ಅಭಿಮಾನಿಯ ಅಗಲಿಕೆ: ಭಾವುಕ ಸಂದೇಶ ಕೊಟ್ಟ ಶಿವಣ್ಣ
ಸ್ಟಾರ್‌ಗಳಿಗೆ ಅಭಿಮಾನಿಗಳೇ ಆಧಾರ ಸ್ಥಂಭ. ದೊಡ್ಮನೆಯವರಂತೂ ಅಭಿಮಾನಿಗಳನ್ನು ದೇವರಂತೆ ಕಂಡವರು. ಅದರಲ್ಲಿಯೂ ಶಿವರಾಜ್ ಕುಮಾರ್, ಅಪ್ಪ ರಾಜ್‌ಕುಮಾರ್ ಅವರ 'ಅಭಿಮಾನಿ ದೇವರುಗಳು' ಮಾತನ್ನು ಪಾಲಿಸಿಕೊಂಡು ಬಂದವರು.
Recommended Video
ಇಂತಿಪ್ಪ ಶಿವರಾಜ್ ಕುಮಾರ್ ಅವರ ಆಪ್ತ ಅಭಿಮಾನಿಯೊಬ್ಬ ಇಂದು ಪ್ರಾಣ ಕಳೆದುಕೊಂಡಿದ್ದಾನೆ. ಅಭಿಮಾನಿಯ ಅಕಾಲಿಕ ನಿಧನಕ್ಕೆ ಶಿವಣ್ಣ ಭಾವುಕರಾಗಿದ್ದಾರೆ.
ಶಿವರಾಜ್ ಕುಮಾರ್ ಅವರ ಕಟ್ಟಾ ಅಭಿಮಾನಿ ರೋಷನ್ ಇಂದು ಸಾವನ್ನಪ್ಪಿದ್ದಾರೆ. ಈಜು ಹೊಡೆಯಲು ಹೋಗಿದ್ದ ರೋಷನ್ ನೀರಿನಲ್ಲಿ ಮುಳುಗಿ ಬಾರದ ಲೋಕಕ್ಕೆ ಹೋಗಿದ್ದಾರೆ. ಇದು ಶಿವರಾಜ್ ಕುಮಾರ್ ಅವರಿಗೆ ಅತೀವ ನೋವುಂಟು ಮಾಡಿದೆ.
ಟ್ವಿಟ್ಟರ್‌ನಲ್ಲಿ ವಿಡಿಯೋ ಹಾಕಿರುವ ಶಿವರಾಜ್ ಕುಮಾರ್
ತಮ್ಮ ಆಪ್ತೇಷ್ಟ ಅಭಿಮಾನಿಯ ಅಗಲಿಕೆಯ ನೋವನ್ನು ಟ್ವಿಟ್ಟರ್ ವಿಡಿಯೋ ಮೂಲಕ ಹಂಚಿಕೊಂಡಿರುವ ಶಿವರಾಜ್ ಕುಮಾರ್ ಜೊತೆಗೆ ಅಭಿಮಾನಿಗಳಲ್ಲಿ, ಸಾರ್ವಜನಿಕರಲ್ಲಿ ಒಂದು ಮನವಿಯನ್ನೂ ಮಾಡಿದ್ದಾರೆ.

ಈಜಲು ಹೋಗಿ ಪ್ರಾಣ ಕಳೆದುಕೊಂಡ ರೋಷನ್
ರೋಷನ್ ಅವರು ಈಜಲು ಹೋಗಿ ಸಾವನ್ನಪ್ಪಿದ್ದಾರೆ. ಆದರೆ ಅವರಿಗೆ ಈಜು ಬರುತ್ತಿರಲಿಲ್ಲವಂತೆ. ಹೀಗೆ ಬರದ ಕೆಲಸಕ್ಕೆ ಕೈಹಾಕಿ ತೊಂದರೆ ಮೈಮೇಲೆ ಎಳೆದುಕೊಳ್ಳಬೇಡಿ. ನಿಮ್ಮನ್ನು ನಂಬಿಕೊಂಡು ನಿಮ್ಮ ಕುಟುಂಬದವರು ಇರುತ್ತಾರೆ ಅವರ ಬಗ್ಗೆ ಕಾಳಜಿ ಇರಲಿ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.

ಹುಂಬತನದಿಂದ ಗೊತ್ತಿಲ್ಲದ ಕಾರ್ಯಕ್ಕೆ ಕೈ ಹಾಕಬೇಡಿ: ಶಿವಣ್ಣ
ಯಾವೊದೋ ಹುಂಬತನಕ್ಕೆ ಬಿದ್ದು ಗೊತ್ತಿಲ್ಲದ ಕಾರ್ಯಗಳಿಗೆ, ಹುಚ್ಚು ಸಾಹಸಗಳಿಗೆ ಕೈ ಹಾಕಬೇಡಿ. ಅಕಾರಣವಾಗಿ ಪ್ರಾಣ ಕಳೆದುಕೊಂಡರೆ, ನಿಮ್ಮನ್ನೇ ನಂಬಿರುವ ಅಪ್ಪ-ಅಮ್ಮ-ಅಣ್ಣ-ತಮ್ಮ, ಹೆಂಡತಿ-ಮಕ್ಕಳಿಗೆ ದಿಕ್ಕು ಯಾರು ಎಂದು ಶಿವಣ್ಣ ಪ್ರಶ್ನಿಸಿದ್ದಾರೆ.

ಅಭಿಮಾನಿ ರೋಷನ್ ಆತ್ಮಕ್ಕೆ ಶಾಂತಿ ಕೋರಿದ ಶಿವಣ್ಣ
ರೋಷನ್ ಆತ್ಮಕ್ಕೆ ಶಾಂತಿ ಕೋರಿರುವ ಶಿವಣ್ಣ, ರೋಶನ್ ಅನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕೊಡಲಿ. ಅಭಿಮಾನಿಗಳು ಹೆಚ್ಚು ಜಾಗೃತೆಯಾಗಿ ಇರಿ ಎಂದು ಶಿವಣ್ಣ ಮನವಿ ಮಾಡಿದ್ದಾರೆ.


Click it and Unblock the Notifications











