A For Anand: ತಮನ್ನಾ ಜೊತೆ ರೇನ್ ಡ್ಯಾನ್ಸ್ ಬೇಕು ಎಂದು ಕೇಳಿ ಗೀತಕ್ಕ ಬಳಿ ತಗ್ಲಾಕಿಕೊಂಡ ಶಿವಣ್ಣ!
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ 64ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಿವಾಸದಲ್ಲಿ ಅಭಿಮಾನಿಗಳ ಜೊತೆ ಶಿವಣ್ಣ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ. ಅವರ ಮುಂದಿನ ಸಿನಿಮಾಗಳ ಬಗ್ಗೆ ಅಪ್‌ಡೇಟ್ ಸಿಕ್ಕಿದೆ. ಬಹದ್ದೂರ್ ಚೇತನ್ ಹಾಗೂ ಆರ್. ಚಂದ್ರು ಕಾಂಬಿನೇಷನ್ ಸಿನಿಮಾಗಳ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ. ಇನ್ನು 'ಸರ್ವೈವರ್' ಡಾಕ್ಯುಮೆಂಟರಿ ಪ್ರೋಮೊ ಹಾಗೂ 'ಎ ಫಾರ್ ಆನಂದ್' ಸಿನಿಮಾ ಟೀಸರ್ ಬಿಡುಗಡೆಯಾಗಿದೆ.
ಶ್ರೀನಿ ನಿರ್ದೇಶನದ 'ಘೋಸ್ಟ್' ಚಿತ್ರದಲ್ಲಿ ಶಿವಣ್ಣ ನಟಿಸಿ ಕಮಾಲ್ ಮಾಡಿದ್ದರು. ಬಳಿಕ ತಮ್ಮದೇ ಬ್ಯಾನರ್‌ನಲ್ಲಿ ಶ್ರೀನಿ ಕಾಂಬಿನೇಷನ್‌ನಲ್ಲಿ 'ಎ ಫಾರ್ ಆನಂದ್' ಸಿನಿಮಾ ಘೋಷಣೆ ಮಾಡಿದ್ದರು. ಕೆಲ ದಿನಗಳಿಂದ ಚಿತ್ರದ ಪೋಸ್ಟರ್‌ಗಳು ಬಿಡುಗಡೆಯಾಗಿ ಗಮನ ಸೆಳೆಯುತ್ತಿತ್ತು. ಹುಟ್ಟುಹಬ್ಬದ ಸಂಭ್ರಮದಲ್ಲಿ ಲುಕ್ ಟೆಸ್ಟ್ ಮಾಡಿ ಸಣ್ಣ ಟೀಸರ್ ರಿವೀಲ್ ಮಾಡಿದ್ದಾರೆ. ಶ್ರೀನಿ ತಮ್ಮದೇ ಶೈಲಿಯಲ್ಲಿ ಸಣ್ಣ ಝಲಕ್ ತೋರಿಸಿದ್ದಾರೆ. ಫನ್ನಿ ಕಾನ್ಸೆಪ್ಟ್‌ನಲ್ಲಿ ಟೀಸರ್ ಹೊರ ಬಂದಿದೆ.

ನಿರ್ದೇಶಕ ಶ್ರೀನಿಗೆ ಶಿವಣ್ಣ ಫೋನ್ ಮಾಡಿ ಶ್ರೀನಿ ಸ್ಕ್ರಿಪ್ಟ್ ಓದ್ದೆ. ಚೆನ್ನಾಗಿದೆ. ಒಂದಷ್ಟು ಬದಲಾವಣೆ ಮಾಡ್ಬೇಕು, ಅದು ಏನು ಅಂತ ವಾಟ್ಸಪ್ ಮಾಡಿದ್ದೀನಿ ಎನ್ನುತ್ತಾರೆ. ಬಳಿಕ ಶಿವಣ್ಣ ಹಾಗೂ ಗೀತಕ್ಕ ಭೇಟಿಗೆ ಸ್ಕ್ರಿಪ್ಟ್ ಸಮೇತ ಶ್ರೀನಿ ಎಂಟ್ರಿ ಕೊಡ್ತಾರೆ. ನೀವು ಹೇಳಿದ ಬದಲಾವಣೆ ಎಲ್ಲಾ ಮಾಡಿ ತಂದಿದ್ದೀನಿ ಎನ್ನುತ್ತಾರೆ. ಸ್ಕ್ರಿಪ್ಟ್ ಎಲ್ಲಾ ಚೆನ್ನಾಗಿಯೇ ಇದ್ಯಲ್ಲ ಎಂದು ಗೀತಕ್ಕ ಹೇಳುತ್ತಿದ್ದಂತೆ ಶ್ರೀನಿ ಅಸಲಿ ಮ್ಯಾಟರ್ ರಿವೀಲ್ ಮಾಡುತ್ತಾರೆ.
ತಮನ್ನಾ ಜೊತೆ ಒಂದು ರೇನ್ ಡ್ಯಾನ್ಸ್ ಬೇಕು ಅಂದ್ರು.. ಎಲ್ಲಾ ಸಿನಿಮಾದಲ್ಲೂ ಒಬ್ರೇ ಹೀರೊಯಿನ್, ಈ ಸಿನಿಮಾದಲ್ಲಿ ಇಬ್ಬರು ಹೀರೊಯಿನ್ ಇರ್ಲಿ, ರವಿಚಂದ್ರನ್ ಸರ್ ಅವರಿಂದ ಒಂದು ಸಾಂಗ್ ಕೊರಿಯೋಗ್ರಫಿ ಮಾಡ್ಸೋಕೆ ಹೇಳಿದ್ರು ಎಂದು ಶ್ರೀನಿ ಹೇಳುತ್ತಿದ್ದಂತೆ. ಗೀತಕ್ಕ ಮುಂದೆ ಇಂಗು ತಿಂದ ಮಂಗನಂತೆ ಆಡಿದ್ದಾರೆ. ಏನೇನೊ ಸಬೂಬು ಹೇಳಿ ಪ್ಯಾಚ್‌ಅಪ್ ಮಾಡಲು ಪ್ರಯತ್ನಿಸಿದ್ದಾರೆ. ಬಳಿಕ ಗೀತಕ್ಕ ಟಿಶ್ಯು ಕೊಟ್ಟು ಬೆವರು ಒರೆಸಿಕೊಳ್ಳಿ ಎನ್ನುವುದು ಸಖತ್ ಗಮನ ಸೆಳೆಯುತ್ತಿದೆ. ದುನಿಯಾ ವಿಜಯ್ ಕೂಡ ಸಣ್ಣದಾಗಿ ಬಂದು ಹೋಗುತ್ತಾರೆ.
ಇದು ಗ್ಯಾಂಗ್‌ಸ್ಟರ್ ಸಿನಿಮಾ ಅಲ್ಲ, ಸ್ಕೂಲ್ ಮಾಸ್ಟರ್ ಕಥೆ ಎನ್ನುವುದನ್ನು ತೋರಿಸಿದ್ದಾರೆ. ಶಿವಣ್ಣನ ಕೈಗೆ ಸ್ಕೇಲ್ ಕೊಟ್ಟು ಶಾಲೆಯಲ್ಲಿ ಲುಕ್ ಟೆಸ್ಟ್ ಮಾಡಲಾಗಿದೆ. ಶೀಘ್ರದಲ್ಲೇ ಸಿನಿಮಾ ಚಿತ್ರೀಕರಣ ಆರಂಭವಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. 'ಎ ಫಾರ್ ಆನಂದ್' ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಲಿದ್ದು ಮಹೇನ್ ಸಿಂಹ ಛಾಯಾಗ್ರಹಣ ಇರಲಿದೆ. ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜ್‌ಕುಮಾರ್ ಸಿನಿಮಾ ನಿರ್ಮಾಣ ಮಾಡಲಿದ್ದಾರೆ.
ಹುಟ್ಟುಹಬ್ಬದ ಸಂಭ್ರಮದಲ್ಲೇ 'ಜೇಮ್ಸ್' ಸಿನಿಮಾ ಕಾಂಬಿನೇಷನ್‌ನಲ್ಲಿ ಶಿವಣ್ಣನ ಹೊಸ ಸಿನಿಮಾ ಘೋಷಣೆಯಾಗಿದೆ. ಕಿಶೋರ್ ಪತ್ತಿಕೊಂಡ ನಿರ್ಮಾಣದಲ್ಲಿ ಬಹದ್ದೂರ್ ಚೇತನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. 'ಜೆಜೆ ರಾಯ್' ಎಂದು ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ಇನ್ನು ಅಕ್ಟೋಬರ್ 2ರಂದು ಶಿವಣ್ಣ ಹಾಗೂ ಪವನ್ ಒಡೆಯರ್ ಕಾಂಬಿನೇಷನ್ 'ಬೇಲ್' ಸಿನಿಮಾ ಬಿಡುಗಡೆ ಆಗಲಿದೆ. ಹೊಸ ಪೋಸ್ಟರ್ ಸಮೇತ ಚಿತ್ರತಂಡ ಅಪ್‌ಡೇಟ್ ಕೊಟ್ಟಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.


Click it and Unblock the Notifications