Ghost: ಮಧ್ಯರಾತ್ರಿಯೇ ಅಬ್ಬರಿಸೋಕೆ ಬರ್ತಾನೆ 'ಘೋಸ್ಟ್': ಎಲ್ಲೆಲ್ಲಿ ಫ್ಯಾನ್ಸ್ ಶೋ ಗೊತ್ತಾ?
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 'ಘೋಸ್ಟ್' ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಏಕಕಾಲಕ್ಕೆ ಸಿನಿಮಾ ಗ್ರ್ಯಾಂಡ್ ರಿಲೀಸ್ ಆಗಲಿದೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್, ಓಜಿಎಂ ರಿಲೀಸ್ ಆಗಿ ಗಮನ ಸೆಳೆದಿದೆ. ದಸರಾ ಸಂಭ್ರಮದಲ್ಲಿ ತೆರೆಮೇಲೆ ಶಿವಣ್ಣ ಆರ್ಭಟ ಶುರುವಾಗಲಿದೆ. ಮಧ್ಯರಾತ್ರಿಯಿಂದಲೇ ಫ್ಯಾನ್ಸ್ ಶೋ ನಡೆಯಲಿದೆ.
ಶ್ರೀನಿ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ 'ಘೋಸ್ಟ್' ಚಿತ್ರವನ್ನು ಸಂದೇಶ್ ಕಂಬೈನ್ಸ್ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಮಹೇಂದ್ರ ಸಿಂಹ ಛಾಯಾಗ್ರಹಣ, ಅರ್ಜುನ್ ಜನ್ಯಾ ಸಂಗೀತ, ಪ್ರಸನ್ನ ಹಾಗೂ ಮಾಸ್ತಿ ಸಂಭಾಷಣೆ ಈ ಚಿತ್ರಕ್ಕಿದೆ. ಮಲಯಾಳಂ ನಟ ಜಯರಾಂ, ಹಿಂದಿ ನಟ ಅನುಪಮ್ ಖೇರ್ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಕೇವಲ 48 ಘಂಟೆಗಳಲ್ಲಿ ಈ ಸಿನಿಮಾ ಕತೆ ಸಾಗಲಿದೆ.

ಸ್ಯಾಂಡಲ್‌ವುಡ್‌ನಲ್ಲೀಗ ಪ್ರೀಮಿಯರ್ ಶೋಗಳ ಟ್ರೆಂಡ್ ನಡೀತಿದೆ. ಶುಕ್ರವಾರ ಬೆಳಗ್ಗೆ 10 ಗಂಟೆಯವರೆಗೂ ಕಾಯದೇ ಬುಧವಾರ, ಗುರುವಾರ ಸಂಜೆಯೇ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಆಯೋಜಿಸಲಾಗುತ್ತಿದೆ. ಪ್ರೀಮಿಯರ್ ಶೋಗಳ ರೆಸ್ಪಾನ್ಸ್ ಶುಕ್ರವಾರ ಓಪನಿಂಗ್‌ಗೆ ಪ್ಲಸ್ ಆಗುತ್ತಿದೆ. ಇನ್ನು ಸ್ಟಾರ್ ನಟರ ಸಿನಿಮಾಗಳು ಬಂದ್ರೆ ಮಧ್ಯರಾತ್ರಿಯಿಂದಲೇ ಮೊದಲ ಪ್ರದರ್ಶನ ನಡೆಯುತ್ತದೆ. ಇತ್ತೀಚೆಗೆ ಮಿಡ್ ನೈಟ್ ಶೋಗಳು ಕನ್ನಡದಲ್ಲಿ ಕೊಂಚ ಕಮ್ಮಿ ಆಗಿತ್ತು. 'ಘೋಸ್ಟ್' ಸಿನಿಮಾದಿಂದ ಮತ್ತೆ ಅದು ಶುರುವಾಗ್ತಿದೆ.
ಗೌಡನಪಾಳ್ಯ ಶ್ರೀನಿವಾಸ, ತಾವರೆಕೆರೆ ಬಾಲಾಜಿ, ಜೆಪಿ ನಗರದ ಸಿದ್ದೇಶ್ವರ, ಸಂಜಯ್ ನಗರದ ವೈಭವ್, ರಾಕ್‌ಲೈನ್ ಮಾಲ್ ಹೀಗೆ ಕೆಲವೇ ಥಿಯೇಟರ್‌ಗಳಲ್ಲಿ ಮಿಡ್‌ನೈಟ್ ಶೋಗಳನ್ನು ನಡೆಸಲಾಗುತ್ತಿತ್ತು. ಎಂಥಹ ದೊಡ್ಡ ಸಿನಿಮಾ ಬಂದರೂ ಕೆಜಿ ರಸ್ತೆಯ ಥಿಯೇಟರ್‌ಗಳಲ್ಲಿ ಬೆಳಗ್ಗೆ 10 ಗಂಟೆಗೆ ಮೊದಲ ಶೋ ಶುರುವಾಗುತ್ತಿತ್ತು. ಆದರೆ 'ಘೋಸ್ಟ್' ಚಿತ್ರದಿಂದ ಅದು ಬದಲಾಗುತ್ತಿದೆ.
ಮೊದಲ ಬಾರಿಗೆ ಕೆಜಿ ರಸ್ತೆಯ ಪ್ರಮುಖ ಚಿತ್ರಮಂದಿರದಲ್ಲಿ ಅಕ್ಟೋಬರ್18 ರ ಮಧ್ಯರಾತ್ರಿ 12 ಕ್ಕೆ ಭರ್ಜರಿ 'ಘೋಸ್ಟ್' ಫ್ಯಾನ್ ಶೋ ಆಯೋಜಿಸಲಾಗಿದೆ. ಬಹು ನಿರೀಕ್ಷಿತ ಈ ಚಿತ್ರವನ್ನು ಅಭಿಮಾನಿಗಳು ಅದ್ದೂರಿಯಾಗಿ ಬರಮಾಡಿಕೊಳ್ಳಲು ಅಣಿಯಾಗುತ್ತಿದ್ದಾರೆ. ಶಿವಣ್ಣ ಅಭಿನಯದ 'ಭಜರಂಗಿ' ಚಿತ್ರದ ಪ್ರದರ್ಶನ ಬೆಳಗ್ಗೆ 6ರಿಂದ ಆರಂಭವಾಗಿತ್ತು. ಆದರೆ ಮಧ್ಯರಾತ್ರಿಯಿಂದಲೇ ಪ್ರದರ್ಶನ ಕಾಣುತ್ತಿರುವ ಮೊದಲ ಚಿತ್ರ 'ಘೋಸ್ಟ್'. ಬೇರೆ ಕಡೆಗಳಲ್ಲೂ ಫ್ಯಾನ್ಸ್ ಶೋ ಏರ್ಪಾಡಾಗುವ ಸಾಧ್ಯತೆಯಿದೆ.
ಇನ್ನು 'ಘೋಸ್ಟ್' ಚಿತ್ರವನ್ನು ನೋಡಲು ಬರೀ ಭಾರತೀಯರಷ್ಟೇ ಅಲ್ಲ. ವಿದೇಶಿಗರು ಕಾತುರದಿಂದ ಕಾಯುತ್ತಿದ್ದಾರೆ. ಇತ್ತೀಚೆಗೆ ವಿದೇಶಿ ಅಭಿಮಾನಿಗಳು ತಾವು ಕೂಡ ಈ ಚಿತ್ರದ ಬಿಡುಗಡೆಗೆ ಕಾತುರದಿಂದ ಕಾಯುತ್ತಿರುವುದಾಗಿ ವಿಡಿಯೋ ಮೂಲಕ ಹೇಳಿಕೊಂಡಿದ್ದರು. ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್, ಶ್ರೀನಿ ಸೇರಿದಂತೆ ದೊಡ್ಡ ತಾರಾಗಣ 'ಘೋಸ್ಟ್' ಚಿತ್ರದಲ್ಲಿದೆ. ಇತ್ತೀಚೆಗೆ ಸೆನ್ಸಾರ್ ಮುಗಿಸಿದ್ದ ಸಿನಿಮಾ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿತ್ತು.
ಜೀ ಸಂಸ್ಥೆಗೆ 'ಘೋಸ್ಟ್' ಚಿತ್ರದ ಡಿಜಿಟಲ್ ಹಾಗೂ ಸ್ಯಾಟಲೈಟ್ ರೈಟ್ಸ್ ಮಾರಾಟವಾಗಿದೆ. ಇನ್ನು ಪೆನ್ ಸ್ಟುಡಿಯೋ ಸಂಸ್ಥೆ ದಕ್ಷಿಣ ಭಾರತ ಬಿಟ್ಟು ಉತ್ತರ ಭಾರತದಲ್ಲಿ ಚಿತ್ರದ ರೈಟ್ಸ್ ಕೊಂಡುಕೊಂಡಿದೆ. ಚಿತ್ರದ ಕಾಲಾವಧಿ 2 ಗಂಟೆ 8 ನಿಮಿಷ ಮಾತ್ರ. ಫಸ್ಟ್ ಹಾಫ್ 1 ಗಂಟೆ 7 ನಿಮಿಷ, ಸೆಕೆಂಡ್ ಹಾಫ್ 1 ಗಂಟೆ 1 ನಿಮಿಷ ಮಾತ್ರ ಇರುತ್ತದೆ. ಇದು ಬಹಳ ಚಿಕ್ಕ ಸಿನಿಮಾ ಎಂದು ಈ ಹಿಂದೆ ಶಿವಣ್ಣ ಹೇಳಿದ್ದರು.
ದಸರಾ ಸಂಭ್ರಮದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಆರ್ಭಟ ಜೋರಾಗಿದೆ. ತಮಿಳಿನಲ್ಲಿ 'ಲಿಯೋ' ಹಾಗೂ 'ತೆಲುಗಿನಲ್ಲಿ ಟೈಗರ್ ನಾಗೇಶ್ವರರಾವ್' 5 ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಇನ್ನು ಬಾಲಕೃಷ್ಣ ನಟನೆಯ 'ಭಗವಂತ್ ಕೇಸರಿ' ಸಿನಿಮಾ ಕೂಡ ದಸರಾ ಸಂಭ್ರಮದಲ್ಲೇ ತೆರೆಗೆ ಬರಲಿದೆ. ಹಾಗಾಗಿ ಬಾಕ್ಸಾಫೀಸ್‌ನಲ್ಲಿ ಭಾರೀ ಪೈಪೋಟಿ ಏರ್ಪಡಲಿದೆ.


Click it and Unblock the Notifications











