ಶಿವಣ್ಣ ನಟಿಸಬೇಕಿದ್ದ 'ಭೈರವನ ಕೊನೆಪಾಠ' ಸಿನಿಮಾ ನಿಂತೇ ಹೋಯ್ತಾ? ನಿರ್ದೇಶಕ ಪ್ರತಿಕ್ರಿಯೆ
ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟ ಶಿವರಾಜ್‌ಕುಮಾರ್. ಸದಾ ಶಿವಣ್ಣನ ಕೈಯಲ್ಲಿ ನಾಲ್ಕೈದು ಸಿನಿಮಾಗಳಿರುತ್ತವೆ. ಕ್ಯಾನ್ಸರ್ ಚಿಕಿತ್ಸೆ ಬಳಿಕ ಶಿವಣ್ಣ ಮತ್ತೆ ಚಿತ್ರೀಕರಣಕ್ಕೆ ಮರಳುತ್ತಿದ್ದಾರೆ. ಕನ್ನಡದ ಒಂದು ಚಿತ್ರದ ಚಿತ್ರದ ಜೊತೆಗೆ ತೆಲುಗು ಚಿತ್ರದ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದ್ದಾರೆ.
'ಸಪ್ತಸಾಗರದಾಚೆ ಎಲ್ಲೋ' ಸಿನಿಮಾ ಖ್ಯಾತಿಯ ಹೇಮಂತ್ ರಾವ್ ನಿರ್ದೇಶನದ ಚಿತ್ರದಲ್ಲಿ ಕೂಡ ಶಿವಣ್ಣ ನಟಿಸಬೇಕಿದೆ. 'ಭೈರವನ ಕೊನೆಪಾಠ' ಎಂದು ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ಇದೊಂದು ಪ್ರಯೋಗಾತ್ಮಕ ಸಿನಿಮಾ. ಕಳೆದ ವರ್ಷ ಶಿವಣ್ಣನ ಹುಟ್ಟುಹಬ್ಬದ ಸಂಭ್ರಮದಲ್ಲಿ ಪೋಸ್ಟರ್ ಸಮೇತ ಸಿನಿಮಾ ಘೋಷಣೆ ಆಗಿತ್ತು. ಕಳೆದೆರಡು ದಿನಗಳಿಂದ ಈ ಸಿನಿಮಾ ನಿಂತು ಹೋಯಿತು. ಆದರೆ ಶಿವಣ್ಣ- ಹೇಮಂತ್ ಬೇರೆ ಚಿತ್ರದಲ್ಲಿ ಕೆಲಸ ಮಾಡುತ್ತಾರೆ ಎಂದು ಗುಲ್ಲಾಗಿತ್ತು.

'ಭೈರವನ ಕೊನೆಪಾಠ' ಸಿನಿಮಾ ಬಹುತೇಕ ನಿಂತು ಹೋಗಿದೆ, ಆದರೆ ಅದೇ ಕಾಂಬಿನೇಷನ್‌ನಲ್ಲಿ ಬೇರೆ ಸಿನಿಮಾ ಮಾಡಲು ಇಬ್ಬರೂ ಮುಂದಾಗಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿತ್ತು. ಇದೀಗ ಈ ಬಗ್ಗೆ ಸ್ವತಃ ಹೇಮಂತ್ ರಾವ್ ಪ್ರತಿಕ್ರಿಯಿಸಿದ್ದಾರೆ. ಸೋಶಿಯಲ್ ಮೀಡಿಯಾದದಲ್ಲಿ ಈ ಬಗ್ಗೆ ಸುದೀರ್ಘ ಪತ್ರದ ಪೋಸ್ಟ್ ಮಾಡಿದ್ದಾರೆ.
"ಭೈರವನ ಕೊನೆಪಾಠ' ಚಿತ್ರವನ್ನು ಕೈಬಿಡಲಾಗಿದೆ ಎಂಬ ವದಂತಿಗಳು ಸಂಪೂರ್ಣವಾಗಿ ಆಧಾರರಹಿತವಾದ್ದದ್ದು. ಅದು ನಿಜವಲ್ಲ" ಎಂದು ಅವರು ಪತ್ರ ಬರೆಯಲು ಆರಂಭಿಸಿದ್ದಾರೆ. ಗಾತ್ರ ಹಾಗೂ ಸ್ಕೇಲ್ ಕಾರಣಕ್ಕೆ ಇದು ಎಲ್ಲರಿಗೂ ಬಹಳ ಬೇಕಾಗಿರುವ ಸಿನಿಮಾ. ಮುಖ್ಯವಾಗಿ ಚಿತ್ರದಲ್ಲಿ ನಟಿಸುತ್ತಿರುವ ಕಲಾವಿದರ ಕಾರಣಕ್ಕೆ. ಸ್ವಲ್ಪ ಸಮಯ ಶಿವಣ್ಣನ ಜೊತೆ ಬೆರೆಯುತ್ತಿದ್ದಂತೆ ಅನುಭವಿಸಿದ ಸಂತೋಷ, ಅವರ ಬದ್ಧತೆ, ಕೆಲಸದ ಮೇಲಿನ ಶ್ರದ್ಧೆ, ಅವ್ರು ಸರಳ ವ್ಯಕ್ತಿತ್ವ ಜನರಿಗೆ ಹೆಚ್ಚಿನ ಸಂತೋಷ ಕೊಡುವಂಥದ್ದು ಎಂದು ಹೇಮಂತ್ ರಾವ್ ಬರೆದುಕೊಂಡಿದ್ದಾರೆ.

ಶಿವಣ್ಣ ಸಾಧ್ಯವಾದಷ್ಟು ಶ್ರಮ ಪಡುತ್ತಾರೆ. ಅವರ ರಾ ಎಜರ್ಜಿ ಸೆರೆಹಿಡಿಯುವುದು ಫಿಲ್ಮ್ ಮೇಕರ್ಸ್ ಜವಾಬ್ದಾರಿ. ಮುಖ್ಯವಾಗಿ ಈ ಹಾದಿಯಲ್ಲಿ ಅವರು ಆರಾಮಾಗಿ ಇದ್ದಾರಾ ನೋಡಿಕೊಳ್ಳಬೇಕು. ಈಗಷ್ಟೆ ಒಂದು ಯುದ್ಧ(ಕ್ಯಾನ್ಸರ್ ಚಿಕಿತ್ಸೆ) ಎದುರಿಸಿ ಬಂದಿದ್ದಾರೆ. ಅವರು ಚೇತರಿಸಿಕೊಳ್ಳಲು ಸಮಯ ಬೇಕಾಗುತ್ತದೆ. ಅವರು ಗುಣಮುಖರಾಗಲು ನಾವು ಸಮಯ ಹಾಗೂ ಅವಕಾಶ ನೀಡಬೇಕು. 'ಭೈರವನ ಕೊನೆಪಾಠ' ಚಿತ್ರದ ಬಗ್ಗೆ ನಿಮ್ಮ ಉತ್ಸಾಹ ನನಗೂ ಗೊತ್ತು. ಖಂಡಿತ ಸಿನಿಮಾ ಬರುತ್ತದೆ ಎಂದು ಹೇಮಂತ್ ಮುಂದುವರೆಸಿದ್ದಾರೆ.
ಅಂತಿಮವಾಗಿ ಒಂದೇ ಮಾತಲ್ಲಿ ಹೇಳಬೇಕು ಅಂದರೆ "ತಾಳ್ಮೆಯ ಯೋಧನಿಗೆ ಮನಸ್ಸಿನ ಮೌನದಲ್ಲಿಯೇ ಶ್ರೇಷ್ಠ ವಿಜಯಗಳು ಸಿಗುತ್ತವೆ ಎಂದು ತಿಳಿದಿರುತ್ತದೆ" ಎಂದು ಹೇಮಂತ್ ರಾವ್ ಪೋಸ್ಟ್ ಮಾಡಿದ್ದಾರೆ. 'ಭೈರವನ ಕೊನೆಪಾಠ' ಚಿತ್ರದ ಪೋಸ್ಟರ್‌ಗಳನ್ನು ಗಮನಿಸಿದರೆ ಇದೊಂದು ಕಾಸ್ಟ್ಯೂಮ್ ಡ್ರಾಮಾ ಎನ್ನುವುದು ಗೊತ್ತಾಗುತ್ತಿದೆ. ವಿಜೆಎಫ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ವೈಶಾಕ್ ಜೆ ಗೌಡ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಕವಲುದಾರಿ' ಹಾಗೂ 'ಸಪ್ತಸಾಗರದಾಚೆ ಎಲ್ಲೋ' ರೀತಿಯ ವಿಭಿನ್ನ ಸಿನಿಮಾಗಳ ಸರದಾರ ಹೇಮಂತ್ ರಾವ್ ಇದೀಗ ಶಿವಣ್ಣನ ಜೊತೆ ಕೈ ಜೋಡಿಸಿರುವುದು ಕುತೂಹಲ ಮೂಡಿಸಿದೆ. ಇತ್ತ ಶಿವಣ್ಣ '45' ಸಿನಿಮಾ ಮುಗಿಸಿದ್ದಾರೆ. ತಮ್ಮದೇ ಬ್ಯಾನರ್ ಅಡಿಯಲ್ಲಿ 'A ಫಾರ್ ಆನಂದ್' ಚಿತ್ರದಲ್ಲಿ ನಟಿಸಬೇಕಿದೆ.
ತೆಲುಗಿನಲ್ಲಿ ರಾಮ್‌ಚರಣ್ ನಟನೆಯ 16ನೇ ಸಿನಿಮಾದಲ್ಲಿ ಶಿವಣ್ಣ ಒಂದು ಮುಖ್ಯವಾದ ಪಾತ್ರ ಮಾಡುತ್ತಿದ್ದಾರೆ. ಬಹಳ ಇಷ್ಟಪಟ್ಟು ಆ ಸಿನಿಮಾ ಒಪ್ಪಿಕೊಂಡಿದ್ದಾರೆ. ಇನ್ನೆರಡು ದಿನಗಳಲ್ಲಿ ಆ ಚಿತ್ರದ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ.


Click it and Unblock the Notifications











