ಹ್ಯಾಟ್ರಿಕ್ ಹೀರೋ ಶಿವಣ್ಣ 'ಬೆಳ್ಳಿ' ಬಿಡುಗಡೆಗೆ ಸಿದ್ಧ
ಶೀರ್ಷಿಕೆಯಲ್ಲೇ ಗಮನಸೆಳೆದಿರುವ ಚಿತ್ರ 'ಬೆಳ್ಳಿ'. ರೀಮೇಕ್ ಚಿತ್ರಗಳ ನಡುವೆ ಬರುತ್ತಿರುವ ಸ್ವಮೇಕ್ ಚಿತ್ರ ಇದು. ಸೆಂಚುರಿ ಸ್ಟಾರ್ ಡಾ.ಶಿವರಾಜ್ ಕುಮಾರ್ ಅಭಿನಯದ ಈ ಚಿತ್ರ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. 'ಬೆಳ್ಳಿ' ಚಿತ್ರ ಅಕ್ಟೋಬರ್ ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈಗಾಗಲೆ ಮೈಸೂರಿನಲ್ಲಿ ಬಿಡುಗಡೆ ಮಾಡಲಾಗಿರುವ ಚಿತ್ರದ ಟ್ರೇಲರ್ ಅಭಿಮಾನಿಗಳ ನಿರೀಕ್ಷೆಗಳನ್ನು ಇಮ್ಮಡಿಸಿದೆ. "ಕೊಟ್ಟಿದ್ದನ್ನು ಇಟ್ಕೋ ಬ್ಯಾಡ ಅದನ್ನು ವಾಪಸ್ ಕೊಟ್ಟು ಕಳ್ಸು ಅಂತ ನಮ್ಮವ್ವ ನನಗೆ ಕಲ್ಸಿರೋದು, ಹಣೆಬರಹವನ್ನು ರೀರೈಟ್ ಮಾಡೋ ಕಾಂಟ್ರಾಕ್ಟ್ ಈ ಬೆಳ್ಳಿ ಹತ್ರ ಮಾತ್ರ ಇದೆ" ಎಂಬ ಮಾಸ್ ಡೈಲಾಗ್ ಗಳು ಪ್ರಮುಖ ಆಕರ್ಷಣೆ ಎನ್ನಬಹುದು. [ಬೆಳ್ಳಿ ಚಿತ್ರದ ವಿಶೇಷಗಳು]
ಯಶಸ್ವಿನಿ ಸಿನಿ ಕ್ರಿಯೆಷನ್ಸ್ ಲಾಂಛನದಲ್ಲಿ ಹೆಚ್.ಆರ್.ರಾಜೇಶ್ ಅವರು ನಿರ್ಮಿಸಿರುವ ಚಿತ್ರ. ಮಹೇಶ್ (ಮುಸ್ಸಂಜೆಮಾತು) ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿ.ಶ್ರೀಧರ್ ಸಂಗೀತ ನೀಡಿದ್ದಾರೆ.ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ಗಣೇಶ್ ಸಾಹಸ ನಿರ್ದೇಶನ, ಎ.ಹರ್ಷ, ಆದಿಲ್ ಶೇಖ್, ಮುರಳಿ ನೃತ್ಯ ನಿರ್ದೇಶನ ಹಾಗೂ ಸೀನು ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ಸೆಂಚುರಿ ಸ್ಟಾರ್ ಶಿವರಾಜಕುಮಾರ್, ಕೃತಿ ಖರಬಂದ, ವಿನೋದ್‍ಪ್ರಭಾಕರ್, ದೀಪಕ್, ಒರಟ ಪ್ರಶಾಂತ್, ವೆಂಕಟೇಶ್, ಆದಿಲೋಕೇಶ್, ಪದ್ಮಾವಾಸಂತಿ, ಬಿ.ವಿ.ರಾಧಾ, ಶ್ರೀನಿವಾಸಮೂರ್ತಿ, ರಮೇಶ್‍ಭಟ್, ನಾಗರಾಜ್, ಹರೀಶ್ ರೈ, ಲೋಕಿ, ನೀನಾಸಂ ಮಂಜು, ಭಾಸ್ಕರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. 'ಬೆಳ್ಳಿ' ಚಿತ್ರಕ್ಕೆ ಕೆ.ಜೆ.ರಾಜಶೇಖರ್ ಸಹ ನಿರ್ಮಾಪಕರಾಗಿದ್ದಾರೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications
