ಎಂ.ಎನ್.ವ್ಯಾಸರಾವ್ ನಿಧನಕ್ಕೆ ಕಂಬನಿ ಮಿಡಿದ ಶಿವರಾಂ
ಪ್ರಣಯ ರಾಜ ಶ್ರೀನಾಥ್ ಮತ್ತು ಆರತಿ ಅಭಿನಯದ 'ಸೂರ್ಯಂಗೂ ಚಂದ್ರಂಗೂ ಬಂದರೆ ಮುನಿಸು... ನಗುತಾದಾ ಭೂತಾಯಿ ಮನಸ್ಸು...' ಹಾಗೂ 'ನಾಕೊಂದ್ಲ ನಾಕು...' ಹಾಡುಗಳು ಯಾರಿಗ್ತಾನೆ ಗೊತ್ತಿಲ್ಲ ಹೇಳಿ...
ಇಂದಿಗೂ ಬಹು ಜನಪ್ರಿಯತೆ ಪಡೆದಿರುವ ಈ ಹಾಡುಗಳ ಸಾಹಿತಿ ಎಂ.ಎನ್.ವ್ಯಾಸರಾವ್. ಬ್ಯಾಂಕ್ ಉದ್ಯೋಗಿ ಆಗಿದ್ದ ಎಂ.ಎನ್.ವ್ಯಾಸರಾವ್ ಇಂದು ಹೃದಯಾಘಾತದಿಂದ ನಿಧನರಾದರು.
ಎಂ.ಎನ್.ವ್ಯಾಸರಾವ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ಕಂಬನಿ ಮಿಡಿದಿದ್ದಾರೆ. ''ಎಂ.ಎನ್.ವ್ಯಾಸರಾವ್ ತುಂಬಾ ಒಳ್ಳೆಯ ವ್ಯಕ್ತಿ. ಅವರು ಬ್ಯಾಂಕ್ ನಲ್ಲಿ ಕೆಲಸ ಮಾಡುವಾಗಿನಿಂದಲೂ ನನಗೆ ಪರಿಚಯ. ಪ್ರತಿಭಾವಂತ ಸಾಹಿತಿ. ಅವರು ಬರೆದ ಹಾಡುಗಳಿಗೆ ಅಭಿನಯಿಸುವ ಅವಕಾಶ ನನಗೆ ಸಿಕ್ತು''

''ಕನ್ನಡ ಚಿತ್ರರಂಗಕ್ಕೆ ಸರಳ ಹಾಗೂ ಸಹಜ ಸಾಹಿತ್ಯ ಒದಗಿಸಿಕೊಟ್ಟಿದ್ದಾರೆ. ಅವರ ಹಾಡುಗಳನ್ನು ಇವತ್ತೂ ಕೂಡ ಮೆಲುಕು ಹಾಕುತ್ತೇವೆ. ನನಗೆ ಆತ್ಮೀಯ ಸ್ನೇಹಿತರಾಗಿದ್ದವರು. ಅವರನ್ನ ಕಳೆದುಕೊಂಡಿದ್ದು ನಮ್ಮ ಚಿತ್ರರಂಗಕ್ಕೆ ನಷ್ಟ'' ಎಂದು 'ಫಿಲ್ಮಿಬೀಟ್ ಕನ್ನಡ'ಕ್ಕೆ ಶಿವರಾಂ ಪ್ರತಿಕ್ರಿಯಿಸಿದರು.
ಇನ್ನೂ ಎಂ.ಎನ್.ವ್ಯಾಸರಾವ್ ಜೊತೆಗಿನ ಒಡನಾಟದ ಬಗ್ಗೆ ನಟಿ ಹಾಗೂ ರಾಜಕಾರಣಿ ಮಾಳವಿಕಾ ಅವಿನಾಶ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
73 ವರ್ಷ ವಯಸ್ಸಿನ ಎಂ.ಎನ್.ವ್ಯಾಸರಾವ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಎಂ.ಎನ್.ವ್ಯಾಸರಾವ್ ಅವರಿಗೆ ಕೆಂಪೇಗೌಡ, ಸ್ವರಮಂದಾರ, ಆರ್ಯಭಟ ಪ್ರಶಸ್ತಿ ಲಭಿಸಿವೆ.


Click it and Unblock the Notifications











