ಶಿವಣ್ಣ ಅಭಿನಯದ ಚಿತ್ರ 'ಅಂದರ್ ಬಾಹರ್' ಪ್ರೀವ್ಯೂ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇದುವರೆಗೂ ತಮ್ಮ ವೃತ್ತಿ ಬದುಕಿನಲ್ಲಿ ವೈವಿಧ್ಯಮಯ ಪಾತ್ರಗಳನ್ನು ಪೋಷಿಸಿದ್ದಾರೆ. ಅವರೊಬ್ಬ ನಿರ್ದೇಶಕರ ನಟ. ಅವರನ್ನು ಸೂಕ್ತವಾಗಿ ಬಳಸಿಕೊಳ್ಳುವ ಜಾಣ್ಮೆ ನಿರ್ದೇಶನಕ ಮೇಲಿದೆ.
ಹೊಸಬ ಹಳಬ, ಹಿರಿಯ ಕಿರಿಯ ಎನ್ನದೆ ಎಲ್ಲ ವಯೋಮಾನದ ನಿರ್ದೇಶಕರ ಜೊತೆಗೂ ಶಿವಣ್ಣ ಕೆಲಸ ಮಾಡಿದ್ದಾರೆ. ಈ ಬಾರಿ ಅವರಿಗೆ ಫಣೀಶ್ ಎಸ್.ರಾಮನಾಥಪುರ ಎಂಬುವವರು ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರ ಅಂದರ್ ಬಾಹರ್. ಈ ಚಿತ್ರದ ವಿಶೇಷಗಳ ಮೇಲೆ ಒಮ್ಮೆ ಕಣ್ಣಾಡಿಸಿದರೆ...
ಈ ಹಿಂದೆ ಜೋಗಿ ಚಿತ್ರದಲ್ಲಿ ಶಿವಣ್ಣನಿಗೆ ತಾಯಿಯಾಗಿ ಅಮೋಘ ಅಭಿನಯ ನೀಡಿದ್ದ ಅರುಂಧತಿ ನಾಗ್ ಈ ಬಾರಿಯೂ ಶಿವಣ್ಣನಿಗೆ ಅಮ್ಮನಾಗಿ ಅಂದರ್ ಬಾಹರ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇಲ್ಲೂ ಅಂಡರ್ ವರ್ಲ್ಡ್ ಹಿನ್ನೆಲೆಯೇ ಚಿತ್ರದ ಕಥಾ ಹಂದರ.

ಕೌಟುಂಬಿಕ ಮೌಲ್ಯಗಳಿಗೆ ಒತ್ತು
ಬರೀ ಮಚ್ಚು ಕೊಚ್ಚು ಹೊಡಿ ಬಡಿ ಸನ್ನಿವೇಶಗಳಷ್ಟೇ ಅಲ್ಲ. ಇಲ್ಲಿ ಕೌಟುಂಬಿಕ ಮೌಲ್ಯಗಳಿಗೂ ಸ್ಥಾನ ನೀಡಲಾಗಿದೆ. ಸೆಂಟಿಮೆಂಟ್, ಪ್ರೀತಿ ಪ್ರೇಮ ಅನುರಾಗ ಅನುಕಂಪ ಎಲ್ಲವೂ ಇವೆ. ವರನಟ ಡಾ.ರಾಜ್ ಕುಮಾರ್ ಅವರ ಆರು ಮಂದಿ ಕಟ್ಟಾ ಅಭಿಮಾನಿಗಳು ನಿರ್ಮಿಸಿರುವ ಚಿತ್ರವಿದು.

ಗೋವಾ, ಬಾಂಬೆ, ಆಂಧ್ರದಲ್ಲೂ ಬಿಡುಗಡೆ
ರಾಜ್ಯದಾದ್ಯಂತ ಸರಿಸುಮಾರು 130ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅಂದರ್ ಬಾಹರ್ ಬಿಡುಗಡೆಯಾಗುತ್ತಿದೆ. ಇದಿಷ್ಟೇ ಅಲ್ಲದೆ ಆಂಧ್ರದ ಅಧೋನಿ, ಹೆಮ್ಮಿಗನೂರು, ತಮಿಳುನಾಡಿನ ಹೊಸೂರು ಹಾಗೂ ಗೋವಾ, ಬಾಂಬೆಯಲ್ಲೂ ಚಿತ್ರವನ್ನು ಬಿಡುಗಡೆ ಮಾಡಲು ಪ್ಲಾನ್ ಮಾಡಲಾಗಿದೆ.

ಇದೇ ಮೊದಲ ಬಾರಿಗೆ ಶಿವಣ್ಣ ಜೊತೆ ಪಾರ್ವತಿ
ಚಿತ್ರದ ಫ್ಲೋ ಅದ್ಭುತವಾಗಿ ಮೂಡಿಬಂದಿದೆ. ಹೊಸಬರ ಪ್ರಯತ್ನ ತಮಗೆ ತುಂಬಾ ಖುಷಿಕೊಟ್ಟಿದೆ ಎಂದಿದ್ದಾರೆ ಶಿವರಾಜ್ ಕುಮಾರ್. ಇನ್ನು ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್ ಜೊತೆ ಪಾರ್ವತಿ ಮೆನನ್ ಅಭಿನಯಿಸಿದ್ದಾರೆ. ಅಂದಹಾಗೆ ಶಿವನ ಜೊತೆ ಪಾರ್ವತಿ ಇರಲೇಬೇಕಲ್ಲವೆ?

ಜೈ ಹೋ ಖ್ಯಾತಿಯ ವಿಜಯ್ ಪ್ರಕಾಶ್ ಸಂಗೀತ
ಈ ಚಿತ್ರಕ್ಕೆ ಒಟ್ಟು ಆರು ಮಂದಿ ನಿರ್ಮಾಪಕರು. ರಜನೀಶ್, ಪ್ರಸಾದ್ ರಾವ್, ಅಂಬರೀಶ್, ಅವಿನಾಶ್, ಜಗದೀಶ್ ಹಾಗೂ ಶ್ರೀನಿವಾಸ್. ಪಾತ್ರವರ್ಗದಲ್ಲಿ ಶಶಿಕುಮಾರ್, ಅರುಂಧತಿ ನಾಗ್ ಇದ್ದಾರೆ. ಜೈ ಹೋ ಖ್ಯಾತಿಯ ವಿಜಯ್ ಪ್ರಕಾಶ್ ಚಿತ್ರಕ್ಕೆ ಸಂಗೀತ ನೀಡಿದ್ದು ಶೇಖರ್ ಚಂದ್ರು ಛಾಯಾಗ್ರಹಣವಿದೆ.

ಶಿವಣ್ಣ ಅಭಿಮಾನಿಗಳಿಗೆ ಖಂಡಿತ ನಿರಾಸೆ ಮಾಡಲ್ಲ
ಚಿತ್ರವನ್ನು ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ನಿರಾಸೆಯಾಗದಂತೆ, ಕಥೆಗೆ ಮೋಸ ಆಗದಂತೆ ತೆರೆಗೆ ತಂದಿದ್ದೇವೆ ಎನ್ನುತ್ತಾರೆ ನಿರ್ದೇಶಕ ಫಣೀಶ್. ಏಪ್ರಿಲ್ 5ರಂದು ಚಿತ್ರ ಬಿಡುಗಡೆಯಾಗುತ್ತಿದೆ. ನಿಮ್ಮ ನೆಚ್ಚಿನ ಜಾಲತಾಣ ಒನ್ಇಂಡಿಯಾ ಕನ್ನಡದಲ್ಲಿ ಅಂದರ್ ಬಾಹರ್ ಚಿತ್ರದ ವಿಮರ್ಶೆಯನ್ನು ನಿರೀಕ್ಷಿಸಿ.


Click it and Unblock the Notifications











