ತ್ರಿವೇಣಿ ಚಿತ್ರಮಂದಿರದ ಮೇಲೆ ಕಲ್ಲು ತೂರಾಟ
ಬೆಂಗಳೂರು ಕೆ.ಜಿ.ರಸ್ತೆಯ ತ್ರಿವೇಣಿ ಚಿತ್ರಮಂದಿರದ ಮೇಲೆ ರೊಚ್ಚಿಗೆದ್ದ ಅಭಿಮಾನಿಗಳು ಕಲ್ಲು ತೂರಿದ ಪ್ರಸಂಗ ಮಂಗಳವಾರ ಭೀಮನ ಅಮಾವಾಸ್ಯೆ ಮಧ್ಯಾಹ್ನ (ಆ.6) ನಡೆಯಿತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಓಂ' ಚಿತ್ರ ಇಲ್ಲಿ ನಿತ್ಯ ನಾಲ್ಕು ಪ್ರದರ್ಶನ ಕಾಣುತ್ತಿದೆ.
ತಾಂತ್ರಿಕ ದೋಷದಿಂದ ಚಿತ್ರ ಪ್ರದರ್ಶನ ಅರ್ಧಕ್ಕೆ ಸ್ಥಗಿತಗೊಂಡ ಕಾರಣ ರೊಚ್ಚಿಗೆದ್ದ ಪ್ರೇಕ್ಷಕರು ಕಲ್ಲು ತೂರಾಟ ನಡೆಸಿದರು. ಆದರೆ ಈ ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲ ಎಂಬುದೇ ಸಮಾಧಾನದ ಸಂಗತಿ.

ಶಿವರಾಜ್ ಕುಮಾರ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ 'ಓಂ' ಈಗಾಗಲೆ ಸಾಕಷ್ಟು ಬಾರಿ ರೀ ರಿಲೀಸ್ ಆಗಿದೆ. ಪ್ರೇಕ್ಷಕರ ಒತ್ತಾಯ ಮೇರೆಗೆ ಮತ್ತೆ ಮತ್ತೆ ರೀ ರಿಲೀಸ್ ಆಗುತ್ತಲೇ ಇದೆ. ಬೆಂಗಳೂರು ಭೂಗತ ಜಗತ್ತನ್ನು ಮೊಟ್ಟ ಮೊದಲ ಬಾರಿಗೆ ತೆರೆಗೆ ತಂದಂತಹ ಚಿತ್ರ ಓಂ. ಉಪೇಂದ್ರ ಆಕ್ಷನ್ ಕಟ್ ಹೇಳಿದ ಈ ಚಿತ್ರ ಆ.2ರಂದು ಮತ್ತೊಮ್ಮೆ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಈ ಚಿತ್ರದಲ್ಲಿ ಉಪೇಂದ್ರ ಅವರು ರಿಯಲ್ ರೌಡಿಗಳನ್ನು ಬಳಸಿಕೊಂಡಿದ್ದರು. ಕುಖ್ಯಾತ ರೌಡಿಗಳಾದ ಜೇಡರಹಳ್ಳಿ ಕೃಷ್ಣಪ್ಪ, ಬೆಕ್ಕಿನ ಕಣ್ಣು ರಾಜೇಂದ್ರ, ಕೊರಂಗು ಮತ್ತು ತನ್ವೀರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಜೈಲಿನಲ್ಲಿದ್ದ ಎಷ್ಟೋ ಮಂದಿ ರೌಡಿಗಳು ಜಾಮೀನ ಮೇಲೆ ಹೊರಬಂದು ಈ ಚಿತ್ರದಲ್ಲಿ ನಟಿಸಿದ್ದು ವಿಶೇಷ. ಹಾಗಾಗಿ 'ಓಂ' ಚಿತ್ರಕ್ಕೆ ವಿವಾದವೂ ಸುತ್ತುಕೊಂಡಿತ್ತು.
ಹಂಸಲೇಖ ಸಂಗೀತ ಸಂಯೋಜಿಸಿದ್ದ ಚಿತ್ರದ ಹಾಡುಗಳು ಜನಪ್ರಿಯವಾಗಿದ್ದವು. ಏ ದಿನಕರ... ಹಾಗೂ ಓ ಗುಲಾಬಿಯೆ...ಗಾನಗಂಧರ್ವ ಡಾ.ರಾಜ್ ಕುಮಾರ್ ಹಾಡಿದ ಹಾಡುಗಳು ಸೂಪರ್ ಹಿಟ್ ಆಗಿದ್ದವು. 1995ರಲ್ಲಿ ತೆರೆಕಂಡಿದ್ದ ಈ ಚಿತ್ರ ಹಿಂದಿ ಮತ್ತು ತೆಲುಗು ಭಾಷೆಗೆ ರೀಮೇಕ್ ಆಗಿದೆ. ರಾಮ್ ಗೋಪಾಲ್ ವರ್ಮಾ ಅವರ 'ಸತ್ಯ' ಚಿತ್ರದಲ್ಲಿ ನಮ್ಮ ಕನ್ನಡದ 'ಓಂ' ಚಿತ್ರದ ನೆರಳು ಸಾಕಷ್ಟಿದೆ. ಇಷ್ಟೆಲ್ಲಾ ವಿಶೇಷಗಳುಳ್ಳ ಚಿತ್ರ ಅರ್ಧಕ್ಕೆ ನಿಂತರೆ ಕಲ್ಲು ಒಗೆಯದೆ ಇರುತ್ತಾರಾ? (ಏಜೆನ್ಸೀಸ್)


Click it and Unblock the Notifications











