬೇಟೆ ನೋಡಲು ಕಾಯುತ್ತಿದ್ದಾರೆ. ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಬಿ, ಸಿ ಸೆಂಟರ್‌ಗಳಲ್ಲಿ ಮಾಸ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹಿಂದಿ ಭಾಷೆಗೂ ಸಿನಿಮಾ ಡಬ್ ಮಾಡಿ ರಿಲೀಸ್ ಮಾಡುವ ಲೆಕ್ಕಾಕಾರ ಶುರುವಾಗಿದೆ.


Click it and Unblock the Notifications











